ಶಿವಣ್ಣನ ಪ್ರಚಾರವೂ ಮತವಾಗಲಿಲ್ಲ, ದುನಿಯಾ ವಿಜಯ್‌ ಬಂದ್ರೂ ಗೆಲ್ಲಲಾಗಲಿಲ್ಲ, ಗೀತಾ ಶಿವರಾಜ್‌ಕುಮಾರ್‌ ಸೋಲಿನ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  ಶಿವಣ್ಣನ ಪ್ರಚಾರವೂ ಮತವಾಗಲಿಲ್ಲ, ದುನಿಯಾ ವಿಜಯ್‌ ಬಂದ್ರೂ ಗೆಲ್ಲಲಾಗಲಿಲ್ಲ, ಗೀತಾ ಶಿವರಾಜ್‌ಕುಮಾರ್‌ ಸೋಲಿನ ಕಥೆ

ಶಿವಣ್ಣನ ಪ್ರಚಾರವೂ ಮತವಾಗಲಿಲ್ಲ, ದುನಿಯಾ ವಿಜಯ್‌ ಬಂದ್ರೂ ಗೆಲ್ಲಲಾಗಲಿಲ್ಲ, ಗೀತಾ ಶಿವರಾಜ್‌ಕುಮಾರ್‌ ಸೋಲಿನ ಕಥೆ

ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಶಿವಮೊಗ್ಗದಲ್ಲಿ ಅವಿರತವಾಗಿ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಪರ ಪ್ರಚಾರ ನಡೆಸಿದರೂ ಗೀತಕ್ಕ ಗೆಲುವು ಪಡೆಯಲಿಲ್ಲ. ಗೀತಾ ಶಿವರಾಜ್‌ ಕುಮಾರ್‌ ಸೋಲಿಗೆ ಅನೇಕ ಕಾರಣಗಳಿವೆ.

ಶಿವಣ್ಣನ ಪ್ರಚಾರವೂ ಮತವಾಗಲಿಲ್ಲ, ದುನಿಯಾ ವಿಜಯ್‌ ಬಂದ್ರೂ ಗೆಲ್ಲಲಾಗಲಿಲ್ಲ, ಗೀತಾ ಶಿವರಾಜ್‌ಕುಮಾರ್‌ ಸೋಲಿನ ಕಥೆ
ಶಿವಣ್ಣನ ಪ್ರಚಾರವೂ ಮತವಾಗಲಿಲ್ಲ, ದುನಿಯಾ ವಿಜಯ್‌ ಬಂದ್ರೂ ಗೆಲ್ಲಲಾಗಲಿಲ್ಲ, ಗೀತಾ ಶಿವರಾಜ್‌ಕುಮಾರ್‌ ಸೋಲಿನ ಕಥೆ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸೆಂಚುರಿಸ್ಟಾರ್‌ ಶಿವರಾಜ್‌ ಕುಮಾರ್‌ ಚುನಾವಣೆ ಸಮಯದಲ್ಲಿ ಬಹುಸಮಯ ಶಿವಮೊಗ್ಗದಲ್ಲಿ ಕಾಲ ಕಳೆದಿದ್ದರು. ತಮ್ಮ ಪತ್ನಿ ಗೀತಾ ಪರವಾಗಿ ಪ್ರಚಾರ ಮಾಡಿದ್ದರು. ಸ್ಯಾಂಡಲ್‌ವುಡ್‌ನ ಇನ್ನೊಬ್ಬ ನಟ ದುನಿಯಾ ವಿಜಯ್‌ ಕೂಡ ಮತ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ "ಗೀತಕ್ಕನಿಗೆ ಮತ ನೀಡಿ" ಎಂದಿದ್ದರು. ಆದರೆ, ಶಿವಮೊಗ್ಗದ ಜನತೆ ಕರುನಾಡ ಸೆಂಚುರಿ ಸ್ಟಾರ್‌ ಶಿವಣ್ಣನ ಪತ್ನಿಯ ಕೈ ಹಿಡಿಯಲಿಲ್ಲ. ಸ್ಯಾಂಡಲ್‌ವುಡ್‌ನ ಸ್ಟಾರ್‌ ಪ್ರಚಾರವೂ ಲೋಕಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಯೋಜನಕ್ಕೆ ಬರಲಿಲ್ಲ.

ಹೆಣ್ಣು ಮಕ್ಕಳೇ ಸ್ಟ್ರಾಂಗ್‌ ಗುರೂ

ಈ ಬಾರಿ ಗೀತಾ ಶಿವರಾಜ್‌ಕುಮಾರ್‌ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್‌ ಭಂಡಾರಿ ಮುಂತಾದವರು ಗೀತಕ್ಕನಿಗೆ ಬೆಂಬಲ ನೀಡಿದ್ದರು. ಎಲ್ಲಕ್ಕಿಂತ ಪ್ರಮುಖವಾಗಿ ಪ್ಯಾನ್‌ ಇಂಡಿಯಾದ ಮೆಚ್ಚಿನ ನಟ ಶಿವರಾಜ್‌ಕುಮಾರ್‌ ಶಿವಮೊಗ್ಗದಲ್ಲಿ ಸಾಕಷ್ಟು ಸಮಯ ಕಳೆದರು. ಬಹಿರಂಗ ಸಭೆಗಳಲ್ಲಿ ಗೀತಾ ಶಿವರಾಜ್‌ ಕುಮಾರ್‌ಗೆ ಮತ ಚಲಾಯಿಸಿ ಎಂದಿದ್ದರು. ಹೆಣ್ಣು ಮಕ್ಕಳೇ ಸ್ಟ್ರಾಂಗ್‌ ಗುರೂ ಎಂದು ಹೇಳುವ ಮೂಲಕ ಗೀತಾ ಶಿವರಾಜ್‌ಕುಮಾರ್‌ಗೆ ಮತ ನೀಡಿ ಎಂದಿದ್ದರು. ಆದರೆ, ಅದ್ಯಾವುದೂ ವರ್ಕೌಟ್‌ ಆಗಲಿಲ್ಲ.

