ಪುಷ್ಪ ಜತೆ ನಾರೂ ಸ್ವರ್ಗ ಸೇರಲಿ! ನಮ್ಮ ಎಣ್ಣೆ, ಸಿಗರೇಟ್ ಬ್ರಾಂಡ್ ತೋರಿಸಿ, 10 ಕೋಟಿ ಕೊಡ್ತಿವಿ; ಹೀಗಿತ್ತು ಅಲ್ಲು ಅರ್ಜುನ್ ಉತ್ತರ
Allu Arjun Pushpa the rule: ಅಲ್ಲು ಅರ್ಜುನ್ ಅವರು ಪುಷ್ಪ ದಿ ರೈಸ್ ಸಿನಿಮಾದ ಶೂಟಿಂಗ್‌ನಲ್ಲಿ ಪಾನ್ ತಿನ್ನುವ, ಆಲ್ಕೋಹಾಲ್ ಕುಡಿಯುವ ಸೀನ್‌ಗಳಲ್ಲಿ ನಮ್ಮ ಕಂಪನಿಯ ಬ್ರಾಂಡ್ ತೋರಿಸಿ, ಅದಕ್ಕೆ ಹತ್ತು ಕೋಟಿ ರೂಪಾಯಿ ನೀಡ್ತಿವಿ ಎಂದು ಪ್ರಮುಖ ಕಂಪನಿಯೊಂದು ಮುಂದೆ ಬಂದಿದ್ದು, ಅದಕ್ಕೆ ಅಲ್ಲು ಅರ್ಜುನ್ ಆಗೋದಿಲ್ಲ ಎಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಮುಂದಿನ ಭಾಗ "ಪುಷ್ಪ: ದಿ ರೈಸ್" ಚಿತ್ರೀಕರಣ ಹಂತದಲ್ಲಿದೆ. ಈ ಸಿನಿಮಾದಲ್ಲಿ ನಟಿಸುವ ಅಲ್ಲು ಅರ್ಜುನ್ ಈ ಹಿಂದಿನಿಂದಲೂ ಕೆಲವೊಂದು ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ. ಅವರು ತಂಬಾಕು, ಆಲ್ಕೋಹಾಲ್, ಪಾನ್ ಮಸಾಲ ಇತ್ಯಾದಿಗಳ ಪ್ರಮೋಷನ್‌ನಲ್ಲಿ ಭಾಗಿಯಾಗುವುದಿಲ್ಲ ಎಂಬ ನಿರ್ಧಾರ ಹೊಂದಿದ್ದಾರೆ. ಇದೀಗ ಗುಲ್ಟೆ ತಾಣದ ವರದಿ ಪ್ರಕಾರ ಪುಷ್ಪ ಸಿನಿಮಾದಲ್ಲಿಯೂ ಈ ರೀತಿಯ ಪ್ರಚಾರದ ಅವಕಾಶವೊಂದು ಬಂದಿದ್ದು, ಅದನ್ನು ಅಲ್ಲು ಅರ್ಜುನ್ ನಿರಾಕರಿಸಿದ್ದಾರೆ.
