Bangalore Crime: ನಿಷೇಧಿತ ಪಿಎಫ್ಐ ಪದಾಧಿಕಾರಿ ದಾವಣಗೆರೆಯ ತಾಹೀರ್ ಹುಸೇನ್‌ ಬಂಧಿಸಿದ ಬೆಂಗಳೂರು ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ನಿಷೇಧಿತ ಪಿಎಫ್ಐ ಪದಾಧಿಕಾರಿ ದಾವಣಗೆರೆಯ ತಾಹೀರ್ ಹುಸೇನ್‌ ಬಂಧಿಸಿದ ಬೆಂಗಳೂರು ಪೊಲೀಸರು

Bangalore Crime: ನಿಷೇಧಿತ ಪಿಎಫ್ಐ ಪದಾಧಿಕಾರಿ ದಾವಣಗೆರೆಯ ತಾಹೀರ್ ಹುಸೇನ್‌ ಬಂಧಿಸಿದ ಬೆಂಗಳೂರು ಪೊಲೀಸರು

Davangere News ಬೆಂಗಳೂರಿನ ಪೊಲೀಸರು ಪಿಎಫ್‌ಐ ಸಂಘಟನೆಯ ದಾವಣಗೆರೆ ಮೂಲದ ತಾಹೀರ್‌ ಹುಸೇನ್‌ ನನ್ನು ಹರಿಹರದಲ್ಲಿ ಬಂಧಿಸಿದ್ದಾರೆ.( ವರದಿ: ಎಚ್. ಮಾರುತಿ, ಬೆಂಗಳೂರು)

ಪಿಎಫ್‌ಐ ಸಂಘಟನೆ ಪ್ರಮುಖನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ಧಾರೆ.
ಪಿಎಫ್‌ಐ ಸಂಘಟನೆ ಪ್ರಮುಖನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ಧಾರೆ.

ಬೆಂಗಳೂರು: ಸಾರ್ವಜನಿಕರ ಶಾಂತಿಗೆ ಭಂಗ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಚು ರೂಪಿಸಿದ್ದ ಆರೋಪದಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಾಹೀರ್ ಹುಸೇನ್‌ನನ್ನು ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ದಾವಣಗೆರೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ತಾಹೀರ್ ಹುಸೇನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಈತನನ್ನು ಹರಿಹರದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುಸಲ್ಮಾನ ಸಮುದಾಯದ ಯುವಕರನ್ನು ಧಾರ್ಮಿಕವಾಗಿ ಪ್ರಚೋದಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸುವುದು ಪಿಎಫ್‌ಐ ಉದ್ದೇಶವಾಗಿತ್ತು. ಇದನ್ನು ಪತ್ತೆ ಹಚ್ಚಿ ಕ್ರಿಮಿನಲ್ ಸಂಚು (ಐಪಿಸಿ 120–ಬಿ), ರಾಷ್ಟ್ರದ ವಿರುದ್ಧ ಯುದ್ಧ (ಐಪಿಸಿ 121) ಹಾಗೂ ಎರಡು ಕೋಮುಗಳ ಮಧ್ಯೆ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153–ಎ) ಆರೋಪದಡಿ ಎಫ್‌ಐಆರ್ ಸಹ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು.

ತಾಹೀರ್ ಹುಸೇನ್ ಸೇರಿದಂತೆ ಹಲವಾರು ಪದಾಧಿಕಾರಿಗಳು ತಲೆಮರೆಸಿಕೊಂಡಿದ್ದರು. ಇದೀಗ ತಾಹೀರ್ ಸಿಕ್ಕಿಬಿದ್ದಿದ್ದಾನೆ. ಈತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ, ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕನಕಪುರ –ಸಾತನೂರು ರಸ್ತೆಯ ಜಕ್ಕೇಗೌಡನದೊಡ್ಡಿ ಎಂಬ ಗ್ರಾಮದಲ್ಲಿ ಕಬ್ಬಿಣದ ಕಂಬಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಪಶ್ಚಿಮ ಬಂಗಾಳದ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಟ್ರಾಕ್ಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಕಾರ್ಮಿಕರು ಕುಡಿಯುವ ನೀರು ಹಾಕುವ ಪೈಪ್‌ಲೈನ್ ಕಾಮಗಾರಿ ಕೆಲಸ ಮಾಡುತ್ತಿದ್ದರು. ಮೃತ ದುರ್ದೈವಿ ಕಾರ್ಮಿಕರ ಹೆಸರು ಮತ್ತಿತರ ವಿವರಗಳು ಲಭ್ಯವಾಗಿಲ್ಲ.

ಕನಕಪುರದಿಂದ ಕಬ್ಬಿಣದ ಕಂಬಿಗಳನ್ನು ತುಂಬಿಕೊಂಡ ಟ್ರ್ಯಾಕ್ಟರ್‌ ಜಕ್ಕೇಗೌಡನದೊಡ್ಡಿ ಕಡೆಗೆ ಹೋಗುತ್ತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಕೂಡಲೇ ಚಾಲಕನ ಪಕ್ಕ ಕುಳಿತಿದ್ದ ಇಬ್ಬರು ಕಾರ್ಮಿಕರು ಕೆಳಗೆ ಉರುಳಿ ಬಿದ್ದಿದ್ದಾರೆ. ಅವರ ಮೈ ಮೇಲೆ ಕಬ್ಬಿಣದ ಸರಳುಗಳು ಬಿದ್ದು ಸ್ಥಳದಲ್ಲೇ ಮೃತಪಟ್ಟರು ಎಂದು ಸಾತನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿದ್ದ ಐವರ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ.

( ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner