Bangalore News: ಬೆಂಗಳೂರಲ್ಲಿ ಬಕ್ರೀದ್‌ ಹಬ್ಬ, ಸಂಚಾರದಲ್ಲಿ ವ್ಯತ್ಯಯ, ಈ ಮಾರ್ಗದಲ್ಲಿ ಸಂಚಾರ ಗಮನಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಬಕ್ರೀದ್‌ ಹಬ್ಬ, ಸಂಚಾರದಲ್ಲಿ ವ್ಯತ್ಯಯ, ಈ ಮಾರ್ಗದಲ್ಲಿ ಸಂಚಾರ ಗಮನಿಸಿ

Bangalore News: ಬೆಂಗಳೂರಲ್ಲಿ ಬಕ್ರೀದ್‌ ಹಬ್ಬ, ಸಂಚಾರದಲ್ಲಿ ವ್ಯತ್ಯಯ, ಈ ಮಾರ್ಗದಲ್ಲಿ ಸಂಚಾರ ಗಮನಿಸಿ

ಬಕ್ರೀದ್‌( Bakrid) ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ ಮಾಡಿದ್ದು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ ಸಂಚಾರ ಪೊಲೀಸರು( Bangalore Traffic police)̤ (ವರದಿ: ಎಚ್‌.ಮಾರುತಿ ಬೆಂಗಳೂರು)

ಬೆಂಗಳೂರಿನಲ್ಲಿ ಬಕ್ರೀದ್‌ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಬಕ್ರೀದ್‌ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಬೆಂಗಳೂರು: ಜೂನ್ 17 ಸೋಮವಾರದಂದು ಬಕ್ರೀದ್ ಹಬ್ಬದ ಅಂಗವಾಗಿ ಅಂದು ಮೈಸೂರು ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಬೆಂಗಳೂರು ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಹತ್ತಿರವಿರುವ ಮಸೀದಿ ಮತ್ತು ಚಾಮರಾಜಪೇಟೆ ಬಿಬಿಎಂಪಿ ಆಟದ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸೋಮವಾರದಂದು ಬೆಳಿಗ್ಗೆ 6 ರಿಂದ ಪ್ರಾರ್ಥನೆ ಮುಕ್ತಾಯವಾಗುವವರೆಗೆ ಬಿಜಿಎಸ್ ಮೇಲು ಸೇತುವೆಯಿಂದ ಪುರಭವನದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಮೈಸೂರು ರಸ್ತೆ ಮಾರ್ಗದಿಂದ ಟೌನ್‌ ಹಾಲ್ (ಪುರಭವನ) ಕಡೆಗೆ ಸಾಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ಕಿಮ್ಕೋ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವುಪಡೆದು ವಿಜಯನಗರದ ಮೂಲಕ ಸಾಗಬೇಕಾಗುತ್ತದೆ. ಪುರಭವನ ಕಡೆಯಿಂದ ಮೈಸೂರು ಕಡೆಗೆ ತೆರಳುವ ವಾಹನಗಳು ಬಿಜಿಎಸ್ ಮೇಲ್ವೇತುವೆಯ ಕೆಳಗಿನ ರಸ್ತೆಯನ್ನು ಬಳಸಿಕೊಂಡು ವೆಟರ್ನರಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಗೂಡ್ಸ್ ಶೆಡ್ ರಸ್ತೆಯ ಮೂಲಕ ಅಥವಾ ಸಿರ್ಸಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಜೆಜೆ ನಗರ- ಟ್ಯಾಂಕ್‌ ಬಂಡ್ರ ಸ್ತೆ-ಬಿನ್ನಿಮಿಲ್ ಜಂಕ್ಷನ್- ಹುಣಸೇಮರದ ಮೂಲಕ ಸಾಗಬಹುದಾಗಿದೆ. ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು, ಚಾಮರಾಜಪೇಟೆ 1 ನೇ ಮುಖ್ಯರಸ್ತೆ, 5 ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆಯ ಸಿರ್ಸಿ ವೃತ್ತ, ಬಿನ್ನಿಮಿಲ್ ರಸ್ತೆ ಅಥವಾ ಗೂಡ್ಸ್ ಶೆಡ್ ರಸ್ತೆಯ ಮೂಲಕ ಸಾಗಬಹುದಾಗಿದೆ. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಬಕ್ರೀದ್‌ ಪ್ರಾರ್ಥನೆ ಮುಗಿದ ನಂತರ ಎಂದಿನಂತೆ ವಾಹನ ಸಂಚಾರ ಇರಲಿದೆ.

