Bangalore Road Potholes: ಬೆಂಗಳೂರು ರಸ್ತೆಗಳ ಗುಂಡಿ ಬೇಗನೇ ಮುಚ್ಚಿ ಇಲ್ಲವೇ ಅಮಾನತು ಶಿಕ್ಷೆ ಎದುರಿಸಿ; ಅಧಿಕಾರಿಗಳಿಗೆ ಡಿಕೆಶಿ ಎಚ್ಚರಿಕೆ
Bangalore News ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸದೇ ಇದ್ದರೆ ಬಿಬಿಎಂಪಿ ಅಧಿಕಾರಿಗಳಿಗೆ ಶಿಕ್ಷೆ ಕಾದಿದೆ ಎಂದು ಡಿಸಿಎಂ ಡಿಕೆಶಿ( DCM DK Shivakumar) ಖಡಕ್ ವಾರ್ನಿಂಗ್ ಅನ್ನು ನೀಡಿದ್ದಾರೆ.
ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರಿನ ರಸ್ತೆಗಳು ಹಾಗೂ ಗುಂಡಿಗಳದ್ದೇ ಸದ್ದು. ಮಳೆಯಿಂದಾಗಿ ಬೆಂಗಳೂರಿನ ಹಲವಾರು ಭಾಗದ ರಸ್ತೆಗಳು ಹಾಳಾಗಿ ಹೋಗಿವೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಿದ್ದರೂ ಇನ್ನೂ ಗುಂಡಿಯಿಂದ ರಸ್ತೆಗಳು ಮುಕ್ತಿ ಪಡೆದಿಲ್ಲ. ಜನ ಸರ್ಕಾರವನ್ನು ದೂಷಿಸುವುದನ್ನು ನಿಲ್ಲಿಸಿಲ್ಲ. ಈಗಾಗಲೇ ಸರ್ಕಾರವೂ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಿಸಲು ಅನುದಾನವನ್ನೂ ಬಿಡುಗಡೆ ಮಾಡಿದೆ. ಆದರ ದೂರುಗಳು ಬರುತ್ತಲೇ ಇವೆ. ಈ ನಡುವೆ ರಸ್ತೆ ಗುಂಡಿಗಳನ್ನು ಮುಚ್ಚದೇ ಇದ್ದರೆ, ನಿಗದಿ ಅವಧಿಯೊಳಗೆ ಕೆಲಸ ಆಗದೇ ಇದ್ದರೆ ಅಧಿಕಾರಿಗಳ ತಲೆದಂಡ ಖಚಿತ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸಂಜೆ ಅಮೆರಿಕಾ ಪ್ರವಾಸ ಹೊರಡುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈಗಾಗಲೇ ವಲಯವಾರು ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ರಸ್ತೆ ಗುಂಡಿ ಮುಚ್ಚಿಸಬೇಕು. ಇಲ್ಲದೇ ಇದ್ದರೆ ಕ್ರಮ ಖಂಡಿತಾ ಆಗಲಿದೆ ಎಂದು ಎಚ್ಚರಿಕೆಯ ದನಿಯಲ್ಲೇ ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 1 ರಂದು ನಗರದಾದ್ಯಂತ ಗುಂಡಿಗಳನ್ನು ಮುಚ್ಚಲು 15 ದಿನಗಳ ಗಡುವು ನೀಡಿದ್ದರು. ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ವಾರದೊಳಗೆ ಮುಚ್ಚದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ವಾರ್ನಿಂಗ್
ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಎಂಜಿನಿಯರ್ ಗಳೊಂದಿಗೆ ಸಭೆ ನಡೆಸಿದ್ದು, ನಾನು ನೀಡಿದ್ದ ಹದಿನೈದು ದಿನಗಳ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಅಲ್ಲಿರುವ 400 ಸಿಬ್ಬಂದಿ-ಎಂಜಿನಿಯರ್ ಗಳು ಮೊದಲು ಗುಂಡಿಗಳನ್ನು ಮುಚ್ಚುವತ್ತ ಗಮನ ಹರಿಸಬೇಕು. ಹಾಗೆ ಮಾಡಲು ವಿಫಲವಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಷ್ಟು ಜನರನ್ನು ಅಮಾನತುಗೊಳಿಸಲಾಗುತ್ತದೆ ಎಂದು ನನಗೆ ತಿಳಿದಿಲ್ಲ, ಗಡುವಿನೊಳಗೆ ಗುಂಡಿಗಳನ್ನು ಮುಚ್ಚಿ ಸ್ವಚ್ಛಗೊಳಿಸಬೇಕು ಎಂದು ನಾನು ಅವರಿಗೆ ಕಟ್ಟುನಿಟ್ಟಾಗಿ ಹೇಳಿದ್ದೇನೆ. ನಾನು ಅವರಿಗೆ ನೇರವಾಗಿ ಹೇಳಿದ್ದೇನೆ. ತಮ್ಮ ವಾರ್ಡ್‌ಗಳಲ್ಲಿ, ಜವಾಬ್ದಾರಿಯುತರು, ಅವರು ಎಷ್ಟೇ ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ, ಮೇಲಿನಿಂದ ಕೆಳಕ್ಕೆ ವೈಯಕ್ತಿಕವಾಗಿ ಬೀದಿಗಿಳಿದು ಗುಂಡಿಗಳನ್ನು ಮುಚ್ಚಬೇಕು, ಅದು ಮೊದಲ ಆದ್ಯತೆಯಾಗಿದೆ" ಎಂದು ಅವರು ಹೇಳಿದರು.
