ವಾಟ್ಸಪ್‌ನಲ್ಲಿ ಮದುವೆ ಆಮಂತ್ರಣ ತೆರೆಯುವ ಮುನ್ನ ಜಾಗ್ರತೆ! ಹೊಸ ಬಗೆಯ ಆನ್‌ಲೈನ್ ವಂಚನೆ ಕುರಿತು ಎಚ್ಚರಿಸಿದ ಬೆಂಗಳೂರು ಪೊಲೀಸ್
Online Scam Alert: ಮದುವೆ ಆಮಂತ್ರಣ ಪತ್ರವನ್ನು ವಾಟ್ಸಪ್ ಮೂಲಕ ಕಳುಹಿಸುವ ಹೊಸ ಬಗೆಯ ಆನ್‌ಲೈನ್ ವಂಚನೆ ಕುರಿತು ಬೆಂಗಳೂರು ನಗರ ಪೊಲೀಸರು ಜನರನ್ನು ಎಚ್ಚರಿಸಿದ್ದಾರೆ. ಈ ಕುರಿತು ಮಾರತ್ತಹಳ್ಳಿಯ ಎಸಿಪಿ ಡಾ. ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಉಪಯುಕ್ತ ವಿಡಿಯೋ ಹಂಚಿಕೊಂಡಿದ್ದಾರೆ.
ಬೆಂಗಳೂರು: ಆನ್‌ಲೈನ್ ವಂಚಕರು ವಿವಿಧ ರೀತಿಯಲ್ಲಿ ಬಲಿಪಶುಗಳನ್ನು ಹುಡುಕುತ್ತ ಇರುತ್ತಾರೆ. ಸೋಷಿಯಲ್ ಮೀಡಿಯಾ, ಇಮೇಲ್, ವಾಟ್ಸಪ್‌ಗಳಲ್ಲಿ ಲಿಂಕ್‌ಗಳನ್ನು ಕಳುಹಿಸಿ ಜನರ ಮಾಹಿತಿ, ಹಣ ಕದಿಯುತ್ತಾರೆ. ವಂಚಕರು ಹೊಸ ಬಗೆಯ ವಂಚನೆಗಳನ್ನು ಹುಡುಕುತ್ತಾ ಇರುತ್ತಾರೆ. ಇದೇ ರೀತಿ ಸೋಷಿಯಲ್ ಮೀಡಿಯಾ ಅಥವಾ ವಾಟ್ಸಪ್‌ನಲ್ಲಿ ಬರುವ ವಿವಾಹ ಆಮಂತ್ರಣ ಪತ್ರಗಳನ್ನೂ ತೆರೆಯುವ ಮೊದಲು ಎಚ್ಚರವಿರಲಿ. ಈ ಕುರಿತು ಬೆಂಗಳೂರು ನಗರ ಪೊಲೀಸರು ಮಾಹಿತಿಯುಕ್ತ ಪೋಸ್ಟ್ ಹಂಚಿಕೊಂಡಿದ್ದಾರೆ.
ಮದುವೆ ಆಮಂತ್ರಣ- ಆನ್‌ಲೈನ್ ವಂಚನೆ ಹೇಗೆ?
"ಡಿಜಿಟಲ್ ಮದುವೆ ಆಹ್ವಾನವು ನಿಮ್ಮನ್ನು ಬಲೆಗೆ ಸಿಲುಕಿಸದಂತೆ ನೋಡಿಕೊಳ್ಳಿ! ವೈಯಕ್ತಿಕ ಮಾಹಿತಿಯನ್ನು ಕದಿಯಲು ವಂಚಕರು ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ. ಜಾಣರಾಗಿರಿ - ಅನುಮಾನಾಸ್ಪದ ಸಂದೇಶಗಳನ್ನು 1930 ಗೆ ವರದಿ ಮಾಡಿ" ಎಂದು ಬೆಂಗಳೂರು ನಗರ ಪೊಲೀಸರು ಪೋಸ್ಟ್ ಮಾಡಿದ್ದಾರೆ. ಯಾವ ರೀತಿ ವಂಚನೆ ಮಾಡಲಾಗುತ್ತದೆ ಎಂದು ಈ ವಿಡಿಯೋದಲ್ಲಿ ಎಚ್ಚರಿಸಲಾಗಿದೆ. "ಮದುವೆ ಋತುವಿನಲ್ಲಿ ಆನ್‌ಲೈನ್ ವಂಚಕರು ಮಾಲ್‌ವೇರ್ ಹರಡಲು ಹೊಸಬಗೆಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಗಳ ನೆಪದಲ್ಲಿ ಮಾಲ್‌ವೇರ್ ಹರಡುತ್ತಿದ್ದಾರೆ" ಎಂದು ಮಾರತಹಳ್ಳಿಯ ಎಸಿಪಿ ಡಾ. ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಈ ವಿಡಿಯೋದಲ್ಲಿ ಎಚ್ಚರಿಸಿದ್ದಾರೆ.
