Bengaluru Crime: ಬೆಂಗಳೂರು ಸುಬ್ರಹ್ಮಣ್ಯಪುರ ಬಾರ್ ಗಲಾಟೆ; ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಂದ 5 ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಬೆಂಗಳೂರು ಸುಬ್ರಹ್ಮಣ್ಯಪುರ ಬಾರ್ ಗಲಾಟೆ; ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಂದ 5 ಆರೋಪಿಗಳ ಬಂಧನ

Bengaluru Crime: ಬೆಂಗಳೂರು ಸುಬ್ರಹ್ಮಣ್ಯಪುರ ಬಾರ್ ಗಲಾಟೆ; ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಂದ 5 ಆರೋಪಿಗಳ ಬಂಧನ

Bengaluru Crime News: ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ದರ್ಶನ್ ಕೊಲೆ ಪ್ರಕರಣದ 5 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ಹತ್ಯೆ ನಡೆದಿದ್ದು, ಆರೋಪಿಗಳು ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದರು. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಸುಬ್ರಹ್ಮಣ್ಯಪುರದ ಬಾರ್ ಗಲಾಟೆಯ ಮುಂದುವರಿದ ಭಾಗವಾಗಿ ಸ್ನೇಹಿತನನ್ನು ಹತ್ಯೆ ಮಾಡಿದ ಪ್ರಕರಣದ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಸುಬ್ರಹ್ಮಣ್ಯಪುರದ ಬಾರ್ ಗಲಾಟೆಯ ಮುಂದುವರಿದ ಭಾಗವಾಗಿ ಸ್ನೇಹಿತನನ್ನು ಹತ್ಯೆ ಮಾಡಿದ ಪ್ರಕರಣದ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ) (Pixels)

ಬೆಂಗಳೂರು: ಸುಬ್ರಹ್ಮಣ್ಯಪುರ ಬಾರ್ ಗಲಾಟೆ ಸಂಬಂಧ ಮನೆ ಮುಂದೆಯೇ ಸ್ನೇಹಿತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ದರ್ಶನ್ ಕೊಲೆ ಪ್ರಕರಣ ಇದು. ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ವೆಂಕಟೇಶ್,ಯಶವಂತ್ ಪ್ರಶಾಂತ್ ಮತ್ತು ದರ್ಶನ್ ಅಲಿಯಾಸ್ ಗುಂಡ ಬಂಧಿತ ಆರೋಪಿಗಳು.

ಈ ಐವರು ಸೇರಿಕೊಂಡು ಜ. 24ರಂದು ತಡರಾತ್ರಿ ದರ್ಶನ್ ಅವರನ್ನು ಅವರ ಮನೆಯ ಎದುರೇ ಕೊಲೆ ಮಾಡಿ ಪರಾರಿಯಾಗಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ದರ್ಶನ್ ಹಾಗೂ ಆರೋಪಿಗಳು, ಹಲವು ವರ್ಷಗಳ ಸ್ನೇಹಿತರು ಎನ್ನುವುದು ತಿಳಿದು ಬಂದಿದೆ. ಇವರು ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಆರೋಪಿ ಯಶವಂತ್, ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಚಂದ್ರಶೇಖರ್ ಹಾಗೂ ವೆಂಕಟೇಶ್ ಆಟೊ ಚಾಲಕರಾಗಿದ್ದರು. ಪ್ರಶಾಂತ್ ಹಾಗೂ ಗುಂಡ, ಫ್ಲಂಬರ್ ಕೆಲಸಗಾರರು ಎಂದು ತಿಳಿದು ಬಂದಿದೆ.

ಮನೆಯ ಖರ್ಚಿಗಾಗಿ ತಾಯಿಗೆ ನೀಡಲೆಂದು ದರ್ಶನ್ ಗೆ ಅವರ ದೊಡ್ಡಮ್ಮ 3 ಸಾವಿರ ರೂಪಾಯಿ ನೀಡಿದ್ದರು. ಹಣ ಪಡೆದಿದ್ದ ದರ್ಶನ್, ಸ್ನೇಹಿತರಾದ ರಮೇಶ್ ಹಾಗೂ ನಿತಿನ್ ಜೊತೆ ಬಾರ್‌ಗೆ ಹೋಗಿದ್ದರು. ಅದೇ ಬಾರ್‌ಗೆ ಆರೋಪಿ ಪ್ರೀತಂ ಮತ್ತು ಇತರರು ಬಂದಿದ್ದರು. ನಿತಿನ್ ಹಾಗೂ ಪ್ರೀತಂ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಆರಂಭವಾಗಿತ್ತು. ಇಬ್ಬರ ನಡುವೆ ಮಾರಾಮಾರಿಯೂ ನಡೆದಿತ್ತು. ಬಾರ್ ಸಿಬ್ಬಂದಿಯೇ ಜಗಳ ಬಿಡಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದ್ದರು.

ಸ್ನೇಹಿತನ ಮನೆ ಬಳಿ ಕೊಲೆ: ಬಾರ್‌ನಿಂದ ಹೊರಬಂದಿದ್ದ ನಿತಿನ್ ಹಾಗೂ ದರ್ಶನ್, ಸ್ನೇಹಿತ ರಮೇಶ್ ಮನೆ ಸೇರಿದ್ದರು. ಅದೇ ಸ್ಥಳಕ್ಕೆ ಹೋಗಿದ್ದ ಪ್ರೀತಂ ಹಾಗೂ ಇತರರು, ಮತ್ತೆ ಜಗಳ ತೆಗೆದಿದ್ದರು. ದರ್ಶನ್ ಜಗಳ ಬಿಡಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನ್ ಮೇಲೆಯೇ ಸಿಟ್ಟಾಗಿದ್ದ ಆರೋಪಿಗಳು, ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರು. ತೀವ್ರ ಗಾಯಗೊಂಡು ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner