ಮಿಷನ್ 3K– 3000 ಹಾರ್ಟ್ಸ್ ಒನ್ ಬೀಟ್: 24 ಗಂಟೆಗಳಲ್ಲಿ 3,319 ಸಿಪಿಆರ್, ಗಿನ್ನೆಸ್ ದಾಖಲೆ ಬರೆದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ
ವಿಶ್ವ ಹೃದಯದ ದಿನದ ಅಂಗವಾಗಿ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ಮಿಷನ್ 3K– 3000 ಹಾರ್ಟ್ಸ್ ಒನ್ ಬೀಟ್ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ 24 ಗಂಟೆಗಳಲ್ಲಿ 3,319 ಸಿಪಿಆರ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಟಗಳಲ್ಲಿ ಸೇರಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ‘ಮಿಷನ್ 3K - 3000 ಹಾರ್ಟ್ಸ್, ಒನ್ ಬೀಟ್‘ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಯಶ್ವಸಿಯಾಗಿ ಆ ಮೂಲಕ ಮಣಿಪಾಲ್ ಆಸ್ಪತ್ರೆ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಏನಿದು ಕಾರ್ಯಕ್ರಮ, ಇದರ ಉದ್ದೇಶವೇನು ಎಂಬ ವಿವರ ಇಲ್ಲಿದೆ ಮುಂದೆ ಓದಿ.
ರಿಲೇ ಶೈಲಿಯಲ್ಲಿ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಅನ್ನು ಪ್ರದರ್ಶಿಸುವ ಮೇಲೆ ಕೇಂದ್ರೀಕೃತವಾಗಿರುವ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮವು ಒಂದೇ ದಿನದಲ್ಲಿ ಅತಿ ಹೆಚ್ಚು ಸಿಪಿಆರ್ ಮಾಡುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ಮಾಡಿತ್ತು. ಸಿಪಿಆರ್ ತರಬೇತಿ ಪಡೆದ ಒಟ್ಟು 3,319 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಆ ಮೂಲಕ ಈ ಹಿಂದೆ 2,619 ಜನರು ಮಾಡಿದ್ದ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.
‘ಮಿಷನ್ 3K - 3000 ಹಾರ್ಟ್ಸ್, ಒಂದು ಬೀಟ್‘ ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬ 60 ಎದೆಯ ಕಂಪ್ರೆಷನ್‌ಗಳನ್ನು ಮಾಡಬೇಕಾಗಿತ್ತು ಮತ್ತು ಮುಂದಿನ ವ್ಯಕ್ತಿಗೆ ಇದನ್ನು ಪಾಸ್ ಮಾಡಲು ಐದು ಸೆಕೆಂಡ್‌ಗಿಂತ ಕಡಿಮೆ ಕಾಲಾವಕಾಶವಿತ್ತು. ಈ ಕಾರ್ಯಕ್ರಮವು ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಇದು ಸಮಯ ಮತ್ತು ಟೀಮ್‌ವರ್ಕ್‌ನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು.
ಮಿಷನ್ 3K - 3000 ಹಾರ್ಟ್ಸ್, ಒಂದು ಬೀಟ್ ಕಾರ್ಯಕ್ರಮದ ಮುಖ್ಯಾಂಶಗಳು
* ತರಬೇತಿ ಪಡೆದ 3,319 ಜನರು ಒಬ್ಬರಾದ ಮೇಲೆ ಒಬ್ಬರು ಬಂದು ಮನುಷ್ಯಾಕೃತಿಯ ಮೇಲೆ CPR ಅನ್ನು ಪ್ರದರ್ಶಿಸಿದರು
* ಭಾಗವಹಿಸಿದ ಪ್ರತಿಯೊಬ್ಬರಿಗೂ ತಮ್ಮ ಕಂಪ್ರೆಷನ್‌ಗಳನ್ನು ಪೂರ್ಣಗೊಳಿಸಲು 30 ಸೆಕೆಂಡ್‌ವರೆಗೆ ಸಮಯ ನೀಡಲಾಗಿತ್ತು, ಆ ಮೂಲಕ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಲಾಯಿತು.
* ಕಾರ್ಯಕ್ರಮವನ್ನು ಡಿಜಿಟಲೀಕರಣದ ಮೂಲಕ ಹೊಸ ತಂತ್ರಜ್ಞಾನವನ್ನು ಬಳಸಿ ಸಂಪೂರ್ಣವಾಗಿ ಕಾಗದರಹಿತವಾಗಿ ಮಾಡಲಾಯಿತು.
* ಕಾರ್ಯಕ್ರಮವನ್ನು ವೀಕ್ಷಿಸಲು ಅಧಿಕೃತ ಸಾಕ್ಷಿಗಳಾಗಿ ಹೊರಗಿನ ವೈದ್ಯಕೀಯ ವೃತ್ತಿಪರರು ಬಂದಿದ್ದರು.