"ಸೈಬರ್ ವಂಚಕರು ಇತ್ತೀಚೆಗೆ ಮದುವೆ ಆಮಂತ್ರಣ ಪತ್ರಗಳನ್ನು ವಾಟ್ಸಪ್‌ನಲ್ಲಿ ಕಳುಹಿಸಿ ಮಾರಕ ಮಾಲ್‌ವೇರ್‌ಗಳನ್ನು ಮೊಬೈಲ್‌ನಲ್ಲಿ ಹರಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮವಾದ ವಾಟ್ಸಪ್‌ನಲ್ಲಿ ಮದುವೆ ಆಮಂತ್ರಣವನ್ನು ಕಳುಹಿಸಿ ಭಾವನಾತ್ಮಕವಾಗಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಮೊಬೈಲ್ ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಇತರೆ ದತ್ತಾಂಶಗಳು ಸೈಬರ್ ಕಳ್ಳರ ಪಾಲಾಗುತ್ತದೆ. ಈ ವಂಚನೆಯನ್ನು ತಡೆಯಲು ಬೆಂಗಳೂರು ಪೊಲೀಸರು ತುರ್ತು ಎಚ್ಚರಿಕೆಯನ್ನು ನಿಮ್ಮೆಲ್ಲರಿಗೂ ನೀಡುತ್ತಿದೆ" ಎಂದು ಬೆಂಗಳೂರು ನಗರ ಪೊಲೀಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಈ ವಂಚನೆ ಹೇಗೆ ಕೆಲಸ ಮಾಡುತ್ತದೆ?
ಸೋಷಿಯಲ್ ಮೀಡಿಯಾ ಮೂಲಕ ವಂಚಕರು ಮದುವೆ ಆಮಂತ್ರಣ ಪತ್ರವನ್ನು ಕಳುಹಿಸುತ್ತಾರೆ. ನಿಮಗೆ ಗೊತ್ತಿಲ್ಲದ ನಂಬರ್ ಆಗಿದ್ದರೂ ಮದುವೆ ಆಮಂತ್ರಣ ಕಾಣಿಸಿದಾಗ "ಯಾರೋ ಪರಿಚಿತರು ಇರಬಹುದು, ಅವರ ನಂಬರ್‌ಮಿಸ್ ಆಗಿರಬಹುದು. ಮದುವೆ ಆಮಂತ್ರಣ ಕಳುಹಿಸಿರಬಹುದು" ಎಂದು ನೀವು ಕ್ಲಿಕ್ ಮಾಡುವಿರಿ. ಕ್ಲಿಕ್ ಮಾಡಿದ ಬಳಿಕ ಮಾಲ್‌ವೇರ್ ನಿಮ್ಮ ಮೊಬೈಲ್‌ಗೆ ಸೇರಿಕೊಳ್ಳುತ್ತದೆ. ನಿಮ್ಮ ಡೇಟಾ, ವೈಯಕ್ತಿಕ ಮಾಹಿತಿ ಕದಿಯಬಹುದು. ನಿಮ್ಮ ಮೊಬೈಲ್ ಅನ್ನು ತನ್ನ ನಿಯಂತ್ರಣಕ್ಕೆ ಸೈಬರ್ ಕಳ್ಳರು ತೆಗೆದುಕೊಳ್ಳಬಹುದು.
ಮೊಬೈಲ್‌ನಲ್ಲಿ ಸುರಕ್ಷಿತವಾಗಿರಿ
ಈಗ ಆನ್‌ಲೈನ್ ವಂಚನೆ ನಾನಾ ಬಗೆಯಲ್ಲಿ ನಡೆಯುತ್ತದೆ. ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವ ಸ್ಥಿತಿ ಇದೆ. ಯಾರೋ ಕೊಟ್ಟ ಮಿಸ್ ಕಾಲ್‌ನಿಂದಲೂ ಹಣ ಕಳೆದುಕೊಂಡಿದ್ದೇವೆ ಎಂಬ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಹೀಗಾಗಿ, ಸ್ಮಾರ್ಟ್‌ಫೋನ್ ಬಳಕೆದಾರರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು.