ಆರೋಗ್ಯಕರಕ್ಕೆ ಹಾನಿಕಾರ- ಬೇಡ ಎಂದ ಅಲ್ಲೂ ಅರ್ಜುನ್
ಜನಪ್ರಿಯ ಲಿಕ್ಕರ್ ಮತ್ತು ಪಾನ್ ಬ್ರಾಂಡ್ ಕಂಪನಿಯೊಂದು ಪುಷ್ಪ ಸಿನಿಮಾ ತಯಾರಕರನ್ನು ಸಂಪರ್ಕಿಸಿದೆ. ಸಿನಿಮಾದೊಳಗೆ ಕೆಲವು ಕಡೆಗಳಲ್ಲಿ ತಮ್ಮ ಬ್ರಾಂಡ್ ಅಸ್ತಿತ್ವ ತೋರಿಸಲು ಮತ್ತು ಅದಕ್ಕೆ ಪ್ರತಿಯಾಗಿ 10 ಕೋಟಿ ರೂಪಾಯಿ ನೀಡಲು ಆ ಜನಪ್ರಿಯ ಕಂಪನಿ ಮುಂದೆ ಬಂದಿದೆ ಎಂದು ಗುಲ್ಟೆ ವರದಿ ತಿಳಿಸಿದೆ. ಅಂದರೆ, ಸಿನಿಮಾದ ಹೀರೋ ಕುಡಿಯುವ ಸಂದರ್ಭದಲ್ಲಿ, ಸಿಗರೇಟು ಸೇದುವ ಸಂದರ್ಭದಲ್ಲಿ, ಪಾನ್ ಮಸಾಲ ಜಗಿಯುವ ಸಂದರ್ಭದಲ್ಲಿ ತಮ್ಮ ಬ್ರಾಂಡ್ ಹೆಸರು ಎಲ್ಲಾದರೂ ಕಾಣಿಸುವಂತೆ ಮಾಡುವ ಬೇಡಿಕೆಯನ್ನು ಇಟ್ಟಿದೆ. ಆದರೆ, ಈ ಆಫರ್‌ಗೆ ಅಲ್ಲು ಅರ್ಜುನ್ ನೋ ಎಂದಿದ್ದಾರೆ ಎಂದು ವರದಿಯಾಗಿದೆ. ಇಂತಹ ಬ್ರಾಂಡ್‌ಗಳನ್ನು ಪ್ರಮೋಷನ್ ಮಾಡಲು ಅವರು ಒಪ್ಪಿಲ್ಲ ಎಂದು ವರದಿಯಾಗಿದೆ. "ನಿಜ ಜೀವನದಲ್ಲಿ ಕುಡಿಯುವಂತೆ ಅಥವಾ ಸಿಗರೇಟು ಸೇದುವಂತೆ ನನ್ನ ಅಭಿಮಾನಿಗಳ ಮೇಲೆ ಪ್ರಭಾವ ಬೀರಲು ನಾನು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಇದೇ ಮೊದಲಲ್ಲ
ಅಲ್ಲು ಅರ್ಜುನ್ ಈ ರೀತಿಯ ನಿರ್ಧಾರ ತಳೆಯುತ್ತಿರುವುದು ಇದೇ ಮೊದಲಲ್ಲ. ಪುಷ್ಪ ಭಾಗ 1 ಸಿನಿಮಾ ಯಶಸ್ವಿಯಾದ ಬಳಿಕ ಹಲವು ತಂಬಾಕು ಕಂಪನಿಗಳು ಇವರಿಗೆ ಟೆಲಿವಿಷನ್ ಕಮರ್ಷಿಯಲ್ ಜಾಹೀರಾತುಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡುವ ಆಫರ್‌ಗಳನ್ನು ನೀಡಿವೆ. ವೈಯಕ್ತಿಕವಾಗಿ ತಂಬಾಕು ಜಗಿಯುವ, ಸೇವಿಸುವ ಅಭ್ಯಾಸ ಹೊಂದಿರದೆ ಇರುವ ಅಲ್ಲೂ ಅರ್ಜುನ್ ಅವರು ಇಂತಹ ಆಫರ್‌ಗಳನ್ನು ನಿರಾಕರಿಸಿದ್ದರು. "ಭೂಮಿಯ ಒಳಿತಿಗಾಗಿ ಗಿಡಗಳನ್ನು ನೆಡಿ" ಎಂದೆಲ್ಲ ಅಲ್ಲು ಅರ್ಜುನ್ ಆಗಾಗ ತನ್ನ ಅಭಿಮಾನಿಗಳಿಗೆ ತಿಳಿಸುತ್ತ ಇರುತ್ತಾರೆ. ಕೊರೊನಾ ಸಂಕ್ರಾಮಿಕದ ಸಮಯದಲ್ಲಿ ಇವರು ಜನರಿಗೆ ಸಾಕಷ್ಟು ನೆರವು ನೀಡಿದ್ದರು.
