ಸೋಮವಾರ ಇಳಿಕೆ ಕಂಡ ಗೋಟ್ ಕಲೆಕ್ಷನ್; 4 ದಿನಗಳಲ್ಲಿ ವಿಜಯ್ ಸಿನಿಮಾ ಗಳಿಸಿದೆಷ್ಟು? ಇಲ್ಲಿದೆ ಮಾಹಿತಿ
ಸೆಪ್ಟೆಂಬರ್ 5 ರಂದು ತೆರೆ ಕಂಡ ದಳಪತಿ ವಿಜಯ್ ಅಭಿನಯದ ಗೋಟ್ ಸಿನಿಮಾ 4ದಿನದ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ತಮಿಳುನಾಡು ಹೊರತುಪಡಿಸಿ ಕರ್ನಾಟಕ , ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಹೇಳಿಕೊಲ್ಳುವಂಥ ಕಲೆಕ್ಷನ್ ಮಾಡಿಲ್ಲ. ಇದುವರೆಗೂ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ. ಗಳಿಸಿದೆ.
ದಳಪತಿ ವಿಜಯ್ ಹಾಗೂ ನಿರ್ದೇಶಕ ವೆಂಕಟ್ ಪ್ರಭು ಕಾಂಬಿನೇಶನ್‌ನಲ್ಲಿ ತಯಾರಾದ ಗೋಟ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ಮತ್ತೆ ಮತ್ತೆ ನೋಡಿ ಖುಷಿ ಪಡುತ್ತಿದ್ದಾರೆ.
ಕಲೆಕ್ಷನ್‌ನಲ್ಲಿ ಭಾರೀ ಕುಸಿತ
ಆದರೆ ತಮಿಳುನಾಡಿನಲ್ಲಿ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದ್ದರೂ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಮಾತ್ರ ಕಲೆಕ್ಷನ್ ಕುಸಿದಿದೆ. ದಿ ಗೋಟ್ ಸಿನಿಮಾ ಸೆಪ್ಟೆಂಬರ್ 5 ರಂದು ತೆರೆ ಕಂಡಿತ್ತು. ಆ ದಿನ ಬೆಳಗ್ಗೆ 4 ಕ್ಕೆ ಅಭಿಮಾನಿಗಳಿಗಾಗಿ ವಿಶೇಷ ಶೋ ಕೂಡಾ ಏರ್ಪಾಟು ಮಾಡಲಾಗಿತ್ತು. ದಳಪತಿ ವಿಜಯ್‌ಗೆ ಇರುವ ಫ್ಯಾನ್ ಫಾಲೋಯಿಂಗ್‌ನಿಂದ ಮೊದಲ ದಿನ ಸಿನಿಮಾ 30 ಕೋಟಿ ರೂ ಲಾಭ ಮಾಡಿತ್ತು. ಅದರೆ ಕ್ರಮೇಣ ಬಾಕ್ಸ್ ಆಫೀಸಿನಲ್ಲಿ ಇದರ ಕಲೆಕ್ಷನ್ ಕುಸಿಯಿತು. ಸೋಮವಾರದ ಕಲೆಕ್ಷನ್‌ನಲ್ಲಿ ಭಾರೀ ಕುಸಿತ ಕಂಡಿದೆ. ಶನಿವಾರ, ಭಾನುವಾರ ವಾರಾಂತ್ಯದಲ್ಲೂ ಸಿನಿಮಾ ಹೇಳಿಕೊಳ್ಳುವಂತ ಕಲೆಕ್ಷನ್ ಮಾಡಿಲ್ಲ.
ಗೋಟ್, ವಿಶ್ವಾದ್ಯಂತ ಇದುವರೆಗೂ 300 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ತಯಾರಿಸಿದ ಎಜಿಎಸ್ ಎಂಟರ್‌ಟೈನ್ಮೆಂಟ್ ಹೇಳಿಕೊಂಡಿದೆ. ಈ ಸೋಮವಾರ, GOAT ನ ತಮಿಳು ಆವೃತ್ತಿಯು ಭಾರತದಲ್ಲಿ 43.50 ಪ್ರತಿಶತದಷ್ಟು ಆಕ್ಯುಪೆನ್ಸಿಯನ್ನು ಕಂಡಿತು. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ, ತಮಿಳುನಾಡಿನಲ್ಲಿ ವಾರಾಂತ್ಯದಲ್ಲಿ 100 ಕೋಟಿ ದಾಟಿದ ನಟ ವಿಜಯ್ ಅವರ ಎಂಟನೇ ಸಿನಿಮಾ ಎನ್ನಲಾಗಿದೆ. ವರದಿಯ ಪ್ರಕಾರ ಇದುವರೆಗೂ ತಮಿಳುನಾಡಿನಲ್ಲಿ ಈ ಸಿನಿಮಾ ಒಟ್ಟು 106 ಕೋಟಿ ರೂ ಗಳಿಸಿದೆ. ತಮಿಳುನಾಡಿನಲ್ಲಿ ಮೊದಲ ದಿನ 29.50 ಕೋಟಿ, ಎರಡನೇ ದಿನ 21.50 ಕೋಟಿ, ಮೂರನೇ ದಿನ 27 ಕೋಟಿ, 4ನೇ ದಿನ 28 ಕೋಟಿ ರೂ ಸಂಗ್ರಹಿಸಿದೆ.
ಒಟ್ಟು 300 ಕೋಟಿ ರೂ. ಸಂಗ್ರಹ
ವಿಜಯ್ ಅಭಿನಯದ ಮಾರ್ಷಲ್ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ, ಈ ಸಿನಿಮಾ ನಂತರ ವಿಜಯ್ ಸುಮಾರು 7 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಬಹುತೇಕ 100 ಕೋಟಿ ರೂ. ಕ್ಲಬ್ ಸೇರಿವೆ.ಗೋಟ್ ಸಿನಿಮಾವನ್ನು ಎಜಿಎಸ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿ ಕಲ್ಪತಿ ಅಗೋರಂ, ಕಲ್ಪತಿ ಗಣೇಶ್ ಹಾಗೂ ಕಲ್ಪತಿ ಸುರೇಶ್ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ವೆಂಕಟ್ ಪ್ರಭು ಡೈಲಾಗ್, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಯುವನ್ ಶಂಕರ್ ರಾಜಾ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಶಾಂತ್, ಪ್ರಭುದೇವ, ಜಯರಾಮ್, ಸ್ನೇಹ, ಮೀನಾಕ್ಷಿ ಚೌಧರಿ, ಯೋಗಿ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ. 400 ಕೋಟಿ ರೂ ವೆಚ್ಚದಲ್ಲಿ ಸಿನಿಮಾ ತಯಾರಾಗಿದ್ದು ಸಿನಿಮಾ ಅಸಲು ಗಳಿಸಲು ಇನ್ನಷ್ಟು ದಿನಗಳು ಕಾಯಬೇಕಿದೆ.