ಮಂಚಕ್ಕೆ ಕರೆದಾಗ ಹೋಗಲೇಬೇಕು, ಇಲ್ಲ ಅನ್ನೋ ಮಾತೇ ಇಲ್ಲ! ಕನ್ನಡದ ನಟಿ ಸನಮ್‌ ಶೆಟ್ಟಿಗೆ ತಮಿಳು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ
ಕನ್ನಡ ಸುದ್ದಿ  /  ಮನರಂಜನೆ  /  ಮಂಚಕ್ಕೆ ಕರೆದಾಗ ಹೋಗಲೇಬೇಕು, ಇಲ್ಲ ಅನ್ನೋ ಮಾತೇ ಇಲ್ಲ! ಕನ್ನಡದ ನಟಿ ಸನಮ್‌ ಶೆಟ್ಟಿಗೆ ತಮಿಳು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ

ಮಂಚಕ್ಕೆ ಕರೆದಾಗ ಹೋಗಲೇಬೇಕು, ಇಲ್ಲ ಅನ್ನೋ ಮಾತೇ ಇಲ್ಲ! ಕನ್ನಡದ ನಟಿ ಸನಮ್‌ ಶೆಟ್ಟಿಗೆ ತಮಿಳು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ

ತಮಿಳು ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್‌ ಕೌಚ್‌ ಕರಾಳತೆ ಬಗ್ಗೆ ಕರ್ನಾಟಕ ಮೂಲದ ನಟಿ ಸನಮ್‌ ಶೆಟ್ಟಿ ಮೌನ ಮುರಿದಿದ್ದಾರೆ. ಸಿನಿಮಾ ಅವಕಾಶ ಬೇಕಿದ್ದರೆ, ಅಡ್ಜೆಸ್ಟ್‌ಮೆಂಟ್‌ ಮಾಡಿಕೊಳ್ಳುವ ಸ್ಥಿತಿ ಕಾಲಿವುಡ್‌ನಲ್ಲಿ ನಿರ್ಮಾಣವಾಗಿದೆ. ಮಂಚಕ್ಕೆ ಕರೆದಾಗ ಹೋಗಲೇಬೇಕು, ಇಲ್ಲ ಅನ್ನೋ ಮಾತೇ ಇಲ್ಲ ಎಂದಿದ್ದಾರೆ ಸನಮ್.‌

ತಮಿಳು ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್‌ ಕೌಚ್‌ ಕರಾಳತೆ ಬಗ್ಗೆ ಮಾತನಾಡಿದ ನಟಿ ಸನಮ್‌ ಶೆಟ್ಟಿ.
ತಮಿಳು ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್‌ ಕೌಚ್‌ ಕರಾಳತೆ ಬಗ್ಗೆ ಮಾತನಾಡಿದ ನಟಿ ಸನಮ್‌ ಶೆಟ್ಟಿ. (instagram\ Sanam Shetty)

Sanam Shetty on Casting Couch: ಕರ್ನಾಟಕ ಮೂಲದ ನಟಿ ಸನಮ್‌ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ, ಪರಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2012ರಲ್ಲಿಯೇ ತಮಿಳಿನ ಅಂಬುಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸನಮ್‌ ಶೆಟ್ಟಿ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2018ರಲ್ಲಿ ತೆರೆಗೆ ಬಂದ ಅಥರ್ವ ಚಿತ್ರದ ಮೂಲಕ ಕನ್ನಡಕ್ಕೂ ಬಂದಿದ್ದರು. ಇದೀಗ ಇದೇ ನಟಿ ತಮಿಳು ಸಿನಿಮಾರಂಗದಲ್ಲಿನ ಕಾಸ್ಟಿಂಗ್‌ ಕೌಚ್‌ ಕರಾಳತೆಯ ಬಗ್ಗೆ ಮಾತನಾಡಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ 17 ರೀತಿಯ ಲೈಂಗಿಕ ಕಿರುಕುಳಗಳು ನಡೆಯುತ್ತಿವೆ ಎಂಬ ಜಸ್ಟಿಸ್ ಹೇಮಾ ಸಮಿತಿ ವರದಿ ಬೆನ್ನಲ್ಲೇ ಮತ್ತೆ ಕೆಲ ನಾಯಕಿಯರು ಸಿನಿಮಾ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡದ ನಟಿ ಸನಮ್ ಶೆಟ್ಟಿ ಕೂಡ ಈ ಬಗ್ಗೆ ಆಘಾತಕಾರಿ ವಿಚಾರವೊಂದನ್ನು ಹೇಳಿ, ತಮಗಾದ ಅನುಭವ ತೆರೆದಿಟ್ಟಿದ್ದಾರೆ. ತಮಿಳು ಇಂಡಸ್ಟ್ರಿಯಲ್ಲಿ ಯಾರಾದ್ರೂ ಹಾಸಿಗೆ ಹಂಚಿಕೊಳ್ಳಲು ಕರೆದರೆ ಹೋಗಲೇಬೇಕೆ ಹೊರತು, ಇಲ್ಲ ಎನ್ನಲು ಅವಕಾಶವೇ ಇಲ್ಲ ಎನ್ನುವ ಮೂಲಕ ತಮಿಳು ಚಿತ್ರದ್ಯೋಮದ ಬಗ್ಗೆ ಬಾಂಬ್‌ ಸಿಡಿಸಿದ್ದಾರೆ.

