ಬೆಂಗಳೂರಿನಲ್ಲಿ ಮನುಷ್ಯರ ಸಂಖ್ಯೆಗಿಂತ ನಾಯಿಗಳ ಸಂಖ್ಯೆ ಜಾಸ್ತಿ ಇದೆಯಾ ಎನ್ನುವ ಅನುಮಾನ- ಲೇಖಕ ರಂಗಸ್ವಾಮಿ ಮೂಕನಹಳ್ಳಿ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಮನುಷ್ಯರ ಸಂಖ್ಯೆಗಿಂತ ನಾಯಿಗಳ ಸಂಖ್ಯೆ ಜಾಸ್ತಿ ಇದೆಯಾ ಎನ್ನುವ ಅನುಮಾನ- ಲೇಖಕ ರಂಗಸ್ವಾಮಿ ಮೂಕನಹಳ್ಳಿ ಬರಹ

ಬೆಂಗಳೂರಿನಲ್ಲಿ ಮನುಷ್ಯರ ಸಂಖ್ಯೆಗಿಂತ ನಾಯಿಗಳ ಸಂಖ್ಯೆ ಜಾಸ್ತಿ ಇದೆಯಾ ಎನ್ನುವ ಅನುಮಾನ- ಲೇಖಕ ರಂಗಸ್ವಾಮಿ ಮೂಕನಹಳ್ಳಿ ಬರಹ

ಬೆಂಗಳೂರಿನಲ್ಲಿ ಮನುಷ್ಯರ ಸಂಖ್ಯೆಗಿಂತ ನಾಯಿಗಳ ಸಂಖ್ಯೆ ಜಾಸ್ತಿ ಇದೆಯಾ ಎನ್ನುವ ಅನುಮಾನ ನನ್ನದು. ಬೀದಿ ನಾಯಿಗಳದು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತ ಬೀದಿ ನಾಯಿ ಸಮಸ್ಯೆ ಕುರಿತ ಚಿಂತನೆಯೊಂದನ್ನು ಹಂಚಿಕೊಂಡಿದ್ದಾರೆ ಲೇಖಕ ರಂಗಸ್ವಾಮಿ ಮೂಕನಹಳ್ಳಿ.

ಬೆಂಗಳೂರಲ್ಲಿ ಬೀದಿ ನಾಯಿ ಕಾಟ (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಬೀದಿ ನಾಯಿ ಕಾಟ (ಸಾಂಕೇತಿಕ ಚಿತ್ರ) (Canva)

ಬೀದಿ ನಾಯಿ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇದು ಬೆಂಗಳೂರಷ್ಟೇ ಅಲ್ಲ, ಕರ್ನಾಟಕದ ವಿವಿಧ ನಗರಗಳಲ್ಲೂ ಇದೆ. ರಾಜ್ಯ ರಾಜಧಾನಿ ಎಂಬ ಕಾರಣಕ್ಕೆ ಬೆಂಗಳೂರಿನ ಘಟನೆಗಳು ಬೇಗ ಗಮನಸೆಳೆಯುತ್ತವೆ. ನಿತ್ಯವೂ ಒಂದಿಲ್ಲೊಂದು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಇದೇ ವಿಚಾರದ ಕುರಿತಾಗಿರುತ್ತವೆ.

ಲೇಖಕ ರಂಗಸ್ವಾಮಿ ಮೂಕನಹಳ್ಳಿಯವರು ಬೀದಿ ನಾಯಿ ವಿಷಯದ ಕುರಿತಾದ ಚಿಂತನೆಯೊಂದನ್ನು ಫೇಸ್‌ಬುಕ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಸಮಯ ಬದಲಾಯ್ತು ಬಟ್ ಸಮಸ್ಯೆ ಬದಲಾಗಿಲ್ಲ, ಹೆಚ್ಚಾಗಿದೆ .

