Bangalore Water Crisis: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು, ತವರಿನತ್ತ ಹೊರಟರು ಟೆಕ್ಕಿಗಳು ನಗರ ಬಿಟ್ಟು
ನೀರಿನ ಸಮಸ್ಯೆ ದಿನ ದಿನ ಬಿಗಡಾಯಿಸುತ್ತಿರುವುದರಿಂದ ಉದ್ಯಾನ ನಗರಿ ಬೆಂಗಳೂರಿನಲ್ಲಿ ವೃತ್ತಿಪರರು ಊರು ಕಡೆ ಮುಖ ಮಾಡುತ್ತಿದ್ದಾರೆ. ಏನಿದರ ಹಿನ್ನೆಲೆ.. ಇಲ್ಲಿದೆ ವರದಿ(ವರದಿ: ಪ್ರಿಯಾಂಕಗೌಡ, ಬೆಂಗಳೂರು)
ಬೆಂಗಳೂರು: ಸಿಲಿಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರಿಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಅನೇಕ ಮಂದಿ ತಮ್ಮ ಹೊಟ್ಟೆಪಾಡಿಗಾಗಿ ಬರುತ್ತಾರೆ. ಇಲ್ಲಿನ ವಾತಾವರಣವನ್ನು ಯಾರೂ ಕೂಡ ಇಷ್ಟಪಡದವರಿಲ್ಲ. ಬೆಂಗಳೂರು ಎಂದರೇ ಕೂಲ್ ಸಿಟಿ ಎಂದೇ ಪ್ರಸಿದ್ಧಿ ಪಡೆದಿದೆ. ಆದರೀಗ, ಬೆಂಗಳೂರು ಕೂಡ ಸೆಖೆ ನಗರಿಯಾಗುತ್ತಿದೆ. ಒಂದೆಡೆ ಬಿಸಿಲಿನ ತಾಪಮಾನ ಹೆಚ್ಚಿದ್ದರೆ, ಇನ್ನೊಂದೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಮಂದಿ ತಮ್ಮ ಊರುಗಳತ್ತ ಹೊರಟು ನಿಂತಿದ್ದಾರೆ. ಅದರಲ್ಲೂ ಹೊರ ರಾಜ್ಯಗಳಿಂದ ಬಂದಿರುವ ಟೆಕ್ಕಿಗಳಿಗೂ ಇದರ ಬಿಸಿ ತಟ್ಟಿದೆ.
ಐಟಿ ಬಿಟಿ ನಗರ ಎಂದು ಕರೆಸಿಕೊಳ್ಳುವ ಬೆಂಗಳೂರಿಗೆ ನೀರಿನ ಕಂಟಕ ಎದುರಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಐಟಿ ಹಬ್ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳ ಸಾವಿರಾರು ಟೆಕ್ಕಿಗಳು ತಮ್ಮ ಜೀವನ ಕಂಡುಕೊಂಡಿದ್ದಾರೆ. ಆದರೆ, ಇದೀಗ ನಗರದಲ್ಲಿ ತೀವ್ರ ನೀರಿನ ಅಭಾವ ಎದುರಾಗಿರುವುದು ಟೆಕ್ಕಿಗಳು ತಮ್ಮ ತವರಿನ ದಾರಿ ಹಿಡಿಯುತ್ತಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಟೆಕ್ಕಿಗಳ ಮನದಾಳ
ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಸುಮಂತ್ ಎಂಬುವವರಿಗೆ ನೀರಿನ ಸಮಸ್ಯೆಯು ಬೆಂಗಳೂರನ್ನು ಬಿಟ್ಟು ಮೈಸೂರಿನಲ್ಲಿರುವ ತನ್ನ ಪೂರ್ವಜರ ಮನೆಗೆ ತೆರಳುವಂತೆ ಮಾಡಿದೆ. ಕೆಆರ್ ಪುರಂನ ಅಯ್ಯಪ್ಪ ನಗರದಲ್ಲಿ ನೆಲೆಸಿರುವ ಸುಮಂತ್ ಮತ್ತು ಅವರ ಪತ್ನಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಈ ದಂಪತಿ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದು, ಮೂಲಭೂತ ಅವಶ್ಯಕತೆಗಳಿಗೂ ಪರದಾಡುವಂತಾಗಿದೆ.
ನೀರಿನ ಬಿಕ್ಕಟ್ಟು ನಮ್ಮನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಮಾಡಿದೆ. ನಾವು ವಾಸಿಸಲು ಸಾಧ್ಯವಾಗದ ಫ್ಲ್ಯಾಟ್‌ಗೆ ನಾವು ಇನ್ನೂ 25,000 ರೂಪಾಯಿಗಳ ಭಾರಿ ಮಾಸಿಕ ಬಾಡಿಗೆಯನ್ನು ಪಾವತಿಸುತ್ತಿದ್ದೇವೆ, ಎಂದು ಸುಮಂತ್ ಹೇಳಿದ್ದಾಗಿ ತಿಳಿಸಲಾಗಿದೆ.
