ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಪಾಲಿಸಲು ಆಗ್ರಹಿಸಿ ಬೆಂಗಳೂರಲ್ಲಿ ಅಭಿಯಾನ, ಶಾಲಾ ಕಲಿಕೆಗೆ ಹಿಂದಿ ಪರೀಕ್ಷೆ ಬೇಡ ಎಂಬ ಒತ್ತಾಯ
ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಪಾಲಿಸಲು ಆಗ್ರಹಿಸಿ ಬೆಂಗಳೂರಲ್ಲಿ ಅಭಿಯಾನ ಶುರುವಾಗಿದೆ. ಶಾಲಾ ಕಲಿಕೆಗೆ ಹಿಂದಿ ಪರೀಕ್ಷೆ ಬೇಡ ಎಂಬ ಒತ್ತಾಯವೂ ಇದ್ದು, ಅನುಷ್ಠಾನದ ತನಕ ಅಭಿಯಾನ ಮುಂದುವರಿಯಲಿದೆ ಎಂದು ನಮ್ಮ ನಾಡು, ನಮ್ಮ ಆಳ್ವಿಕೆ ವೇದಿಕೆಯವರು ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಆಚರಣೆ ಮುಗಿದರೂ, ನವೆಂಬರ್ ಪೂರ್ತಿ ಕನ್ನಡದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಈ ನಡುವೆ, ಕರ್ನಾಟಕದಲ್ಲಿ ದ್ವಿಭಾಷಾ ಸೂತ್ರ ಅಳವಡಿಸಬೇಕು ಎಂಬ ಆಗ್ರಹಕ್ಕೆ ಬಲಬಂದಿದೆ. ಶಾಲೆಗಳಲ್ಲಿ ಹಿಂದಿ ಭಾಷಾ ಪರೀಕ್ಷೆ ನಡೆಸಬಾರದು ಎಂದೂ ಒತ್ತಡ ಹೇರುವುದಕ್ಕಾಗಿ ಬೆಂಗಳೂರಿನಲ್ಲಿ ಬೈಕ್ ರಾಲಿಯೂ ನಡೆಯಿತು. ಕರ್ನಾಟಕ ರಾಜ್ಯೋತ್ಸವದ ದಿನ “ನಮ್ಮ ನಾಡು, ನಮ್ಮ ಆಳ್ವಿಕೆ” ವೇದಿಕೆಯವರು ಬೆಂಗಳೂರಿನಲ್ಲಿ ಈ ಅಭಿಯಾನ ನಡೆಸಿದರು.
ಕರ್ನಾಟಕದ ಶಾಲೆಗಳಲ್ಲಿ ಹಿಂದಿ ಪರೀಕ್ಷೆ ರದ್ದುಗೊಳಿಸಿ
ಕರ್ನಾಟಕದ ಶಾಲೆಗಳಲ್ಲಿ ಹಿಂದಿ ಪರೀಕ್ಷೆಯನ್ನು ಈ ವರ್ಷದಿಂದಲೇ ರದ್ದುಗೊಳಿಸಬೇಕು ಎಂಬ ಅಭಿಯಾನ ಶುಕ್ರವಾರ (ನವೆಂಬರ್ 1) ಶುರುವಾಯಿತು. ‘ನಮ್ಮ ನಾಡು ನಮ್ಮ ಆಳ್ವಿಕೆ’ ವೇದಿಕೆ ಇದನ್ನು ಆಯೋಜಿಸಿದ್ದು, ಬನಪ್ಪ ಪಾರ್ಕ್‌ನಿಂದ ಮಾರತ್ತಳ್ಳಿವರೆಗೆ ಬೈಕ್ ರ್ಯಾಲಿ ನಡೆಸಿತು. ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಕೈಬಿಡಬೇಕು ಎಂದು ವೇದಿಕೆ ಸದಸ್ಯರು ಒತ್ತಾಯಿಸಿದ್ದಾಗಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬೈಕ್ ರ್ಯಾಲಿ ಉದ್ಘಾಟಿಸಿದ ಕನ್ನಡ ಸಿನಿಮಾ ಸಾಹಿತಿ ಕವಿರಾಜ್, “ಕಳೆದ ಶೈಕ್ಷಣಿಕ ವರ್ಷದಲ್ಲಿ, 90,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಯ ಹಿಂದಿಯಲ್ಲಿ ಮಾತ್ರ ಅನುತ್ತೀರ್ಣರಾಗಿದ್ದಾರೆ. ಇದು ನಮ್ಮ ಪರಿಸರದ ಭಾಷೆಯಲ್ಲ, ತ್ರಿಭಾಷಾ ಸೂತ್ರದ ನೆಪದಲ್ಲಿ ಕರ್ನಾಟಕದ ಮೇಲೆ ಹಿಂದಿ ಭಾಷೆಯನ್ನು ಹೇರಲಾಗಿದೆ ಎಂದು ವಿವರಿಸಿದರು.