ದರ್ಶನ್‌ ನ್ಯಾಯಲಯಕ್ಕೆ ಹಾಜರು;ಪತ್ರಕರ್ತನ ಮೇಲೆ ಹಲ್ಲೆ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿಗಾರ ರಕ್ಷಿತ್‌ಗೌಡ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರು ನೀಡಿದ ದೂರು ಆಧರಿಸಿ ಪೊಲೀಸರು ಎನ್‌ಸಿಆರ್ ದಾಖಲು ಮಾಡಿಕೊಂಡಿದ್ದು ಹಲ್ಲೆ ನಡೆಸಿದವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಸೇರಿ 16 ಆರೋಪಿಗಳನ್ನು ಪೊಲೀಸರು ಶನಿವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುವವರಿದ್ದರು. ಈ ಘಟನೆಯನ್ನು ವರದಿ ಮಾಡಲು ರಕ್ಷಿತ್‌ ಗೌಡ ಅಲ್ಲಿಗೆ ಆಗಮಿಸಿದ್ದರು. ದೂರಿನಲ್ಲಿ ಅವರು ನಾನು ನ್ಯಾಯಾಲಯದ ಆವರಣದಲ್ಲಿರುವ ನೀರಿನ ಫಿಲ್ಟರ್ ಬಳಿ ನಿಂತುಕೊಂಡದ್ದೆ. ಆಗ ಅಲ್ಲಿಗೆ ಬಂದ ನಾಲ್ವರು ಮೊಬೈಲ್ ಹಿಡಿದುಕೊಂಡು ಏಕೆ ನಿಂತಿರುವೆ?ಇಲ್ಲಿ ನಿನಗೆ ಏನು ಕೆಲಸ ಇದೆ ಎಂದು ಪ್ರಶ್ನಿಸಿದ್ದರು. ನಾನು ಪತ್ರಿಕಾ ವರದಿಗಾರ ಎಂದು ತಿಳಿಸಿದೆ. ಆಗ ಆ ನಾಲ್ವರು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ತಿಳಿಸಿದ್ದಾರೆ.

ಅಪಘಾತದಲ್ಲಿ ಬೈಕ್‌ ಸವಾರ ಸಾವು

ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗಡೆ ನಗರದ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ 23 ವರ್ಷದ ನಾಜೀಶ್ ಸಮೀಮ್ಸೈ ಯದ್ ಎಂಬುವರು ಅಸು ನೀಗಿದ್ದಾರೆ ಕಾರ್ತೀಕ್ ಹಾಗೂ ನಾಜೀಶ್ ಸಮೀಮ್ ಸೈಯದ್ ಅವರು ಹೋಟೆಲ್‌ ವೊಂದರಲ್ಲಿ ಊಟ ಮಾಡಿಕೊಂಡು ಮನೆಗೆ ಬೈಕ್‌ ನಲ್ಲಿ ತೆರಳುತ್ತಿದ್ದರು.

ಹೆಗಡೆನಗರ ಮುಖ್ಯರಸ್ತೆಯ ಆರ್.ಆರ್. ಸಿಗ್ನೇಚರ್ ಅಪಾರ್ಟ್‌ಮೆಂಟ್ ಎದುರು ಬ್ಯಾರಿಕೇಡ್ ಹಾಗೂ ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ ಹೊಡೆದಿದೆ. ಬೈಕ್ ಚಾಲನೆ ಮಾಡುತ್ತಿದ್ದ ನಾಜೀಶ್ ಸಮೀಮ್ ಸೈಯದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ತೀಕ್‌ ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅತಿ ವೇಗವಾಗಿ ಬೈಕ್‌ ಚಲಾಯಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎಂದೂ ಅವರು ತಿಳಿಸಿದ್ದಾರೆ.

ವರದಿ" ಎಚ್.ಮಾರುತಿ, ಬೆಂಗಳೂರು

Whats_app_banner