Mysore Muda Scam: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಹಿರಂಗವಾಗಿ ಕಾಣಿಸಿಕೊಳ್ಳುವುದೇ ಇಲ್ಲ ಏಕೆ?
CM Siddaramaiah Wife ಮೈಸೂರು ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಕೇಂದ್ರ ಬಿಂದು; ಅವರು ಎಲ್ಲಿರುತ್ತಾರೆ? ಅವರ ಜೀವನಶೈಲಿ ಹೇಗಿರುತ್ತದೆ ? ಅವರೇಕೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಇಲ್ಲಿದೆ ಉತ್ತರ.(ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಸಾಮಾನ್ಯವಾಗಿ ಮುಂಚೂಣಿಯಲ್ಲಿರುವ ರಾಜಕಾರಣಿಗಳ ಪತ್ನಿಯರು ತಮ್ಮ ಉಪಸ್ಥಿತಿಗೆ ಸುದ್ದಿಯಾಗುವುದು ಸಹಜ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಎಲ್ಲಿಯೂ ಕಾಣಿಸಿಕೊಳ್ಳದೆ ಕಳೆದ 1 ತಿಂಗಳಿನಿಂದ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆಯ ಹಗರಣದಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರ ಹೆಸರು ಪದೇ ಪದೇ ಪ್ರಸ್ತಾಪವಾಗುತ್ತಲೇ ಇದೆ. ಸಿದ್ದರಾಮಯ್ಯ ಅವರ ನಾಲ್ಕೈದು ದಶಕಗಳ ರಾಜಕೀಯ ಜೀವನದಲ್ಲಿ ಪಾರ್ವತಿ ಅವರು ಬಹಿರಂಗವಾಗಿ ಕಾಣಿಸಿಕೊಂಡಿದ್ದು ಅತಿ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದೂ ಹೇಳಬಹುದು. ಕಳೆದ ವರ್ಷ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ.
ಅಷ್ಟೇ ಅಲ್ಲ, ಅವರು ಖಾಸಗಿ ಸಭೆ ಸಮಾರಂಭಗಳಲ್ಲೂ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ. ಸಿದ್ದರಾಮಯ್ಯ ಅವರ ಜತೆಯಲ್ಲೂ ಕಾಣಿಸಿಕೊಳ್ಳುವುದಿಲ್ಲ. ಅವರ ಮನೆಗೆ ಹೋದಾಗಲೂ ಸಚಿವರು, ಶಾಸಕರ ಕಣ್ಣಿಗೆ ಬಿದ್ದಿದ್ದು ಕಡಿಮೆ. ಹಾಗೆ ನೋಡಿದರೆ ಸಿದ್ದರಾಮಯ್ಯ ಪಾರ್ವತಿ ದಂಪತಿಗಳ ಜೋಡಿ ಫೋಟೋ ಕ್ಲಿಕ್ಕಿಸಿದ ಸಂಭವವೇ ಇಲ್ಲ. ಅವರ ಆಪ್ತರ ಪ್ರಕಾರ ಅವರು ಜತೆಯಲ್ಲಿ ಉಳಿದುಕೊಳ್ಳುವುದು ಕಡಿಮೆ ಎನ್ನಲಾಗುತ್ತಿದೆ.
