ಬೆಂಗಳೂರಿನಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಗೆ ಜನರಿಂದ ಉತ್ತಮ ಸ್ಪಂದನೆ; ಮೆಟ್ರೋ ಫೀಡರ್ ಮಾರ್ಗದ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ಮೆಟ್ರೋ ಫೀಡರ್ ಬಸ್ ಸೇವೆ ಜನರಿಗೆ ತುಂಬಾ ಅನುಕೂಲ ಆಗುತ್ತಿದೆ. ಬೇಗ ಮನೆ ಸೇರಿಕೊಳ್ಳಲು ನೆರವಾಗುತ್ತಿದೆ. ಮೆಟ್ರೋ ಫೀಡರ್ ಮಾರ್ಗದ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಎಂಟಿಸಿ ಆರಂಭಿಸಿರುವ ಮೆಟ್ರೋ ಫೀಡರ್ ಬಸ್ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಜನರು ಬೇಗ ಮನೆ ಸೇರಿಕೂಳ್ಳಲು ಈ ಯೋಜನೆ ಭಾರಿ ವರ್ಕೌಟ್ ಆಗುತ್ತಿದೆ.
ಉದ್ಯೋಗಿಗಳು ಕೆಲಸ ಮಾಡುವ ಕಚೇರಿ ಹಾಗೂ ಇತರೆ ಸಂಸ್ಥೆಗಳ ಸಮೀಪದ ಬಸ್ ನಿಲ್ದಾಣದಿಂದ ಅವರು ಹೋಗಬೇಕಾದ ಮೆಟ್ರೋ ರೈಲು ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲು ಮೆಟ್ರೋ ಫೀಡರ್ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ. ಪ್ರಯಾಣಿಕರು ಮೆಟ್ರೋ ನಿಲ್ದಾಣಕ್ಕೆ ತಲುಪಲು ಎರಡ್ಮೂರು ಬಸ್‌ಗಳನ್ನು ಬದಲಾಯಿಸುವ ಹಾಗೂ ಹೆಚ್ಚು ಸಮಯವನ್ನು ವ್ಯಯ ಮಾಡುವುದನ್ನು ಈ ಸೇವೆ ತಪ್ಪಿಸುತ್ತದೆ. ಜೊತೆಗೆ ಕೆಲಸ ಮುಗಿದ ಬಳಿಕ ಬೇಗ ಮನೆ ಸೇರಿಕೊಳ್ಳಲು ಮೆಟ್ರೋ ಫೀಡರ್ ಬಸ್ ತುಂಬಾ ಅನುಕೂಲವಾಗಿದೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ 40 ಮಾರ್ಗಗಳಲ್ಲಿ ಮೆಟ್ರೋ ಫೀಡರ್ ಸೇವೆಯನ್ನು ಒದಗಿಸುತ್ತಿದೆ. ಎಸ್‌ಎಂವಿ ರೈಲ್ವೇ ನಿಲ್ದಾಣದಿಂದ ರಮೇಶ್ ನಗರ, ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಕನ್ನಮಂಗಲ, ಮಾರತಹಳ್ಳಿಯಿಂದ ಕಾಡುಗೋಡಿ ಮೆಟ್ರೋ ನಿಲ್ದಾಣ, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಸ್‌ಎಂವಿ ರೈಲ್ವೆ ನಿಲ್ದಾಣ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕನಕಗಿರಿ, ಹೂಡಿ ಮೆಟ್ರೋ ನಿಲ್ದಾಣದಿಂದ ಕೆಆರ್ ಪುರ, ಟಿನ್‌ಫ್ಯಾಕ್ಟರಿಯಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳನ್ನು ಸಂಚರಿಸುತ್ತವೆ. ಇದರ ಸಂಪೂರ್ಣ ವಿವರ ತಿಳಿಯಲು https://mybmtc.karnataka.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ವಿಜಯನಗರದಿಂದ ಬನಶಂಕರಿ ಟಿಟಿಎಂಸಿ, ವಿಜಯನಗರದಿಂದ ಶಂಕರ್ ನಾಗ್ ಬಸ್ ನಿಲ್ದಾಣ, ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ದಿಂದ ಶ್ರೀನಿವಾಸಪುರ ಕ್ರಾಸ್, ಜಯನಗರ ಮೆಟ್ರೋ ನಿಲ್ದಾಣದಿಂದ ವಡ್ಡರಪಾಳ್ಯ ಜೆಪಿ ನಗರ 8ನೇ ಹಂತ, ಬನಶಂಕರಿ ಯಿಂದ ಬಿಟಿಎಂ ಲೇಔಟ್ (ಕುವೆಂಪುನಗರ), ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಬಿಇಎಲ್ ಸರ್ಕಲ್, ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂಎಸ್ ಪಾಳ್ಯ ಹಾಗೂ ಲಗ್ಗೆರೆ, 8ನೇ ಮೈಲಿಯಿಂದ ತಿಪ್ಪೇನಹಳ್ಳಿ ಹೀಗೆ ಒಟ್ಟು 40 ಮಾರ್ಗಗಳಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಒದಗಿಸಲಾಗಿದೆ.
ಅತಿ ಶೀಘ್ರದಲ್ಲೇ ಕ್ಯೂಆರ್ ಕೋಡ್ ಮೂಲಕ ಪ್ರಯಾಣಿಕರಿಗೆ ಬಸ್ ಮಾಹಿತಿ
ಅತಿ ಶೀಘ್ರದಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರು ನಿರ್ದಿಷ್ಟ ಮೆಟ್ರೋ ನಿಲ್ದಾಣದಿಂದ ಕಾರ್ಯನಿರ್ವಹಿಸುವ ಬಸ್ ಸೇವೆಗಳ ಮಾಹಿತಿಯನ್ನು ನೀಡಲಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಿ ಅವುಗಳ ಆಗಮನ, ನಿರ್ಗಮನ, ಪ್ರಸ್ತುತ ಯಾವ ನಿಲ್ದಾಣದಲ್ಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ಮೆಟ್ರೋ ಪ್ರಯಾಣಿಕರಿಗೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಸೌಲಭ್ಯವನ್ನು ನೀಡಲಾಗುತ್ತದೆ. ನಮ್ಮ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಬಗ್ಗೆ ನಮ್ಮ ಮೆಟ್ರೋ ಮತ್ತು ಬಿಟಿಎಂಸಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಈ ಸೇವೆ ಲಭ್ಯವಾದರೆ ನೀವು ಇರುವ ಸ್ಥಳದಲ್ಲೇ ನೀವು ಪ್ರಯಾಣಿಸಬೇಕಿರುವ ಬಸ್‌ನ ಮಾಹಿತಿ ನಿಮ್ಮ ಅಂಗೈನಲ್ಲೇ ಲಭ್ಯವಾಗುತ್ತದೆ.
(This copy first appeared in Hindustan Times Kannada website. To read more like this please logon to kannada.hindustantimes.com )