Psi Exam:ಪಿಎಸ್‌ಐ ಮರುಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳ ಬಂದ್, ಈ ಸೂಚನೆ ಪಾಲನೆ ಕಡ್ಡಾಯ
PSI Exams ಕರ್ನಾಟಕದಲ್ಲಿ ಪಿಎಸ್‌ಐ ಹುದ್ದೆಯ ಪರೀಕ್ಷೆ ಜನವರಿ23ರಂದು ನಡೆಯಲಿದ್ದು, ಇದಕ್ಕಾಗಿ ಪೊಲೀಸ್ ಇಲಾಖೆ ಸಾಕಷ್ಟು ಸಿದ್ದತೆ ಮಾಡಿಕೊಂಡಿದೆ. ಪರೀಕ್ಷಾಪ್ರಾಧಿಕಾರವೂ ಕೆಲ ಸೂಚನೆ ನೀಡಿದೆ.
ಬೆಂಗಳೂರು: ಬೆಂಗಳೂರು ನಗರದ 117 ಪರೀಕ್ಷಾ ಕೇಂದ್ರಗಳಲ್ಲಿ ಜ.23 ರಂದು ಪಿಎಸ್‌ಐ (ಸಿವಿಲ್–ಪುರುಷ ಹಾಗೂ ಮಹಿಳಾ) ನೇಮಕಾತಿಗೆ ಮರು ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ಪರೀಕ್ಷೆಯನ್ನು ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಅಂದು ಬೆಳಿಗ್ಗೆ 7ರಿಂದ ಪರೀಕ್ಷೆ ಮುಕ್ತಾಯ ಆಗುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಸಮಯ ನಿಗದಿ
ಜನವರಿ 23ರಂದು ಎರಡು ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ 12 ಮಧ್ಯಾಹ್ನನದವರೆಗೆ ಪೇಪರ್ 1 ಗೆ ಪರೀಕ್ಷೆ ನಡೆಯಲಿದ್ದು. 50 ಅಂಕಗಳನ್ನು ನಿಗದಿ ಮಾಡಲಾಗಿದೆ.
ಮಧ್ಯಾಹ್ನ 1ರಿಂದ ಮಧ್ಯಾಹ್ನ 2.30 ರವರೆಗೆ ಪೇಪರ್ 2ಕ್ಕೆ ಪರೀಕ್ಷೆ ನಡೆಯಲಿದ್ದು, 150 ಅಂಕಗಳನ್ನು ನಿಗದಿಪಡಿಸಲಾಗಿದೆ.
ಸೂಚನೆಗಳು
- ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30 ಕ್ಕೆ ಸರಿಯಾಗಿ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು
- ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರಬೇಕು. ಇದರಲ್ಲಿ ವಾಹನ ಚಾಲನಾ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿದರೆ ಮಾತ್ರ ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
- ಮೊಬೈಲ್‌ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮೊಬೈಲ್‌ನಲ್ಲಿ ಗುರುತಿನ ಚೀಟಿಯನ್ನು ತೋರಿಸಲು ಅವಕಾಶವಿಲ್ಲ. ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರ ಪ್ರವೇಶಿಸಲು ಅನುವು ಮಾಡಿಕೊಡುವುದಿಲ್ಲ.
- ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ಗಳು ಇಲ್ಲದೇ ಇರುವ ಶರಟುಗಳನ್ನು ಹಾಕಿಕೊಳ್ಳಬೇಕು
- ಯಾವುದೇ ರೀತಿಯ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವುದಿಲ್ಲ
- ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹ ಉಡುಪುಗಳನ್ನು ಧರಿಸಿ ಇಲ್ಲವೇ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ
- ವಾಟರ್ ಬಾಟಲ್‌ಗಳನ್ನು ಓಳ ತರಲು ಅನುಮತಿ ನೀಡುವುದಿಲ್ಲ. ಪ್ರಾಧಿಕಾರದಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು
- ಮೊದಲನೇ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಗೆ ಹೋಗಲು ಅನುಮತಿ ನೀಡುವುದಿಲ್ಲ
ಇದನ್ನೂ ಓದಿರಿ: ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ ದಾಖಲೆ
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ
ಪೊಲೀಸ್ ನೇಮಕಾತಿಯಲ್ಲಿನ ಅಕ್ರಮ ಬೆಳಕಿಗೆ ಬಂದ ಬಳಿಕ ಇಡೀ ನೇಮಕಾತಿಯೇ ರದ್ದಾಗಿತ್ತು. ಮರು ಪರೀಕ್ಷೆ ನಡೆಸಬೇಕೆಂಬ ಸರ್ಕಾರದ ಕೂಗಿಗೆ ಹೈಕೋರ್ಟ್ ಹಸಿರು ನಿಶಾನೆ ನೀಡಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮರು ಪರೀಕ್ಷಾ ದಿನಾಂಕವನ್ನು ನ.22ರಂದು ಪ್ರಕಟಿಸಿ, ಡಿ.23ಕ್ಕೆ ನಿಗದಿ ಮಾಡಿತ್ತು. ಆದರೆ ಈ ದಿನಾಂಕವನ್ನೂ ಮುಂದೂಡಬೇಕೆಂಬ ಕೂಗು ಕೇಳಿಬಂದಿತ್ತು. ಸದನದಲ್ಲೂ ಇದೇ ಆಗ್ರಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಜ. 23ಕ್ಕೆ 545 ಪಿ ಎಸ್ ಐ ಹುದ್ದೆಗಳ ಮರು ಪರೀಕ್ಷೆಯನ್ನು ಮುಂದೂಡಿದ್ದರು.
