ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ; ವ್ಯಾಪಕ ವಿರೋಧದ ಕಾರಣ ಉದ್ಯೋಗ ಮೀಸಲು ವಿಧೇಯಕಕ್ಕೆ ಅಂಗೀಕಾರ ನೀಡಿ ತಡೆ ಹಿಡಿದ ಕರ್ನಾಟಕ ಸರ್ಕಾರ
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರ ಈಗ ಚರ್ಚೆಯ ಕೇಂದ್ರ ಬಿಂದು. ವ್ಯಾಪಕ ವಿರೋಧ ಕಾರಣ ವಿಧೇಯಕಕ್ಕೆ ಅಂಗೀಕಾರ ನೀಡಿ ತಡೆ ಹಿಡಿದ ಸರ್ಕಾರದ ನಡೆ ಇದಕ್ಕೆ ಕಾರಣ. ಉದ್ಯಮಿಗಳ ಒತ್ತಡಕ್ಕೆ ಮಣಿದರೇ ಸಿದ್ದರಾಮಯ್ಯ? ಇಷ್ಟಕ್ಕೂ ವಿಧೇಯಕದಲ್ಲಿದ್ದ ಅಂಶಗಳಾದರೂ ಏನು? (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರ್ನಾಟಕದ ಖಾಸಗಿ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಅಂಗೀಕಾರ ನೀಡಿದ 24 ಗಂಟೆಗಳಲ್ಲೇ ರಾಜ್ಯ ಸರ್ಕಾರ ವಿಧೇಯಕಕ್ಕೆ ತಡೆ ನೀಡಿದೆ.
ಈ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಭವಿಷ್ಯದ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಹಾಗೆ ನೋಡಿದರೆ ಈ ವಿಧೇಯಕದಲ್ಲಿ ಉದ್ಯಮಗಳಿಗೆ ಹಾನಿಯಾಗುವಂತಹ ಯಾವುದೆ ಆಂಶಗಳಿರಲಿಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಆಗ್ರಹ ಮಾತ್ರವಿತ್ತು. ಸರ್ಕಾರವೇನೂ ಇಂತಹವರಿಗೇ ಉದ್ಯೋಗ ನೀಡಿ ಎಂದು ಒತ್ತಡ ಹೇರಿರಲಿಲ್ಲ.
ಸೋಮವಾರ ನಡೆದ ಸಚಿವ ಸಂಪುಟದಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ನೀಡುತ್ತಿದ್ದಂತೆ ಕೈಗಾರಿಕೋದ್ಯಮಿಗಳೂ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಅವರೂ ಸರ್ಕಾರದ ವಿರುದಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಕೈಗಾರಿಕೋದ್ಯಮಿಗಳು ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಗ್ರಹಪಡಿಸಿದ್ದರು.
ವಿಧೇಯಕದಲ್ಲಿ ಏನಿದೆ?
ಈಗಾಗಲೇ ತಿಳಿಸಿರುವಂತೆ ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ಕಲ್ಪಿಸಲಾಗಿತ್ತು.ಕೈಗಾರಿಕಾ ಮಂಡಳಿ ನಿರ್ದೇಶಕ ಹುದ್ದೆಗಳನ್ನು ಮೀಸಲಾತಿ ವ್ಯಾಪ್ತಿಗೆ ತಂದಿರಲಿಲ್ಲ. ಸರ್ಕಾರದ ಆದೇಶದಲ್ಲಿ ಸ್ಥಳೀಯರು ಎಂದರೆ ರಾಜ್ಯದಲ್ಲಿ ಹುಟ್ಟಿ, 15 ವರ್ಷಗಳ ಕಾಲ ಇಲ್ಲಿಯೇ ನೆಲೆಸಿ ಕನ್ನಡ ಭಾಷೆಯನ್ನು ಓದಲು ಬರೆಯಲು ಬರಬೇಕು ಎಂದು ಹೇಳಲಾಗಿತ್ತು.
