ನಟಿ ಲೀಲಾವತಿ ನಿಧನಕ್ಕೆ ಕಂಬನಿ ಮಿಡಿದ ನೆಟ್ಟಿಗರು; ಹೀಗಂದ್ರು ನಟಿ ಶೃತಿ, ಸಾಧು ಕೋಕಿಲಾ
ಹಿರಿಯ ನಟಿ ಲೀಲಾವತಿ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪದ ಪ್ರವಾಹವೇ ಹರಿದುಬರುತ್ತಿದೆ. ಇದೇ ಸಮಯದಲ್ಲಿ ಹಿರಿಯ ನಟಿ ಲೀಲಾವತಿ ಜತೆಗಿನ ಬಾಂಧವ್ಯ, ಅವರ ಜತೆಗಿನ ಒಡನಾಟವನ್ನೂ ಅನೇಕರು ನೆನಪಿಸಿಕೊಂಡಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 400ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ, 200ಕ್ಕೂ ಹೆಚ್ಚು, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಹರಿದುಬರುತ್ತಿದೆ. ಇದೇ ಸಮಯದಲ್ಲಿ ಹಿರಿಯ ನಟಿಯ ಜತೆಗೆ ಒಡನಾಟ ಇದ್ದವರು ಲೀಲಾವತಿ ಜತೆಗಿನ ಅನೇಕ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ತಾಯಿ ಆಶೀರ್ವಾದ ಸದಾ ನಮ್ಮ ಮೇಲಿದೆ: ಸಾಧು ಕೋಕಿಲಾ
'ಕನ್ನಡ ಕೋಗಿಲೆ' ಕಾರ್ಯಕ್ರಮದ ಸಂದರ್ಭದಲ್ಲಿ ಲೀಲಾವತಿ ಅಮ್ಮಾವರ ಭೇಟಿ ಎಂದಿಗೂ ಮರೆಯಲಾಗದ ಕ್ಷಣ. ನಾನು ಹಾಡಿದ 'ಅಮ್ಮಾ' ಹಾಡು ಕೇಳಿ ಭಾವುಕರಾಗಿ ಮನದುಂಬಿ ಹಾರೈಸಿದ್ದರು. ತಾಯಿಯ ಆಶೀರ್ವಾದ ಸದಾ ನಮ್ಮ ಮೇಲಿದೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಕನ್ನಡ ನಟ ಸಾಧು ಕೋಕಿಲಾ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಭೇಟಿಯಾದ ನಟಿ ಶೃತಿ
ಇತ್ತೀಚೆಗೆ ಹಿರಿಯ ನಟಿ ಲೀಲಾವತಿಯವರನ್ನು ನಟಿ ಶೃತಿ ಭೇಟಿಯಾಗಿದ್ದರು. ಆ ಸಂದರ್ಭದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಅಮ್ಮ ನೀವೊಬ್ಬ ಆದರ್ಶ ಮಹಿಳೆ ಅದ್ಬುತ ಕಲಾವಿದೆ, ಮಾದರಿ ತಾಯಿ, ಸಮಾಜಮುಖಿ , ಸಹೃದಯಿ, ಸರಳ ಜೀವಿ. ಅಮ್ಮ ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣವು ಅಮೂಲ್ಯ ಹಾಗೂ ಜೀವನದುದಕ್ಕೂ ಸಹಾಯವಾಗುವ ಅನುಭವ. ನಿಮ್ಮೊಂದಿಗೆ ಹೆಚ್ಚು ಸಮಯ ಕಾಲ ಕಳೆದು, ವ್ಯವಸಾಯದಲ್ಲಿ ನಿಮ್ಮಿಂದ ಮಾರ್ಗದರ್ಶನ ಪಡೆದು, ನಿಮ್ಮ ಕೈಯಾರೆ ಮಾಡಿದ ಅಡುಗೆ ತಿಂದ ನಾನೇ ಪುಣ್ಯವಂತಳು. ನನ್ನ ತೋಟಕ್ಕೆ ಬರಬೇಕೆಂದು ನೀವು ಪಟ್ಟ ಆಸೆ ಕನಸಾಗೆ ಉಳಿಯಿತಲ್ಲ ಎಂಬುದೇ ನೋವು. ಆದರೆ ನೀವು ಆಸೆ ಪಟ್ಟ ಒಂದು ಮಾವಿನ ಮರ “ ರಸಂ ಮಲಗೋವಾ ” ನಿಮ್ಮ ನೆನಪಾಗಿ ನೆಡುತ್ತೇನೆ . ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೂ ನಿಮ್ಮ ಮಗನಿಗೆ ಈ ನೋವನ್ನು ಭರಿಸುವ ಶಕ್ತಿ ಆ ಭಗವಂತ ನೀಡಲಿ. ಓಂ ಶಾಂತಿ ಎಂದು ಶೃತಿ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಲೀಲಾವತಿ ನಟಿಸಿದ ಸಿನಿಮಾ ಹಾಡುಗಳ ಮೂಲಕ ನೆನಪು
ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಪುತ್ರ ವಿನೋದ್ ರಾಜ್ ಕುಟುಂಬ ವರ್ಗದವರಿಗೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಜಕಾರಣಿ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿದ್ದಾರೆ.
ಮನೋಜ್ಞ ನಟನೆಯ ಮೂಲಕ ದಶಕಗಳ ಕಾಲ ಸಿನಿರಸಿಕರ ಮನ ಗೆದ್ದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಾ. ಸಯ್ಯದ್ ಟ್ವೀಟ್ ಮಾಡಿದ್ದಾರೆ.
ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ ಲೀಲಾವತಿ ಅವರಿಗೆ ಸಂತಾಪ, ನೆನಪಿನ ವಿಡಿಯೋ, ಸಂದೇಶಗಳೇ ಕಾಣಿಸುತ್ತಿವೆ.