kichcha Sudeep; ‘ನಾನು ಹೆದರೋ ವ್ಯಕ್ತಿ ಅಲ್ಲ, ಆ ಪತ್ರ ಕಳಿಸಿದ್ದು ಚಿತ್ರರಂಗದವರೇ.. ಅವರಿಗೆ ಪ್ರತ್ಯುತ್ತರ ನೀಡುವೆ..’ ಎಂದ ಕಿಚ್ಚ ಸುದೀಪ್
ಇದು ನಮ್ಮ ಚಿತ್ರರಂಗದಲ್ಲಿ ಇರುವವರ ಕೆಲಸ. ಅದರಲ್ಲೂ ಯಾರು ಅಂತಲೂ ನನಗೆ ಗೊತ್ತು. ಆದರೆ, ಅದನ್ನ ಇವತ್ತು ಮಾತನಾಡಲು ಹೋಗಲ್ಲ ಎಂದಿದ್ದಾರೆ ಸುದೀಪ್.
kichcha Sudeep: ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ಅವರ ವಿರುದ್ಧವೀಗ ಪತ್ರ ಬೆದರಿಕೆ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ಸುದೀಪ್ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಅವರ ವಿರುದ್ಧ ಕೆಲವರು ಬಹಿರಂಗ ಪತ್ರವನ್ನು ರವಾನಿಸಿ, ನಿಮ್ಮ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದ್ದು, ಪತ್ರ ಕಳಿಸಿದವರ ಹುಡುಕಾಟ ಪ್ರಗತಿಯಲ್ಲಿದೆ. ಈ ನಡುವೆ ಈ ಪತ್ರದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರರಂಗದಲ್ಲಿರುವವರ ಕುಮ್ಮಕ್ಕಿದು...
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸುದೀಪ್, "ಅಡ್ರೆಸ್ ಗೊತ್ತಿದೆ ಎಂದ ಮಾತ್ರಕ್ಕೆ ಹೀಗೆ ಪೋಸ್ಟ್ ಮಾಡುತ್ತಾರೆ. ಇದು ರಾಜಕೀಯದಲ್ಲಿ ಇರುವವರು ಮಾಡಿದ ಕೆಲಸ ಅಲ್ಲ. ನಮ್ಮ ಸಿನಿಮಾದವರದ್ದೇ ಕುಮ್ಮಕ್ಕಿದು. ಯಾರು ಪತ್ರ ಬರೆದಿದ್ದಾರೆ ಎಂಬ ವಿಚಾರ ಹೊರಗಡೆ ಬರುತ್ತದೆ. ನಾನೇ ಹೊರಗೆ ತೆಗೆಯುತ್ತೇನೆ. ನಾನು ಸುಮ್ಮನೆ ಕೂರುವವನಲ್ಲ. ಕೆಲವು ನಿಲುವುಗಳನ್ನು ತೆಗೆದುಕೊಂಡಿದ್ದೇನೆ. ಅದಕ್ಕೆ ಬದ್ಧವಾಗಿದ್ದೇನೆ. ಎಲ್ಲ ಪಕ್ಷದಲ್ಲೂ ನನಗೆ ಆತ್ಮೀಯರು ಇದ್ದಾರೆ. ನನ್ನ ಪರ ಇರುವವರಿಗಾಗಿ ನಾವು ಕೆಲವು ನಿರ್ಧಾರ ತೆಗೆದುಕೊಂಡಿದ್ದೇನೆ. ಅವರಿಗೆ ಉತ್ತರ ಕೊಟ್ಟೇ ಕೊಡುತ್ತೇನೆ. ನಾನು ಸರಿಯಾದ ದಾರಿಯಲ್ಲಿಯೇ ಇದ್ದೇನೆ" ಎಂದಿದ್ದಾರೆ ಸುದೀಪ್.
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ..
ಇನ್ನು ಸುದೀಪ್ ಬಿಜೆಪಿ ಸೇರಲಿದ್ದಾರೆ, ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಅಭಿಮಾನಿ ವಲಯದಲ್ಲಿಯೂ ಕುತೂಹಲ ಮನೆ ಮಾಡಿತ್ತು. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, "ನಾನು ಯಾವುದೇ ಪಕ್ಷದ ಜತೆ ಸೇರುತ್ತಿಲ್ಲ, ಸ್ಪರ್ಧಿಸುತ್ತಿಲ್ಲ. ಪ್ರಚಾರಕ್ಕೆ ಹೋಗುತ್ತಿದ್ದೇನೆ. ಏಕೆಂದರೆ, ರಾಜಕೀಯದಲ್ಲಿರುವ ಎಷ್ಟೋ ಜನ ನಮ್ಮ ಜೀವನಕ್ಕೆ ಹತ್ತಿರದವರು. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ, ನನ್ನ ಕಷ್ಟದ ಟೈಮ್‌ನಲ್ಲಿ ಕೈ ಹಿಡಿದವರು ಸಾಕಷ್ಟು ಜನರಿದ್ದಾರೆ. ಅವರ ಪರವಾಗಿ ಪ್ರಚಾರ ಮಾಡುವುದರಲ್ಲಿ ತಪ್ಪೇನಿಲ್ಲ. ಹಾಗಾಗಿ ನಾನು ಈ ಕೆಲಸಕ್ಕೆ ಮುಂದಾಗಿದ್ದೇನೆ" ಎಂಬುದು ಸುದೀಪ್ ಮಾತು.
ನಾನು ಯಾವುದಕ್ಕೂ ಹೆದರಲ್ಲ..
"ಇದು ನಮ್ಮ ಚಿತ್ರರಂಗದಲ್ಲಿ ಇರುವವರ ಕೆಲಸ. ಅದರಲ್ಲೂ ಯಾರೂ ಅಂತಲೂ ನನಗೆ ಗೊತ್ತು. ಆದರೆ, ಅದನ್ನ ಇವತ್ತು ಮಾತನಾಡಲು ಹೋಗಲ್ಲ. ಯಾಕಂದ್ರೆ, ಅದು ಯಾವ ದಾರಿಯಲ್ಲಿ ಬರಬೇಕೋ.. ಆ ದಾರಿಯಲ್ಲಿಯೇ ಬರಲಿ. ನಾನು ಯಾವುದಕ್ಕೂ ಹೆದರೋನಲ್ಲ. ಅದಂತೂ ಸತ್ಯ" ಎಂದಿದ್ದಾರೆ.
ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
ಸುದೀಪ್ ಅವರ ಹೆಸರಿಗೆ 2 ಪತ್ರಗಳು ಬಂದಿದ್ದು ಆ ಪತ್ರಗಳಲ್ಲಿ ಕಿಚ್ಚನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ. ಜೊತೆಗೆ ಬೆದರಿಕೆ ಕೂಡಾ ಒಡ್ಡಿದ್ಧಾರೆ. ನಿಮ್ಮ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಪತ್ರದಲ್ಲಿ ಬರೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಸುದೀಪ್ ಅವರ ಆಪ್ತ, ನಿರ್ಮಾಪಕ ಜಾಕ್ ಮಂಜು, ಸುದೀಪ್ ಪರವಾಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಬೆದರಿಕೆ ಒಡ್ಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.