‘ಕನ್ನಡ ಚಿತ್ರರಂಗಕ್ಕೆ ಕೇರಳ ಮಾದರಿ ಸಮಿತಿ ಬೇಡ, ನಮ್ಮಲ್ಲಿ ಅಂಥ ಸಮಸ್ಯೆಗಳಿಲ್ಲ’ ಎಂದ ಸಾರಾ ಗೋವಿಂದುಗೆ ವಾಸ್ತವ ಸ್ಥಿತಿ ವಿವರಿಸಿದ ನಟಿಯರು-karnataka film chamber of commerce steps up to combat sexual offenses against women artists in kannada film industry mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಕನ್ನಡ ಚಿತ್ರರಂಗಕ್ಕೆ ಕೇರಳ ಮಾದರಿ ಸಮಿತಿ ಬೇಡ, ನಮ್ಮಲ್ಲಿ ಅಂಥ ಸಮಸ್ಯೆಗಳಿಲ್ಲ’ ಎಂದ ಸಾರಾ ಗೋವಿಂದುಗೆ ವಾಸ್ತವ ಸ್ಥಿತಿ ವಿವರಿಸಿದ ನಟಿಯರು

‘ಕನ್ನಡ ಚಿತ್ರರಂಗಕ್ಕೆ ಕೇರಳ ಮಾದರಿ ಸಮಿತಿ ಬೇಡ, ನಮ್ಮಲ್ಲಿ ಅಂಥ ಸಮಸ್ಯೆಗಳಿಲ್ಲ’ ಎಂದ ಸಾರಾ ಗೋವಿಂದುಗೆ ವಾಸ್ತವ ಸ್ಥಿತಿ ವಿವರಿಸಿದ ನಟಿಯರು

ಮಹಿಳಾ ಕಲಾವಿದರನ್ನು ಮಲಯಾಳಂ ಚಿತ್ರರಂಗದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ ಎಂಬ ಆರೋಪದ ಮೇಲೆ ಅಲ್ಲಿನ ಸರ್ಕಾರ, ನಿವೃತ್ತ ಜಸ್ಟಿಸ್‌ ಹೇಮಾ ಅವರನ್ನು ಒಳಗೊಂಡ ಸಮಿತಿ ರಚಿಸಿತ್ತು. ಇದೀಗ ಅದೇ ಮಾದರಿ ಸಮಿತಿ ಕರ್ನಾಟಕದಲ್ಲೂ ಆಗಬೇಕು ಎಂಬ ಕುರಿತು ಚೇಂಬರ್‌ನಲ್ಲಿ ಸಭೆ ನಡಯಿತು. ಸಭೆಯ ಪ್ರಮುಖಾಂಶಗಳು ಇಲ್ಲಿವೆ.

ಜಸ್ಟಿಸ್‌ ಹೇಮಾ ಸಮಿತಿ ಮಾದರಿ ಕನ್ನಡ ಚಿತ್ರೋದ್ಯಮಕ್ಕೆ ಬೇಕೇ ಬೇಡವೇ ಎಂಬ ಕುರಿತು ಫಿಲಂ ಚೇಂಬರ್‌ನಲ್ಲಿ ಸಭೆ ನಡೆಯಿತು.
ಜಸ್ಟಿಸ್‌ ಹೇಮಾ ಸಮಿತಿ ಮಾದರಿ ಕನ್ನಡ ಚಿತ್ರೋದ್ಯಮಕ್ಕೆ ಬೇಕೇ ಬೇಡವೇ ಎಂಬ ಕುರಿತು ಫಿಲಂ ಚೇಂಬರ್‌ನಲ್ಲಿ ಸಭೆ ನಡೆಯಿತು.

