ಬೆಂಗಳೂರಲ್ಲಿ ಆಪ್‌ ಮೂಲಕ ಸಾಲ, 1 ಲಕ್ಷ ರೂ ಕಳಕೊಂಡ ವೈದ್ಯ; ಮಗ ಸರಗಳ್ಳನಾಗಲು ಅಮ್ಮನೇ ಪ್ರೇರಣೆ, ತಾಯಿ,ಮಗನ ವಿರುದ್ಧ 12 ಕೇಸ್
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಆಪ್‌ ಮೂಲಕ ಸಾಲ, 1 ಲಕ್ಷ ರೂ ಕಳಕೊಂಡ ವೈದ್ಯ; ಮಗ ಸರಗಳ್ಳನಾಗಲು ಅಮ್ಮನೇ ಪ್ರೇರಣೆ, ತಾಯಿ,ಮಗನ ವಿರುದ್ಧ 12 ಕೇಸ್

ಬೆಂಗಳೂರಲ್ಲಿ ಆಪ್‌ ಮೂಲಕ ಸಾಲ, 1 ಲಕ್ಷ ರೂ ಕಳಕೊಂಡ ವೈದ್ಯ; ಮಗ ಸರಗಳ್ಳನಾಗಲು ಅಮ್ಮನೇ ಪ್ರೇರಣೆ, ತಾಯಿ,ಮಗನ ವಿರುದ್ಧ 12 ಕೇಸ್

ಬೆಂಗಳೂರಲ್ಲಿ ಆಪ್‌ ಮೂಲಕ ಸಾಲ ಪಡೆದು ಕ್ಲಿನಿಕ್ ನವೀಕರಿಸಲು ಹೊರಟ ವೈದ್ಯರೊಬ್ಬರು ವಂಚಕರ ಜಾಲಕ್ಕೆ ಸಿಲಿಕಿದರು. 1 ಲಕ್ಷ ರೂ ಕಳಕೊಂಡ ವೈದ್ಯ ಕೇಸ್ ದಾಖಲಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಮಗ ಸರಗಳ್ಳನಾಗಲು ಅಮ್ಮನೇ ಪ್ರೇರಣೆಯಾಗಿದ್ದು, ತಾಯಿ, ಮಗನ ವಿರುದ್ಧ 12 ಕೇಸ್ ದಾಖಲಾಗಿದೆ. (ವರದಿ ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಕ್ಲಿನಿಕ್ ನವೀಕರಣಕ್ಕಾಗಿ ಮೊಬೈಲ್ ಆಪ್‌ ಮೂಲಕ 5 ಲಕ್ಷ ರೂಪಾಯಿ ಸಾಲ ಪಡೆಯಲು ಪ್ರಯತ್ನ ನಡೆಸಿದ ವೈದ್ಯರೊಬ್ಬರು 1 ಲಕ್ಷ ರೂಪಾಯಿವರೆಗೆ ಹಣ ಕಳೆದುಕೊಂಡ ಪ್ರಕರಣ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ವಂಚನೆ ಪ್ರಕರಣ ಕುರಿತು 33 ವರ್ಷದ ವೈದ್ಯರು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಲಿನಿಕ್ ಅಧುನೀಕರಣಗೊಳಿಸಲು ವೈದ್ಯರಿಗೆ ಸಾಲ ಬೇಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಾಲ ನೀಡುವ ಕಂಪನಿಗಳ ಹುಡುಕಾಟ ನಡೆಸಿದ್ದರು. ಈ ರೀತಿ ಹುಡುಕಾಟ ನಡೆಸುತ್ತಿದ್ದಾಗ.ಸಾಲ ನೀಡುವ ಜಾಹಿರಾತೊಂದನ್ನು ನೋಡಿದ್ದರು. ಮೊಬೈಲ್ ಮೂಲಕ ಸಾಲ ನೀಡುವ ಕಂಪನಿಯ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು. ಖಾಸಗಿ ಬ್ಯಾಂಕ್ ಪ್ರತಿನಿಧಿಯ ಹೆಸರಿನಲ್ಲಿ ಕರೆ ಮಾಡಿದ್ದ ಅಪರಿಚಿತರು 5 ಲಕ್ಷ ರೂಪಾಯಿ ಸಾಲ ಮಂಜೂರಾಗಿರುವುದಾಗಿ ನಂಬಿಸಿದ್ದರು.

