ಟೆಸ್ಟ್, ಏಕದಿನ, ಟಿ20ಐ; ಮೂರು ಸ್ವರೂಪದಲ್ಲೂ ನಂ 1 ಆಗಿದ್ದು ಐವರು ಮಾತ್ರ, ಅದರಲ್ಲಿ ಭಾರತೀಯರೇ ಇಬ್ಬರು
ಕನ್ನಡ ಸುದ್ದಿ  /  ಕ್ರಿಕೆಟ್  /  ಟೆಸ್ಟ್, ಏಕದಿನ, ಟಿ20ಐ; ಮೂರು ಸ್ವರೂಪದಲ್ಲೂ ನಂ 1 ಆಗಿದ್ದು ಐವರು ಮಾತ್ರ, ಅದರಲ್ಲಿ ಭಾರತೀಯರೇ ಇಬ್ಬರು

ಟೆಸ್ಟ್, ಏಕದಿನ, ಟಿ20ಐ; ಮೂರು ಸ್ವರೂಪದಲ್ಲೂ ನಂ 1 ಆಗಿದ್ದು ಐವರು ಮಾತ್ರ, ಅದರಲ್ಲಿ ಭಾರತೀಯರೇ ಇಬ್ಬರು

ICC Rankings : ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್, ಏಕದಿನ, ಟಿ20ಐ ಮೂರು ಫಾರ್ಮೆಟ್​​​ನಲ್ಲೂ ನಂಬರ್​ 1 ಪಟ್ಟವನ್ನು ಅಲಂಕರಿಸಿದ ಆಟಗಾರರ ಯಾರು ಎಂಬುದನ್ನು ಈ ಮುಂದೆ ನೋಡೋಣ.

ಟೆಸ್ಟ್, ಏಕದಿನ, ಟಿ20ಐ; ಮೂರು ಸ್ವರೂಪದಲ್ಲೂ ನಂ 1 ಆಗಿದ್ದು ಐವರು ಮಾತ್ರ, ಅದರಲ್ಲಿ ಭಾರತೀಯರೇ ಇಬ್ಬರು
ಟೆಸ್ಟ್, ಏಕದಿನ, ಟಿ20ಐ; ಮೂರು ಸ್ವರೂಪದಲ್ಲೂ ನಂ 1 ಆಗಿದ್ದು ಐವರು ಮಾತ್ರ, ಅದರಲ್ಲಿ ಭಾರತೀಯರೇ ಇಬ್ಬರು

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರಿನ ಹೊಸ ಪುಟವೊಂದನ್ನು ತೆರೆದಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್​ ಕ್ರಿಕೆಟ್​ನ ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ 1 ಸ್ಥಾನ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಕ್ರಿಕೆಟ್​​ನಲ್ಲಿ ಮೂರು ಫಾರ್ಮೆಟ್​ನಲ್ಲೂ ಅಗ್ರಸ್ಥಾನಕ್ಕೇರಿದ ಆಟಗಾರರ ಪೈಕಿ ಬುಮ್ರಾ ಹೊರತುಪಡಿಸಿ ಇನ್ನೂ ನಾಲ್ವರಿದ್ದಾರೆ. ಒಟ್ಟು ಐವರು ಮಾತ್ರ ಕ್ರಿಕೆಟ್​​ನ ಮೂರು ಮಾದರಿಗಳಲ್ಲೂ ನಂ 1 ಸ್ಥಾನ ಅಲಂಕರಿಸಿದ ಸಾಧನೆ ಮಾಡಿದ್ದಾರೆ.