ನಮ್ಮ ಸಮಾಜದಲ್ಲಿ ಎಲ್ಲದರಲ್ಲೂ , ಎಲ್ಲರಲ್ಲೂ ದೈವವನ್ನ ಕಾಣುತ್ತಿದ್ದೆವು. ನಾಯಿಗೂ ನಾರಾಯಣ ಎಂದ ಸಂಸ್ಕಾರ ನಮ್ಮದು. ನಮ್ಮ ದೇವಾನುದೇವತೆಗಳನ್ನ ನೋಡಿ ಎಲ್ಲರ ಬಳಿಯೂ ವಾಹನವಾಗಿ ಒಂದು ಪ್ರಾಣಿಗಳಿವೆ. ದತ್ತಾತ್ರೇಯ ಸ್ವಾಮಿಯ ಸುತ್ತ ನಾಲ್ಕು ನಾಯಿಗಳಿರುವ ಚಿತ್ರವನ್ನ ನೋಡಿ ಬೆಳೆದವರು ನಾವೆಲ್ಲಾ ಅಲ್ಲವೇ ?

ಕಾಲ ಬದಲಾಗಲಿಲ್ಲ , ಜನ ಬದಲಾದರು , ಅವರ ಜೀವನ ಶೈಲಿ ಬದಲಾಯ್ತು. ತಮ್ಮ ಕೆಟ್ಟ ಜೀವನ ಶೈಲಿಯನ್ನ ತಮ್ಮ ಸಾಕು ಪ್ರಾಣಿಗಳಿಗೂ ವರ್ಗಾಯಿಸಿದರು. ಹೀಗೆ ತಾವು ಬದಲಾಗಿ , ತಮ್ಮ ತಪ್ಪನ್ನ ಕಾಲದ ಮೇಲೆ ಹಾಕಿದರು. ಯಾರನ್ನೇ ನೋಡಿ ‘ಕಾಲ ಬದಲಾಯ್ತು ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಇತ್ಯಾದಿಗಳನ್ನ ಹೇಳುತ್ತಾರೆ. ಕಾಲಕ್ಕೆ ತನ್ನ ಇರುವಿಕೆಯ ಅರಿವು ಕೂಡ ಇಲ್ಲ ! ಅದಿನ್ನೇನು ಮಾಡಿತು ಪಾಪ !!