ಇನ್ನು ಆಡಳಿತಾತ್ಮಕ ಹುದ್ದೆಗಳು ಯಾವುವು ಎಂದೂ ಸ್ಪಷ್ಟನೆ ನೀಡಲಾಗಿತ್ತು. ಸೂಪರ್ ವೈಸರ್, ಮ್ಯಾನೇಜರ್, ತಾಂತ್ರಿಕ, ಆಪರೇಷನ್, ಕೈಗಾರಿಕೆ ಮತ್ತು ಉದ್ಯಮಗಳ ಇತರ ಉನ್ನತ ಹುದ್ದೆಗಳನ್ನು ಒಳಗೊಂಡಿರುತ್ತದೆ. ಆಡಳಿತಾತ್ಮಕವಲ್ಲದ ಹುದ್ದೆಗಳು ಎಂದರೆ ಗುಮಾಸ್ತ, ಪರಿಣಿತ ಇಲ್ಲದ, ಅರೆ ಪರಿಣಿತಿ ಹೊಂದಿದ ಹುದ್ದೆಗಳು ಸೇರುತ್ತವೆ. ಒಂದು ವೇಳೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೇ ಹೋದಲ್ಲಿ ಕೈಗಾರಿಕೆಗಳು ಬೇರೊಬ್ಬರನ್ನು ನೇಮಕ ಮಾಡಿಕೊಳ್ಳುವಂತಿಲ್ಲ. ಬದಲಾಗಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಬೇಕೆಂದು ಮಸೂದೆ ಹೇಳುತ್ತಿತ್ತು.
ಹಾಗೆಂದು ಕೈಗಾರಿಕೆಗಳಿಗೆ ರಿಯಾಯಿತಿಯೇ ಇಲ್ಲ ಎಂದು ಹೇಳುವಂತಿರಲಿಲ್ಲ. ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಅಗತ್ಯವಿರುವಷ್ಟು ಅಭ್ಯರ್ಥಿಗಳು ಲಭ್ಯವಿಲ್ಲದೇ ಹೋದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.25ಕ್ಕೆ ಮೀಸಲಾತಿಯನ್ನು ಇಳಿಸಬಹುದಾಗಿದೆ.
ರಾಜ್ಯ, ಅದರಲ್ಲೂ ಬೆಂಗಳೂರಿಗೆ ವಲಸಿಗರ ಸಂಖ್ಯೆ ವಿಪರೀತವಾಗಿದೆ. ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಭಯ ಕಾಡುತ್ತಿದೆ ಎಂದು ಕನ್ನಡ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಭಾಷೆಗೆ ಅವಿನಾಭಾವ ಸಂಬಂಧವಿದೆ. 1983ರಲ್ಲಿ ಮೊದಲ ಬಾರಿಗೆ ಶಾಸಕರಾದಾಗ ಇವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರು ಹೀಗೆ ಮಾಡಬಾರದಿತ್ತು ಎಂದು ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಮಿಗಳ ಪ್ರತಿಕ್ರಿಯೆ ಏನು?
ಜೈವಿಕ ತಂತ್ರಜ್ಞಾನ ಉದ್ಯಮಿ ಕಿರಣ್ ಮಜುಂದಾರ್ ಶಾ, ಐಟಿ ರಾಜಧಾನಿಗೆ ಪರಿಣತಿ ಹೊಂದಿರುವ ತಜ್ಞರು ಬೇಕು ಎಂದು ಪ್ರತಿಪಾದಿಸಿ ಸ್ಥಳೀಯರಿಗೆ ಉದ್ಯೋಗ ಎಂಬ ನೀತಿಯಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಮೋಹನ್ ದಾಸ್ ಪೈ, ಉತ್ತಮ ಶಿಕ್ಷಣ ನೀಡಲು ಸರ್ಕಾರ ಆದ್ಯತೆ ನೀಡಬೇಕೇ ಹೊರತು ಬಲವಂತದ ಕ್ರಮ ಹೇರಬಾರದು ಎಂದು ಹೇಳಿದ್ದರು.
ನಮ್ಮದು ಕನ್ನಡ ಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಸಚಿವ ಸಂಪುಟದ ನಿರ್ಣಯವನ್ನು ಒಂದೇ ದಿನದಲ್ಲಿ ತಡೆ ಹಿಡಿದಿರುವದು ಸರ್ಕಾರದ ಘನತೆಗೆ ಕುಂದು ಉಂಟು ಮಾಡಿರುವುದು ಸುಳ್ಳಲ್ಲ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.