ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನವನ್ನು ಮತ್ತೆ ಮೂರು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.

ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ
ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ತೂಗುದೀಪ ಮತ್ತು ಆತನ ಆಪ್ತೆ ಪವಿತ್ರಾಗೌಡ ಸೇರಿ ಎಲ್ಲಾ 17 ಆರೋಪಿಗಳ ನ್ಯಾಯಂಗ ಬಂಧನ ಅವಧಿಯನ್ನು ಸೆಪ್ಟಂಬರ್‌ 12 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದ್ದು, ಮತ್ತೆ ಆರೋಪಿಗಳು ಜೈಲು ವಾಸ ಅನುಭವಿಸುಂತಾಗಿದೆ.

ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದೆ. ಈ ಹಿಂದೆ ನೀಡಿದ್ದ ನ್ಯಾಯಾಂಗ ಬಂಧನದ ಅವಧಿ ಸೆಪ್ಟಂಬರ್‌ 9, ಇಂದಿಗೆ ಅಂತ್ಯಗೊಂಡಿತ್ತು. ದರ್ಶನ್‌ ಸೇರಿ ಎಲ್ಲ ಆರೋಪಿಗಳು 3 ದಿನ ಜೈಲಿನಲ್ಲೇ ಕಳೆಯಬೇಕು. ಸೆ.12ರಂದು ಮತ್ತೆ ಎಲ್ಲಾ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.

ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ, ತುಮಕೂರು ಮತ್ತು ಬಳ್ಳಾರಿ ಮತ್ತಿತರ ಜಿಲ್ಲಾ ಜೈಲುಗಳಲ್ಲಿದ್ದು, ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ಸಂದರ್ಭದಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್‌ ಹಾರ್ಡ್‌ ಡಿಸ್ಕ್‌, ಪೆನ್‌ ಡ್ರೈವ್‌ ಸೇರಿದಂತೆ 60 ಸಾಕ್ಷ್ಯಗಳನ್ನು ಹಾಜರುಪಡಿಸಿದ್ದರು.

ದರ್ಶನ್​ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ದತೆ

ಈ ಸಾಕ್ಷ್ಯಗಳನ್ನು ನ್ಯಾಯಾಧೀಶರು ಪರಿಶೀಲಿಸಲಿದ್ದು, ಆರೋಪಿಗಳ ಪರ ವಕೀಲರು ಚಾರ್ಜ್‌ ಶೀಟ್‌ ಪ್ರತಿಗಳನ್ನು ನೀಡುವಂತೆ ಕೋರಿದಾಗ ತ್ವರಿತವಾಗಿ ಒದಗಿಸುವ ಭರವಸೆ ನೀಡಿದರು. ಈ ಮಧ್ಯೆ ದರ್ಶನ್‌ ಜಾಮೀನು ಅರ್ಜಿ ಸಲ್ಲಿಸಲು ಸಿದ್ದತೆ ನಡೆಸಿದ್ದು, ಯಾವಾಗ ಅರ್ಜಿ ಸಲ್ಲಿಸುತ್ತಾರೆ ಎಂದು ತಿಳಿದು ಬಂದಿಲ್ಲ.

ತನ್ನ ಆಪ್ತೆ ಗೆಳತಿ ಪವಿತ್ರಾ ಗೌಡ ಅವರಿಗೆ 33 ವರ್ಷದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಸಿಟ್ಟಿಗೆದ್ದ ದರ್ಶನ್‌ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ರಾಜರಾಜೇಶ್ವರಿ ನಗರದ ಶೆಡ್​ವೊಂದರಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದರಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದರು.

ನಂತರ ಇವರ ಮೃತ ದೇಹವನ್ನು ಸುಮನಹಳ್ಳಿಯ ಮೋರಿಗೆ ಎಸೆಯಲಾಗಿತ್ತು. ಈ ಪ್ರಕರಣ ಜೂನ್‌ 9 ರಂದು ಪತ್ತೆಯಾಗಿತ್ತು. ಚಿತ್ರದುರ್ಗದ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದ. ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್​​ಗೆ ಕರೆ ತಂದಿದ್ದ.