ಬೀದಿ ನಾಯಿಗಳ ಮೇಲೆ ಕೆಲವರಿಗೆ ವಿಶೇಷ ಪ್ರೀತಿ . ತಮ್ಮ ಪ್ರೀತಿಯನ್ನ ಅವರು ತೋರುವುದು ಹೇಗೆ ? ಐದು ರುಪಾಯಿಗೆ ಸಿಗುವ ಬಿಸ್ಕೆಟ್ ಪ್ಯಾಕೆಟ್ ತೆರೆದು ಬಿಸ್ಕೆಟ್ ಹಾಕಿ , ಅದರ ಕವರ್ ಬೀದಿಯಲ್ಲಿ ಬಿಸಾಡಿ ಹೋದರೆ ಅಲ್ಲಿಗೆ ಅವರ ನಾಯಿ ಪ್ರೇಮ ಮುಕ್ತಾಯ . ವಾರದಲ್ಲಿ ಒಂದೆರೆಡು ದಿನ ಇದನ್ನ ಮಾಡುತ್ತಾರೆ. ಮಾಡಿದ ಪಾಪಗಳ ಗಂಟು ಸ್ವಲ್ಪವಾದರೂ ಕರಗೀತು ಎನ್ನುವ ದೂರಾಲೋಚನೆ ಇದ್ದೀತೆ ? ಅದೇನೇ ಇರಲಿ , ಇಂತಹವರು ನಾಯಿಯ ಬದುಕನ್ನ ಮೂರಾಬಟ್ಟೆ ಮಾಡಿಬಿಟ್ಟರು. ಇವರು ನಾಯಿಗೆ ಉಪಕಾರ ಮಾಡುತ್ತಿಲ್ಲ , ಅಪಕಾರ ಮಾಡುತ್ತಿದ್ದಾರೆ . ದಶಕಗಳ ಹಿಂದೆ ನಾಯಿ ಹಾಕಿದ ಅನ್ನ , ಮುದ್ದೆ , ಚಪಾತಿ ತಿನ್ನುತ್ತಿತ್ತು . ಇವತ್ತು ಅದರ ದೇಹ ಸಕ್ಕರೆ , ಗ್ಲುಕೋಸ್‌ಗೆ ಅಡಿಕ್ಟ್ ಆಗಿ ಬಿಟ್ಟಿದೆ. ಅದು ಅನ್ನ ಮೂಸುವುದು ಬಿಟ್ಟಿದೆ. ಇನ್ನು ಮನೆಯಲ್ಲಿ ಸಾಕಿದ ನಾಯಿಗಳಲ್ಲಿ ಡಯಾಬಿಟಿಸ್ , ಹರ್ನಿಯಾ ಇತ್ಯಾದಿ ರೋಗಗಳು ಹೆಚ್ಚಾಗುತ್ತಿದೆ. ಇದೆಲ್ಲ ಏಕಾಗುತ್ತಿದೆ ಗೊತ್ತೇ ? ಪ್ರಕೃತ್ತಿ ನಿಯಮದ ಪ್ರಕಾರ ನಾಯಿಯ ಕೆಲಸ ,ಪೂರ್ತಿ ದಿನ ಅಲೆದು ಆಹಾರ ಹುಟ್ಟಿಸಿಕೊಳ್ಳುವುದು , ತನ್ನ ಸಂತಾನವನ್ನ ಮುಂದುವರೆಸುವುದು , ಇತ್ಯಾದಿ ಸಕಲ ಜೀವಿಗಳು ಮಾಡುವ ಮೂಲಭೂತ ಕ್ರಿಯೆಯನ್ನ ಮಾಡುವುದು ಮತ್ತು ಸಾಯುವುದು . ಹೀಗೆ ಅದರ ಸಹಜ ಬದುಕನ್ನ ಕೂಡ ನಾವು ಕಸಿದು ಬಿಟ್ಟಿದ್ದೇವೆ , ನಮ್ಮ ಪಾಪದ ಮೂಟೆಯನ್ನ ಕರಗಿಸಲು ಅಥವಾ ಇನ್ನ್ಯಾವುದೋ ಪಾಪಪ್ರಜ್ಞೆಯಿಂದ ಹೊರಬರಲು ನಾಯಿಗೆ ಬಿಸ್ಕೆಟ್ ಹಾಕುತ್ತೇವೆ , ಅದು ನಾಯಿಯ ಬದುಕಿನ ಸಮತೋಲನವನ್ನೇ ಕದಡಿ ಬಿಟ್ಟಿದೆ.

ಅವುಗಳಲ್ಲಿ ಇರಬೇಕಾದ ಜಾಗರೂಕತೆ ಇಂದು ಇಲ್ಲವಾಗಿದೆ , ಯಾರು ಬೇಕಾದರೂ ಬಿಸ್ಕೆಟ್ ಹಾಕಿದರೆ ಸಾಕು ಅವುಗಳು ಕೂಡ ಬಾಲ ಅಲ್ಲಾಡಿಸುವುದು ಕಲಿತಿವೆ. ಇನ್ನು ಕೆಲವರು ನಾಯಿಯನ್ನ ಶೋಕಿಗೆ ಸಾಕುತ್ತಾರೆ , ಒಂದಷ್ಟು ದಿನದ ನಂತರ ಅದನ್ನ ಬೀದಿಗೆ ಹಾಕುತ್ತಾರೆ. ಬೀದಿಯಲ್ಲೇ ಬೆಳೆದ ನಾಯಿಗಳು ಹೇಗೋ ಬದುಕಿಕೊಳ್ಳುತ್ತವೆ , ಬೀದಿಪಾಲಾದ ಬಡಪಾಯಿ ಮನೆ ನಾಯಿಯ ಪಾಡು ಯಾರಿಗೂ ಬೇಡ.

