ಕನ್ನಡ ಸುದ್ದಿ  /  ಕರ್ನಾಟಕ  /  ಮಹದೇವಪುರದ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಕೆಗೆ ಜಲಮಂಡಳಿ ಸಿದ್ದ, ಐಟಿ ಪಾರ್ಕ್‌ಗಳಿಂದ ಹತ್ತಿರದ ಕೆರೆಗಳಿಗೆ ಮಳೆ ನೀರು

ಮಹದೇವಪುರದ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಕೆಗೆ ಜಲಮಂಡಳಿ ಸಿದ್ದ, ಐಟಿ ಪಾರ್ಕ್‌ಗಳಿಂದ ಹತ್ತಿರದ ಕೆರೆಗಳಿಗೆ ಮಳೆ ನೀರು

ಬೆಂಗಳೂರು ಮಹದೇವಪುರ ವಲಯದಲ್ಲಿರುವ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಬೆಂಗಳೂರು ಜಲಮಂಡಳಿ ಸಿದ್ಧವಿದೆ. ಇದಕ್ಕೆ ಪೂರಕವಾಗಿ ಸಮೀಪದ ಕೆರೆಗಳಿಗೆ ಐಟಿ ಪಾರ್ಕ್‌ಗಳಲ್ಲಿ ಸಂಗ್ರಹವಾಗುವ ಮಳೆ ನೀರು ಸಂಗ್ರಹಿಸುವ ಯೋಜನೆ ಗಮನಿಸಲಾಗುತ್ತಿದೆ ಎಂದು ಮಂಡಳಿ ಹೇಳಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜೊತೆ ಸಭೆಯ ಬಳಿಕ ಬೆಂಗಳೂರು ಜಲಮಂಡಳಿ ಅಧ್ಯಕ್ಷ  ಡಾ. ರಾಮ್‌ ಪ್ರಸಾತ್‌ ಮನೋಹರ್‌ ನೀರಿನ ಲಭ್ಯತೆ, ಸರಬರಾಜು, ಉಳಿತಾಯ, ಮರುಬಳಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜೊತೆ ಸಭೆಯ ಬಳಿಕ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ನೀರಿನ ಲಭ್ಯತೆ, ಸರಬರಾಜು, ಉಳಿತಾಯ, ಮರುಬಳಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬೆಂಗಳೂರು: ಮಹದೇವಪುರದ 21 ಐಟಿ ಪಾರ್ಕ್‌ಗಳಿಗೆ ಬೇಕಾದಷ್ಟು ಕಾವೇರಿ ನೀರು ಪೂರೈಕೆ ಮಾಡಲು ಮಂಡಳಿ ಸಿದ್ದವಿದೆ. ಐಟಿ ಕಂಪನಿಗಳ ನೀರಿನ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ನೀರು ಕೋರಿ ಈಗಾಗಲೇ ಮನವಿ ಸಲ್ಲಿಸಿರುವ ಐಟಿ ಕಂಪನಿಗಳಿಗೆ ಕಾವೇರಿ4ನೇ ಹಂತದ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲು ಸಿದ್ಧವಿರುವುದಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಭರವಸೆ ನೀಡಿದ್ದಾರೆ. ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜತೆಗೆ ಇತ್ತೀಚೆಗೆ ಸಭೆ ನಡೆಸಿದ ಅವರು ಈ ಭಾಗದಲ್ಲಿ ನೀರಿನ ಲಭ್ಯತೆ, ಸರಬರಾಜು, ಉಳಿತಾಯ ಹಾಗೂ ಮರುಬಳಕೆಗೆ ಅಳವಡಿಸಿರುವ ಕ್ರಮಗಳನ್ನು ಪರಿಶೀಲಿಸಿದರು.

30 ದಿನಗಳ ಒಳಗೆ ಕಾವೇರಿ ನೀರು ಸರಬರಾಜು ಮಾಡುವ ಭರವಸೆ

ಈ ಭಾಗದ ಐಟಿ ಪಾರ್ಕ್‌ಗಳ ಅವಶ್ಯಕತೆಗೆ ಸುಮಾರು 12 ಎಂ.ಎಲ್‌.ಡಿ ಕಾವೇರಿ ನೀರಿನ ಅವಶ್ಯಕತೆ ಇದೆ. ಸದ್ಯ ಲಭ್ಯವಿರುವ ಕಾವೇರಿ 4 ನೇ ಹಂತದ ಯೋಜನೆಯಲ್ಲೇ 5 ಎಂ.ಎಲ್‌.ಡಿ ನೀರನ್ನು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ನೀರು ಪೂರೈಕೆಗೆ ತಗುಲುವ ಪ್ರೋರೇಟಾ ಹಾಗೂ ಇನ್ನಿತರ ಶುಲ್ಕಗಳನ್ನು ಪಾವತಿಸಿದರೆ 30 ದಿನಗಳಲ್ಲಿ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಕೆಲಸವನ್ನು ಪ್ರಾರಂಭಿಸಬಹುದಾಗಿದೆ ಎಂದು ತಿಳಿಸಿದರು.