1. ರಿಕಿ ಪಾಂಟಿಂಗ್

ನಾಲ್ಕು ಐಸಿಸಿ ಟ್ರೋಫಿ ಗೆದ್ದಿರುವ ರಿಕಿ ಪಾಂಟಿಂಗ್, ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಚಾಣಾಕ್ಷ ನಾಯಕತ್ವದ ಹೊರತಾಗಿ ಪಾಂಟಿಂಗ್ ತಮ್ಮ ಬ್ಯಾಟಿಂಗ್ ಮೂಲಕವೂ ಎದುರಾಳಿ ತಂಡಕ್ಕೆ ದುಸ್ವಪ್ನವಾಗಿದ್ದರು. ಅವರು ಏಕದಿನ, ಟೆಸ್ಟ್‌ ಕ್ರಿಕೆಟ್​​ನಲ್ಲಿ ಅಗ್ರ ಐದು ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20ಯಲ್ಲಿ ಪಾಂಟಿಂಗ್ 98* (55) ರನ್ ಗಳಿಸಿದ ನಂತರ 2005ರ ಡಿಸೆಂಬರ್​​ನಲ್ಲಿ ಚುಟುಕು ಕ್ರಿಕೆಟ್​​ನಲ್ಲೂ ಅಗ್ರಸ್ಥಾನಕ್ಕೇರಿದ್ದರು. ಇದರೊಂದಿಗೆ 3 ಸ್ವರೂಪಗಳಲ್ಲಿ ನಂಬರ್ 1 ಸ್ಥಾನ ಪಡೆದ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಅಲ್ಲದೆ, ಆ ವರ್ಷ ಏಕದಿನ, ಟೆಸ್ಟ್​ನಲ್ಲಿ ಕ್ರಮವಾಗಿ 1191 ರನ್, 1544 ರನ್‌ ಸಿಡಿಸಿದ್ದರು. ಇದು ಒಡಿಐ, ಟೆಸ್ಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರಲು ಸಹಾಯ ಮಾಡಿತು.

2. ಮ್ಯಾಥ್ಯೂ ಹೇಡನ್

ಹೇಡನ್, ವಿಶ್ವದ ಅತ್ಯಂತ ಸ್ಫೋಟಕ ಆರಂಭಿಕ ಬ್ಯಾಟರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 30 ಟೆಸ್ಟ್ ಶತಕಗಳ ಜೊತೆಗೆ 10 ಏಕದಿನ ಶತಕ ಸಿಡಿಸಿರುವ ಹೇಡನ್, ಟಿ20ಐ 9 ಇನ್ನಿಂಗ್ಸ್‌ಗಳಿಂದ 51.33ರ ಸರಸರಿಯಲ್ಲಿ 4 ಅರ್ಧ ಶತಕ ಸಹಿತ 308 ರನ್‌ ಗಳಿಸಿದ್ದಾರೆ. ಆದರೆ ಈ ಬ್ಯಾಟರ್ ಒಂದೇ ಸಮಯದಲ್ಲಿ ಅಲ್ಲದಿದ್ದರೂ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಪ್ರಥಮ ಸ್ಥಾನ ಪಡೆದ ಕೆಲವೇ ಆಟಗಾರರಲ್ಲಿ ಒಬ್ಬರು. ಸೌತ್‌ಪಾವ್ 2007ರ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಎರಡರಲ್ಲೂ ಕ್ರಮವಾಗಿ 659 ರನ್, 265 ರನ್ ಗಳಿಸುವ ಮೂಲಕ ಪ್ರಮುಖ ರನ್ ಸ್ಕೋರರ್ ಆಗಿದ್ದರು.

3. ಶಕೀಬ್ ಅಲ್ ಹಸನ್

ಬಾಂಗ್ಲಾದೇಶ ತಂಡದ ಒಡಿಐ ನಾಯಕ ಶಕೀಬ್ ಅಲ್ ಹಸನ್ ತಮ್ಮ ರಾಷ್ಟ್ರದಿಂದ ಹೊರಹೊಮ್ಮಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಶಕೀಬ್ 116 ಇನ್ನಿಂಗ್ಸ್‌ಗಳಿಂದ 2382 ರನ್ ಗಳಿಸುವ ಮೂಲಕ ಟಿ20ಯಲ್ಲಿ ತಮ್ಮ ತಂಡದ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಎಡಗೈ ಸ್ಪಿನ್ನರ್ ಬಾಂಗ್ಲಾ ಪರ 3 ಸ್ವರೂಪಗಳಲ್ಲಿ ಟೆಸ್ಟ್‌ನಲ್ಲಿ 233 ವಿಕೆಟ್‌, ಏಕದಿನದಲ್ಲಿ 317 ವಿಕೆಟ್‌ ಮತ್ತು ಟಿ20ಐನಲ್ಲಿ 140 ವಿಕೆಟ್ ಪಡೆದಿದ್ದಾರೆ.

