Bangalore News: ಅಜಾಗರೂಕತೆಯಿಂದ ಕಾರು ಚಾಲನೆ, ಬೆಂಗಳೂರಲ್ಲಿ ಬಾಲಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಬೆಂಗಳೂರಿನಲ್ಲಿ ಒಂದೇ ದಿನ ಹಲವು ಅಪರಾಧ, ಅಪಘಾತ ಪ್ರಕರಣ ದಾಖಲಾಗಿವೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಕಾರಿನ ಮಾಲೀಕನ ಅಜಾಗರೂಕತೆಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಬಲಿಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಮುರಗೇಶ್ ಪಾಳ್ಯದಲ್ಲಿ ನಡೆದಿದೆ. 5 ವರ್ಷದ ಆರವ್ ಮೃತ ದುರ್ದೈವಿ ಕಂದಮ್ಮ. ಬೆಂಗಳೂರಿನ ಜೀವನ್ ಬಿಮಾ ನಗರದ ಮುರುಗೇಶಪಾಳ್ಯದ ಕಾಳಪ್ಪ ಬಡಾವಣೆಯಲ್ಲಿ
ಈ ದುರ್ಘಟನೆ ನಡೆದಿದೆ. 15 ವರ್ಷದ ಬಾಲಕನೊಬ್ಬ ತನ್ನ ತಂದೆಯ ಜೊತೆ ಸೇರಿಕೊಂಡು ಕಾರು ತೊಳೆಯುತ್ತಿದ್ದ. ಆಗ ಈ ಬಾಲಕ ಕಾರಿನ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತು ಏಕಾಏಕಿ ಎಕ್ಸಿಲೇಟರ್ ತುಳಿದಿದ್ದಾನೆ. ಇದರಿಂದ
ಕಾರು ವೇಗವಾಗಿ ಚಲಿಸಿ ಅಲ್ಲೇ ಆಟವಾಡುತ್ತಿದ್ದ ಆರವ್ ಮೇಲೆ ಹರಿದಿದೆ. ಕಾರು ಹಾರಿದ ರಭಸಕ್ಕೆ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಾಲಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಬಾಲಕನ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆರವ್ ಕಳೆದ ವಾರವಷ್ಟೇ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರು ಇನ್ನೂ ಹಲವು ದ್ವಿಚಕ್ರ ವಾಹನಗಳಿಗೆ ಗುದ್ದಿದ್ದು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿರಿ:ಕನ್ನಡ ಚಿತ್ರರಂಗದ ಜನಪ್ರಿಯ 10 ಅಮ್ಮಂದಿರು ಯಾರು
ಯುವತಿ ಚುಡಾಯಿಸಿದ ಹನುಮಂತ ಈಗ ಪೊಲೀಸರ ಅತಿಥಿ
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದಿಂದ ಮೆಟ್ರೋ ನಿಲ್ದಾಣಕ್ಕೆ ಹೊರಟಿದ್ದ ಯುವತಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸಾರ್ವಜನಿಕರು
ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಬೆಳಕಿಗೆ ಬಂದಿದೆ. ಈ ಪ್ರಕರಣ ಮೇ 5ರಂದು ಸಂಜೆ ನಡೆಡಿದೆ. ಈ ಘಟನೆ ಕುರಿತು 23 ವರ್ಷದ ಯುವತಿ ದೂರು ನೀಡಿದ್ದಾರೆ.
ಈ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ ಆರೋಪಿ ಹನುಮಂತ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಯುವತಿ ಬೆಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಬಿಎಂಟಿಸಿ ನಿಲ್ದಾಣದಿಂದ ಮೆಟ್ರೊ ರೈಲು ಹತ್ತಲು ಮೆಟ್ರೋ ನಿಲ್ದಾಣದತ್ತ ನಡೆದುಕೊಂಡು ಹೊರಟಿದ್ದರು. ಆಗ ಆರೋಪಿ ಹನುಮಂತ ಯುವತಿಯನ್ನು ಹಿಂಬಾಲಿಸಿ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದ. ಈತನ ವರ್ತನೆಯಿಂದ ಗಾಬರಿಗೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದರು.
ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಹಿಡಿದು ಹಿಗ್ಗಾ ಮುಗ್ಗಾ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದರು. ಸಾರ್ವಜನಿಕರೊಬ್ಬರು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಗಸ್ತು ವಾಹನ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಗಂಡ ಹೊಡೆಯುತ್ತಾನೆ ಎಂದು ದೂರು ನೀಡಿದ 54 ವರ್ಷದ ಮಹಿಳೆ
ನನ್ನ ಗಂಡ ನಿತ್ಯವೂ ಜಗಳ ಮಾಡಿ ಹೊಡೆಯುತ್ತಿದ್ದಾನೆ. ಅದನ್ನು ಪ್ರಶ್ನಿಸಿದ ಮಗನ ಮೇಲೂ ಹಲ್ಲೆ ಮಾಡುತ್ತಿದ್ದಾನೆ. ಗಂಡನಿಂದ ನನಗೆ ಜೀವ ಬೆದರಿಕೆಯಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬೆಂಗಳೂರಿನ ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.
ಶಾಂತಿನಗರದ ಲ್ಯಾಂಗ್‌ಫೋರ್ಡ್ ರಸ್ತೆಯ ನಿವಾಸಿ 54 ವರ್ಷದ ಮಹಿಳೆ ದೂರು ನೀಡಿದ್ದಾರೆ. ನನ್ನ ಗಂಡ ಪ್ರತಿದಿನ ಜಗಳ ಮಾಡಿ ಹೊಡೆಯುತ್ತಿದ್ದಾನೆ. ತಾಯಿಯನ್ನು ಹೊಡೆಯುವುದನ್ನು ಪ್ರಶ್ನಿಸಿದ ಮಗನ ಮೇಲೂ ಹಲ್ಲೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಪತಿಗೆ ವಿವಾಹವಾಗಿ 26 ವರ್ಷಗಳಾಗಿವೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಪುತ್ರ ಇದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಇವರು ಮಗನ ಜೊತೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹಣಕ್ಕಾಗಿ ಪ್ರತಿದಿನ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಮೂರು ದಿನಗಳ ಹಿಂದೆ ಇದೇ ರೀತಿ ಜಗಳ ಮಾಡುತ್ತಿದ್ದಾಗ ಬಿಡಿಸಲು ಬಂದ ಮಗನನ್ನು ಚಾಕುವಿನಿಂದ ಇರಿದಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ವರದಿ: ಎಚ್.ಮಾರುತಿ. ಬೆಂಗಳೂರು