MB Patil: ಬಬಲೇಶ್ವರ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ ಎಂಬಿ ಪಾಟೀಲ್‌ಗೆ ಮೂರನೇ ಬಾರಿಗೆ ಒಲಿದ ಸಚಿವ ಭಾಗ್ಯ
ಬಬಲೇಶ್ವರ ಶಾಸಕ ಎಂ ಬಿ ಪಾಟೀಲ್ ಅವರಿಗೆ ಈ ಬಾರಿಯ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಒಲಿದು ಬಂದಿದೆ. ಈ ಹಿಂದೆ ಜನಸಂಪನ್ಮೂಲ ಸಚಿವರಾಗಿದ್ದ ಅವರು ಹಲವು ಯೋಜನೆಗಳ ಮೂಲಕ ಖ್ಯಾತಿ ಗಳಿಸಿದ್ದಾರೆ.
ವಿಜಯಪುರ: ಆಧುನಿಕ ಭಗೀರಥ ಬಿರುದಾಂಕಿತ ಬಬಲೇಶ್ವರ ಶಾಸಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ (MB Patil) ಮೂರನೇಯ ಬಾರಿಗೆ ಸಚಿವರಾಗುವ ಮೂಲಕ ದಾಖಲೆಯತ್ತ ಸಾಗುತ್ತಿದ್ದಾರೆ.
ನಿರಂತರ 25 ವರ್ಷಗಳ ಕಾಲ ಕರ್ನಾಟಕ ಶಾಸನ ಸಭೆ ಸದಸ್ಯರಾಗಿದ್ದ ದಿವಂಗತ ಬಿ ಎಂ ಪಾಟೀಲ್ ಜೇಷ್ಠ ಸುಪುತ್ರರಾಗಿರುವ ಎಂ ಬಿ ಪಾಟೀಲ್ ವಿಜಯಪುರದಲ್ಲಿ 7 ಅಕ್ಟೋಬರ್ 1964 ರಂದು ಜನಿಸಿದರು.
ತಂದೆಯವರ ಅಕಾಲಿಕ ನಿಧನದ ನಂತರ ಇವರು ಬಿಜಾಪುರ ಲಿಂಗಾಯತ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದರ. ತಂದೆಯವರ ನಿಧನದ ಹಿನ್ನಲೆಯಲ್ಲಿ ತೆರವಾದ ತಿಕೋಟಾ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ತಮ್ಮ 26ನೇ ವಯಸ್ಸಿನಲ್ಲಿ (1991-1994) ಶಾಸಕರಾದರು.
ನಂತರ 1998ರಲ್ಲಿ ವಿಜಯಪುರದಿಂದ ಲೋಕಸಭೆ ಸದಸ್ಯರಾಗಿ ಆಯ್ಕೆಯಾದರು. 2004ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾಗುತ್ತಾರೆ. ಹಿಂದುಳಿದ ವಿಜಯಪುರ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಇವರ ಕನಸು ನನಸು ಮಾಡಲು ತಮ್ಮ ಸಂಸ್ಥೆಯಾದ ಇಂಜನಿಯರಿಂಗ್ ಕಾಲೇಜಿನಿಂದ ರಾಷ್ಟ್ರದಲ್ಲಿಯೇ ಮಾದರಿಯಾಗಿರುವ ಕೆರೆ ನೀರು ತುಂಬುವ ಯೋಜನೆ ರೂಪಿಸಿ, ಅದರಲ್ಲಿ ಯಶಸ್ವಿಯಾಗಿದ್ದು ಇಂದು ಈ ಯೋಜನೆ ರಾಷ್ಟ್ರದಾದ್ಯಂತ ಅನುಕರಣೀಯವಾಗಿದೆ.
ಕ್ಷೇತ್ರ ಪುನರ್ ವಿಂಗಡನೆಯ ನಂತರ 2008 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2013 ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ನಂತರ ನೀರು-ನೀರಾವರಿ ಕುರಿತು ಇವರ ಅತೀವ ಆಸಕ್ತಿಯನ್ನು ಗಮನಿಸಿದ್ದ ಹೈಕಮಾಂಡ್ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಇಡೀ ರಾಷ್ಟ್ರವೇ ಮೆಚ್ಚುವಂತೆ ನೀರಾವರಿ ಇಲಾಖೆಗೆ ಕಾಯಕಲ್ಪ ಒದಗಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಆಣೆಕಟ್ಟುಗಳು, ನಾಲೆಗಳ ಆಧುನೀಕರಣ, ಭದ್ರಾಮೇಲ್ದಂಡೆ ಯೋಜನೆ, ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ, ಮೇಕೆದಾಟು, ಎತ್ತಿನಹೊಳೆ, ಅತ್ಯಂತ ಎತ್ತರದ ಪ್ರದೇಶಕ್ಕೆ ನೀರಾವರಿ ಒದಗಿಸುವ ತುಬಚಿ-ಬಬಲೇಶ್ವರ ಏತನೀರಾವರಿ, ಆಡಳಿತ ಯಂತ್ರದಲ್ಲಿ ವ್ಯಾಪಕ ಸುಧಾರಣೆಗಳು, ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ರಾಜ್ಯದ ಜಲಸಂಪನ್ಮೂಲ ಇಲಾಖೆಗೆ ಮಾಂತ್ರಿಕ ಸ್ಪರ್ಶ ನೀಡಿದ ಎಂ.ಬಿ.ಪಾಟೀಲ್ ನೀರಿನ ಪಾಟೀಲ್, ಕೆನಾಲ್ ಪಾಟೀಲ್ ಎಂದೇ ರೈತ ಸಮುದಾಯದಲ್ಲಿ ಹೆಸರಾಗಿದ್ದಾರೆ.
2018ರಲ್ಲಿ ಬಬಲೇಶ್ವರ ಕ್ಷೇತ್ರದಿಂದ ಪುನರಾಯ್ಕೆಯಾದ ನಂತರ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಾ ಎಂ. ಬಿ. ಪಾಟೀಲರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಗೃಹ ಸಚಿವರಾಗಿ ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದರೂ, ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಡಾ.ರಾಘವೇಂದ್ರ ಔರಾದ್ಕರ ವರದಿಯನ್ನು ಜಾರಿಗೆ ತರುವಲ್ಲಿ ಗುರುತರ ಪಾತ್ರ ವಹಿಸಿದ್ದಾರೆ. ಈಗ ಮತ್ತೊಮ್ಮೆ ಸಚಿವ ಸ್ಥಾನ ಅವರಿಗೆ ಒಲಿದು ಬಂದಿದ್ದು ಹೊಸ ಪ್ರಗತಿಯ ಕ್ರಾಂತಿಗೆ ಎಂಬಿಪಿ ಸಜ್ಜಾಗುತ್ತಿದ್ದಾರೆ.