Online Fraud: ಸಮೋಸಾ ಆರ್ಡರ್‌ ಮಾಡಿ ಮೋಸ ಹೋದ ಡಾಕ್ಟರ್‌, ಆನ್‌ಲೈನ್‌ ವಂಚಕನಿಂದ 1.40 ಲಕ್ಷ ರೂಪಾಯಿ ಕಳೆದುಕೊಂಡ ಕತೆಯಿದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Online Fraud: ಸಮೋಸಾ ಆರ್ಡರ್‌ ಮಾಡಿ ಮೋಸ ಹೋದ ಡಾಕ್ಟರ್‌, ಆನ್‌ಲೈನ್‌ ವಂಚಕನಿಂದ 1.40 ಲಕ್ಷ ರೂಪಾಯಿ ಕಳೆದುಕೊಂಡ ಕತೆಯಿದು

Online Fraud: ಸಮೋಸಾ ಆರ್ಡರ್‌ ಮಾಡಿ ಮೋಸ ಹೋದ ಡಾಕ್ಟರ್‌, ಆನ್‌ಲೈನ್‌ ವಂಚಕನಿಂದ 1.40 ಲಕ್ಷ ರೂಪಾಯಿ ಕಳೆದುಕೊಂಡ ಕತೆಯಿದು

Online fraud: ಆನ್‌ಲೈನ್‌ ವಂಚನೆಯಿಂದ ಮುಂಬೈ ವೈದ್ಯರೊಬ್ಬರು 1.40 ಲಕ್ಷ ಕಳೆದುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಸಮೋಸಾ ಆರ್ಡರ್‌ ಮಾಡಿದ ಸಂದರ್ಭದಲ್ಲಿ ನಡೆದ ಈ ಆನ್‌ಲೈನ್‌ ವಂಚನೆಯ ಕುರಿತು ವಿವರ ಇಲ್ಲಿದೆ ಓದಿ.

ಆನ್‌ಲೈನ್‌ ವಂಚನೆಯಿಂದ ಹಣ ಕಳೆದುಕೊಂಡ ಡಾಕ್ಟರ್‌
ಆನ್‌ಲೈನ್‌ ವಂಚನೆಯಿಂದ ಹಣ ಕಳೆದುಕೊಂಡ ಡಾಕ್ಟರ್‌

ಮುಂಬೈ: ಆನ್‌ಲೈನ್‌ ವಂಚನೆ ಯಾವಾಗ ಯಾವ ರೀತಿ ನಡೆಯುತ್ತದೆ ಎಂದು ಹೇಳಲಾಗದು. ಏಕೆಂದರೆ, ಆನ್‌ಲೈನ್‌ ವಂಚಕರು ಯಾವುದಾದರೂ ಒಂದು ಹಾದಿಯ ಮೂಲಕ ವಂಚನೆ ಮಾಡಲು ಕಾಯುತ್ತ ಇರುತ್ತಾರೆ. ಮುಂಬೈನಲ್ಲೊಬ್ಬರು ಡಾಕ್ಟರ್‌ ಸಮೋಸಾ ಆರ್ಡರ್‌ ಮಾಡಿ 1.40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸಮೋಸಾ ಆರ್ಡರ್‌ ಮಾಡಿ ಮೋಸ ಹೋಗಿರುವುದು ಹೇಗೆ ಎಂಬ ಸಂಶಯ ನಿಮ್ಮಲ್ಲಿರಬಹುದು. ಮುಂಬೈನ ಕೆಇಎಂ ಆಸ್ಪತ್ರೆಯ 27 ವರ್ಷದ ವೈದ್ಯರನ್ನು ಯಾಮಾರಿಸಿ ಆನ್‌ಲೈನ್‌ ವಂಚಕ 1.40 ಲಕ್ಷ ರೂಪಾಯಿ ಎಗರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಡಾಕ್ಟರ್‌ ತನ್ನ ಸ್ನೇಹಿತರ ಜತೆ ಟ್ರಿಪ್‌ ಹೋಗಲು ಯೋಜಿಸಿದ್ದರು. ದಾರಿಯಲ್ಲಿ ಹಸಿವಾದಗ ತಿನ್ನಲು ಇರಲಿ ಎಂದು 25 ಪ್ಲೇಟ್‌ ಸಮೋಸ ಆರ್ಡರ್‌ ಮಾಡಿದ್ದಾರೆ. ಈ ಸಮಯದಲ್ಲಿ ಮೋಸವಾಗಿದೆ. ಈ ಘಟನೆಯು ಭಾನುವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯ ನಡುವೆ ನಡೆದಿದೆ.