- ನಿಮ್ಮ ಗೂಗಲ್ ಪೇ, ಫೋನ್ ಪೇ ಮುಂತಾದ ಯುಪಿಐಗಳನ್ನು ಹಲವು ಬ್ಯಾಂಕ್‌ಗಳಿಗೆ ಕನೆಕ್ಟ್ ಮಾಡಬೇಡಿ. ಕಡಿಮೆ ಹಣವಿರುವ (ಕಳೆದುಕೊಂಡರೂ ಪರವಾಗಿಲ್ಲ ಅಥವಾ ಕಳೆದುಕೊಂಡರೂ ಅಷ್ಟೇ ಹೋಗಲಿ ಎನ್ನವಷ್ಟು) ಬ್ಯಾಂಕ್ ಖಾತೆಗೆ ಮಾತ್ರ ಯುಪಿಐ ಖಾತೆಗಳನ್ನು ಲಿಂಕ್ ಮಾಡಿ. ಹೆಚ್ಚು ಹಣವಿದ್ದರೆ ಆನ್‌ಲೈನ್ ಬ್ಯಾಂಕ್ ಇರುವ ಅಥವಾ ಇಲ್ಲದೆ ಇರುವ ಪ್ರಮುಖ ಖಾತೆಯಲ್ಲಿ ಇಟ್ಟುಕೊಳ್ಳಿ. ಹಲವು ಖಾತೆಗಳಿಗೆ ಯುಪಿಐ ಲಿಂಕ್ ಮಾಡುವುದು ಬೇಡ.
- ಈ ರೀತಿಯ ಮದುವೆ ಆಮಂತ್ರಣಗಳನ್ನು ವಾಟ್ಸಪ್, ಫೇಸ್‌ಬುಕ್, ಇಮೇಲ್, ಎಸ್‌ಎಂಎಸ್ ಮೂಲಕ ಕಳುಹಿಸಬಹುದು. ಹೀಗಾಗಿ, ಇಂತಹ ಲಿಂಕ್‌ಗಳನ್ನು ತೆರೆಯಬೇಡಿ. ಅಲ್ಲಿ ಮದುವೆಯ ಆಮಂತ್ರಣದಂತೆ ಕಂಡರೂ ಕ್ಲಿಕ್ ಮಾಡಿದ ಬಳಿಕ ಮೋಸ ಹೋಗಬಹುದು. ಹೀಗಾಗಿ, ನಿಮಗೆ ಗೊತ್ತಿರುವ ಸಂಖ್ಯೆಯಿಂದ ಮದುವೆ ಆಮಂತ್ರಣ ಬಂದರೆ "ಅದು ಅಸಲಿ ಆಮಂತ್ರಣದಂತೆ ಇದ್ದರೆ" ಮಾತ್ರ ತೆರೆಯಿರಿ. ಲಿಂಕ್ ರೀತಿ ಇದ್ದರೆ ತೆರೆಯಬೇಡಿ.
- ಕೆಲವೊಮ್ಮೆ ನಿಮಗೆ ಗೊತ್ತಿರುವ ವ್ಯಕ್ತಿಗಳ ಮೊಬೈಲ್ ಹ್ಯಾಕ್ ಆಗಿ ಎಲ್ಲರಿಗೂ ಮದುವೆ ಕಾಗದದಂತಹ ಇಂತಹ ಪೋಸ್ಟ್‌ಗಳು ಎಲ್ಲರಿಗೂ ಬರಬಹುದು. ಇಂತಹ ಸಂದರ್ಭದಲ್ಲಿ ಎಪಿಕೆ ರೀತಿಯ ಫೈಲ್, ಲಿಂಕ್‌ಗಳು ಇದ್ದರೆ ತೆರೆಯಬೇಡಿ.
- ಮೊಬೈಲ್‌ನಲ್ಲಿ ಟು ವೇ ವೇರಿಫಿಕೇಷನ್, ಪಾಸ್‌ವರ್ಡ್, ಫಿಂಗರ್ ಪ್ರಿಂಟ್ ಸೆಕ್ಯುರಿಟಿ ಮುಂತಾದ ಫೀಚರ್‌ಗಳನ್ನು ಬಳಸಿ. ನಿಮ್ಮ ಯುಪಿಐ ಅಪ್ಲಿಕೇಷನ್‌ಗೆ ಹೆಚ್ಚುವರಿ ಸೇಫ್ಟಿ ಬಳಸಿ.
- ಆನ್‌ಲೈನ್‌ನಲ್ಲಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಕೆಲವು ಕೆಟ್ಟ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಡಿ. ಸದಾ ಜಾಗೃತ ಸ್ಥಿತಿಯಲ್ಲಿ ಸ್ಮಾರ್ಟ್ ಫೋನ್ ಬಳಸಿ.