ವ್ಯಕ್ತಿಗಳಿಗೆ ಮರುಜೀವ ನೀಡುವ ಸಿಪಿಆರ್: ಡಾ. ಎಚ್.ಸುದರ್ಶನ್ ಬಲ್ಲಾಳ್
ಈ ಸಾಧನೆಯ ಬಗ್ಗೆ ಮಾತನಾಡಿದ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್.ಸುದರ್ಶನ್ ಬಲ್ಲಾಳ್, ‘ಮಿಷನ್ 3K - 3000 ಹಾರ್ಟ್ಸ್, ಒನ್ ಬೀಟ್‌ನಲ್ಲಿ, 2024ರ ವಿಶ್ವ ಹೃದಯ ದಿನದಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಸಾಧಿಸುವ ಮೂಲಕ ಈ ಐತಿಹಾಸಿಕ ಘಟನೆಯ ಭಾಗವಾಗಲು ನಾವು ತುಂಬಾ ಹೆಮ್ಮೆಪಡುತ್ತೇವೆ. ಸತತವಾಗಿ 3,000 ಸಿಪಿಆರ್‌ಗಳನ್ನು ಮಾಡುವ ಮೂಲಕ ದಾಖಲೆಯನ್ನು ಸ್ಥಾಪಿಸುವುದರ ಜೊತೆಗೆ, CPR ಜೀವಗಳನ್ನು ಉಳಿಸಬಹುದು ಎಂಬ ಪ್ರಮುಖ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ. ಯಾರಾದರೂ ಹಠಾತ್ತನೆ ಕುಸಿದು ಬಿದ್ದರೆ ಅಥವಾ ಹೃದಯಾಘಾತಕ್ಕೆ ಒಳಗಾದರೆ, ಸಿಪಿಆರ್ ಅವರನ್ನು ಮತ್ತೆ ಬದುಕಿಸಲು ಸಹಾಯ ಮಾಡುತ್ತದೆ. ಈ ಜೀವ ಉಳಿಸುವ ಕೌಶಲವನ್ನು ಕಲಿಯಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ. ಮಣಿಪಾಲ್ ಆಸ್ಪತ್ರೆಗಳು ನಿಮಗೆ ತರಬೇತಿ ನೀಡಲು ಸಿದ್ಧವಾಗಿದೆ ಮತ್ತು ಒಟ್ಟಾಗಿ ನಾವು ಅನೇಕ ಜೀವಗಳನ್ನು ಉಳಿಸಬಹುದು. ಈ ಮಿಷನ್ ಟೀಮ್‌ವರ್ಕ್ ಶಕ್ತಿಯನ್ನು ತೋರಿಸುತ್ತದೆ ಮತ್ತು ಭಾಗವಹಿಸಿದ ಎಲ್ಲರಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ‘ ಎಂದರು.
‘ಮಿಷನ್ 3K - 3000 ಹಾರ್ಟ್ಸ್, ಒನ್ ಬೀಟ್‘ ಕಾರ್ಯಕ್ರಮವು ಮಣಿಪಾಲ್ ಆಸ್ಪತ್ರೆಯ (ಮೈಸೂರು ಮತ್ತು ಸೇಲಂ ಒಳಗೊಂಡು) ದಕ್ಷಿಣ ಕ್ಲಸ್ಟರ್ನ 12 ಘಟಕಗಳು ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ತಂಡವನ್ನು ಸೇರುವ ಮೂಲಕ ಟೀಮ್‌ವರ್ಕ್ ಅನ್ನು ಎತ್ತಿ ತೋರಿಸಿದೆ.
ಕಾರ್ಯಕ್ರಮವನ್ನು ಚಿಂತನಶೀಲವಾಗಿ ಆಯೋಜಿಸಲಾಗಿತ್ತು ಮತ್ತು ಎಲ್ಲವೂ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಭಾಗವಹಿಸುವವರು ನಿಗದಿತ ಗುಂಪುಗಳಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿದರು. ಪ್ರತಿ ನಿಮಿಷಕ್ಕೆ ಸರಾಸರಿ ಮೂರು ಸಿಪಿಆರ್ ಪ್ರದರ್ಶನಗಳೊಂದಿಗೆ, ಮಣಿಪಾಲ್ ಆಸ್ಪತ್ರೆಗಳು ನಿರ್ದಿಷ್ಟ ಸಮಯದಲ್ಲಿ 3,319 ಸಿಪಿಆರ್ಗಳನ್ನು ಪೂರ್ಣಗೊಳಿಸಿತು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬೆಂಗಳೂರಿನ 30ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳು ಒಟ್ಟಾಗಿ ಕೆಲಸ ಮಾಡಿದವು. ಈ ಮಹತ್ವಾಕಾಂಕ್ಷೆಯ ದಾಖಲೆಯ ಪ್ರಯತ್ನಕ್ಕೆ ನರ್ಸ್‌ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ (ಪ್ಯಾರಾ ಮೆಡಿಕಲ್) ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಪ್ರಮುಖ ಬೆಂಬಲವನ್ನು ನೀಡಿದರು.