ಇವತ್ತು ವಾಕ್ ಮುಗಿಸಿ ಬರುವಾಗ ಹೀಗೆ ಬೀದಿಪಾಲಾದ ನಾಯಿಯನ್ನ , ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಹೋಗಿ ಕಚ್ಚು ತ್ತಿದ್ದವು. ಸಂಕಟವಾಯ್ತು . ಮನುಷ್ಯರಿಗೆ ಮಾತ್ರವಲ್ಲ ನಾಯಿಗೂ ಭಾವನೆಗಳಿವೆ , ಅವುಗಳ ಭಾವನೆಗಳ ಜೊತೆ ಆಟ ಆಡುವುದು ಎಷ್ಟು ಸರಿ ?

ನಾಯಿಗೆ ಹಾಕುವುದಿದ್ದರೆ ಅನ್ನ , ಮುದ್ದೆ ಹಾಕೋಣ , ನಾಲ್ಕು ದಿನ ಬಿಸ್ಕೆಟ್ ಸಿಗದಿದ್ದರೆ ಅವುಗಳು ಕೂಡ ಅನ್ನ ತಿನ್ನಲು ಶುರು ಮಾಡುತ್ತವೆ .

ಅಂದಹಾಗೆ ಬೆಂಗಳೂರಿನಲ್ಲಿ ಮನುಷ್ಯರ ಸಂಖ್ಯೆಗಿಂತ ನಾಯಿಗಳ ಸಂಖ್ಯೆ ಜಾಸ್ತಿ ಇದೆಯಾ ? ಎನ್ನುವ ಅನುಮಾನ ನನ್ನದು . ಬೀದಿ ನಾಯಿಗಳದು ಅತ್ಯಂತ ದೊಡ್ಡ ಸಮಸ್ಯೆ ಯಾಗಿದೆ . ಬೀದಿ ಯಲ್ಲಿ ಕಸದ ರಾಶಿ ಜೊತೆ ಜೊತೆಗೆ ಅದಕ್ಕಿಂತ ಹೆಚ್ಚು ಹಿಂಡು ಹಿಂಡಾಗಿ ಸಾಗುವ ಬೀದಿ ನಾಯಿಗಳು. ಇದು ನಮ್ಮ ನಾಗರೀಕ ಸಮಾಜ. ಶುಭವಾಗಲಿ .

  • ರಂಗಸ್ವಾಮಿ ಮೂಕನಹಳ್ಳಿ, ಬೆಂಗಳೂರು

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ

ನಾಯಿಗಳಿಗೆ ಆಹಾರ ಹಾಕಿದವರೇ ಅದರ ಮಾಲೀಕರು ಎಂಬ ವಿಚಾರ ಬಹಳ ಜನರಿಗೆ ಗೊತ್ತಿದ್ದಂತೆ ಇಲ್ಲ. ಆ ನಾಯಿಗಳನ್ನು ಕಟ್ಟಿ ಹಾಕಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾಕಬೇಕಾದ ಹೊಣೆಗಾರಿಕೆಯೂ ಅವರದ್ದೇ. ಸಾರ್ವಜನಿಕರಿಗೆ ಇಂತಹ ನಾಯಿಗಳಿಂದ ತೊಂದರೆಯಾದರೆ, ಅದಕ್ಕೆ ಆಹಾರ ಹಾಕುವವರ ವಿರುದ್ಧ ಪೊಲೀಸ್ ದೂರು ನೀಡುವುದಕ್ಕೆ ಅವಕಾಶ ಇದೆ ಎಂದು ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.