ಸನಮ್ ಶೆಟ್ಟಿ ಏನಂದ್ರು?

ಮಲಯಾಳಂ ಚಿತ್ರರಂಗದಲ್ಲಿ ಕಿರುಕುಳದ ಕುರಿತು ಹೇಮಾ ಸಮಿತಿ ವರದಿ ನೀಡಿದ ನಂತರ ಸನಮ್ ಶೆಟ್ಟಿ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದಾರೆ. ಈ ಕಾಸ್ಟಿಂಗ್‌ ಕೌಚ್‌ ತಮಿಳು ಇಂಡಸ್ಟ್ರಿಯಲ್ಲಿಯೂ ನಡೆಯುತ್ತಿದೆ ಎಂದೂ ಹೇಳಿದ್ದಾರೆ. "ಜಸ್ಟಿಸ್‌ ಹೇಮಾ ಸಮಿತಿಯ ವರದಿಯ ವಿವರ ನನಗೆ ತಿಳಿದಿಲ್ಲ. ಆದರೆ ಈ ಕ್ರಮ ಚೆನ್ನಾಗಿದೆ. ಇಂತಹ ವರದಿಯನ್ನು ತಂದ ಜಸ್ಟಿಸ್‌ ಹೇಮಾ ಸಮಿತಿ ಮತ್ತು ಕೇರಳ ಸರ್ಕಾರಕ್ಕೆ ಧನ್ಯವಾದಗಳು. ತಮಿಳು ಚಿತ್ರರಂಗದಲ್ಲಿಯೂ ಇದೇ ರೀತಿಯ ಘಟನೆಗಳು ನಡೆಯುತ್ತವೆ. ಇಲ್ಲ ಎಂದು ನಾನು ಹೇಳಲಾರೆ. ಇದು ನನ್ನ ಸ್ವಂತ ಅನುಭವದಿಂದ ನಾನು ಹೇಳುತ್ತಿದ್ದೇನೆ”ಎಂದಿದ್ದಾರೆ.

"ಇದೇ ಮಾತನ್ನು ಮೊದಲು ಯಾಕೆ ಹೇಳಲಿಲ್ಲ ಎಂದು ಯಾರಾದರೂ ಕೇಳಿದರೆ ಕೋಪಗೊಂಡು ಶೂನಿಂದ ಹೊಡೆದು ಫೋನ್ ಕಟ್ ಮಾಡುತ್ತೇನೆ. ನಾನು ಇಂಡಸ್ಟ್ರಿಯಲ್ಲಿ ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತಲೇ ಇದ್ದೇನೆ. ಹಾಗಂತ ಚಿತ್ರೋದ್ಯಮದಲ್ಲಿ ಎಲ್ಲರೂ ಕೆಟ್ಟವರಲ್ಲ. ಕಾಸ್ಟಿಂಗ್ ಕೌಚ್‌ಗೆ ಮಹಿಳೆಯರಷ್ಟೇ ಅಲ್ಲ ಪುರುಷರೂ ಬಲಿಯಾಗುತ್ತಿದ್ದಾರೆ. ನಾನು ಅಂತಹದರಿಂದ ದೂರ ಇರುತ್ತೇನೆ. ನನ್ನಲ್ಲಿ ಪ್ರತಿಭೆ ಇದ್ದರೆ ಅವಕಾಶಗಳು ಬರುತ್ತವೆ ಎಂಬ ನಂಬಿಕೆ ನನಗಿದೆ" ಎಂದಿದ್ದಾರೆ ಸನಮ್.