ಮಲಯಾಳಂ ಸಿನಿಮಾರಂಗದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಹೇಮಾ ಸಮಿತಿ ವರದಿ ಸ್ಟಾರ್‌ ಕಲಾವಿದರ ಬುಡ ಅಲ್ಲಾಡಿಸಿದೆ. ಮಹಿಳಾ ಕಲಾವಿದರನ್ನು ಮಲಯಾಳಂ ಚಿತ್ರರಂಗದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ ಎಂಬ ಆರೋಪದ ಮೇಲೆ ಅಲ್ಲಿನ ಸರ್ಕಾರ, ನಿವೃತ್ತ ಜಸ್ಟಿಸ್‌ ಹೇಮಾ ಅವರನ್ನು ಒಳಗೊಂಡ ಸಮಿತಿ ರಚಿಸಿತ್ತು. ಅದರ ಮೂಲಕ ಚಿತ್ರರಂಗದಲ್ಲಿನ ಸಾಕಷ್ಟು ಹುಳುಕುಗಳು ಹೊರಬಿದ್ದಿದ್ದವು. ಅಂಥದ್ದೇ ಸಮಿತಿ ಕನ್ನಡದಲ್ಲೂ ರಚನೆಯಾಗಬೇಕೆಂದು ಈ ಹಿಂದೆ ಫೈರ್‌ ಸದಸ್ಯರು ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ವಾಣಿಜ್ಯ ಮಂಡಳಿಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್‌ ಸುರೇಶ್‌, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಸಮ್ಮುಖದಲ್ಲಿ ಬೆಂಗಳೂರಿನ ಶಿವಾನಂದ ಸರ್ಕಲ್‌ ಬಳಿ ಇರುವ ಫಿಲಂ ಚೇಂಬರ್‌ನಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ, ಇಲ್ಲಿಯವರೆಗೂ ಮಹಿಳಾ ಆಯೋಗಕ್ಕೆ, ಚಿತ್ರಮಂದಿರದಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸಿನಿಮಾ ಸಿದ್ಧವಾಗಬೇಕಾದರೆ, , ಮಹಿಳೆ ಕಲಾವಿದರಿಗಾಗಿ ಸೆಟ್‌ನಲ್ಲಿ ಕನಿಷ್ಠ ಏನೆಲ್ಲ ವ್ಯವಸ್ಥೆ ಇರಬೇಕು ಎಂದು 17 ಅಂಶಗಳನ್ನು ಪಟ್ಟಿ ಮಾಡಿದ್ದೇವೆ. ಪಾಶ್‌ ಕಮಿಟಿ ಮಾಡಲೇಬೇಕು. ಇದರ ರಚನೆಗೆ ಸರ್ಕಾರಕ್ಕೂ ಸಮಯಾವಕಾಶ ಬೇಕು ಎಂದಿದ್ದಾರೆ ನಾಗಲಕ್ಷ್ಮೀ.

ಸಭೆಯಲ್ಲಿ ಯಾರೆಲ್ಲ ಇದ್ದರು..

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟಿಯರಾದ ತಾರಾ ಅನುರಾಧ, ಸಂಜನಾ ಗರ್ಲಾನಿ, ಭಾವನಾ ರಾಮಣ್ಣ, ನೀತು ಶೆಟ್ಟಿ, ಅನಿತಾ ಭಟ್‌, ಸಿಂಧು ಲೋಕನಾಥ್‌, ಕವಿತಾ ಲಂಕೇಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಸೇರಿ ಫಿಲಂ ಚೇಂಬರ್‌ನ ಇನ್ನೂ ಹಲವು ಪದಾಧಿಕಾರಿಗಳು ಈ ಸಭೆಯಲ್ಲಿದ್ದರು. ಹೀಗೆ ಚರ್ಚೆ ನಡೆಯುತ್ತಿದ್ದಂತೆ, ಕೆಲ ಕಾಲ ಮಾತುಗಳೇ ಹೆಚ್ಚಾದವು. ವಾದ ಪ್ರತಿವಾದಗಳಿಗೂ ಈ ಸಭೆ ಆಹಾರವಾಯಿತು. ಇದೇ ವೇಳೆ ಸಂಭಾವನೆ ವಿಚಾರದಲ್ಲಿ ನಟಿಯರಿಗೆ ಆಗುತ್ತಿರುವ ತಾರತಮ್ಯದ ಬಗ್ಗೆಯೂ ಮಾತುಗಳು ಕೇಳಿಬಂದವು.