ಹೈಕೋರ್ಟ್ ಆದೇಶವೇನು?
ಪಿಎಸ್‌ಐ ಮರು ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್ ನ.10ರಂದು ಆದೇಶ ನೀಡಿತು. ಅಂದಿನ ಬಿಜೆಪಿ ಸರ್ಕಾರ ಮರು ಪರೀಕ್ಷೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಗಳನ್ನು ಪರಿಶೀಲಿಸಿ, ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.
ಏನಿದು ವಿವಾದ
2021ರ ಜನವರಿ 21 ರಂದು ರಾಜ್ಯ ಪೊಲೀಸ್ ಇಲಾಖೆಯಿಂದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕಟವಾಗಿತ್ತು. ಅದೇ ವರ್ಷ ಅಕ್ಟೋಬರ್ 3 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪಿಎಸ್ ನೇಮಕಾತಿಯ ಲಿಖಿತ ಪರೀಕ್ಷೆ ನಡೆಸಲಾಗಿತ್ತು.
ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆಅಭ್ಯರ್ಥಿಗಳು ದೂರು ನೀಡಿದ್ದರು. 2022ರ ಜನವರಿ 18ರಂದು 545 ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾದಾಗ ಆಯ್ಕೆ ಪಟ್ಟಿ ತಡೆಗೆ ನೇಮಕಾತಿ ವಿಭಾಗದ ಎಡಿಐಜಿ ಸೂಚನೆ ನೀಡಿದರು. ಈ ಪರೀಕ್ಷೆಯಲ್ಲಿ ದೊಡ್ಡ ಅಕ್ರಮ ನಡೆದಿರುವುದು ಬೆಳಕಿಗೆ ಬಂದು ತನಿಖೆ ನಡೆಸಲಾಗಿತ್ತು. ಈ ಹಗರಣದಲ್ಲಿ ಹಿರಿಯ ಐ ಪಿ ಎಸ್ ಅಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.
545 ಹುದ್ದೆಗಳ ನೇಮಕಾತಿಗೆ ಈ ಮೊದಲು 2021ರ ಜ. 21ರಂದು ಸರ್ಕಾರದ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಿದ್ದ 1,42,636 ಅಭ್ಯರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿಅರ್ಹರಾದ 54,104 ಅಭ್ಯರ್ಥಿಗಳಿಗೆ 2021 ಅ. 3ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. 2022ರ ಜ. 19ರಂದು ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಸರ್ಕಾರ, 2021 ಅ. 3ರಂದು ನಡೆಸಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು 2022 ಏಪ್ರಿಲ್ 29ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕೆಇಟಿಗೆ ಅರ್ಜಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಅರ್ಜಿಯನ್ನು ಕೆಎಟಿ, 2022ರ ಜುಲೈ 19 ಮತ್ತು ಡಿ. 14ರಂದು ವಜಾಗೊಳಿಸಿತ್ತು. ಕೆಎಟಿ ಆದೇಶದ ವಿರುದ್ಧ ಅಭ್ಯರ್ಥಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್, ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿತ್ತು.
ಹೈಕೋರ್ಟ್ ನೀಡಿದ ತೀರ್ಪು ಉಲ್ಲೇಖಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಕೋರಿ ಪೊಲೀಸ್ ನೇಮಕಾತಿ ವಿಭಾಗದ ಮಹಾ ನಿರ್ದೇಶಕರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪೊಲೀಸ್ ಮಹಾನಿರ್ದೇಶಕರು ಅನುಮೋದಿಸಿದ್ದರು. ಅದರ ಬೆನ್ನಲ್ಲೆ, ಮರು ಪರೀಕ್ಷೆಯ ಹೊಣೆಯನ್ನು ಸರ್ಕಾರ ಕೆಇಎಗೆ ವಹಿಸಿತ್ತು.
(ವರದಿ: ಎಚ್, ಮಾರುತಿ, ಬೆಂಗಳೂರು)