ರಾಗಿ ಪೂರಿ ಎಂದಾದರೂ ಸವಿದಿದ್ದೀರಾ: ಆರೋಗ್ಯದ ಜತೆಗೆ ಉಪಾಹಾರಕ್ಕೂ ಸೈ ಎನಿಸುವ ಈ ರೆಸಿಪಿ ತಯಾರಿಸುವುದು ಹೀಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ರಾಗಿ ಪೂರಿ ಎಂದಾದರೂ ಸವಿದಿದ್ದೀರಾ: ಆರೋಗ್ಯದ ಜತೆಗೆ ಉಪಾಹಾರಕ್ಕೂ ಸೈ ಎನಿಸುವ ಈ ರೆಸಿಪಿ ತಯಾರಿಸುವುದು ಹೀಗೆ

ರಾಗಿ ಪೂರಿ ಎಂದಾದರೂ ಸವಿದಿದ್ದೀರಾ: ಆರೋಗ್ಯದ ಜತೆಗೆ ಉಪಾಹಾರಕ್ಕೂ ಸೈ ಎನಿಸುವ ಈ ರೆಸಿಪಿ ತಯಾರಿಸುವುದು ಹೀಗೆ

ರಾಗಿ,ಆರೋಗ್ಯಕರ ಸಿರಿಧಾನ್ಯಗಳಲ್ಲಿ ಒಂದು. ತೂಕ ಇಳಿಕೆಯಿಂದ ಹಿಡಿದು ಮಧುಮೇಹ ನಿಯಂತ್ರಣದವರೆಗೆ ರಾಗಿ ಉತ್ತಮ ಆಹಾರವಾಗಿದೆ. ರಾಗಿಯಿಂದ ಅನೇಕ ಅಡುಗೆಗಳನ್ನು ತಯಾರಿಸುತ್ತಾರೆ. ಆದರೆ, ರಾಗಿ ಪೂರಿ ಎಂದಾದರೂ ಸವಿದಿದ್ದೀರಾ?ರಾಗಿ ಹಿಟ್ಟು,ಬೆಲ್ಲ,ಕೊಬ್ಬರಿ ಹಾಕಿ ತಯಾರಿಸಲಾಗುವ ರಾಗಿ ಪೂರಿ ರೆಸಿಪಿ ಇಲ್ಲಿದೆ.

ಆರೋಗ್ಯದ ಜತೆಗೆ ಉಪಾಹಾರಕ್ಕೂ ಸೈ ಎನಿಸುವ ರಾಗಿ ಪೂರಿ ರೆಸಿಪಿ ತಯಾರಿಸುವುದು ಹೀಗೆ
ಆರೋಗ್ಯದ ಜತೆಗೆ ಉಪಾಹಾರಕ್ಕೂ ಸೈ ಎನಿಸುವ ರಾಗಿ ಪೂರಿ ರೆಸಿಪಿ ತಯಾರಿಸುವುದು ಹೀಗೆ (PC: Slurrp)

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರಗಳನ್ನು ಸವಿಯುವುದು ಬಹಳ ಹಿತಕರವಾಗಿರುತ್ತದೆ. ಅದರಲ್ಲೂ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳು ಆರೋಗ್ಯಕ್ಕೂ ಉತ್ತಮವಾಗಿದೆ. ರಾಗಿಯಿಂದ ತಯಾರಿಸುವ ಮುದ್ದೆ, ದೋಸೆ, ಇಡ್ಲಿ ಮುಂತಾದ ರುಚಿಕರವಾದ ತಿಂಡಿಗಳನ್ನು ನೀವು ಸವಿದಿರಬಹುದು. ಆದರೆ ರಾಗಿ ಪೂರಿ ಎಂದಾದರೂ ಸವಿದಿದ್ದೀರಾ? ಈ ಸಿಹಿಯಾದ ರಾಗಿ ಪೂರಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ತಿಂಡಿಯಾಗಿದೆ. ಬೆಲ್ಲ ಮತ್ತು ರಾಗಿ ಹಿಟ್ಟನ್ನು ಸೇರಿಸಿ ತಯಾರಿಸುವ ರಾಗಿ ಪೂರಿ ಟೇಸ್ಟಿಯಾಗಿರುವುದರ ಜತೆಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ರಾಗಿ ಪೂರಿ ತಯಾರಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅರ್ಧ ಗಂಟೆಯಲ್ಲಿ ತಯಾರಿಸಬಹುದು. ರಾಗಿ ಪೂರಿಯನ್ನು ತಯಾರಿಸುವ ಸರಳ ಪಾಕವಿಧಾನ ಇಲ್ಲಿದೆ. ಒಂದೇ ರೀತಿಯ ಪೂರಿ ತಯಾರಿಸುವ ಬದಲಿಗೆ ಆರೋಗ್ಯಕರ ರಾಗಿ ಪೂರಿಯನ್ನು ಟ್ರೈ ಮಾಡಿ ನೋಡಿ.