ಅಮೆರಿಕಾ ಪ್ರವಾಸದಿಂದ ಬಂದ ನಂತರ ವೈಯಕ್ತಿಕವಾಗಿ ಬೆಂಗಳೂರಿನ ಬೀದಿಗಳಲ್ಲಿ ಸಂಚರಿಸುತ್ತೇನೆ. ಯಾರು ಅಮಾನತುಗೊಳ್ಳುತ್ತಾರೆಂದು ನನಗೆ ಗೊತ್ತಿಲ್ಲ ಎಂದು ಡಿಕೆಶಿ ಹೇಳಿದರು.
ಮರದ ಕಡೆಗೂ ಗಮನ ಕೊಡಿ
ಗಾಳಿ ಮತ್ತು ಮಳೆಯಿಂದಾಗಿ ಮರಗಳು ಬೀಳುವ ಘಟನೆಗಳನ್ನು ತಪ್ಪಿಸಲು ಮರಗಳ ರೆಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಮರ ಬೀಳುವ ಘಟನೆಗಳನ್ನು ತಪ್ಪಿಸಲು ಮರಗಳ ರೆಂಬೆಗಳನ್ನು ಕತ್ತರಿಸಬೇಕು ಎಂದರು.
ಇಲ್ಲಿಯವರೆಗೆ ನಾವು ಯಾವುದೇ ಸಮಸ್ಯೆಯಿಲ್ಲದೆ ನಿರ್ವಹಿಸಿದ್ದೇವೆ. ನಾವು ಈಗ ಜಾಗರೂಕರಾಗಿರಬೇಕು. ನಿಯಂತ್ರಣ ಕೊಠಡಿಯಿಂದ ವಿಷಯಗಳನ್ನು ಮೇಲ್ವಿಚಾರಣೆ ಮಾಡಬೇಕು, ನೀರು ನಿಲ್ಲುವುದು ಮತ್ತು ಮನೆಗಳಿಗೆ ನೀರು ಪ್ರವೇಶಿಸುವುದು ಮುಂತಾದ ಯಾವುದೇ ಮಳೆ ಪರಿಣಾಮಗಳ ಸಂದರ್ಭದಲ್ಲಿ, ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಬೆಂಗಳೂರಿನ ಎಲ್ಲಾ ಶಾಲೆಗಳಲ್ಲಿ, ಕಾರ್ಪೊರೇಷನ್ ಆಗಿರಲಿ ಅಥವಾ ಖಾಸಗಿ ಶಾಲೆಯಾಗಿರಲಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಲಾಗುವುದು. ನಾವು ವಿಧಾನಸೌಧದಲ್ಲಿ ಮತ್ತು ಆಯಾ ಶಾಲೆಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಮತ್ತು ಜನರಲ್ಲಿ ಮತ್ತು ಅವರ ಮನೆಗಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಪ್ರತಿಜ್ಞೆ ಮಾಡುತ್ತೇವೆ" ಎಂದು ಅವರು ಹೇಳಿದರು.
ಅಮೆರಿಕಾ ಪ್ರವಾಸ
ಇದೇ ವೇಳೆ ಡಿಕೆಶಿವಕುಮಾರ್ ಅವರು ವೈಯಕ್ತಿಕ ಭೇಟಿಗಾಗಿ ಒಂದು ವಾರ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದಾಗಿಯೂ ಹೇಳಿದರು.
ಯುಎಸ್ಎ ಪ್ರವಾಸದ ಕಾರ್ಯಸೂಚಿ ಮತ್ತು ಅಲ್ಲಿ ಅವರು ಯಾವುದೇ ದೊಡ್ಡ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ, "ಇದು ವೈಯಕ್ತಿಕ ಕುಟುಂಬ ಪ್ರವಾಸ. ಯಾರ ಭೇಟಿಯೂ ಇಲ್ಲ, ನಾನು ವೈಯಕ್ತಿಕ ಆಧಾರದ ಮೇಲೆ ಹೋಗುತ್ತಿದ್ದೇನೆ ಎಂದು ತಿಳಿಸಿದರು.