ಗಂಟುಮೂಟೆ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದ ರೂಪಾ ರಾವ್ ಇದೀಗ ಮತ್ತೆ ‘ಗೋಚರ’! ಹೊಸ ಸಿನಿಮಾದ ಶೀರ್ಷಿಕೆ ಅನಾವರಣ
Gochara Kannada Movie Title Unveiled: ಗಂಟುಮೂಟೆ ಎಂಬ ಭಿನ್ನ ಬಗೆಯ ಚಿತ್ರವನ್ನು ರೂಪಾ ರಾವ್ ನಿರ್ದೇಶನ ಮಾಡಿದ್ದರು. ಅದಕ್ಕಾಗಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಇದೀಗ ಇದೇ ನಿರ್ದೇಶಕಿ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಚಿತ್ರಕ್ಕೆ ಗೋಚರ ಎಂಬ ಶೀರ್ಷಿಕೆ ಇಡಲಾಗಿದೆ.
Gochara Kannada Movie: ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಕೆಂಡ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಗಂಟುಮೂಟೆ ಸಿನಿಮಾ ತಂಡದ ಈ ಪ್ರಯೋಗಕ್ಕೆ ಪೂರ್ಣಾಂಕ ಸಿಕ್ಕಿತ್ತು. ಇದೀಗ ಇದೇ ಕೆಂಡ ಸಿನಿಮಾ ನಿರ್ಮಾಣ ಮಾಡಿದ್ದ ರೂಪಾ ರಾವ್ ಇದೀಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನಿರ್ದೇಶಕಿಯಾಗಿಯೂ ಈ ಸಿನಿಮಾಕ್ಕೆ ದುಡಿಯಲಿದ್ದಾರೆ ರೂಪಾ ರಾವ್. ಗಂಟುಮೂಟೆ ಸಿನಿಮಾಕ್ಕೆ ನಿರ್ಮಾಪಕಿಯಾಗಿ, ಬರಹಗಾರರಾಗಿ, ನಿರ್ದೇಶಕಿಯಾಗಿಯೂ ರೂಪಾ ರಾವ್ ಕೆಲಸ ಮಾಡಿದ್ದರು. ಇದೀಗ ಮತ್ತೆ ಹೊಸ ಸಿನಿಮಾ ಗೋಚರ ಮೂಲಕ ನಿರ್ದೇಶಕಿಯಾಗಿ ಮರಳಿದ್ದಾರೆ.
ಯಾರೂ ಸಲೀಸಾಗಿ ಮುಟ್ಟಲಾಗದ ಕಥೆಗೆ ದೃಶ್ಯರೂಪ ಕೊಟ್ಟು ಗೆಲುವು ಕಂಡವರು ನಿರ್ದೇಶಕಿ ರೂಪಾ ರಾವ್. ಈ ಹಿಂದೆ ಗಂಟುಮೂಟೆ ಎಂಬ ಭಿನ್ನ ಬಗೆಯ ಚಿತ್ರವನ್ನು ರೂಪಾ ರಾವ್ ನಿರ್ದೇಶನ ಮಾಡಿದ್ದರು. ಅದಕ್ಕಾಗಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿರಳವಾಗಿರುವ ನಿರ್ದೇಶಕಿಯರ ಸಾಲಿನಲ್ಲಿ ವಿಶಿಷ್ಟವಾದ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಹಭೆಯಾಡುತ್ತಿದ್ದಾಗಲೇ, ಏಕಾಏಕಿ ಕೆಂಡ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ರೂಪಾ ರಾವ್ ನಿರ್ದೇಶನಕ್ಕೆ ಮರಳಿದ್ದಾರೆ. ಆ ಸಿನಿಮಾಕ್ಕೆ `ಗೋಚರ' ಎಂಬ ಶೀರ್ಷಿಕೆ ಇಡಲಾಗಿದೆ.
ಇದು ಗಂಟುಮೂಟೆ ಚಿತ್ರದ ಸೀಕ್ವೆಲ್ಲಾ?
ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ಈ ಕಾರಣದಿಂದಲೇ ರೂಪಾ ಗಂಟುಮೂಟೆಯ ಸೀಕ್ವೆಲ್ ಕೈಗೆತ್ತಿಕೊಳ್ಳುವ ನಿರೀಕ್ಷೆಯೂ ಇತ್ತು. ಇದೀಗ ಗೋಚರ ಘೋಷಣೆಯಾದ ಬೆನ್ನಿಗೇ ಇದು ಗಂಟುಮೂಟೆಯ ಮುಂದುವರೆದ ಭಾಗವಾ? ಅಂತೊಂದು ಪ್ರಶ್ನೆ ಮೂಡಿದೆ. ಪೋಸ್ಟರ್‌ನಲ್ಲಿ ಗಂಟುಮೂಟೆ 2 ಎಂಬ ಬರಹವೂ ಕಂಡಿದೆ. ಸದ್ಯಕ್ಕೆ ರೂಪಾ ರಾವ್ ಗೋಚರ ಎಂಬುದು ಗಂಟುಮೂಟೆಯ ನಂಟು ಕಳಚಿಕೊಂಡ ಚಿತ್ರ ಎಂಬಂತೆ ಪೋಸ್ಟರ್ ಮೂಲಕ ಸಂದೇಶ ರವಾನಿಸಿದ್ದಾರೆ.
ಪ್ರಯಾಣದ ಕುರಿತ ಸಿನಿಮಾ
ಹಾಗಾದರೆ, ಗೋಚರ ಚಿತ್ರ ಯಾವ ಬಗೆಯದ್ದೆಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಇದೊಂದು ಟ್ರಾವೆಲ್ ಮೂವಿ ಎಂಬ ಏಕಮಾತ್ರ ಸುಳಿವಷ್ಟೇ ಸದ್ಯ ಚಿತ್ರತಂಡದ ಕಡೆಯಿಂದ ಸಿಕ್ಕಿದೆ. ಸದ್ಯ ಬಿಡುಗಡೆ ಆಗಿರುವ ಗೋಚರ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿದೆ. ನಿರ್ಮಾಪಕಿಯಾಗಿಯೂ ಭಿನ್ನ ಸಿನಿಮಾದ ಭಾಗವಾಗಿದ್ದ ರೂಪಾ ರಾವ್, ನಿರ್ದೇಶಕಿಯಾಗಿ ಬೆರಗಿನ ಕಥೆಯನ್ನೇ ಆಯ್ದುಕೊಂಡಿದ್ದಾರೆ ಎಂಬುದರಲ್ಲಿ ಸಂಶಯವೇನಿಲ್ಲ. ಗೋಚರದ ಬಗೆಗಿನ ಮಿಕ್ಕುಳಿದ ಮಾಹಿತಿಗಳು ಹಂತ ಹಂತವಾಗಿ ಗೋಚರಿಸುವ ಸಾಧ್ಯತೆಗಳಿವೆ.
ಸಾಥ್ ನೀಡಿದ ಕೆಂಡ ನಿರ್ದೇಶಕರು
ಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ರೂಪಾ ರಾವ್ ವಹಿಸಿಕೊಂಡರೆ, ನಿರ್ಮಾಣದಲ್ಲಿಯೂ ಅವರ ಪಾಲುದಾರಿಕೆ ಇರಲಿದೆ. ರೂಪಾ ರಾವ್ ಜತೆಗೆ ಕೆಂಡ ಸಿನಿಮಾ ನಿರ್ದೇಶಿಸಿದ್ದ ಸಹದೇವ ಕೆಳವಡಿ ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.