ಸಮಿತಿ ಬೇಡ ಎಂದ ಸಾರಾ ಗೋವಿಂದು..

ಎಲ್ಲರೂ ಸಮಿತಿ ಬೇಕು ಎಂದು ಪಟ್ಟು ಹಿಡಿದರೆ, ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತ್ರ, ಇಂಥ ಸಮಿತಿಗಳು ಕನ್ನಡ ಚಿತ್ರರಂಗಕ್ಕೆ ಬೇಡ. 90 ವರ್ಷಗಳಿಂದ ಗೌರವಯುವತಾಗಿ ಚಿತ್ರರಂಗ ನಡೆದುಕೊಂಡು ಬಂದಿದೆ. ಇಂಥ ಸಮಿತಿಯಿಂದ ನಷ್ಟದ ಜತೆಗೆ ಚಿತ್ರರಂಗಕ್ಕೆ ಕೆಟ್ಟ ಹೆಸರು. ಹಾಗಾಗಿ ಸಮಿತಿ ರಚನೆ ಬೇಡ. ಸಮಸ್ಯೆಗಳಿದ್ದರೆ ನೇರವಾಗಿ ನಮ್ಮ ಬಳಿ ಹೇಳಿಕೊಳ್ಳಿ, ನಾವೇ ಬಗೆಹರಿಸುತ್ತೇವೆ. ಇಲ್ಲವಾದರೆ, ಮಹಿಳಾ ಆಯೋಗ ಇದೆ. ಅಲ್ಲಿಗೇ ದೂರು ನೀಡಬಹುದು ಎಂದರು. ಸಾರಾ ಗೋವಿಂದು ಮಾತಿಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಹ ಧ್ವನಿ ಗೂಡಿಸಿದರು.

ಚೇಂಬರ್‌ ನೇತೃತ್ವದಲ್ಲಿ ಕಮಿಟಿ ರಚನೆ.

ಬರೀ ಶೋಷಣೆ ಅಂದ್ರೆ ಲೈಂಗಿಕ ಕಿರುಕುಳ ಅಲ್ಲ. ಸಮಾನತೆ ಮತ್ತು ಸಂಭಾವನೆ ವಿಚಾರದಲ್ಲಿಯೂ ಮಹಿಳಾ ಕಲಾವಿದರಿಗೆ ತಾರತಮ್ಯ ಆಗುತ್ತಿದೆ. ಇದರಾಚೆಗೆ ಇನ್ನೂ ಹತ್ತಾರು ಸಮಸ್ಯೆಗಳಿಗೆ ಇದಕ್ಕಾದರೂ, ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ರಚನೆ ಆಗಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ನಟಿ ನೀತು ಶೆಟ್ಟಿ ಹೇಳಿದರು. ಕೊನೆಗೆ ಇದೆಲ್ಲ ಚರ್ಚೆಯ ಬಳಿಕ, ಚೇಂಬರ್‌, ಕಮಿಟಿ ರಚನೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಆದರೆ, ಇದರ ಸಂಪೂರ್ಣ ಹಿಡಿತ ಚೇಂಬರ್‌ಗೇ ಇರಲಿದೆ. ಚೇಂಬರ್‌ ನೇತೃತ್ವದಲ್ಲಿಯೇ ಕಮಿಟಿ ರಚನೆಯಾಗಬೇಕು ಎಂಬುದು ಕೆಲ ನಿರ್ಮಾಪಕರ ಒತ್ತಾಯ. ಯಾರಿಗೇ ಸಮಸ್ಯೆಯಾದ್ರೂ ಚೇಂಬರ್‌ ಅವರ ಜತೆ ನಿಲ್ಲಲಿದೆ ಎಂಬ ಭರವಸೆಯೂ ಸಿಕ್ಕಿತು.

mysore-dasara_Entry_Point