Karnataka Covid Scam: ಬಿಜೆಪಿ ಸರ್ಕಾರದ ಅವಧಿಯ 7223.64 ಕೋಟಿ ರೂ. ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಸಂಪುಟ ಉಪಸಮಿತಿ
ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಜಸ್ಟೀಸ್ ಮೈಕಲ್ ಡಿ ಕುನ್ಹಾ ನೀಡಿರುವ ವರದಿ ಆಧರಿಸಿ ಸಂಪುಟ ಉಪಸಮಿತಿ ಹಾಗೂ ಎಸ್‌ಐಟಿ ರಚಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ನೇಮಿಸಲಾದ ಜಸ್ಟೀಸ್ ಮೈಕಲ್ ಡಿ ಕುನ್ಹಾ ರವರ ವಿಚಾರಣಾ ಆಯೋಗದ ಮಧ್ಯಂತರ ಅವಧಿಯ ಸತ್ಯಸಂಶೋಧನಾ ವರದಿಯ ಕುರಿತು ತನಿಖೆ ಮತ್ತು ಕ್ರಮಗಳನ್ನು ಮುಂದುವರೆಸಲು ವಿಶೇಷ ತನಿಖಾ ತಂಡ ನೇಮಿಸಲು (ಎಸ್ಐಟಿ) ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ. ಸಚಿವ ಸಂಪುಟದ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ರವರು ಸತ್ಯಸಂಶೋಧನಾ ವರದಿಯ ನಂತರ ಯಾರ ಪಾತ್ರ ಏನು ಎಂಬುದನ್ನು ತನಿಖೆ ಮಾಡಿ ಎಸ್.ಐ.ಟಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದ್ದು, ರೂ.7223.64 ಕೋಟಿಗಳ ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯ ಅವ್ಯವಹಾರದ ಕುರಿತು ತನಿಖೆ ನಡೆಸಿದೆ. ರೂ.500.00 ಕೋಟಿಗಳ ಮೊತ್ತದ ವಸೂಲಾತಿ ಶಿಫಾರಸ್ಸು ಮಾಡಿದೆ.
ಬಿ.ಬಿ.ಎಂ.ಪಿ 4 ವಲಯಗಳ ಮತ್ತು ರಾಜ್ಯದ ಎಲ್ಲಾ 31 ಜಿಲ್ಲೆಗಳ ವರದಿ ಸಲ್ಲಿಕೆ ಬಾಕಿಯಿದೆ. 55000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ. ಈ ವರದಿಯ ಮುಂದುವರಿದ ಭಾಗವಾಗಿಯೇ ವಿಶೇಷ ತನಿಖಾ ಪಡೆ ಹಾಗೂ ಉಪ ಸಮಿತಿ ರಚಿಸಲಾಗಿದೆ.
ಈ ತನಿಖೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದ ಉಪಸಮಿತಿಯ ಸದಸ್ಯರನ್ನು ಅಂತಿಮಗೊಳಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
500.00 ಕೋಟಿ ರೂ.ಗಳ ಮೊತ್ತದ ವಸೂಲಾತಿ ಕುರಿತು ಪ್ರಕ್ರಿಯೆಯನ್ನು ಆರಂಭಿಸಲು ಇದೇ ವೇಳೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾರ್ವಜನಿಕರ ಹಣದ ದುರುಪಯೋಗ ಮತ್ತು ಅಧಿಕಾರ ದುರುಪಯೋಗ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿದ ವರದಿಯನ್ನು ದಿನಾಂಕ: 17.07.2023 ರಂದು 15ನೇ ವಿಧಾನಸಭೆಯಲ್ಲಿ ಮಂಡಿಸಲಾಗಿರುತ್ತದೆ. ಈ ವರದಿಯ ಆಧಾರದ ಮೇಲೆ ಸತ್ಯಸಂಶೋಧನೆ ಮಾಡಿ ವರದಿ ನೀಡಲು ಕುನ್ಹಾ ಆಯೋಗವನ್ನು ನೇಮಿಸಲಾಗಿತ್ತು. ಈ ಆಯೋಗವು 12 ವಿಶ್ಲೇಷಣಾ ವರದಿಗಳನ್ನು ನೀಡಿದೆ ಎನ್ನುವುದು ಎಚ್.ಕೆ.ಪಾಟೀಲ್ ವಿವರಣೆ.
ಎಚ್‌ಡಿಕೆ ಟೀಕೆ
ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸ್ ಐಟಿ ರಚನೆಗೆ ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಇಲ್ಲಿವರೆಗೆ ಯಾವುದೇ ರೀತಿಯ ತನಿಖೆಯಾಗಿಲ್ಲ ಈಗ ಎಸ್ ಐಟಿ ತನಿಖೆಗೆ ಯಾಕೆ ನೀಡಿದ್ದೀರಿ? ಇಲ್ಲಿವರೆಗೆ ಯಾಕೆ ತನಿಖೆ ಮಾಡಲಿಲ್ಲ. ಒಂದುವರೆ ವರ್ಷದಿಂದ ಈ ಭಜನೆ ನಡೆಯುತ್ತಿದೆ ವಿಪಕ್ಷದಲ್ಲಿದ್ದಾಗ ಹೆಚ್ಚು ಚರ್ಚೆ ಮಾಡಿದ್ದಾರೆ. ನಿಜವಾಗಿ ಹಣ ಲೂಟಿ ಆಗಿದ್ರೆ ಆಗಲೇ ತನಿಖೆ ಮಾಡಿಸಬೇಕಿತ್ತು. ನಿಮ್ಮ ಪರಿಸ್ಥಿತಿಗಳ ರಕ್ಷಣೆ ಪಡೆಯಲು ಈಗ ಹಳೆಯದನ್ನು ತಪ್ಪಿಸಿ ಇಂತದೊಂದು ಅಸ್ತ್ರ ಬಿಟ್ಟಿದ್ದೀರಿ. ಇದು ಯಾವುದೇ ರೀತಿಯಲ್ಲಿ ಉಪಯೋಗವೂ ಆಗೋಲ್ಲ.ಸಮಯ ವ್ಯರ್ಥ ಎಂದು ಆರೋಪಿಸಿದರು.