ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ವಾಲ್ಮೀಕಿ ನಿಗಮ 94 ಕೋಟಿ ರೂ. ಹಗರಣ, ಯೂನಿಯನ್‌ ಬ್ಯಾಂಕ್‌ ಸಿಇಒ ಸೇರಿ 6 ಮಂದಿ ವಿರುದ್ದ ಪ್ರಕರಣ

Bangalore News: ವಾಲ್ಮೀಕಿ ನಿಗಮ 94 ಕೋಟಿ ರೂ. ಹಗರಣ, ಯೂನಿಯನ್‌ ಬ್ಯಾಂಕ್‌ ಸಿಇಒ ಸೇರಿ 6 ಮಂದಿ ವಿರುದ್ದ ಪ್ರಕರಣ

Big Fraud ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಯೂನಿಯನ್‌ ಬ್ಯಾಂಕ್‌( Union Bank Of India) ಹಲವರ ವಿರುದ್ದ ಪ್ರಕರಣ ದಾಖಲಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಬೆಂಗಳೂರು: ದುರ್ಬಲರಿಗೆ ಸಹಾಯವಾಗಲಿ ಎಂದು ಸರ್ಕಾರ ನಿಗಮ ರಚಿಸಿ ಅನುದಾನ ನೀಡಿದರೆ ಅಲ್ಲಿರುವ ತಿಮಿಂಗಿಲಗಳು ಮೇಯುತ್ತಿರುವುದು ಒಂದು ಕಡೆಯಾದರೆ ಬ್ಯಾಂಕ್ ಅಧಿಕಾರಿಗಳೇ ಹಣ ದುರ್ಬಳಕೆ ಮಾಡಿಕೊಂಡಿರುವುದು ಮತ್ತೊಂದು ಕಡೆ ವರದಿಯಾಗಿದೆ. ವಾಲ್ಮೀಕಿ ನಿಗಮದ ಹುತ್ತವನ್ನು ಬಗೆದಷ್ಟೂ ಸ್ಫೋಟಕ ವಿದ್ಯಮಾನಗಳು ಬೆಳಕಿಗೆ ಬರುತ್ತಿವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ 94 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಆರೋಪದ ಮೇರೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಒ ಸೇರಿದಂತೆ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮಣಿಮೇಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್‌ಚಂದ್ರ, ಪಂಕಜ್ ದ್ವಿವೇದಿ ಮತ್ತು ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಸುಶಿಚಿತಾ ರಾವ್ ಅವರ ವಿರುದ್ಧ ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರ್ ದೂರು ನೀಡಿದ್ದಾರೆ. ಈ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತನಗರದ ಶಾಖೆಯಲ್ಲಿ ಖಾತೆ ಹೊಂದಿತ್ತು. ಫೆಬ್ರುವರಿ 2 ರಂದು ಇದೇ ಬ್ಯಾಂಕ್‌ನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಶಾಖೆಗೆ ಖಾತೆಯನ್ನು ವರ್ಗಾವಣೆ ಮಾಡಲಾಗಿತ್ತು. ಖಾತೆ ನಿರ್ವಹಣೆ ಮಾಡುವ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಲೆಕ್ಕಾಧಿಕಾರಿಯಿಂದ ಬ್ಯಾಂಕ್ ಸಿಬ್ಬಂದಿ ಮಾದರಿ ಸಹಿ ಪಡೆದುಕೊಂಡಿದ್ದರು. ಈ ಬೆಳವಣಿಗೆಗಳ ನಂತರ ಇದೇ ವರ್ಷದ ಮಾರ್ಚ್ 4 ರಂದು‍ 25 ಕೋಟಿ, ಮಾರ್ಚ್ 6 ರಂದು 25 ಕೋಟಿ, ಮಾರ್ಚ್ 21 ರಂದು 44 ಕೋಟಿ, ಮೇ 21ರಂದು 50 ಕೋಟಿ ಹಾಗೂ ಮೇ 22 ರಂದು 33 ಕೋಟಿ ಸೇರಿ ಒಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ 187.33 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿತ್ತು. ಈ ಮಧ್ಯೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಬ್ಯಾಂಕ್ ಜೊತೆ ನಿಗಮವು ಯಾವುದೇ ಪತ್ರ ವ್ಯವಹಾರ ನಡೆಸಿರಲಿಲ್ಲ. ನಿಗಮದ ಅಧಿಕೃತ ಕಚೇರಿ ವಿಳಾಸಕ್ಕೆ ಚೆಕ್‌ಬುಕ್, ಪಾಸ್‌ಬುಕ್ ಸೇರಿದಂತೆ ಯಾವುದೇ ದಾಖಲೆಗಳು ಬ್ಯಾಂಕ್‌ನಿಂದ ಬಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಿಗಮದ ಯಾವುದೇ ಸಿಬ್ಬಂದಿಯೂ ಹಣವನ್ನು ವಿತ್ ಡ್ರಾ ಮಾಡಿಲ್ಲ. ಆದರೆ, ನಕಲಿ ದಾಖಲೆ ಸೃಷ್ಟಿಸಿ ರೂಪಾಯಿ 94.73 ಕೋಟಿಯನ್ನು ಅನಧಿಕೃತವಾಗಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಮಾಹಿತಿ ಲಭ್ಯವಾದ ನಂತರ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ ಮೇ 23ರಂದು ‍5 ಕೋಟಿ ಹಣವನ್ನು ನಿಗಮದ ಖಾತೆಗೆ ಮರಳಿಸಿದ್ದಾರೆ.

ಹಣ ವರ್ಗಾವಣೆ ಕುರಿತು ಮಾಹಿತಿ ಕೇಳಿದರೂ ಬ್ಯಾಂಕ್ ಅಧಿಕಾರಿಗಳು ಉತ್ತರ ನೀಡಿಲ್ಲ. ಬ್ಯಾಂಕ್ ನ ಸಿ.ಸಿ ಟಿವಿ ಕ್ಯಾಮೆರಾದ ದೃಶ್ಯಾವಳಗಳನ್ನು ಕೇಳಿದರೂ ಕೊಟ್ಟಿಲ್ಲ. ನಿಗಮಕ್ಕೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಈ ಹಣ ಯಾವ ಖಾತೆಗೆ ವರ್ಗಾವಣೆ ಆಗಿದೆ ಎಂಬುದಕ್ಕೆ ಮೊಬೈಲ್ ಸಂಖ್ಯೆ ನಮೂದಿಸಿಲ್ಲ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರು ದೂರಿನಲ್ಲಿ ವಿವರಿಸಿದ್ದಾರೆ.

ನಿಗಮದ ದೂರಿನ ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹಣ ವರ್ಗಾವಣೆ ಆಗಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

(ವರದಿ: ಮಾರುತಿ. ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024