ರಾಗಿ ಪೂರಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಒಣ ಕೊಬ್ಬರಿ- ಕಾಲು ಕೆ.ಜಿ, ಏಲಕ್ಕಿ- ನಾಲ್ಕು, ರಾಗಿ ಹಿಟ್ಟು- ಒಂದು ಕಪ್, ಗೋಧಿ ಹಿಟ್ಟು- ಒಂದು ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುರಿದ ಬೆಲ್ಲ- ಒಂದು ಕಪ್, ಎಣ್ಣೆ- ಕರಿಯಲು, ತುಪ್ಪ- ಒಂದು ಟೀ ಚಮಚ, ಅಡುಗೆ ಸೋಡಾ- ಕಾಲು ಟೀ ಚಮಚ, ಹುರಿದ ಬಿಳಿ ಎಳ್ಳು- ಒಂದು ಟೀ ಚಮಚ.

ತಯಾರಿಸುವ ವಿಧಾನ: ರಾಗಿ ಪೂರಿ ತಯಾರಿಸಲು, ಮೊದಲಿಗೆ ಒಣ ಕೊಬ್ಬರಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

- ಈ ಒಣ ಕೊಬ್ಬರಿ ತುಂಡುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

- ಒಂದು ಅಗಲವಾದ ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ.

- ಅದಕ್ಕೆ ಗೋಧಿ ಹಿಟ್ಟು ಸೇರಿಸಿ.

- ಗೋಧಿ ಹಿಟ್ಟು ರಾಗಿ ಪೂರಿ ಮೃದುವಾಗುವಂತೆ ಮಾಡುತ್ತದೆ. ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಪಕ್ಕಕ್ಕೆ ಇಡಿ.

- ಈಗ ಸ್ಟೌವ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಬೆಲ್ಲ ಮತ್ತು ನೀರು ಹಾಕಿ. ಬೆಲ್ಲ ಕರಗಿ ಪೇಸ್ಟ್‌ ಆಗುವವರೆಗೆ ಕಾಯಿಸಿ. ಜಾಸ್ತಿ ನೀರು ಹಾಕಬೇಡಿ. ಬೆಲ್ಲ ಕರಗಲು ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಹಾಕಿದರೆ ಸಾಕು.

- ಬೆಲ್ಲದ ಪೇಸ್ಟ್‌ಗೆ ಎರಡು ಚಮಚ ಎಳ್ಳು ಸೇರಿಸಿ ಮಿಕ್ಸ್‌ ಮಾಡಿ.

- ಈಗ ಪುಡಿ ಮಾಡಿದ ತೆಂಗಿನಕಾಯಿಯನ್ನು ಆ ಮಿಶ್ರಣಕ್ಕೆ ಸೇರಿಸಿ ಎಲ್ಲವನ್ನು ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

- ಇದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ಟೌವ್‌ ಆಫ್ ಮಾಡಿ.

