ತೊನ್ನು ಸಮಸ್ಯೆಯೇ ಸಿನಿಮಾ ಆದಾಗ; ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಮೂಲಕ ಮತ್ತೆ ಬಂದ ಮಹಿರ ನಿರ್ದೇಶಕ ಮಹೇಶ್‌ ಗೌಡ
ಕನ್ನಡ ಸುದ್ದಿ  /  ಮನರಂಜನೆ  /  ತೊನ್ನು ಸಮಸ್ಯೆಯೇ ಸಿನಿಮಾ ಆದಾಗ; ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಮೂಲಕ ಮತ್ತೆ ಬಂದ ಮಹಿರ ನಿರ್ದೇಶಕ ಮಹೇಶ್‌ ಗೌಡ

ತೊನ್ನು ಸಮಸ್ಯೆಯೇ ಸಿನಿಮಾ ಆದಾಗ; ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಮೂಲಕ ಮತ್ತೆ ಬಂದ ಮಹಿರ ನಿರ್ದೇಶಕ ಮಹೇಶ್‌ ಗೌಡ

ಈ ಹಿಂದೆ ಮಹಿರ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಮಹೇಶ್‌ ಗೌಡ, ಇದೀಗ ಚರ್ಮದ ಕಾಯಿಲೆ ತೊನ್ನು ಕುರಿತಾದ ಸಿನಿಮಾ ಮಾಡಿದ್ದಾರೆ. ಪ್ರಧಾನ ಪಾತ್ರದಲ್ಲಿ ನಟಿಸಿರುವ ಮಹೇಶ್‌ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ
‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ

Bilichukki Hallihakki kannada Movie: ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಗುಂಗು ಹತ್ತಿಸಿಕೊಂಡ ದೊಡ್ಡ ಪ್ರೇಕ್ಷಕ ವರ್ಗವೊಂದು ಕನ್ನಡದಲ್ಲಿದೆ. ಅದೇ ಧಾಟಿಯ ಚಿತ್ರವೊಂದು ಪಕ್ಕಾ ಕಮರ್ಶಿಯಲ್ ಪಥದಲ್ಲಿ ರೂಪುಗೊಂಡಿದೆಯೆಂದರೆ ಅದರ ಬಗೆಗೊಂದು ಕುತೂಹಲ ತಾನಾಗಿಯೇ ಮೂಡಿಕೊಳ್ಳುತ್ತೆ. ಸದ್ಯ ಅಂಥಾದ್ದೊಂದು ಕೌತುಕಕ್ಕೆ ಕಾರಣವಾಗಿರುವ ಚಿತ್ರ 'ಬಿಳಿಚುಕ್ಕಿ ಹಳ್ಳಿಹಕ್ಕಿ'.

ಈ ಹಿಂದೆ `ಮಹಿರಾ' ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದವರು ಮಹೇಶ್ ಗೌಡ. ಇದೀಗ ಅವರು ಸ್ವತಃ ನಿರ್ಮಾಣ, ನಿರ್ದೇಶನದ ಜವಾಬ್ದಾರಿ ಹೊತ್ತು ತಾವೇ ನಾಯಕನಾಗಿ ನಟಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ'. ದಸರಾ ಹಬ್ಬಕ್ಕೆ ಶುಭ ಕೋರುವ ನಿಮಿತ್ತವಾಗಿ ಈ ಚಿತ್ರದ ಒಂದು ಪೋಸ್ಟರ್ ಅನಾವರಣಗೊಂಡಿದೆ. ಈ ಮೂಲಕ ಚಿತ್ರದತ್ತ ಪ್ರೇಕ್ಷಕರ ಚಿತ್ತ ಹೊರಳಿಕೊಂಡಿದೆ.‌

ತೊನ್ನು ಸಮಸ್ಯೆಯೇ ಚಿತ್ರದ ಎಳೆ..

ಇಡೀ ದೇಶದಲ್ಲಿಯೇ ಮೊದಲ ಬಾರಿ ಈ ಸಿನಿಮಾ ಮೂಲಕ ವಿಟಿಲಿಗೋ ಅಂದರೆ, ತೊನ್ನಿನ ಭೂಮಿಕೆಯಲ್ಲಿ ತಯಾರಾದ ಚಿತ್ರವೆಂಬ ಹೆಗ್ಗಳಿಕೆ `ಬಿಳಿಚುಕ್ಕಿ ಹಳ್ಳಿಹಕ್ಕಿ' ಚಿತ್ರಕ್ಕಿದೆ. ಸಾಮಾನ್ಯವಾಗಿ ಇಂಥಾ ಕಥಾಹಂದರದ ಯಾವುದೇ ಸಿನಿಮಾದಲ್ಲಿ ಪಾತ್ರಧಾರಿಗಳು ಮೇಕಪ್ ಮೂಲಕ ಅದಕ್ಕೆ ಜೀವ ತುಂಬುತ್ತಾರೆ. ಆದರೆ, ಇಲ್ಲಿ ಸ್ವತಃ ವಿಟಿಲಿಗೋ ಬಾಧೆಗೀಡಾಗಿರುವ ಮಹೇಶ್ ಗೌಡ ಅವರೇ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರಂತೆ.