ಅಷ್ಟೇ ಏಕೆ? 2017ರಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಿತ್ತು. ಅಲ್ಲಿ ಸಿದ್ದರಾಮಯ್ಯ ಅವರ ಕುಟುಂಬದ ಬಹುತೇಕ ಸದಸ್ಯರನ್ನು ಪರಿಚಯ ಮಾಡಿಕೊಡಲಾಗಿತ್ತು. ಆದರೆ ಪಾರ್ವತಿ ಅವರು ಅಲ್ಲಿಯೂ ಉಪಸ್ಥಿತರಿರಲಿಲ್ಲ. ರಮೇಶ್ ಅರವಿಂದ್ ಅವರು ನಿಮ್ಮ ಪತ್ನಿ ಅವರು ಏಕೆಕಾಣಿಸಿಕೊಳ್ಳುವುದಿಲ್ಲ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಅವರು ನನ್ನ ಪತ್ನಿ ತುಂಬಾ ನಾಚಿಕೆ ಸ್ವಭಾವದವರು ಎಂದು ಉತ್ತರಿಸಿದ್ದರು. ಹಾಗೆ ನೋಡಿದರೆ ನದಿಗಳು ತುಂಬಿ ಹರಿಯುವಾಗ ಬಾಗೀನ ಕೊಡುವುದು ಸಂಪ್ರದಾಯ. ಅದರಲ್ಲೂ ದಂಪತಿ ಸಹಿತ ಬಾಗಿನ ಕೊಡುವುದು ವಾಡಿಕೆ. ಆದರೆ ಸಿದ್ದರಾಮಯ್ಯ ಮತ್ತು ಪಾರ್ವತಿ ದಂಪತಿಗಳು ಜೊತೆಯಾಗಿ ಬಾಗೀನ ಕೊಟ್ಟ ಉದಾಹರಣೆಯೇ ಇಲ್ಲ ಎನ್ನಬಹುದು.
2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಪ್ರತಿಪಕ್ಷಗಳ ಸದಸ್ಯರು ಸಿದ್ದರಾಮಯ್ಯ ಅವರನ್ನು ಪತ್ನಿಯ ಅನುಪಸ್ಥಿತಿ ಕುರಿತು ಪ್ರಶ್ನಿಸಿದ್ದರು.
ಹಬ್ಬ ಹರಿದಿನ ಚುನಾವಣೆ ಸಂದರ್ಭಗಳಲ್ಲೂ ಪಾರ್ವತಿ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದ ಉದಾಹರಣೆಗಳಿಲ್ಲ. ಬಹುತೇಕ ಪತ್ರಿಕೆಗಳು, ಮತ್ತು ಚಾನೆಲ್ ಗಳು ಅವರ ಸಂದರ್ಶನಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಹಾಗೆಂದು ಪಾರ್ವತಿ ಅವರು ಹೊರ ಬರುವುದೇ ಇಲ್ಲ ಎಂದೇನೂ ಇಲ್ಲ. ಚುನಾವಣೆಗಳ ಸಂದರ್ಭಗಳಲ್ಲಿ ಅವರು ಪ್ರಚಾರ ನಡೆಸುತ್ತಾರೆ. ಆದರೆ ಮಾಧ್ಯಮಗಳ ಮುಂದೆ ಮಾತ್ರ ಬರುವುದಿಲ್ಲ. ಅನೇಕ ರಾಜಕೀಯ ನಿರ್ಧಾರಗಳನ್ನು ಕುರಿತು ತಮ್ಮ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪುತ್ರ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸುತ್ತವೆ.
ಸಿದ್ದರಾಮಯ್ಯ ಅವರು ನಾಸ್ತಿಕರಾದರೆ ಅವರ ಪತ್ನಿ ಪಾರ್ವತಿ ಅವರು ಆಸ್ತಿಕರು. ಮಹಾನ್ ದೈವಭಕ್ತೆ. ಸದಾ ದೇವಾಲಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಗುಟ್ಟು ಕಾಪಾಡಿಕೊಳ್ಳುತ್ತಾರೆ. ಮನೆಯಲ್ಲೂ ಆಗಾಗ್ಗೆ ಪೂಜೆ ಪುನಸ್ಕಾರ, ಹೋಮ ಹವನ ನಡೆಸುತ್ತಲೇ ಇರುತ್ತಾರೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೂ ಗೃಹಪ್ರವೇಶಕ್ಕೂ ಮುನ್ನ ಹೋಮ ಹವನ ನಡೆಸಿದ್ದರು. ಇದು ಅವರ ಆಪ್ತ ವಲಯಕ್ಕೆ ಮಾತ್ರ ತಿಳಿದ ವಿಷಯವಾಗಿರುತ್ತದೆ ಎನ್ನುವುದು ಸಿದ್ದರಾಮಯ್ಯ ಅವರ ಆಪ್ತರ ವಿವರಣೆ.
(ವರದಿ: ಎಚ್.ಮಾರುತಿ. ಬೆಂಗಳೂರು)