ಬಸವಳಿದ ಬಿಎಂಟಿಸಿ: ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ಬಸ್‌ಗಿಂತಲೂ ಮೆಟ್ರೋ ಇಷ್ಟ; ಖಾಸಗಿ ವಾಹನಗಳ ಸಂಖ್ಯಾಸ್ಫೋಟ, ಸಾರಿಗೆ ಬಸ್‌ಗಳಿಗೆ ಸಂಕಷ್ಟ
ಕನ್ನಡ ಸುದ್ದಿ  /  ಕರ್ನಾಟಕ  /  ಬಸವಳಿದ ಬಿಎಂಟಿಸಿ: ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ಬಸ್‌ಗಿಂತಲೂ ಮೆಟ್ರೋ ಇಷ್ಟ; ಖಾಸಗಿ ವಾಹನಗಳ ಸಂಖ್ಯಾಸ್ಫೋಟ, ಸಾರಿಗೆ ಬಸ್‌ಗಳಿಗೆ ಸಂಕಷ್ಟ

ಬಸವಳಿದ ಬಿಎಂಟಿಸಿ: ಬೆಂಗಳೂರು ನಾಗರಿಕರಿಗೆ ಬಿಎಂಟಿಸಿ ಬಸ್‌ಗಿಂತಲೂ ಮೆಟ್ರೋ ಇಷ್ಟ; ಖಾಸಗಿ ವಾಹನಗಳ ಸಂಖ್ಯಾಸ್ಫೋಟ, ಸಾರಿಗೆ ಬಸ್‌ಗಳಿಗೆ ಸಂಕಷ್ಟ

BMTC Bus: ಕೋವಿಡ್ ನಂತರ ಬಸ್‌ಗಳ ಕಾರ್ಯಾಚರಣೆ ಇಳಿಮುಖವಾಗುತ್ತಿದೆ. 2019-20 ರಲ್ಲಿ 6,195 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದರೆ ಈಗ ಅದು 5,639 ಕ್ಕೆ ಕುಸಿದಿದೆ. ಬಿಎಂಟಿಸಿ ಉದ್ಯೋಗಿಗಳ ಸಂಖ್ಯೆಯೂ ಕ್ರಮೇಣ ಕಡಿಮೆಯಾಗುತ್ತಿದೆ. (ವರದಿ: ಎಚ್.ಮಾರುತಿ)

ಬೆಂಗಳೂರು ಬಿಎಂಟಿಸಿ ಬಸ್‌ಗಳಲ್ಲಿ ಆದಾಯ ಕೊರತೆ ಕಂಡುಬಂದಿದೆ
ಬೆಂಗಳೂರು ಬಿಎಂಟಿಸಿ ಬಸ್‌ಗಳಲ್ಲಿ ಆದಾಯ ಕೊರತೆ ಕಂಡುಬಂದಿದೆ

