ಕರ್ನಾಟಕದಲ್ಲಿ ರಣಬಿಸಿಲು; ಈ ಉಷ್ಣಾಂಶದಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಸರ್ಕಾರದ ಮಾರ್ಗಸೂಚಿ
ಕರ್ನಾಟಕದ ಹವಾಮಾನ ಗಮನಿಸಿದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿ ವಾತಾವರಣ. ಸರಳವಾಗಿ ಹೇಳಬೇಕು ಎಂದರೆ ಕರ್ನಾಟಕದಲ್ಲಿ ರಣಬಿಸಿಲು. ಈ ಉಷ್ಣಾಂಶದಲ್ಲಿ ಏನುಮಾಡಬೇಕು, ಏನುಮಾಡಬಾರದು, ಸರ್ಕಾರದ ಮಾರ್ಗಸೂಚಿ ಪ್ರಕಟವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಬಿಸಿ ವಾತಾವರಣ ಹೆಚ್ಚು ಇರುತ್ತದೆ. ಈ ಬಿಸಿ ವಾತಾವರಣ 14 ದಿನಗಳವರೆಗೆ ಹೆಚ್ಚು ಇರಲಿದೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಇಂತಹ ವಾತಾವರಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಉತ್ತರ ಕರ್ನಾಟಕದ ಒಳನಾಡು ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ ಭಾಗಗಳಲ್ಲಿ ಶಾಖ ತರಂಗ ಅಥವಾ ಉಷ್ಣದ ಅಲೆಗಳ ಆಘಾತ ಎದುರಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಶುಷ್ಕ ಹವೆ ಇದ್ದು, ಬಿಸಿಲಿನ ತಾಪ ಹೆಚ್ಚಾಗಿದೆ. ಈ ತಾಪಮಾನ ಏರಿಕೆಯ ಸಂಕಷ್ಟದ ಕಾರಣ, ಜನ ಜಾನುವಾರುಗಳ ಆರೋಗ್ಯದಲ್ಲೂ ಏರುಪೇರಾಗಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಕರ್ನಾಟಕದಲ್ಲಿ ರಣಬಿಸಿಲು; ಮಾಡಬಾರದ್ದು ಏನು
ಕರ್ನಾಟಕ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚು ಪ್ರಕಾರ ರಣಬಿಸಿಲಿನ ವಾತಾವರಣದಲ್ಲಿ ಮಾಡಬಾರದ ಅಂಶಗಳಿವು
1) ಗರಿಷ್ಠ ತಾಪಮಾನದ ಅವಧಿಯಾದ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಸಂಚಾರ ಮಾಡಬಾರದು,
2) ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು.
3) ದೇಹವನ್ನು ನಿರ್ಜಲೀಕರಣಗೊಳಿಸುವ ಅಲ್ಕೊಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ಸೇವಿಸಬಾರದು
4) ಪಾರ್ಕ್ ಮಾಡಲಾದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು
5) ಬೇಸಿಗೆಗೆ ಸೂಕ್ತವಲ್ಲದ ಉಡುಪು ಧರಿಸಬಾರದು. ಕಪ್ಪು ಬಣ್ಣದ ಉಡುಪು ಧರಿಸಬಾರದು.
ಕರ್ನಾಟಕದಲ್ಲಿ ರಣಬಿಸಿಲು; ಮಾಡಬೇಕಾದ್ದು ಏನು
1) ಕಾಲಕಾಲಕ್ಕೆ, ಸಾಕಷ್ಟು ನೀರು ಕುಡಿಯಬೇಕು, ಸಾಧ್ಯವಾದಷ್ಟು ಬಿಸಿ ಮಾಡಿದ ಆಹಾರವನ್ನು ಸೇವಿಸಬೇಕು.
2) ಹತ್ತಿಬಟ್ಟೆಗಳನ್ನು ಧರಿಸಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ ಕೊಂಡೊಯ್ಯಬೇಕು.
3) ನಿಂಬೆ ಪಾನಕ, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓ ಆರ್ ಎಸ್ ಬಳಸಬೇಕು
4) ತಣ್ಣೀರು ಸ್ನಾನ ಮಾಡುವುದು ಉತ್ತಮ.
5) ಅನಾರೋಗ್ಯ ಎಂದು ಅನ್ನಿಸಿದರೆ ತಕ್ಷಣ ವೈದ್ಯರನ್ನು ಭೇಟಿಮಾಡಬೇಕು
ಅತಿಹೆಚ್ಚು ತಾಪಮಾನದ ಪರಿಣಾಮಗಳು
ಅತೀ ಹೆಚ್ಚು ತಾಪಮಾನದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳಿವು ನಿರ್ಜಲೀಕರಣ, ಶಾಖ ಸೆಳತ, ಶಾಖದ ಬಳಲಿಕೆ ಮತ್ತು ಶಾಖದ ಅಘಾತದಂತಹ ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿದ್ದು, ಅವುಗಳ ರೋಗ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ.
ಜ್ವರವು 102 °F ಗಿಂತ ಕಡಿಮೆ ಇರುತ್ತದೆ, ಶಾಖದ ಬಳಲಿಕೆಯಿಂದ ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಕಾಣಿಸುತ್ತದೆ. ಅತೀ ಹೆಚ್ಚು ತಾಪಮಾನದಿಂದ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು, ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು.
ಅತೀ ಹೆಚ್ಚು ತಾಪಮಾನಕ್ಕೆ ಸಂಬಂಧಿಸಿದಂತೆ ಅನಾರೋಗ್ಯವನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.
ನಗರ, ಪಟ್ಟಣ, ಕೊಳಚೆ ಪ್ರದೇಶಗಳು, ಅತೀ ಹೆಚ್ಚು ತಾಪಮಾನಕ್ಕೆ ತುತ್ತಾಗುವಂತಹ ಹಳ್ಳಿಗಳನ್ನು ಗುರುತಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಜನಸಂದಣಿ ಇರುವ ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆರಳಿನ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ಯಾತ್ರಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಬೇಕು ಹಾಗೂ ತಾತ್ಕಾಲಿಕ ನೆರಳಿನ ಪ್ರದೇಶಗಳನ್ನು ನಿರ್ಮಿಸಬೇಕು. ಆಸ್ಪತ್ರೆಗಳು ಔಷಧಿಗಳ ದಾಸ್ತಾನು ಮತ್ತು ವೈದ್ಯಕೀಯ ಸಿಬ್ಬಂದಿ ಲಭ್ಯ ಇರಬೇಕು ಎಂದು ಹೇಳಲಾಗಿದೆ.
ಪ್ರಾದೇಶಿಕ ಆಯುಕ್ತರು ಹಾಗು ಜಿಲ್ಲಾಧಿಕಾರಿಗಳು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹಣೆಯನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಧ್ಯತೆಯ ಮೇರೆಗೆ ಕಾಯ್ದಿರಿಸಬೇಕು. ಕುಡಿಯುವ ನೀರಿನ ಕೊರತೆ ಉಂಟಾಗುವ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುಬೇಕು ಎಂದು ಸರ್ಕಾರ ತಿಳಿಸಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.