ಕಾವೇರಿ 5 ನೇ ಹಂತದ ಯೋಜನೆ ಜಾರಿಗೊಂಡ ನಂತರ ಇನ್ನೂ ಹೆಚ್ಚಿನ ಪ್ರಮಾಣದ ನೀರು ಪೂರೈಕೆ ಮಾಡಬಹುದಾಗಿದೆ. ಅನ್ಯ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಮಹದೇವಪುರ ವಲಯದ ವ್ಯಾಪ್ತಿಯಲ್ಲಿ 21 ಐಟಿ ಪಾರ್ಕ್‌ಗಳಿವೆ. ಈ ಪೈಕಿ ಬಹುತೇಕ ಕಂಪನಿಗಳು ನೀರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಿವೆ. ಈ ಭಾಗದ ಬಹುತೇಕ ಪ್ರದೇಶಗಳು 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಆದರೆ, ಕಾವೇರಿ ನೀರು ಸರಬರಾಜು ವ್ಯವಸ್ಥೆ ಪೂರ್ಣಗೊಂಡಿಲ್ಲ. ಬಹುತೇಕ ಪ್ರದೇಶಗಳು ಈಗಲು ಕೊಳವೆಬಾವಿಯನ್ನೇ ಆಶ್ರಯಿಸಿವೆ.

ಸಂಸ್ಕರಿಸಿದ ನೀರನ್ನು ಬಳಸಲು ಕರೆ

ಕಚೇರಿಗಳಲ್ಲಿ ನಿತ್ಯದ ಬಳಕೆಗೆ ಬೇಕಾದ ನೀರಿನ ಪ್ರಮಾಣದಲ್ಲಿ ಶೇಕಡ 50 ಅನ್ನು ಸಂಸ್ಕರಿಸಿದ ನೀರು ಬಳಸುವ ಮೂಲಕ ಪೂರೈಸಿಕೊಳ್ಳಬಹುದಾಗಿದೆ. ಗುಣಮಟ್ಟದ ಸಂಸ್ಕರಿತ ನೀರನ್ನು ಬೆಂಗಳೂರು ಜಲಮಂಡಳಿ ಒದಗಿಸಲಿದೆ. ಕಂಪನಿಗಳು ತಮ್ಮ ಅವಶ್ಯಕತೆಯ ವಿವರಗಳನ್ನು ವೆಬ್‌ಸೈಟ್‌ ಮೂಲಕ ಸಲ್ಲಿಸಿದಲ್ಲಿ ಪ್ರತಿನಿತ್ಯ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸಲಿದ್ದೇವೆ ಎಂದು ಜಲ ಮಂಡಳಿಯ ಅಧ್ಯಕ್ಷರು ಭರವಸೆ ನೀಡಿದರು.

ಮನೆ, ಕಚೇರಿಗಳ ಶೌಚಾಲಯದ ನೀರನ್ನು ಹೊರತು ಪಡಿಸಿ ಉಳಿದ ಬಳಕೆಯ ಬಳಿಕ ಲಭ್ಯವಾಗುವ ನೀರನ್ನು ಗ್ರೇ ವಾಟರ್ ಎಂದು ಪರಿಗಣಿಸಲಾಗುತ್ತದೆ. ಈ ನೀರನ್ನು ಸಂಸ್ಕರಿಸುವುದು ಸುಲಭ. ಈ ರೀತಿ ಸಂಸ್ಕರಣೆ ಮಾಡಿದ ನೀರನ್ನು ಮರು ಬಳಕೆ ಮಾಡಿಕೊಳ್ಳಬಹುದು. ಇಂತಹ ನೀರಿನ ಮರುಬಳಕೆಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮನವಿ ಮಾಡಿದರು.

ಬಹಳಷ್ಟು ಐಟಿ ಪಾರ್ಕ್‌ಗಳು ಈಗಾಗಲೇ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಿವೆ. ಇದರ ಹೊರತಾಗಿ, ಕಚೇರಿಯ ಹೊರಭಾಗದಲ್ಲಿ ಬೀಳುವ ಮಳೆ ನೀರು ಸಂಗ್ರಹಿಸಿ, ಶೇಖರಿಸಿ ಅದನ್ನು ಸಮೀಪದ ಕೆರೆ ಅಥವಾ ಜಲಮೂಲಗಳಿಗೆ ಬಿಟ್ಟರೆ, ಅಂತಹ ಕ್ರಮವು ಅಂತರ್ಜಲ ಮರುಪೂರಣಕ್ಕೆ ನೆರವಾಗಲಿದೆ. ಆದ್ದರಿಂದ ಐಟಿ ಪಾರ್ಕ್‌ಗಳಿಂದ ಹತ್ತಿರದ ಕೆರೆಗಳಿಗೆ ಮಳೆ ನೀರನ್ನು ಹರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಔಟರ್‌ ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಅರ್ಚನಾ ತಯಾದೇ, ಕಾರ್ಯದರ್ಶಿ ರಮೇಶ್‌ ವೆಂಕಟರಾಮು ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್‌ ಗೌಡ ಮತ್ತು ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

(ವರದಿ- ಎಚ್. ಮಾರುತಿ, ಬೆಂಗಳೂರು)

IPL_Entry_Point