Parenting: ನಿಮ್ಮ ಕಂದಮ್ಮ ಈಗಿನಿಂದಲೇ ಫಿಟ್ ಎನಿಸಿಕೊಳ್ಳಬೇಕಾ? ನವಜಾತ ಶಿಶುವಿನ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ 5 ಸಲಹೆಗಳು
Parenting: ಪುಟ್ಟ ಕಂದಮ್ಮಗಳ ಆರೈಕೆ ಮಾಡುವುದು ಎಂದರೆ ಸುಲಭದ ಕೆಲಸವಲ್ಲ. ಬಾಲ್ಯದಲ್ಲಿ ನಾವು ಅವರಿಗೆ ನೀಡುವ ಪೋಷಣೆಯು ಅವರ ಭವಿಷ್ಯದ ಆರೋಗ್ಯಕ್ಕೆ ಬುನಾದಿ ಹಾಕುತ್ತದೆ. ಹೀಗಾಗಿ ನವಜಾತ ಶಿಶುಗಳು ಆರೋಗ್ಯದ ವಿಚಾರದಲ್ಲಿ ಯಾವೆಲ್ಲ ರೀತಿಯಲ್ಲಿ ಕಾಳಜಿ ವಹಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.
Parenting: ನವಜಾತ ಶಿಶುವಿನ ಆರೈಕೆ ಮಾಡುವುದು ಎಂದರೆ ಅದೊಂದು ರೀತಿಯಲ್ಲಿ ಸಾಹಸ ಎದುರಿಸಿದಂತೆ. ನವಜಾತ ಶಿಶುವಿಗೆ ನೀವು ನೀಡುವ ಆರೈಕೆಯು ಅವರ ಸಂಪೂರ್ಣ ಜೀವನದ ಆರೋಗ್ಯಕ್ಕೆ ಒಂದು ರೀತಿಯಲ್ಲಿ ಅಡಿಪಾಯ ಹಾಕುತ್ತದೆ. ಅವರ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಮಗುವಿನ ಭವಿಷ್ಯದ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಹಾಗಾದರೆ ಮಗುವಿನ ಸಂಪೂರ್ಣ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಯಾವೆಲ್ಲ ರೀತಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ನೋಡೋಣ.
ಪೋಷಕಾಂಶ : ಮಗುವಿನ ಉತ್ತಮ ಬೆಳವಣಿಗೆಗಾಗಿ ನಾವು ಮಾಡಬಹುದಾದ ಮೊದಲ ಕೆಲಸವೆಂದರೆ ಮಗುವಿಗೆ ಪೌಷ್ಠಿಕ ಆಹಾರವನ್ನು ನೀಡುವುದಾಗಿದೆ. ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ವಿವಿಧ ವಿಟಮಿನ್ಗಳು ಮಗುವಿನ ಮೂಳೆಗಳು ಹಾಗೂ ಅಂಗಾಂಗಳು ಸಮರ್ಪಕವಾಗಿ ಬೆಳೆಯಲು ಸಹಾಯ ಮಾಡುತ್ತದೆ . ಸಿರಿಧಾನ್ಯಗಳು, ಪಾಲಕ್ನಿಂದ ತಯಾರಿಸಿದ ಆಹಾರ ಪದಾರ್ಥಗಳು, ವಿವಿಧ ಹಣ್ಣುಗಳು ಹಾಗೂ ಸಿಹಿ ಗೆಣಸು ಇವೆಲ್ಲವೂ ಮಕ್ಕಳಿಗೆ ಅಗಾಧವಾದ ಪೋಷಕಾಂಶವನ್ನು ಒದಗಿಸುತ್ತದೆ.