ತಮಿಳುನಾಡಲ್ಲಿ ಇಲ್ಲದ ತ್ರಿಭಾಷಾ ಸೂತ್ರ ಕರ್ನಾಟಕಕ್ಕೆ ಯಾಕೆ
ಯಾವುದೇ ಹಿಂದಿ ಭಾಷಿಕ ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಅನುಸರಿಸುತ್ತಿಲ್ಲ. ಹೆಚ್ಚೇಕೆ ನೆರೆಯ ತಮಿಳುನಾಡು ಕೂಡ ದ್ವಿಭಾಷಾ ಸೂತ್ರ ಅನುಸರಿಸುತ್ತಿದೆ. ಕರ್ನಾಟಕದವರು ಮಾತ್ರ ಮೂರು ಭಾಷೆ ಕಲಿಯಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇದು ಮಕ್ಕಳ ಶೈಕ್ಷಣಿಕ ಸಾಧನೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಭಾಷಾ ಸೂತ್ರದ ಪ್ರಯೋಜನ ಪಡೆಯುವವರು ಹಿಂದಿ ಭಾಷಿಕರು. ತಮಿಳುನಾಡಿನ ವಿದ್ಯಾರ್ಥಿಗಳಿಗೆ ದ್ವಿಭಾಷಾ ಸೂತ್ರದ ಕಾರಣ ಪ್ರಯೋಜನವಾಗಿದೆ. ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾಲಾನುಕ್ರಮದಲ್ಲಿ ಆಡಳಿತ ನಡೆಸಿದ ಕರ್ನಾಟಕ ಸರ್ಕಾರವೇ ನೇರ ಹೊಣೆ. ಆರಂಭದಲ್ಲಿ ಅಂದರೆ 1960ರ ದಶಕದಲ್ಲಿ ಐಚ್ಛಿಕ ಭಾಷೆಯಾಗಿ ಹಿಂದಿಯನ್ನು ಪರಿಚಯಿಸಲಾಗಿತ್ತು. ನಂತರ ಅದು ಹಂತ ಹಂತವಾಗಿ ಬದಲಾಗಿ ಈಗ ತೃತೀಯ ಭಾಷೆಯಾಗಿ ಬಳಕೆಯಲ್ಲಿದೆ. ಹಿಂದಿ ಭಾಷೆಯ ಈ ಕಡ್ಡಾಯ ಪರೀಕ್ಷೆಯಿಂದಾಗಿ ವಿದ್ಯಾರ್ಥಿಗಳ ಜೀವನ ಹಾಳಾಗಿದೆ ಎಂದು ಅಭಿಯಾನದ ಸಂಘಟಕ ಎಸ್ ಶ್ಯಾಮ್ ಪ್ರಸಾದ್ ಹೇಳಿದ್ದಾಗಿ ವರದಿ ವಿವರಿಸಿದೆ.
ರಾಲಿ ಸಂಚಾಲಕ ಶಿವಾನಂದ ಗುಂಡನವರ್ ಮಾತನಾಡಿ, ಶಾಲಾ ಶಿಕ್ಷಣದಲ್ಲಿ ಕನ್ನಡ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ಎಂಬ ದ್ವಿಭಾಷಾ ಸೂತ್ರವನ್ನು ಹೊಂದುವುದು ನಮ್ಮ ಅಂತಿಮ ಗುರಿಯಾಗಿದೆ. ಕರ್ನಾಟಕ ಪಠ್ಯಕ್ರಮದಲ್ಲಿ ತೃತೀಯ ಭಾಷೆಯ ಹಿಂದಿ ಪರೀಕ್ಷೆಗಳನ್ನು ತೊಡೆದುಹಾಕುವುದು ನಮ್ಮ ತಕ್ಷಣದ ಗುರಿಯಾಗಿದೆ. ರಾಜ್ಯ ಸರ್ಕಾರವು ದ್ವಿಭಾಷಾ ಸೂತ್ರವನ್ನು ಅಂಗೀಕರಿಸುವವರೆಗೆ ಅಭಿಯಾನ ಮುಂದುವರಿಯುತ್ತದೆ ಎಂದು ತಿಳಿಸಿದ್ದಾಗಿ ವರದಿ ಹೇಳಿದೆ.