"ವೈದ್ಯ ಮತ್ತು ಅವರ ಸಹೋದ್ಯೋಗಿಗಳು ಕಾರ್‌ಜಾತ್‌ಗೆ ಪಿಕ್‌ನಿಕ್‌ ಹೋಗಲು ನಿರ್ಧರಿಸಿದ್ದಾರೆ. ಪ್ರಯಾಣದ ಸಮಯಕ್ಕೆ ಇರಲಿ ಎಂದು 25 ಸಮೋಸಾ ಆರ್ಡರ್‌ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಆನ್‌ಲೈನ್‌ ಫುಡ್‌ ಈಟರಿಯೊಂದರ ನಂಬರ್‌ಗೆ ಕರೆ ಮಾಡಿ ಆರ್ಡರ್‌ ಮಾಡಿದ್ದಾನೆ. ಆರ್ಡರ್‌ ಮಾಡಿದ ಸಮಯದಲ್ಲಿ 1500 ರೂಪಾಯಿ ಮುಂಗಡ ಪಾವತಿಸುವಂತೆ ಆ ಕಡೆಯಿಂದ ತಿಳಿಸಲಾಗಿದೆ" ಎಂದು ಪೊಲೀಸರು ವಿವರಿಸಿದ್ದಾರೆ.

ಈ ರೀತಿ ಮಾಡಿದಾಗ ವೈದ್ಯರು 1500 ರೂಪಾಯಿ ಕಳೆದುಕೊಳ್ಳಬೇಕಿತ್ತು. 1.40 ಲಕ್ಷ ರೂಪಾಯಿ ಹೇಗೆ ಕಳೆದುಕೊಂಡರು ಎಂಬ ಸಂದೇಹ ನಿಮ್ಮಲ್ಲಿರಬಹುದು.

"ಈ ವೈದ್ಯರಿಗೆ ವಾಟ್ಸಪ್‌ನಲ್ಲಿ ಸಂದೇಶ ಬಂದಿದೆ. ಅದರಲ್ಲಿ ಆರ್ಡರ್‌ ಖಚಿತಗೊಳಿಸುವ ಸಂದೇಶ ಇತ್ತು. ಇದೇ ಸಮಯದಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆಯನ್ನೂ ನೀಡಲಾಗಿದ್ದು, ಆನ್‌ಲೈನ್‌ ಮೂಲಕ ಹಣ ಪಾವತಿಸುವಂತೆ ಸೂಚಿಸಲಾಗಿದೆ. ವೈದ್ಯರು 1500 ರೂಪಾಯಿ ಪಾವತಿಸಿದ್ದಾರೆ. ಆ ಕಡೆಯಲ್ಲಿದ್ದ ವ್ಯಕ್ತಿಯು ಹಣ ಪಾವತಿಗಾಗಿ ಟ್ರಾನ್ಸಾಕ್ಷನ್‌ ಐಡಿ ರಚಿಸುವಂತೆ ತಿಳಿಸಿದ್ದಾರೆ. ಅವರು ನೀಡಿದ ಲಿಂಕ್‌ ಕ್ಲಿಕ್‌ ಮಾಡಿ ಹಣ ಪಾವತಿಸಿದ ಐಡಿ ನಮೂದಿಸುತ್ತಿದ್ದಂತೆ ಇವರ ಬ್ಯಾಂಕ್‌ ಖಾತೆಯಿಂದ ಹಣ ಮಾಯವಾಗಲು ಆರಂಭವಾಗಿದೆ. ಮೊದಲ ಹಂತದಲ್ಲಿ 28,807 ರೂಪಾಯಿ ಕಡಿತವಾಗಿದೆ. ನಂತರ ಹಂತಹಂತವಾಗಿ ಒಟ್ಟು 1.40 ಲಕ್ಷ ರೂಪಾಯಿ ಕಡಿತವಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ವಿವಿಧ ರೀತಿಯಲ್ಲಿ ವಂಚನೆ ಮಾಡಲು ವಂಚಕರು ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ವಾಟ್ಸಪ್‌, ಎಸ್‌ಎಂಎಸ್‌ ಇತ್ಯಾದಿಗಳಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಾರದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.