ಅದಕ್ಕಾಗಿ ಆಧಾರ್ ಮತ್ತಿತರ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದರು. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕೆಲವು ಶುಲ್ಕಗಳನ್ನು ಪಾವತಿ ಮಾಡಬೇಕೆಂದು ನಂಬಿಸಿದ್ದರು. ಇವರ ಮಾತನ್ನು ನಂಬಿದ ವೈದ್ಯರು ಹಂತ ಹಂತವಾಗಿ 94,110 ರೂ.ಗಳನ್ನು ವರ್ಗಾಯಿಸಿದ್ದರು. ಇಷ್ಟಕ್ಕೇ ಸುಮ್ಮನಾಗದ ಆರೋಪಿಗಳು ಮತ್ತಷ್ಟು ಶುಲ್ಕಗಳನ್ನು ಪಾವತಿಸಬೇಕೆಂದು ತಿಳಿಸಿ ಇನ್ನಷ್ಟು ಹಣ ವರ್ಗಾಯಿಸುವಂತೆ ಕೇಳಿದ್ದರು. ಇದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆಗೆ ಆರೋಪಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದಿರುವ ಬ್ಯಾಂಕ್ ಹೆಸರಿನಲ್ಲಿ ಇವರು ಮೋಸ ಮಾಡಿದ್ದಾರೆ ಎಂದು ಭಾವಿಸಲಾಗಿದೆ.

ಸರಕಳ್ಳತನ ಮಾಡುತ್ತಿದ್ದ ತಾಯಿ, ಮಗ. ಈಗ ತಾಯಿ ಅಂದರ್ ಮಗ ಪರಾರಿ

ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಹತ್ತಿರ ಹೋಗಿ ಸರ ಕಳ್ಳತನ ಮಾಡುತ್ತಿದ್ದ ರೋಜಾ ಎಂಬಾಕೆಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಚಿಂತಾಮಣಿ ಮೂಲದ 32 ವರ್ಷದ ರೋಜಾ ಉಲ್ಲಾಳದಲ್ಲಿ ವಾಸವಾಗಿದ್ದಳು. ಈಕೆ ತನ್ನ ಅಪ್ರಾಪ್ತ ಪುತ್ರ ಮತ್ತು ಆತನ ಸ್ನೇಹಿತರ ಮೂಲಕವೂ ಕಳ್ಳತನ ಮಾಡಿಸುತ್ತಿದ್ದಳು ಎಂಬ ಆರೋಪವಿದೆ. ಇತ್ತೀಚೆಗೆ ನಡೆದ ಕಳ್ಳತನದ ತನಿಖೆ ನಡೆಸುತ್ತಿದ್ದಾಗ ರೋಜಾ ಸಿಕ್ಕಿ ಬಿದ್ದಿದ್ದಾಳೆ. ತನಿಖೆಯ ಸಂದರ್ಭದಲ್ಲಿ ಈ ಹಿಂದೆ ಮಾಡಿದ ಎಲ್ಲ ಕಳ್ಳತನಗಳ ಮಾಹಿತಿಯ್ನು ಪೊಲೀಸರಿಗೆ ತಿಳಿಸಿದ್ದಾಳೆ.

ರೋಜಾ ಕೂಲಿ ಕೆಲಸವನ್ನೂ ಮಾಡುತ್ತಿದ್ದಳು. ಬಿಡುವು ಸಿಕ್ಕಾಗಲೆಲ್ಲಾ ವಿವಿಧ ಜಾಗಗಳಲ್ಲಿ ಸುತ್ತಾಡುತ್ತಾ ಯಾವ ಯಾವ ರಸ್ತೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ, ಯಾವ ಮಹಿಳೆಯ ಕತ್ತಿನಲ್ಲಿ ಬೆಲೆ ಬಾಳುವ ಚಿನ್ನದ ಸರವಿದೆ, ಸರ ಕದ್ದು ಯಾವ ರಸ್ತೆಯಲ್ಲಿ ತಪ್ಪಿಸಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದ್ದಳು. ಮತ್ತೊಂದು ದಿನ ಅದೇ ರಸ್ತೆಗೆ ಹೋಗಿ ಸರ ಕದ್ದು ಪರಾರಿಯಾಗುತ್ತಿದ್ದಳು.