ಬೀದಿ ನಾಯಿಗಳಿಗೆ ತಿಂಡಿ ತಿನಿಸು ಹಾಕುವವರ ಗಮನಕ್ಕೆ…

ವಿನಾಯಕ ಭಟ್ ಎಂಬುವವರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವುದು ಹೀಗೆ -

" ಬೀದಿಯಲ್ಲಿ ನಾಯಿಗಳಿಗೆ ಆಹಾರ ನೀಡುವವರನ್ನು ದ್ವೇಷಿಸುತ್ತೇನೆ.. ಇದರಿಂದ ಸ್ಥಳೀಯರಿಗೆ ಅನೇಕ ಅಪಾಯಗಳು ಎದುರಾಗುತ್ತವೆ.. ಅವುಗಳಿಗೆ ಆಹಾರ ನೀಡಬಾರದು ಎಂದು ನಾನು ಹೇಳುತ್ತಿಲ್ಲ. ನಾಲ್ಕಾರು ಜನ ಒಂದು ಪ್ಯಾಕೆಟ್ ಬಿಸ್ಕೆಟ್ ಹಾಕದೇ ಇದ್ದರೂ ಆ ನಾಯಿಗಳು ಖಚಿತವಾಗಿ ಬದುಕುತ್ತವೆ. ಅವರಿಗೆ ನಿಜವಾಗಿಯೂ ಕಾಳಜಿ ಇದ್ದರೆ.. ಆ ನಾಯಿಗಳನ್ನು ತಮ್ಮ ಮನೆಗೆ ಕೊಂಡೊಯ್ದು ಅಲ್ಲಿ ಆಹಾರ ನೀಡಿ ಸಾಕಲಿ. ಆದರೆ ಅವರು ಹಾಗೆ ಮಾಡುವುದಿಲ್ಲ. ಅವರಿಗೆ ಆ ನಾಯಿಗಳಿಂದ ಆಗುವ ಉಪಟಳ ಸಹಿಸಲಾಗುವುದಿಲ್ಲ. ಅವರು ನಾಯಿಗಳ ಪುನರ್ವಸತಿ ಕುರಿತು ಸರ್ಕಾರದ ಗಮನಸೆಳೆಯಲು ಹೋರಾಟ ನಡೆಸಲಿ ಬೇಕಾದರೆ, ಆದರೆ ಅದನ್ನು ಅವರು ಮಾಡುವುದಿಲ್ಲ. ಅವರಿಗೆ ತಮ್ಮ ಪ್ರಾಣಿ ಪ್ರೀತಿ ತೋರಿಸಲು ಸುಲಭ ಮಾರ್ಗ ಬೇಕು. ತಮ್ಮ ಹಣ ಮತ್ತು ಸಮಯ ವ್ಯರ್ಥ ಮಾಡದೇ ತೃಪ್ತಿ ಬಯಸುವ ವರ್ಗ ಇದು.

ಕೆಲ ಸಮಯದ ಹಿಂದೆ ಸರ್ಕಾರವು ನಿಯಮಗಳ ಮೂಲಕ ಇದಕ್ಕೆ ದೀರ್ಘಾವಧಿಯ ಪರಿಹಾರವನ್ನು ತರಲು ಸರಿಯಾಗಿ ಪ್ರಯತ್ನಿಸಿತು. ಆದರೆ ಇದರ ವಿರುದ್ಧ ಈ ತಥಾಕಥಿತ ಪ್ರಾಣಿಪ್ರಿಯರ ಧ್ವನಿ ಕೇಳಿ ಬಂತು. ಸ್ವಸ್ಥ ಸಮಾಜದ ಒಂದು ಭಾಗವಾಗಿ ನಾವು ಕಾನೂನುಗಳನ್ನು ಪಾಲಿಸಬೇಕು. ಒಮ್ಮೆ ಯೋಚಿಸಿ ನೋಡಿ, ಮಗುವನ್ನು ಪಕ್ಕದ ಅಂಗಡಿಗೆ ಹೋಗಿ ಹಾಲು ತಗೊಂಡು ಬಾ ಎಂದು ಧೈರ್ಯದಿಂದ ಕಳುಹಿಸುವುದು ಸಾಧ್ಯವಿದೆಯೇ, 100 ಬಾರಿ ಯೋಚಿಸಬೇಕು".

Whats_app_banner