IC-814: ವೆಬ್ ಸೀರೀಸ್‌ನಲ್ಲಿ ಎಎನ್‌ಐ ಕಂಟೆಂಟ್ ಬಳಕೆ; ನೆಟ್‌ಫ್ಲಿಕ್ಸ್ ವಿರುದ್ಧ ಕೇಸ್ ದಾಖಲಿಸಿದ ಸುದ್ದಿಸಂಸ್ಥೆ
IC-814: ದಿ ಕಂದಹಾರ್ ಹೈಜಾಕ್ ವೆಬ್ ಸೀರೀಸ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಸುದ್ದಿಸಂಸ್ಥೆ ಎಎನ್‌ಐ ಕಾನೂನು ಸಮರಕ್ಕೆ ಮುಂದಾಗಿದ್ದು, ಅನುಮತಿಯಿಲ್ಲದೆ ಸಂಸ್ಥೆಯ ಕಾಪಿರೈಟ್ ಕಂಟೆಂಟ್ ಬಳಸಿದ್ದಕ್ಕೆ ಮೊಕದ್ದಮೆ ಹೂಡಿದೆ.
ನೆಟ್‌ಫ್ಲಿಕ್ಸ್ ಕಂಪನಿ ವಿರುದ್ಧ ಸುದ್ದಿಸಂಸ್ಥೆ ಎಎನ್‌ಐ ಮೊಕದ್ದಮೆ ಹೂಡಿದೆ. ವಿಮಾನ ಅಪಹರಣದ ವಿಷಯವಿರುವ ‘IC-814: ದಿ ಕಂದಹಾರ್ ಹೈಜಾಕ್ʼ ಸೀರೀಸ್ ನಿರ್ಮಾಪಕರ ವಿರುದ್ಧ ಕಾನೂನು ಸಮರಕ್ಕಿಳಿದಿದೆ. ನ್ಯೂಸ್ ಏಜೆನ್ಸ್ ಎಎನ್‌ಐನ ವಿಷಯವನ್ನು (content) ಅನುಮತಿಯಿಲ್ಲದೆ ಬಳಸಿದ ಆರೋಪದ ಮೇಲೆ, ಸೀರೀಸ್‌ನಲ್ಲಿರುವ ನಾಲ್ಕು ಎಪಿಸೋಡ್‌ಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ ಎಂದು ಸುದ್ದಿಸಂಸ್ಥೆಯ ವಕೀಲರು ಹೇಳಿದ್ದಾರೆ.
IC-814: ದಿ ಕಂದಹಾರ್ ಹೈಜಾಕ್ ಎಂಬ ಹೆಸರಿನ ಸೀರೀಸ್, 1999ರಲ್ಲಿ ಕಠ್ಮಂಡುವಿನಿಂದ ಇಂಡಿಯನ್ ಏರ್‌ಲೈನ್ಸ್ ವಿಮಾನ 814ರ ಹೈಜಾಕ್ ಕುರಿತಾಗಿದೆ. ಕಳೆದ ತಿಂಗಳು ಈ ಸೀರೀಸ್ ಬಿಡುಗಡೆಯಾದಾಗಿನಿಂದ ಹಲವು ವಿವಾದಗಳ ಕಾರಣದಿಂದಾಗಿ ಹಿನ್ನಡೆ ಎದುರಿಸುತ್ತಿದೆ. ಇದೀಗ ಸೀರೀಸ್‌ಗೆ ಕಾನೂನು ತೊಡಕು ಉಂಟಾಗಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡಾ ಸೀರೀಸ್ ವಿರುದ್ಧ ಧ್ವನಿ ಎತ್ತಿದ್ದಾರೆ. ಬಿಜೆಪಿ ಬೆಂಬಲಿಗರಿಂದಲೂ ಟೀಕೆಗಳು ಹೊರಹೊಮ್ಮಿವೆ. ಸೀರೀಸ್‌ನಲ್ಲಿ ಹೈಜಾಕರ್‌ಗಳನ್ನು ಹಿಂದೂಗಳ ಹೆಸರಿನೊಂದಿಗೆ ಸಂಭೋದಿಸುವ ಮೂಲಕ, ನಿಜವಾದ ಹೈಜಾಕರ್‌ಗಳು ಹಿಂದೂಗಳು ಎಂಬಂತೆ ಬಿಂಬಿಸಲಾಗಿದೆ. ವಾಸ್ತವದಲ್ಲಿ ಅವರು ಮುಸ್ಲಿಮರಾಗಿದ್ದರೂ ಚಿತ್ರದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕ್ರಮ