ಮಗನಿಗೆ ಪ್ರೇರಣೆ ನೀಡಿದ್ದ ತಾಯಿ ರೋಜಾ

ಜೀವನ ನಡೆಸಲು ಇದು ಸುಲಭದ ಮಾರ್ಗ ಎಂದು ರೋಜಾ ತನ್ನ ಅಪ್ರಾಪ್ತ ಮಗನನ್ನು ಕಳ್ಳತನಕ್ಕೆ ಪ್ರೇರೇಪಿಸಿದ್ದಳು. ಬೈಕ್ ಇದ್ದರೆ ಸರ ಕಳ್ಳತನ ಸುಲಭ ಎಂದು ರೋಜಾ ಮಗನನ್ನು ಬೈಕ್ ಕದಿಯಲು ಪುಸಲಾಯಿಸಿದ್ದಳು. ಈಕೆಯ ಮಾತನ್ನು ನಂಬಿದ ಮಗ ತನ್ನ ಸ್ನೇಹಿತನೊಂದಿಗೆ ಮೈಸೂರಿಗೆ ತೆರಳಿ ಬೈಕ್ ಕದ್ದು ಬೆಂಗಳೂರಿಗೆ ಮರಳಿದ್ದ. ಇದೇ ಬೈಕ್‌ನಲ್ಲಿ ಸುತ್ತಾಡುತ್ತಾ ಕಳ್ಳತನ ನಡೆಸಲು ತಾಯಿ ಮಗ ಸಂಚು ರೂಪಿಸುತ್ತಿದ್ದರು. ರೋಜಾ ಯಾವ ರಸ್ತೆಯಲ್ಲಿ ಕಳ್ಳತನ ಮಾಡಬೇಕೆಂದು ಹೇಳುತ್ತಿದ್ದಳು. ಮಗ ಮತ್ತು ಆತನ ಸ್ನೇಹಿತ ಅದೇ ರಸ್ತೆಯಲ್ಲಿ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದರು. ಈ ರೀತಿ ಮಗ ಕದ್ದು.ತರುತ್ತಿದ್ದ ಚಿನ್ನದ ಸರಗಳನ್ನು ಅಡವಿಟ್ಟು ಹಣ ಪಡೆಯುತ್ತಿದ್ದರು.

ಇತ್ತೀಚೆಗೆ ಮುದ್ದಿನಪಾಳ್ಯದಲ್ಲಿ ಸರಗಳ್ಳತನ ನಡೆದಿತ್ತು. ಸರ ಕಳೆದುಕೊಂಡ ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಸರ ಕಳ್ಳತನ ನಡೆದ ರಸ್ತೆಯಲ್ಲಿ ರೋಜಾ ಹಲವಾರು ಬಾರಿ ಓಡಾಡಿರುವುದು ಕಂಡು ಬಂದಿತ್ತು. ಇದೇ ಆಧಾರದಲ್ಲಿ ವಿಚಾರಣೆ ನಡೆಸಿದಾಗ ರೋಜಾ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಮಗನನ್ನು ಪ್ರೇರೇಪಿಸಿ ಕಳ್ಳತನ ಮಾಡಿಸುತ್ತಿದ್ದಾಗಿ ತಿಳಿಸಿದ್ದಾಳೆ. ಸಧ್ಯಕ್ಕೆ ತಾಯಿ ಮಗನ ಮೇಲೆ 12 ಪ್ರಕರಣಗಳು ದಾಖಲಾಗಿವೆ. ಮಗ ಮತ್ತು ಆತನ ಸ್ನೇಹಿತ ತಲೆ ಮರೆಸಿಕೊಂಡಿದ್ದಾರೆ.

(ವರದಿ ಎಚ್.ಮಾರುತಿ, ಬೆಂಗಳೂರು)

Whats_app_banner