ಏಕದಿನ (7570) ಮತ್ತು ಟೆಸ್ಟ್ (4454) ಎರಡರಲ್ಲೂ ತಮ್ಮ ದೇಶಕ್ಕೆ 3ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 2015ರ ಜೂನ್​ನಲ್ಲಿ ಅವರು 3 ಸ್ವರೂಪಗಳಲ್ಲಿ ಆಲ್‌ರೌಂಡರ್ ರ್ಯಾಂಕಿಂಗ್​​ನಲ್ಲಿ ನಂಬರ್​ 1 ಸ್ಥಾನ ಪಡೆದಿದ್ದರು. ಆದರೆ ಒಂದೇ ಅವಧಿಯಲ್ಲಿ ಮೂರು ಸ್ವರೂಪಗಳಲ್ಲಿ ಪ್ರಥಮ ಸ್ಥಾನ ಪಡೆದ ಎರಡನೇ ಆಟಗಾರ. ಈ ರಿಕಿ ಪಾಂಟಿಂಗ್​ ಮೊದಲ ಸ್ಥಾನದಲ್ಲಿದ್ದಾರೆ.

4. ವಿರಾಟ್ ಕೊಹ್ಲಿ

ಭಾರತೀಯ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ನಂಬಲಾಗದ ಅಂಕಿ-ಸಂಖ್ಯೆ ಹೊಂದಿದ್ದಾರೆ. ಮೂರು ಸ್ವರೂಪಗಳಲ್ಲಿ ಶ್ರೇಷ್ಠ ಬ್ಯಾಟರ್ ಆಗಿರುವ ಕೊಹ್ಲಿ, 2012ರಲ್ಲಿ 1026 ರನ್ ಗಳಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದರು. ನಂತರ 2013ರಲ್ಲಿ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದರು. ಆ ಬಳಿಕ 2017ರಿಂದ 2021ರವರೆಗೂ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ ಅಗ್ರಸ್ಥಾನದಲ್ಲೇ ಇದ್ದರು.

2014 ಮತ್ತು 2016ರಲ್ಲಿ ಟಿ20 ವಿಶ್ವಕಪ್‌ನ ಬ್ಯಾಕ್-ಟು-ಬ್ಯಾಕ್ ಆವೃತ್ತಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಕೊಹ್ಲಿ, 2014ರಲ್ಲಿ ಟಿ20 ಕ್ರಿಕೆಟ್​​ನಲ್ಲಿ ಅಗ್ರಸ್ಥಾನಕ್ಕೇರಿದ್ದರು. 2014 ರಿಂದ 2016ರವರೆಗೆ ಮತ್ತು ಮತ್ತೊಮ್ಮೆ 2016 ರಿಂದ 2018ರವರೆಗೂ ಟಿ20 ಕ್ರಿಕೆಟ್​ನ ಅಗ್ರಸ್ಥಾನ ಬ್ಯಾಟರ್ ಆಗಿದ್ದರು. 2018ರ ಮಧ್ಯದಿಂದ 2019ರವರೆಗೂ ಒಂದು ವರ್ಷಕ್ಕೂ ಹೆಚ್ಚು ಕಾಲ ಟೆಸ್ಟ್ ಕ್ರಿಕೆಟ್​ನಲ್ಲಿ ಅಗ್ರಸ್ಥಾನಿಯಾಗಿದ್ದರು. ಮೂರು ಫಾರ್ಮೆಟ್​ನಲ್ಲೂ ನಂಬರ್ 1 ಆಗಿದ್ದ ಭಾರತದ ಮೊದಲ ಆಟಗಾರ.

5. ಜಸ್ಪ್ರೀತ್ ಬುಮ್ರಾ

ಕ್ರಿಕೆಟ್​ನ ಮೂರು ಮಾದರಿಗಳಲ್ಲೂ ನಂಬರ್ 1 ಪಟ್ಟ ಅಲಂಕರಿಸಿದ ವಿಶ್ವದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೇಗಿ ಜಸ್ಪ್ರೀತ್ ಬುಮ್ರಾ, ಆಧುನಿಕ ಯುಗದ ಎಲ್ಲಾ ಮೂರು ಸ್ವರೂಪಗಳಲ್ಲಿ ಶ್ರೇಷ್ಠ ಬೌಲರ್ ಎಂದು ಹೆಸರಿಸಲ್ಪಟ್ಟರು. 30ರ ಹರೆಯದ ಅವರು ಈ ಹಿಂದೆ ಏಕದಿನ (2022), ಟಿ20ಐ (2017) ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದರು. ಇದೀಗ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಎರಡನೇ ಟೆಸ್ಟ್‌ನಲ್ಲಿ ಬುಮ್ರಾ ಅವರ ಅದ್ಭುತ ಬೌಲಿಂಗ್​ (9/91) ಪ್ರದರ್ಶನದಿಂದ ಭಾರತ ಗೆದ್ದಿತ್ತು.

Whats_app_banner