ಬೆಂಗಳೂರು: ಪ್ರಮುಖ ಸ್ಥಳಗಳಿಗೆ 'ನಮ್ಮ ಮೆಟ್ರೋ' (BMRCL) ರೈಲುಗಳು ಸಂಪರ್ಕ ಕಲ್ಪಿಸಿರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಆದಾಯ ಕುಸಿತ ಕಂಡಿದೆ. ಮೆಟ್ರೋ ಜೊತೆಗೆ ಹೆಚ್ಚುತ್ತಿರುವ ಖಾಸಗಿ ವಾಹನಗಳ ಬಳಕೆಯೂ ಬಿಎಂಟಿಸಿ ಆದಾಯಕ್ಕೆ ಹೊಡೆತ ಕೊಟ್ಟಿದೆ. ಬಿಎಂಟಿಸಿ ಆದಾಯ ಹೆಚ್ಚಳ ಅಥವಾ ಕುಸಿತದ ಚರ್ಚೆಗಿಂತಲೂ ರಸ್ತೆಗಳ ಮೇಲಾಗುವ ದುಷ್ಪರಿಣಾಮ ಮತ್ತು ಮಾಲಿನ್ಯ ಕುರಿತು ಆತಂಕ ಹೆಚ್ಚುತ್ತಿದೆ. ಖಾಸಗಿ ವಾಹನಗಳ ಹೆಚ್ಚಳದ ನಡುವೆಯೂ ಬಿಎಂಟಿಸಿ ಬಸ್ ಗಳಲ್ಲಿ ಪ್ರತಿನಿತ್ಯ ಸುಮಾರು 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ಒದಗಿಸುತ್ತಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 2023-24 ರಲ್ಲಿ ಖಾಸಗಿ ವಾಹನಗಳ ಸಂಖ್ಯೆ 1 ಕೋಟಿ ದಾಟಿದೆ. ಮತ್ತೊಂದು ಕಡೆ ಬಿಎಂಟಿಸಿ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸದ್ಯ 6073 ಬಸ್‌ಗಳು ಮಾತ್ರವೇ ಸಂಚರಿಸುತ್ತಿವೆ. 2019 ರ ನಂತರ ಬಿಎಂಟಿಸಿಯಲ್ಲಿ ಸರಿಯಾಗಿ ನೇಮಕಾತಿಯೇ ಆಗಿಲ್ಲ. ವಿಶೇಷವಾಗಿ ಡ್ರೈವರ್ ಮತ್ತು ಕಂಡಕ್ಟರ್‌ಗಳ ಕೊರತೆ ಹೆಚ್ಚುತ್ತಿದ್ದು, ಬಸ್‌ಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಅದರಲ್ಲೂ ಎಸಿ ಬಸ್‌ಗಳಿಗೆ ಚಾಲಕರ ಕೊರತೆ ಇದೆ ಎಂದು ತಿಳಿದು ಬಂದಿದೆ. ಕೋವಿಡ್ ನಂತರ ಬಸ್‌ಗಳ ಕಾರ್ಯಾಚರಣೆ ಇಳಿಮುಖವಾಗುತ್ತಿದೆ. 2019-20 ರಲ್ಲಿ 6,195 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದರೆ ಈಗ ಅದು 5,639 ಕ್ಕೆ ಕುಸಿದಿದೆ. ಬಿಎಂಟಿಸಿ ಉದ್ಯೋಗಿಗಳ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ. 2017-18 ರಲ್ಲಿ 34,114 ಉದ್ಯೋಗಿಗಳಿದ್ದರೆ 2024 ರಲ್ಲಿ 28,620 ಕ್ಕೆ ಕುಸಿದಿದೆ.

ಐಟಿ ಹಬ್‌ಗೆ ಮೆಟ್ರೋ ಸಂಪರ್ಕ, ಎಸಿ ಬಸ್‌ಗೆ ಬೇಡಿಕೆ ಕುಸಿತ

ಮೆಟ್ರೋ ರೈಲು ಸಂಚಾರಕ್ಕೂ ಮುನ್ನ ಐಟಿ ಹಬ್‌ಗಳಿಗೆ ಹವಾನಿಯಂತ್ರಿತ ಬಸ್‌ಗಳಿಗೆ ಬೇಡಿಕೆ ಇತ್ತು. ಆದರೆ ಈಗ ಬೇಡಿಕೆ ಕಡಿಮೆಯಾಗಿದೆ. ಬಹುತೇಕ ಐಟಿ ಉದ್ಯೋಗಿಗಳೆಲ್ಲರೂ ನಮ್ಮ ಮೆಟ್ರೋ ಆಶ್ರಯಿಸಿದ್ದಾರೆ. ಉದಾಹರಣೆಗೆ ವೈಟ್‌ಫೀಲ್ಡ್‌ಗೆ 585 ಎಸಿ ಬಸ್‌ಗಳು ಸಂಚರಿಸುತ್ತಿದ್ದವು. ಕಳೆದ ವರ್ಷ ಈ ಭಾಗಕ್ಕೆ ನಮ್ಮ ಮೆಟ್ರೋ ವಿಸ್ತರಣೆಯಾದ ನಂತರ ಬೇಡಿಕೆ ಕುಸಿದಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ 19 ಕಿಮೀ ಉದ್ದದ ಹಳದಿ ಮಾರ್ಗ ವಿಸ್ತರಣೆಯಾದ ನಂತರ ಬಹುತೇಕ ಐಟಿ ಉದ್ಯೋಗಿಗಳು ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.