"ಅಡ್ಜೆಸ್ಟ್ಮೆಂಟ್ ಮಾತ್ರ ಅವಕಾಶವನ್ನು ಪಡೆಯುವ ಏಕೈಕ ಮಾರ್ಗ ಎಂಬ ಕ್ರೂರ ಸನ್ನಿವೇಶದ ವಿರುದ್ಧ ನಾನು ಧ್ವನಿ ಎತ್ತುತ್ತಿದ್ದೇನೆ. ನನ್ನ ವೈಯಕ್ತಿಕ ಅನುಭವದಿಂದ ನಾನು ಹೇಳುತ್ತೇನೆ, ಕೆಲಸಕ್ಕಾಗಿ ಹತಾಶರಾಗಬೇಡಿ. ನಿಮ್ಮನ್ನು ನೀವು ನಂಬಿದರೆ, ಅಡ್ಜೆಸ್ಟ್ಮೆಂಟ್ ಇಲ್ಲದೆ ನಿಮಗೆ ಕೆಲಸ ಸಿಗುತ್ತದೆ. ಈ ವಿಚಾರದಲ್ಲಿ ನಾನೂ ಸೇರಿ, ಈ ಕರಾಳತೆಯನ್ನು ಅನುಭವಿಸಿದವರು ಮುಂದೆ ಬರಬೇಕು. ದಯವಿಟ್ಟು ಮುಂದೆ ಬಂದು ಅಂಥವರನ್ನು ಬಯಲಿಗೆಳೆಯಬೇಕು. ಚಿತ್ರೋದ್ಯಮದಲ್ಲಿ ಮಹಿಳೆಯರಲ್ಲಿ ಒಗ್ಗಟ್ಟಿನ ಕೊರತೆ ಇಲ್ಲ ಎಂಬುದನ್ನು ತೋರಿಸಬೇಕು. ಈ ಹೋರಾಟಕ್ಕೆ ಪುರುಷರು ಬರಲಿ ಎಂದು ನಾವು ಕಾಯಬೇಕಾಗಿಲ್ಲ. ನಮಗೂ ಸಾಕಷ್ಟು ಸಾಮರ್ಥ್ಯವಿದೆ. ನಾವು ನಮ್ಮ ಪರವಾಗಿ ನಿಲ್ಲಬೇಕು” ಎಂದಿದ್ದಾರೆ ಸನಮ್.

ಹೇಮಾ ಸಮಿತಿಯ ವರದಿ ಏನು?

ಮಲಯಾಳಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಸಮಿತಿ ವಿಚಾರಣೆ ನಡೆಸಿ ವರದಿ ನೀಡಿದೆ. ಈ ವರದಿಯನ್ನು ಕೇರಳ ಸರ್ಕಾರ ಕಳೆದ ಸೋಮವಾರ (ಆಗಸ್ಟ್ 19) ಬಿಡುಗಡೆ ಮಾಡಿದೆ. ಉದ್ಯಮದಲ್ಲಿ ಅವಕಾಶಗಳಿಗಾಗಿ ಹಲವು ಮಹಿಳೆಯರು ಹಾಸಿಗೆ ಹಂಚಿಕೊಳ್ಳಬೇಕಾಯಿತು ಎಂದು ವರದಿ ಸ್ಪಷ್ಟವಾಗಿ ಹೇಳಿರುವುದು ಗಮನಾರ್ಹ.

ಈ ವರದಿಗಳಿಗೆ ಮಲಯಾಳಂ ನಟರಾದ ಟೊವಿನೋ ಥಾಮಸ್ ಮತ್ತು ಪಾರ್ವತಿ ತಿರುವೋತ್ ಪ್ರತಿಕ್ರಿಯಿಸಿದ್ದಾರೆ. ಟೊವಿನೋ ಕಠಿಣ ಕ್ರಮಕ್ಕೆ ಆಗ್ರಹಿಸಿದರೆ, ಇಂಡಸ್ಟ್ರಿಯಲ್ಲಿ ಇನ್ನೂ ಪ್ರಬಲ ಲಾಬಿ ಇದೆ ಎಂದು ಪಾರ್ವತಿ ಬಹಿರಂಗಪಡಿಸಿದ್ದಾರೆ. ಈ ವರದಿಗೆ ಬಾಲಿವುಡ್ ನಟಿ ತನುಶ್ರೀ ದತ್ತಾ ಕೂಡ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತು ಮಲಯಾಳಂ ನಟ ದಿಲೀಪ್ ಸಾಯಿಕೋಲಾ ಹೆಸರನ್ನು ಹೇಳಿದ್ದಾರೆ. ದಿಲೀಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಹೇಮಾ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈ ಎಲ್ಲಾ ಸಮಿತಿಗಳು ಮತ್ತು ವರದಿಗಳು ನಿಷ್ಪ್ರಯೋಜಕವಾಗಿವೆ ಎಂದೂ ತನುಶ್ರೀ ಅಭಿಪ್ರಾಯಪಟ್ಟಿದ್ದಾರೆ.

Whats_app_banner