ನಾನೇ ಗ್ಯಾರಂಟಿ ಎಂದಿದ್ದರು ಶಿವಣ್ಣ

ಗೀತಾ ಗೆಲುವು ಪಡೆದರೆ ಶಿವಮೊಗ್ಗದಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ಹೆಂಡತಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ನಾನೇ ಗ್ಯಾರಂಟಿ ಎಂದಿದ್ದರು. ಗೀತಾ ಹೊರಗಿನವರಲ್ಲ. ಇಲ್ಲೇ ಹುಟ್ಟಿ ಬೆಳೆದದ್ದು. ಇಲ್ಲಿಯೇ ಹುಟ್ಟಿದ ಕಾರಣ ಅವರ ಮನೆಯೂ ಇದೇ ಆಗಿರುತ್ತದೆ. ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಗೀತಾರ ಮನೆ ಎಲ್ಲಿದೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಗೀತಾ ಇಲ್ಲಿಯವರೇ, ಹೊರಗಿನವರಲ್ಲ ಎಂದು ಶಿವಣ್ಣ ಹೇಳಿದ್ದರು.

ಫಲಿತಾಂಶ ಏನಾಯ್ತು?

ಇದೀಗ ಲೋಕ ಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಫಲಿತಾಂಶ ಬಂದಿದೆ. ಬಿಎಸ್‌ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಗೆಲುವು ಪಡೆದಿದ್ದಾರೆ. 1.50 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೀತಾ ಶಿವರಾಜ್‌ ಕುಮಾರ್‌ ಶಿವಮೊಗ್ಗದಲ್ಲಿ ಸೋತಿದ್ದಾರೆ. ಈ ಮೂಲಕ ಶಿವಣ್ಣನ ಹ್ಯಾಟ್ರಿಕ್‌ ಪ್ರಚಾರವೂ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಗೆಲ್ಲಿಸಿಲ್ಲ.

ಗೀತಾ ಶಿವರಾಜ್‌ ಕುಮಾರ್‌ ಸೋಲಿಗೆ ಕಾರಣಗಳೇನು?

ಮೊದಲನೆಯದಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿ ವೈ ರಾಘವೇಂದ್ರ ಪ್ರಬಲ ಪ್ರತಿಸ್ಪರ್ಧಿ. ರಾಜ್ಯ ಬಿಜೆಪಿಯಲ್ಲಿ ರಯಡಿಯೂರಪ್ಪ ಪುತ್ರನಿಗೆ ಗೆಲುವು ಪಡೆಯುವುದು ಅನಿವಾರ್ಯ. ಜತೆಗೆ, ಬಿವೈ ರಾಘವೇಂದ್ರ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ರಾಜಕೀಯವಾಗಿ ಅಷ್ಟು ಪ್ರಬಲರಾಗಿರದೆ ಇರುವ ಗೀತಕ್ಕನಿಗೆ ಬಿವೈ ರಾಘವೇಂದ್ರರ ಮುಂದೆ ಗೆಲುವು ಪಡೆಯುವುದು ಸರಳವಲ್ಲ ಎನ್ನುವ ಪರಿಸ್ಥಿತಿ ಇತ್ತು. ಜತೆಗೆ, ಬಿವೈ ರಾಘವೇಂದ್ರರಿಗೆ ಬಿಜೆಪಿಯ, ಹಿಂದುತ್ವದ ಮತಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಈ ಕಾರಣದಿಂದ ಮತ ವಿಭಜನೆ ಇತ್ಯಾದಿಗಳಿಗೆ ಅವಕಾಶವಿರಲಿಲ್ಲ.

ಕುಮಾರ್‌ ಬಂಗಾರಪ್ಪ ಅವರು ಗೀತಾ ಶಿವರಾಜ್‌ ಕುಮಾರ್‌ ವಿರುದ್ಧ ಸಾಕಷ್ಟು ಪ್ರಚಾರ ಮಾಡಿದ್ದರು. ಇದರಿಂದ ಗೀತಾ ಶಿವರಾಜ್‌ ಕುಮಾರ್‌ಗೆ ಹಿನ್ನಡೆಯಾಗಿತ್ತು. ಗೀತಕ್ಕನನ್ನು ಅವಕಾಶ ಸಿಕ್ಕಿದಾಗ ಸಾಕಷ್ಟು ಲೇವಡಿ ಮಾಡಿದ್ದರು. ಕುಮಾರ್‌ ಬಂಗಾರಪ್ಪರ ಮಾತುಗಳಿಗೆ ಶಿವಣ್ಣ ಕೂಡ ಕಿಡಿಕಾರಿದ್ದರು. ರಾಜಕೀಯವಾಗಿ ಸಾಕಷ್ಟು ಅನುಭವ ಇಲ್ಲದೆ ಇರುವುದು, ಇವರು ಗೆದ್ದ ಬಳಿಕ ಇಲ್ಲಿ ಇರುತ್ತಾರ ಎಂಬ ಸಂದೇಹ ಕೆಲವು ಮತದಾರರಲ್ಲಿ ಇದ್ದದ್ದು ಸೇರಿದಂತೆ ಹಲವು ಕಾರಣಗಳಿಂದ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಶಿವಮೊಗ್ಗದ ಮತದಾರರು ಕೈ ಹಿಡಿಯಲಿಲ್ಲ.

Whats_app_banner