- ಈ ಬೆಲ್ಲದ ಪೇಸ್ಟ್ ಅನ್ನು ರಾಗಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಚಮಚದ ಸಹಾಯದೊಂದಿಗೆ ಮಿಕ್ಸ್‌ ಮಾಡಿ.

- ಹಿಟ್ಟು ಸಂಪೂರ್ಣವಾಗಿ ಬೆಲ್ಲದ ಮಿಶ್ರಣದೊಂದಿಗೆ ಸೇರುವವರೆಗೆ ಚೆನ್ನಾಗಿ ಮಿಕ್ಸ್‌ ಮಾಡಿ.

- ಈಗ ಅದಕ್ಕೆ ಕಾಲು ಚಮಚ ಅಡುಗೆ ಸೋಡಾ ಸೇರಿಸಿ, ಇನ್ನೊಮ್ಮೆ ಕಲಸಿಕೊಳ್ಳಿ.

- ಈ ಸಂಪೂರ್ಣ ಮಿಶ್ರಣವನ್ನು ಕೈಯಿಂದ ಮಿಶ್ರಣ ಮಾಡಿ. ನಂತರ ಕುದಿಸಿ ತಣ್ಣಗಾದ ಹಾಲನ್ನು ಸ್ವಲ್ಪ ಸೇರಿಸಿ, ಚಪಾತಿ ಹಿಟ್ಟಿನಂತೆ ಕಲಸಿ.

- ಚಪಾತಿ ಹಿಟ್ಟಿನಂತೆ ನಾದಿ ಐದು ನಿಮಿಷಗಳ ಕಾಲ ಹಾಗೆಯೇ ಇಡಿ.

- ಈಗ ಆಳವಾದ ಬಾಣಲೆ ತೆಗೆದುಕೊಂಡು ಅದಕ್ಕೆ ಪೂರಿ ಕರಿಯಲು ಸಾಕಾಗುವಷ್ಟು ಅಡುಗೆ ಎಣ್ಣೆ ಹಾಕಿ.

- ಎಣ್ಣೆ ಚೆನ್ನಾಗಿ ಕಾದ ನಂತರ, ನಾದಿಟ್ಟುಕೊಂಡ ರಾಗಿ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು ನಿಮ್ಮ ಕೈಗಳಿಂದ ಸಣ್ಣ ಪೂರಿಗಳಂತೆ ದುಂಡಾಗಿ ಒತ್ತಿ. ಅದನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ.

- ಪೂರಿ ಉಬ್ಬಿ ಬರುತ್ತದೆ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಇಷ್ಟು ಮಾಡಿದರೆ ರುಚಿಕರವಾದ ರಾಗಿ ಪೂರಿ ಸವಿಯಲು ಸಿದ್ಧ. ಒಮ್ಮೆ ಈ ಪೂರಿಯ ರುಚಿ ನೋಡಿದರೆ ಖಂಡಿತ ಪದೇ ಪದೇ ತಯಾರಿಸುತ್ತೀರಾ. ಅಷ್ಟು ರುಚಿಯಾದ ಪೂರಿ ಇದಾಗಿದೆ.

ರಾಗಿ ಹಿಟ್ಟಿನಿಂದ ತಯಾರಿಸಿದ ರಾಗಿ ಪೂರಿ ಆರೋಗ್ಯಕರ ತಿಂಡಿಗಳು ಒಂದಾಗಿದೆ. ಅದರಲ್ಲೂ ಮನೆಯಲ್ಲಿಯೇ ತಯಾರಿಸಿ ಸವಿಯಬಹುದಾದ್ದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಬಹಳ ಸುಲಭವಾಗಿ ತಯಾರಿಸಬಹುದಾದ ರಾಗಿ ಪೂರಿಗೆ 40 ನಿಮಿಷಗಳು ಸಾಕು. ನೀವೂ ಒಮ್ಮೆ ಪ್ರಯತ್ನಿಸಿ ನೋಡಿ, ಮನೆಮಂದಿಗೆಲ್ಲಾ ಖಂಡಿತಾ ಇಷ್ಟವಾಗಬಹುದು.

Whats_app_banner