ಕಾಲ ಕಾಲಕ್ಕೆ ತಪಾಸಣೆ : ಮಕ್ಕಳಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕಾಲ ಕಾಲಕ್ಕೆ ನೀಡಲಾಗುವ ಲಸಿಕೆಗಳ ಬಗ್ಗೆ ಕಾಳಜಿ ಇರಬೇಕು. ನಿಯಮಿತವಾಗಿ ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮಾಡಿಸುವುದರಿಂದ ಮಕ್ಕಳ ಬೆಳವಣಿಗೆ ಸರಿಯಾಗಿ ಇದೆಯೇ ಅಥವಾ ಇಲ್ಲವೇ ಎಂಬುದರ ಸರಿಯಾದ ಲೆಕ್ಕಾಚಾರ ನಿಮಗೆ ಸಿಗುತ್ತದೆ. ಕಾಲ ಕಾಲಕ್ಕೆ ಮಕ್ಕಳಿಗೆ ಲಸಿಕೆಗಳನ್ನು ನೀಡುವುದರಿಂದ ಮಾರಕ ರೋಗಗಳಿಂದ ಮಕ್ಕಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಎದೆಹಾಲು : ನವಜಾತ ಶಿಶುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಎಂದು ಹೇಳುತ್ತಾರೆ. ಈ ಮಾತು ಸತ್ಯ ಕೂಡ. ಇದು ಮಕ್ಕಳನ್ನು ಸರ್ವ ರೋಗಗಳಿಂದ ಮುಕ್ತವಾಗಿಸಲು ಸಹಾಯ ಮಾಡುತ್ತದೆ. ತಾಯಿಯ ಎದೆಹಾಲಿನಲ್ಲಿ ಆಂಟಿಬಾಡಿ, ಎಂಜೈಮ್ಗಳು ಹಾಗೂ ಅಗಾಧ ಪ್ರಮಾಣದಲ್ಲಿ ಪೋಷಕಾಂಶಗಳು ಅಡಗಿವೆ. ಹೀಗಾಗಿ ನವಜಾತ ಶಿಶುಗಳಿಗೆ ತಾಯಿಯ ಹಾಲು ಅತ್ಯಂತ ಪ್ರಮುಖವಾಗಿರುತ್ತದೆ.
ಧನಾತ್ಮಕ ವಾತಾವರಣ : ನವಜಾತ ಶಿಶುವಿರುವ ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದು ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಭಾವನಾತ್ಮಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಖಂಡಿತ ಇದು ಅಡಿಪಾಯವನ್ನು ಹಾಕುತ್ತದೆ. ಹೀಗಾಗಿ ಮಕ್ಕಳಿರುವ ಮನೆಯಲ್ಲಿ ಯಾವುದೇ ನಕಾರಾತ್ಮಕ ಅಂಶಗಳಿಗೆ ಜಾಗ ಇರಬಾರದು.
ತ್ವಚೆಯ ಆರೋಗ್ಯ : ಮಗುವಿನ ತ್ವಚೆಯು ಬಹಳ ಸೂಕ್ಷ್ಮವಾಗಿ ಇರುತ್ತದೆ. ಹೀಗಾಗಿ ಬಾಲ್ಯಾವಸ್ಥೆಯಲ್ಲಿ ಮಕ್ಕಳ ತ್ವಚೆಯ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಅವಶ್ಯಕತೆ ಇರುತ್ತದೆ. ಮಕ್ಕಳಿಗೆ ಸುಗಂಧ ಮುಕ್ತ ಬೇಬಿ ಸೋಪ್ಗಳನ್ನು ಬಳಕೆ ಮಾಡಬೇಕು. ಸ್ನಾನದ ಬಳಿಕ ಮಾಯಿಶ್ಚರೈಸರ್ ಬಳಕೆ ಮಾಡಬೇಕು. ಮಕ್ಕಳಿಗೆ ಡೈಪರ್ ಧರಿಸುವ ಮುನ್ನ ಅವುಗಳಿಂದ ಗಾಯ ಆಗದಂತೆ ತ್ವಚೆಯನ್ನು ಕಾಪಾಡಿಕೊಳ್ಳಲು ಡೈಪರ್ ಕ್ರೀಮ್ಗಳನ್ನು ಬಳಕೆ ಮಾಡಬೇಕು.