ತೊನ್ನೆಂಬುದು ಅಪರಿಚಿತ ಕಾಯಿಲೆಯೇನಲ್ಲ. ಅದರ ಮನೋ ದೈಹಿಕ ಯಾತನೆಗಳಿವೆಯಲ್ಲಾ? ಅದು ಬೇರೆಯವರ ನಿಲುವಿಗೆ ಸಲೀಸಾಗಿ ದಕ್ಕುವಂಥಾದ್ದಲ್ಲ. ಇಷ್ಟೆಲ್ಲ ವಿವರ ಕೇಳಿದಾಕ್ಷಣ ಇದೊಂದು ಕಲಾತ್ಮಕ ಚಿತ್ರವೆಂಬ ಚಿತ್ರಣ ನಿಮ್ಮೊಳಗೆ ಮೂಡಿಕೊಂಡಿದ್ದರೆ, ಅದರಾಚೆಗೆ ಈ ಚಿತ್ರ ರೂಪುಗೊಂಡಿದೆ ಎಂಬುದು ಮಹೇಶ್ ಗೌಡರ ಭರವಸೆ.

ಕಮರ್ಷಿಯಲ್‌ ಧಾಟಿಯ ಸಿನಿಮಾ

ಇಂಥಾದ್ದೊಂದು ಸೂಕ್ಷ್ಮ ಕಥೆಯನ್ನು ಪಕ್ಕಾ ಮನೋರಂಜನಾತ್ಮಕ ಅಂಶಗಳೊಂದಿಗೆ, ಕಮರ್ಷಿಯಲ್ ಧಾಟಿಯಲ್ಲಿಯೇ ಕಟ್ಟಿ ಕೊಡಲಾಗಿದೆಯಂತೆ. ರೊಮ್ಯಾಂಟಿಕ್ ಶೈಲಿಯಲ್ಲಿ ಸಾಗುವ ಈ ಚಿತ್ರದಲ್ಲಿ ಹಾಸ್ಯಕ್ಕೂ ಕೊರತೆಯೇನಿಲ್ಲ. ನಿಖರವಾಗಿ ಹೇಳಬೇಕೆಂದರೆ ನಗಿಸುತ್ತಲೇ ಅಳಿಸುವ, ಬಹುಕಾಲ ಕಾಡುವ, ಎಲ್ಲ ವಯೋಮಾನದ, ಅಭಿರುಚಿಗಳ ಪ್ರೇಕ್ಷಕರಿಗೂ ಪಥ್ಯವಾಗುವಂತೆ ಈ ಚಿತ್ರವನ್ನು ಮಹೇಶ್ ಗೌಡ ರೂಪಿಸಿದ್ದಾರಂತೆ. ಎರಡು ಪಾತ್ರಗಳ ನಡುವಿನ ಬಂಧದ ಸುತ್ತಾ ಸಾಗೋ ಈ ಕಥನ ಪ್ರೇಕ್ಷಕರಿಗೆ ಬೇರೆಯದ್ದೇ ಥರದ ಫೀಲ್ ಕೊಡಲಿದೆ ಎಂಬ ನಂಬಿಕೆ ಮಹೇಶ್ ಗೌಡ ಅವರಲ್ಲಿದೆ.

ಹೀಗೆ `ಬಿಳಿಚುಕ್ಕಿ ಹಳ್ಳಿಹಕ್ಕಿ' ಚಿತ್ರದ ಮೂಲಕ ಗಮನ ಸೆಳೆದಿರುವ ಮಹೇಶ್ ಗೌಡ ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದುಕೊಂಡವರು. ಲಂಡನ್ ಫಿಲ್ಮ್ ಅಕಾಡೆಮಿಯಿಂದ ಫಿಲಂ ಮೇಕಿಂಗ್ ಕೋರ್ಸ್ ಅನ್ನೂ ಸಹ ಮಾಡಿಕೊಂಡಿದ್ದಾರೆ. ಬಹು ವರ್ಷಗಳ ಕಾಲ ಲಂಡನ್ನಿನಲ್ಲಿಯೇ ವಾಸವಿದ್ದ ಮಹೇಶ್ ಗೌಡ 2013ರಲ್ಲಿ ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸುವ ಕನಸಿನೊಂದಿಗೆ ಭಾರತಕ್ಕೆ ಮರಳಿದ್ದರು.

ಆರಂಭದಲ್ಲಿ ಒಂದಷ್ಟು ಪ್ರಯೋಗಗಳಿಗೆ ಒಡ್ಡಿಕೊಂಡು, ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಗರಡಿಯಲ್ಲಿ ಪಳಗಿಕೊಂಡಿದ್ದರು. ಮಹಿರ ಚಿತ್ರ ನಿರ್ದೇಶನ ಮಾಡುವ ಮೂಲಕ ಕನಸಿನ ಹಾದಿಯಲ್ಲಿ ಮೊದಲ ಗುರುತು ಮೂಡಿಸಿದ್ದರು. ಇದೀಗ ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಈ ಸಿನಿಮಾ ಬಗೆಗಿನ ಮತ್ತೊಂದಷ್ಟು ಅಚ್ಚರಿಯ ಸಂಗತಿಗಳು ಜಾಹೀರಾಗಲಿವೆ.

Whats_app_banner