ಬೆಂಗಳೂರು: ಜಯನಗರದಲ್ಲಿ 44 ವರ್ಷದ ಕಾಲೇಜು ಉಪನ್ಯಾಸಕಿ ಆತ್ಮಹತ್ಯೆಗೆ ಯತ್ನ; ಶಿಸ್ತುಕ್ರಮದ ಆತಂಕದಲ್ಲಿ ಕೃತ್ಯ
ಬೆಂಗಳೂರು ಜಯನಗರದ ಖಾಸಗಿ ಕಾಲೇಜಿನ 44 ವರ್ಷದ ಉಪನ್ಯಾಸಕಿಯೊಬ್ಬರು ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶಿಸ್ತುಕ್ರಮದ ಆತಂಕದ ಕೃತ್ಯ ಎಂದು ಶಂಕಿಸಲಾಗಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
ಬೆಂಗಳೂರು: ಶಿಸ್ತುಕ್ರಮದ ಆತಂಕದಲ್ಲಿ ಜಯನಗರದ ಖಾಸಗಿ ಕಾಲೇಜಿನ 44 ವರ್ಷದ ಉಪನ್ಯಾಸಕಿಯೊಬ್ಬರು ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಖಾಸಗಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ( ಆತ್ಮಹತ್ಯೆಗೆ ಯತ್ನಿಸಿದ ವಿಷಯವಾದ ಕಾರಣ ಈ ಸುದ್ದಿಯಲ್ಲಿ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ) ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರ ತಂಡ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದೆ.
ಕಾಲೇಜಿನಲ್ಲಿ ನಡೆದುದೇನು?
ಎಂದಿನಂತೆ ಸೋಮವಾರವೂ ಕಾಲೇಜಿಗೆ ಬಂದಿದ್ದ ಉಪೊನ್ಯಾಸಕಿ ಅವರು ಪ್ರಾಂಶುಪಾಲರ ಕೊಠಡಿಗೆ ತೆರಳಿ ಸ್ವಲ್ಪ ಸಮಯ ಚರ್ಚಿಸಿ ಹೊರ ಬಂದಿದ್ದರು. ಕೆಲವೇ ಹೊತ್ತಿನಲ್ಲಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ನೋಡಿದ ವಿದ್ಯಾರ್ಥಿಗಳು ಕಾಲೇಜು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ಸಿಬ್ಬಂದಿಗಳು ಉಪನ್ಯಾಸಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಉಪನ್ಯಾಸಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅವರು ಪ್ರಾಂಶುಪಾಲರು ಸೇರಿ ಕೆಲವು ಸಹದ್ಯೋಗಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಪ್ರಾಂಶುಪಾಲರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪನ್ಯಾಸಕಿಯ ವಿರುದ್ಧ ಶಿಸ್ತುಕ್ರಮ ಯಾಕೆ
ಆತ್ಮಹತ್ಯೆಗೆ ಯತ್ನಿಸಿದ ಉಪನ್ಯಾಸಕಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದು, ಆಡಳಿತಾತ್ಮಕ ವಿಚಾರಗಳನ್ನು ಬಹಿರಂಗಪಡಿಸುತ್ತಿದ್ದರು. ಇತರೆ ಉಪನ್ಯಾಸಕರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದರು. ಸಹದ್ಯೋಗಿಯೊಬ್ಬರ ಖಾಸಗಿ ವಿಷಯಗಳನ್ನು ಬಹಿರಂಗಪಡಿಸಿದ್ದರು. ಈ ಕಾರಣಗಳಿಗಾಗಿ ಅವರನ್ನು ವಿಭಾಗ ಮುಖ್ಯಸ್ಥರ ಸ್ಥಾನದಿಂದ ವಜಾ ಗೊಳಿಸಲಾಗಿತ್ತು. ವಿಚಾರಣೆಗೆ ಸಮಿತಿಯನ್ನೂ ನೇಮಿಸಲಾಗಿತ್ತು ಎಂದು ಕಾಲೇಜಿನ ಮುಖ್ಯಸ್ಥರು ತಿಳಿಸಿದ್ದಾರೆ.