ಶಕ್ತಿ ಯೋಜನೆಯೇ ವರದಾನ

ಆದರೂ ಬಿಎಂಟಿಸಿ ಬಸ್‌ಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಪ್ರತಿದಿನ ಸಂಚರಿಸುವವರ ಸಂಖ್ಯೆ 6-7 ಲಕ್ಷಕ್ಕೆ ಹೆಚ್ಚಳವಾಗಿದೆ. ಜೂನ್ 2023 ರಿಂದ ಏಪ್ರಿಲ್ 2024ರ ವರೆಗೆ 61.2 ಕೋಟಿ ಶಕ್ತಿ ಯೋಜನೆಯ ಫಲಾನುಭವಿಗಳೂ ಸೇರಿ 107 ಕೋಟಿ ಪ್ರಯಾಣಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. 2017 ರಿಂದಲೂ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದರೆ ಬಿಎಂಟಿಸಿಯಲ್ಲಿ ಕಡಿಮೆಯಾಗುತ್ತಲೇ ಬಂದಿದೆ. ಆಗಲೇ ಪ್ರತಿದಿನ ಸುಮಾರು 2 ಲಕ್ಷ ಪ್ರಯಾಣಿಕರು ಕಡಿಮೆಯಾಗಿದ್ದರು. ಇನ್ನು ಕೋವಿಡ್ ನಂತರ ಬಿಎಂಟಿಸಿ ಚೇತರಿಸಿಕೊಳ್ಳಲೇ ಇಲ್ಲ. ಸಂಚಾರಕ್ಕಾಗಿ ಪ್ರಯಾಣಿಕರು ನಮ್ಮ ಮೆಟ್ರೋ ಇಲ್ಲವೇ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ.

ಆದಾಯದಲ್ಲಿ ಕುಸಿತ

ಕೋವಿಡ್ ಪೂರ್ವದಲ್ಲಿ 6,150 ಬಸ್ ಗಳು ಸಂಚರಿಸುತ್ತಿದ್ದು, ಪ್ರತಿನಿತ್ಯ 33.10 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಸುಮಾರು 4.94 ಕೋಟಿ ರೂ. ಆದಾಯ ಗಳಿಸುತ್ತಿತ್ತು. 2023ರ ವರದಿಗಳ ಪ್ರಕಾರ 5,650 ಬಸ್ ಗಳು ಸಂಚರಿಸುತ್ತಿದ್ದು, 26.14ಲಕ್ಷ ಪ್ರಯಾಣಿಕರು ಬಿಎಂಟಿಸಿ ಆಶ್ರಯಿಸಿದ್ದರು. ಆದಾಯ 3.80 ಕೋಟಿ ರೂ.ಗಳಿಗೆ ಇಳಿದಿದೆ. ಹೆಚ್ಚುತ್ತಿರುವ ಬಸ್ ಗಳ ನಿರ್ವಹಣಾ ವೆಚ್ಚ, ನೌಕರರಿಗೆ ಸವಲತ್ತುಗಳು, ದುಬಾರಿಯಾದ ವೊಲ್ವೊ ಬಸ್‌ಗಳು ಆದಾಯ ಕೊರತೆಗೆ ಕಾರಣವಾಗಿವೆ.

Whats_app_banner