ಜಾಹೀರಾತಿನ ನಾನಾ ರೂಪ
ಸಿನಿಮಾಗಳಲ್ಲಿ ಯಾವುದಾದರೂ ಸೀನ್‌ಗಳಲ್ಲಿ ಮಾಲ್‌ಗಳು, ಯಾವುದಾದರೂ ಕಂಪನಿಯ ಬ್ರಾಂಡ್‌ಗಳು, ಪ್ರಮುಖ ಕಮರ್ಷಿಯಲ್ ತಾಣಗಳು ಕಣ್ಣಿಗೆ ಕಾಣಿಸುತ್ತ ಇರುತ್ತವೆ. ಇದೇ ರೀತಿ ನಟರು ಧರಿಸುವ ಉಡುಗೆ, ಶೂ, ವಾಚ್ ಇತ್ಯಾದಿಗಳ ಬ್ರಾಂಡ್ ಹೆಸರುಗಳು ಒಮ್ಮೊಮ್ಮೆ ಚೆನ್ನಾಗಿ ಗೋಚರವಾಗುವಂತೆ ಸಿನಿಮಾ ಶೂಟಿಂಗ್ ಮಾಡಲಾಗಿರುತ್ತದೆ. ಇದೇ ರೀತಿ ನಟರು ಸೇದುವ ಸಿಗರೇಟು, ತಿನ್ನುವ ಪಾನ್ ಮಸಾಲ, ಕುಡಿಯುವ ಮದ್ಯದ ಬಾಟಲ್‌ಗಳಲ್ಲಿ ಬ್ರಾಂಡ್ ಹೆಸರುಗಳು ಕಾಣಿಸುತ್ತವೆ. ಸಿನಿಮಾವೊಂದರಲ್ಲಿ ಈ ರೀತಿ ಬ್ರಾಂಡ್ ಹೆಸರುಗಳನ್ನು ಕಾಣಿಸುವ ಹಿಂದೆಯೂ ಜಾಹೀರಾತು ಜಗತ್ತು ಕೆಲಸ ಮಾಡುತ್ತದೆ. "ನಮ್ಮ ಸಿನಿಮಾದಲ್ಲಿ ನಿಮ್ಮ ಬ್ರಾಂಡ್ ಅನ್ನು ಇಷ್ಟು ಸೆಕೆಂಡ್, ನಿಮಿಷ ತೋರಿಸ್ತಿವಿ, ನಮಗೆ ಇಷ್ಟು ಲಕ್ಷ/ಕೋಟಿ ಕೊಡಿ" ಎಂದು ವಾಣಿಜ್ಯ ಒಪ್ಪಂದ ಆಗಿರುತ್ತದೆ.
ಸಾಂಪ್ರದಾಯಿಕ ನ್ಯೂಸ್‌ಪೇಪರ್, ಟೆಲಿವಿಷನ್, ಡಿಜಿಟಲ್ ಮೀಡಿಯಾ ಜಾಹೀರಾತುಗಳು ಮಾತ್ರವಲ್ಲದೆ ಈ ರೀತಿಯ ಜಾಹೀರಾತುಗಳು ಅಸ್ತಿತ್ವದಲ್ಲಿವೆ. ನೋಡುವ ಪ್ರೇಕ್ಷಕರ ಮನಸ್ಸಿನಲ್ಲಿ ಸುಪ್ತವಾಗಿ ಕಂಪನಿಯ ಹೆಸರನ್ನು ದಾಖಲಿಸುವ ಪ್ರಯತ್ನವಿದು. ಕೆಲವೊಂದು ಪಾನ್ ಮಸಾಲಗಳ ಹೆಸರುಗಳು ಸಿನಿಮಾದೊಳಗೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸುವುದರ ಹಿಂದೆಯೂ ಇದೆ ತಂತ್ರವಿದೆ. ಕೆಲವು ಪ್ರಮುಖ ಟೀ ಬ್ರಾಂಡ್‌ಗಳ ಹೆಸರು ಸಿನಿಮಾಗಳಲ್ಲಿ, ಟೀವಿ ಕಾರ್ಯಕ್ರಮಗಳಲ್ಲಿ ಮತ್ತೆಮತ್ತೆ ಕಾಣಿಸುವುದು ಕೂಡ ಇದೇ ಕಾರಣಕ್ಕೆ. ಹೀಗಾಗಿ, ಇನ್ನು ಮುಂದೆ ಸಿನಿಮಾಗಳಲ್ಲಿ ಪದೇಪದೇ ಒಂದೇ ಬ್ರಾಂಡ್ ಕಾಣಿಸುತ್ತಿದ್ದರೆ ಅದರ ಹಿಂದೆ ಏನೋ ಲೆಕ್ಕಾಚಾರ ಇದೆ ಎಂದು ಅರ್ಥಮಾಡಿಕೊಳ್ಳಿ.