ಆಡಳಿತ ಮಂಡಳಿಯು ಶಿಸ್ತುಕ್ರಮಕ್ಕೆ ಮುಂದಾಗಿದ್ದರಿಂದ ನೊಂದುಕೊಂಡಿದ್ದ ಅವರು ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಚಾರಣೆಗೆ ನೇಮಕವಾಗಿದ್ದ ಸಮಿತಿ ಸದಸ್ಯರ ವಿರುದ್ಧವೂ ಅವರು ಕಿರುಕುಳದ ಆರೋಪ ಮಾಡಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ 3 ತಿಂಗಳಿಂದ ನನ್ನ ಏಳಿಗೆ ಸಹಿಸಲಾರದೆ ಪ್ರಾಂಶುಪಾಲರು ಹಾಗೂ ಇಬ್ಬರು ಸಹೋದ್ಯೋಗಿಗಳು ಕಿರುಕುಳ ಕೊಡುತ್ತಿದ್ದರು. ನನಗೆ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಬಂದಿದ್ದಕ್ಕೆ ಸಹಿಸಲಾಗದೆ ಈ ರೀತಿ ತೊಂದರೆ ಮಾಡುತ್ತಿದ್ದರು ಎಂದು ಉಪನ್ಯಾಸಕಿ ಆರೋಪಿಸಿದ್ದಾರೆ. ಬೋಧನೆ ವೈಫಲ್ಯ ಸಂಬಂಧ ವಿದ್ಯಾರ್ಥಿಗಳ ದೂರು ಹಿನ್ನೆಲೆಯಲ್ಲಿ ಒಬ್ಬ ಉಪನ್ಯಾಸಕಿಗೆ ನೋಟಿಸ್ ನೀಡಲಾಗಿತ್ತು. ಇದೇ ಕಾರಣಕ್ಕೆ ಕೋಪಗೊಂಡ ಆಕೆ ಇನ್ನೊಬ್ಬ ಉಪನ್ಯಾಸಕನ ಜತೆ ಹಗೆತನ ಸಾಧಿಸುತ್ತಿದ್ದರು. ನನ್ನ ಮೊಬೈಲ್ ಕೂಡ ಹ್ಯಾಕ್ ಮಾಡಿ ನನ್ನ ಹೆಸರಿನಲ್ಲಿ ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ಬೇರೆಯವರಿಗೆ ಕೆಟ್ಟ ಮೆಸೇಜ್ ಮಾಡಿದ್ದರು ಎಂದು ಉಪನ್ಯಾಸಕಿ ದೂರಿದ್ದಾರೆ.
ಅನಗತ್ಯ ಸಂದೇಶಗಳನ್ನು ಕಳುಹಿಸಿ ನನ್ನ ತೇಜೋವಧೆ ಮಾಡುತ್ತಿದ್ದರು. ಈ ಬಗ್ಗೆ ಹಲವು ಬಾರಿ ಪ್ರಾಂಶುಪಾಲರಿಗೆ ದೂರು ಸಹ ನೀಡಿದರೂ ಪ್ರಯೋಜನವಾಗಲಿಲ್ಲ. ಆದರೆ ಇದೇ ವಿಷಯಮುಂದಿಟ್ಟುನನಗೆರಾಜೀನಾಮೆ ನೀಡುವಂತೆ ಪ್ರಾಂಶುಪಾಲರು ಸೂಚಿಸಿದರು. ನನ್ನ ವಿರುದ್ಧ ಪ್ರಾಂಶುಪಾಲರು ನಿಲುವು ತಳೆದರು ಎಂದು ಉಪನ್ಯಾಸಕಿ ಆರೋಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
(ವರದಿ- ಎಚ್ ಮಾರುತಿ, ಬೆಂಗಳೂರು)