ಬಿಗ್ ಬಾಸ್ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಪ್ರಸಾರ ನಿಲ್ಲಿಸಲು ಮಹಿಳಾ ಆಯೋಗಕ್ಕೆ ಎರಡು ಪ್ರತ್ಯೇಕ ದೂರು
ಬಿಗ್ ಬಾಸ್ ಶುರುವಾಗಿ ಆರು ದಿನಗಳಾಗಿವೆ. ಈ ಆರು ದಿನಗಳಲ್ಲಿ ಸ್ಪರ್ಧಿಗಳು ಅನ್ಯೋನ್ಯವಾಗಿದ್ದಕ್ಕಿಂತ ಹೆಚ್ಚು ಕಿತ್ತಾಟದಲ್ಲಿ, ಮಾತಿಗೆ ಮಾತು ಬೆಳೆಸಿ ಮನೆಯ ಶಾಂತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಹೀಗಿರುವಾಗಲೇ ಇದೇ ಶೋ ನಿಲ್ಲಿಸುವಂತೆ ಕೋರಿ ದೂರುಗಳೂ ದಾಖಲಾಗುತ್ತಿವೆ.

Bigg Boss season 11: ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ ಇನ್ನೂ ಭರ್ತಿ ವಾರ ಕಳೆದಿಲ್ಲ. ಅದಾಗಲೇ ಈ ಶೋ ಬಗ್ಗೆ ಅಪಸ್ವರಗಳು ಕೇಳಿಬಂದಿವೆ. ಬಿಗ್ ಮನೆಯಲ್ಲಿ ಸ್ವರ್ಗವಾಸಿಗಳು ಮತ್ತು ನರಕವಾಸಿಗಳ ನಡುವೆ ಕಿತ್ತಾಟ ಮುಂದುವರಿದಿದೆ. ಈ ನಡುವೆಯೇ ಇದೇ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ಮಹಿಳಾ ಆಯೋಗಕ್ಕೆ ಎರಡು ಪ್ರತ್ಯೇಕ ದೂರು ನೀಡಲಾಗಿದೆ. ದೂರಿನಲ್ಲಿ ಈ ಕೂಡಲೇ ಬಿಗ್ ಬಾಸ್ ಶೋ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಈಗಷ್ಟೇ ಬಿಗ್ ಬಾಸ್ ಶುರುವಾಗಿ ಆರು ದಿನಗಳಾಗಿವೆ. ಈ ಆರು ದಿನಗಳಲ್ಲಿ ಸ್ಪರ್ಧಿಗಳು ಅನ್ಯೋನ್ಯವಾಗಿದ್ದಕ್ಕಿಂತ ಹೆಚ್ಚು ಕಿತ್ತಾಟದಲ್ಲಿ, ಮಾತಿಗೆ ಮಾತು ಬೆಳೆಸಿ ಮನೆಯ ಶಾಂತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ವೀಕ್ಷಕರಿಂದಲೂ ಈ ಸಲದ ಶೋ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಇದೀಗ ಬಿಗ್‌ಬಾಸ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಎಂದು ವೃತ್ತಿಯಲ್ಲಿ ವಕೀಲೆಯಾಗಿರುವ ರಕ್ಷಿತಾ ಸಿಂಗ್ ಮತ್ತು ಎಂ ನಾಗಮಣಿ ಎಂಬುವವರು ಆರೋಪಿಸಿ, ದೂರು ನೀಡಿದ್ದಾರೆ. ಅಷ್ಟಕ್ಕೂ ಅವರು ನೀಡಿದ ದೂರಿನಲ್ಲಿ ಏನಿದೆ?