ವ್ಯಾಪಕ ಟೀಕೆಗಳು ಕೇಳಿಬಂದ ನಂತರ, ಕಳೆದ ವಾರ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್‌ನಿಂದ ಉತ್ತರ ಕೇಳಿತ್ತು. ಆ ಬಳಿಕ ಒಟಿಟಿ ವೇದಿಕೆಯು ಆರು ಭಾಗಗಳ ಸೀರೀಸ್‌ಗೆ ಹೊಸ ಹಕ್ಕು ನಿರಾಕರಣೆಗಳನ್ನು (disclaimers) ಸೇರಿಸಿದೆ. ಸೀರೀಸ್‌ನಲ್ಲಿನ ಕೋಡ್ ನೇಮ್‌ಗಳನ್ನು ನೈಜ ಘಟನೆಯಲ್ಲಿ ಬಳಸಿದವರಿಂದ ಪಡೆಯಲಾಗಿದೆ ಎಂದು ಒಟಿಟಿ ವೇದಿಕೆ ಸ್ಪಷ್ಟಪಡಿಸಿದೆ.
ಎಎನ್‌ಐ ಪರ ವಕೀಲ ಸಿದ್ದಾಂತ್ ಕುಮಾರ್ ಮಾತನಾಡಿ, “ಅವರು ಪರವಾನಗಿ ಇಲ್ಲದೆ ANIನ ಹಕ್ಕುಸ್ವಾಮ್ಯ (copyright) ಆರ್ಕೈವಲ್ ದೃಶ್ಯಗಳನ್ನು ಬಳಸಿದ್ದಾರೆ. ಅಲ್ಲದೆ ಸುದ್ದಿಸಂಸ್ಥೆಯ ಟ್ರೇಡ್‌ಮಾರ್ಕ್ ಕೂಡಾ ಬಳಸಿದ್ದಾರೆ” ಎಂದು ಹೇಳಿದರು.
ಸೀರೀಸ್ ಸುತ್ತಲಿನ ವಿವಾದಗಳು ತಮ್ಮ ಟ್ರೇಡ್‌ಮಾರ್ಕ್ ಮತ್ತು ಬ್ರ್ಯಾಂಡ್ ಖ್ಯಾತಿಯನ್ನು ಹಾನಿಗೊಳಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಸ್ಥೆಯ ಕಂಟೆಂಟ್ ಇರುವ ನಾಲ್ಕು ಸಂಚಿಕೆಗಳನ್ನು ತೆಗೆದುಹಾಕಲು ಸುದ್ದಿಸಂಸ್ಥೆಯು ನೆಟ್‌ಫ್ಲಿಕ್ಸ್‌ಗೆ ವಿನಂತಿಸುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
2021ರಲ್ಲಿಯೇ ಸೀರೀಸ್ ನಿರ್ಮಾಪಕರು ತಮ್ಮ ವಿಡಿಯೋ ತುಣುಕನ್ನು ಬಳಸಲು ಅನುಮತಿಯನ್ನು ಕೋರುವ ಸಲುವಾಗಿ ಸುದ್ದಿ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆದರೆ ಔಪಚಾರಿಕ ಒಪ್ಪಂದವನ್ನು ಮಾಡಲಾಗಿಲ್ಲ. ಸೀರೀಸ್‌ನೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಲು ಎಎನ್‌ಐ ಬಯಸುವುದಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.
ವಿಭಾಗ