ಇನ್ನು ಸುಮಂತ್ ಕೆಲಸ ಮಾಡುವ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಇಲ್ಲದ ಕಾರಣ, ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಕಚೇರಿ ಸಭೆಗಳಿಗೆ ಹಾಜರಾಗಲೇ ಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ನೀರಿನ ಕೊರತೆ ಕಡಿಮೆ ಇರುವ ದಕ್ಷಿಣ ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಪರಿಸ್ಥಿತಿ ಸುಧಾರಿಸುವವರೆಗೆ ಉಳಿಯಬೇಕಾಗಿ ಬಂದಿದೆ.
ನೀರಿನ ಬಿಕ್ಕಟ್ಟಿನಿಂದ ಐಟಿ ಉದ್ಯೋಗಿ ಅನಿತಾ ಶ್ರೀನಿವಾಸ್ ಎಂಬುವವರು ಮುಂಬೈಗೆ ತೆರಳಿದ್ದಾರೆ. ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಟ್ಯಾಂಕರ್ ನೀರಿಗೆ ಕಾದರೂ ಸಿಗುತ್ತಿಲ್ಲ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಮುಂಬೈಗೆ ಸ್ಥಳಾಂತರಗೊಂಡಿದ್ದಾಗಿ ಅವರು ಹೇಳಿದ್ದಾರೆ.
ಡಿಸಿಎಂ ಹೇಳೋದು ಏನು
ನಗರದ 13,900 ಬೋರ್‌ವೆಲ್‌ಗಳ ಪೈಕಿ 6,900 ಬೋರ್‌ವೆಲ್‌ಗಳು ನಿಷ್ಕ್ರಿಯಗೊಂಡಿರುವುದೇ ಬಿಕ್ಕಟ್ಟಿಗೆ ಕಾರಣ. ಬೆಂಗಳೂರಿನ ಹಲವರಿಗೆ ನಿರ್ಣಾಯಕ ನೀರಿನ ಮೂಲವಾಗಿರುವ ಬೋರ್‌ವೆಲ್‌ಗಳು ಬತ್ತಿರುವುದು ಸಮಸ್ಯೆಯನ್ನು ಜಟಿಲವಾಗಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
15 ವರ್ಷಗಳಿಂದ ರಶ್ಮಿ ರವೀಂದ್ರನ್ ಎಂಬುವವರು ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದಾರೆ. ದಿನನಿತ್ಯದ ಬಳಕೆಗೂ ತೀವ್ರ ನೀರಿನ ಕೊರತೆಯುಂಟಾಗಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ನಾವು ಬೆಂಗಳೂರಿನಲ್ಲಿ 15 ವರ್ಷಗಳಿಂದ ವಾಸಿಸುತ್ತಿದ್ದೇವೆ. ಇಲ್ಲಿಯವರೆಗೂ ತೀವ್ರ ನೀರಿನ ಕೊರತೆಯನ್ನು ಎಂದಿಗೂ ಎದುರಿಸಲಿಲ್ಲ. ಬಾಣಸವಾಡಿಯಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದು, ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದೇವೆ. ಇದೀಗ ಬೋರ್‌ವೆಲ್ ಬತ್ತಿ ಹೋಗಿದ್ದು, ನೀರಿಗಾಗಿ ಪರದಾಡುವಂತಾಗಿದೆ ಎಂದು ಅವರು ತಮ್ಮ ಸಂಕಷ್ಟ ತೋಡಿಕೊಂಡರು.
ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿಲ್ಲ. ಮನೆಗೆ 40,000 ರೂ. ಬಾಡಿಗೆ ಪಾವತಿಸುತ್ತಿದ್ದು, ನೀರು ಸಿಗದೆ ಪರದಾಡುತ್ತಿದ್ದೇನೆ. ಶೌಚಾಲಯಕ್ಕೆ ಹೋಗಲೂ ನೀರಿಲ್ಲ ಎಂದು ವ್ಯಕ್ತಿಯೊಬ್ಬರು ತನ್ನ ಅಳಲು ತೋಡಿಕೊಂಡಿದ್ದಾರೆ.
2023 ರಲ್ಲಿ ಮುಂಗಾರಿನ ಅಭಾವದಿಂದಾಗಿ ರಾಜ್ಯಕ್ಕೆ ಬರಗಾಲ ಬಂದೆರಗಿದೆ. ಮಳೆಗಾಲದಲ್ಲಿ ಸರಿಯಾಗಿ ಮಳೆ ಬರದೇ ಇದ್ದುದೇ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠೋರವಾಗಲಿದೆ. ಈ ಕಾರಣದಿಂದ ತನ್ನೂರಿನಿಂದಲೇ ಕೆಲಸ ಮಾಡುವ ನಿಟ್ಟಿನಲ್ಲಿ ಹಲವರು ನಿರ್ಧಾರ ತೆಗೆದುಕೊಂಡಿದ್ದಾರೆ.
(ವರದಿ: ಪ್ರಿಯಾಂಕಗೌಡ, ಬೆಂಗಳೂರು)
ವಿಭಾಗ