ಮಾನವ ಹಕ್ಕು ಉಲ್ಲಂಘನೆ
ರಕ್ಷಿತಾ ಸಿಂಗ್ ಅವರು ನೀಡಿದ ದೂರಿನ್ನು ನೋಡುವುದಾದರೆ, "ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಸ್ವರ್ಗ ನರಕ ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸಲು ಹಕ್ಕನ್ನು ಹೊಂದಿರುವುದಿಲ್ಲ. ಪ್ರಸ್ತುತ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಜೈಲಿನ ಮಾದರಿಯಲ್ಲಿರುವ ಬಂಧಿಖಾನೆಯಂತಹ ಕೊಠಡಿಯಲ್ಲಿ ಹತ್ತಾರು ಕ್ಯಾಮೆರಾಗಳಲ್ಲಿ ಚಿತ್ರೀಕರಣವಾಗುವಂತೆ ಅಕ್ರಮವಾಗಿ ಬಂಧನದಲ್ಲಿಡಲಾಗಿದೆ. ಸ್ಪರ್ಧಿಗಳಿಗೆ ಕೇವಲ ಗಂಜಿಯನ್ನು ಆಹಾರವನ್ನಾಗಿ ನೀಡುತ್ತಿದ್ದು, ಸಂವಿಧಾನದ ಪ್ರಕಾರ ನಾಗರಿಕರಿಗೆ ಪೌಷ್ಠಿಕ ಆಹಾರ ಕೊಡದೇ ಇರುವುದು ಅಪರಾಧವಾಗುತ್ತದೆ.
ಅದರಲ್ಲೂ ಮಹಿಳಾ ಸ್ಪರ್ಧಿಗಳಿಗೆ ಪ್ರತ್ಯೇಕ ಶೌಚಾಲಯ, ಮಲಗಲು ವ್ಯವಸ್ಥೆ ನೀಡದೇ ಅವರಿಗೆ ಶೌಚಕ್ಕೆ ಹೋಗಲು ಬೇರೊಬ್ಬರ ಅನುಮತಿ ಪಡೆಯುವಂತಹ ಸ್ಥಿತಿ ಇದ್ದು, ಶೌಚಾಲಯ ಬಳಕೆ ಮಾಡಲು ಬಲವಂತಕ್ಕೆ ಒಳಪಡಿಸಿವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಜೊತೆ ಕಾನೂನು ಬದ್ದವಾಗಿ ಒಪ್ಪಂದ ಮಾಡಿಕೊಂಡಿದ್ದು, ಇಂತಹ ನಿರ್ಧಾರಗಳನ್ನು ಹೇರುವುದು ಸಂವಿಧಾನದ ಪ್ರಕಾರ ಅಪರಾಧ ಎಂದು ರಕ್ಷಿತಾ ಸಿಂಗ್ ದೂರಿನಲ್ಲಿ ನಮೂದಿಸಿದ್ದಾರೆ.
ನಾಗಮಣಿ ಆರೋಪವೇನು?
ಕಲರ್ಸ್ ಟಿವಿ ನಡೆಸುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಶೋ ನಿಲ್ಲಿಸಿ ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಲು ಕೋರಿ ಈ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ಬಿಗ್ ಬಾಸ್ ಕನ್ನಡ11ನೇ ಸೀಸನ್ ತಾಜಾ ಮಾಹಿತಿ ಎಲ್ಲಿ ಸಿಗುತ್ತೆ?
ಕಲರ್ಸ್ ಕನ್ನಡ ನಡೆಸುತ್ತಿರುವ 'ಬಿಗ್ ಬಾಸ್ ಕನ್ನಡ ಸೀಸನ್ 11' ರಿಯಾಲಿಟಿ ಶೋ ಕುರಿತ ಸಮಗ್ರ ಮಾಹಿತಿಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನೋಡಬಹುದು. ದೊಡ್ಮನೆ ಎಂದೇ ಪ್ರಖ್ಯಾತವಾಗಿರುವ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ? ಜನರು ಅವರ ಬಗ್ಗೆ ಏನು ಯೋಚಿಸುತ್ತಿದ್ದಾರೆ? ಕುತೂಹಲಕಾರಿ ತಿರುವುಗಳೇನು ಎನ್ನುವ ವಿವರ ತಿಳಿಯಲು ಇಲ್ಲಿ ಕ್ಕಿಕ್ ಮಾಡಿ.