ನಂತರ ವಿಸ್ತೃತ ತನಿಖೆ ನಡೆಸುತ್ತಾ ಹೋದಾಗ ದರ್ಶನ್ ಆಪ್ತ ಸ್ನೇಹಿತೆ, ಈ ಪ್ರಕರಣದ ಆರೋಪಿ ನಂ-2 ಆಗಿರುವ ಪವಿತ್ರಾ ಗೌಡ ಮೂಲ ಕಾರಣ ಎನ್ನುವುದು ತಿಳಿದು ಬಂದಿತ್ತು. ನಂತರ ರೇಣುಕಾಸ್ವಾಮಿಯ ಹಲ್ಲೆಯಲ್ಲಿ ಭಾಗಿಯಾಗಿದ್ದ ಎಲ್ಲಾ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಈ ಮಧ್ಯೆ ಮತ್ತೊಂದು ನ್ಯಾಯಾಲಯ ಈ ಪ್ರಕರಣದಲ್ಲಿ ದರ್ಸನ್‌ ಕುರಿತಾದ ಸೂಕ್ಷ್ಮ ವಿಚಾರಗಳನ್ನು ಪ್ರಕಟಿಸದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಸಿಟಿ ಸಿವಿಲ್‌ ಕೋರ್ಟ್‌ ತಾತ್ಕಲಿಕ ಆದೇಶ ಹೊರಡಿಸಿದೆ. ನಿರ್ಬಂಧ ಹೇರುವಂತೆ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಕೋರ್ಟ್‌ ಮೊರೆ ಹೋಗಿದ್ದರು. ದರ್ಶನ್‌ ಅವರಿಗೆ ಮನೆಯ ಊಟ ನೀಡುವ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನೂ ಮುಂದೂಡಲಾಗಿದೆ.

3991 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ

ಕಳೆದ ಭಾನುವಾರಕ್ಕೆ ದರ್ಶನ್‌ ಮತ್ತು ಅವರ ಸಹಚರರು ಜೈಲು ಪಾಲಾಗಿ 3 ತಿಂಗಳು ಕಳೆದಿವೆ. ಈ ಪ್ರಕರಣದ ಆರೋಪಿಗಳಾದ ಪವನ್‌, ರಾಘವೇಂದ್ರ ಮತ್ತು ನಂದೀಶ್‌ ಮೈಸೂರು ಜೈಲಿನಲ್ಲಿದ್ದರೆ, ಜಗದೀಶ್‌ ಮತ್ತು ಲಕ್ಷ್ಮಣನ್‌ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಧನರಾಜ್‌ ಧಾರವಾಡ ಜೈಲಿನಲ್ಲಿ, ವಿನಯ್‌ ವಿಜಯಪುರ ಜೈಲಿನಲ್ಲಿ ಪ್ರದೂಷ್‌ ಬೆಳಗಾವಿ ಜೈಲು ಮತ್ತು ನಾಗರಾಜ್‌ ವಿಜಯಪುರ ಜೈಲಿನಲ್ಲಿ ಇದ್ದಾರೆ.

ಪವಿತ್ರಾ ಗೌಡ, ಅನುಕುಮಾರ್‌ ಮತ್ತು ದೀಪಕ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರೆದಿದ್ದಾರೆ. ರವಿ, ಕಾರ್ತೀಕ್‌, ನಿಖಿಲ್‌ ಮತ್ತು ಕೇಶವಮೂರ್ತಿ ಅವರನ್ನು ತುಮಕೂರು ಜೈಲಿನಲ್ಲಿ ಇರಿಸಲಾಗಿದೆ. ಸೆಪ್ಟಂಬರ್‌ 4 ರಂದು ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಸಿದ್ದಾರೆ. ಚಾರ್ಜ್‌ ಶೀಟ್‌ ನಲ್ಲಿರುವ ಅಂಶಗಳು ರಣರೋಚಕವಾಗಿವೆ.

Whats_app_banner