ಕನ್ನಡ ಸುದ್ದಿ  /  Karnataka  /  Bengaluru News New Karnataka Govt Implements Civil Procedure Code That Promises Speedy Justice To Famer Poor Uks

ಕರ್ನಾಟಕದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಜಾರಿ; ಬಡವರಿಗೆ ಇನ್ನು 6 ತಿಂಗಳ ಒಳಗೆ ನ್ಯಾಯದಾನ

ಬಡ, ದುರ್ಬಲ ವರ್ಗದವರಿಗೆ ಕ್ಷಿಪ್ರ ನ್ಯಾಯದಾನ ಒದಗಿಸುವುದಕ್ಕೆ ಅವಕಾಶ ನೀಡುವ ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಜಾರಿ ಸೋಮವಾರ (ಮಾರ್ಚ್ 4) ಜಾರಿಯಾಗಿದೆ. ಇದರಂತೆ, ಬಡವರಿಗೆ ಇನ್ನು 6 ತಿಂಗಳ ಒಳಗೆ ನ್ಯಾಯದಾನ ಸಿಗಲಿದೆ. ಈ ಕಾಯ್ದೆಯ ಫಲಾನುಭವಿಗಳು ಯಾರು, ಅದಕ್ಕೆ ಮಾನದಂಡವೇನು ಎಂಬಿತ್ಯಾದಿ ವಿವರ.

ಕಾನೂನು ಸಚಿವ ಎಚ್ ಕೆ ಪಾಟೀಲ್ (ಎಡಚಿತ್ರ) ನ್ಯಾಯದಾನದ ಸಾಂಕೇತಿಕ ಚಿತ್ರ (ಬಲ ಚಿತ್ರ)
ಕಾನೂನು ಸಚಿವ ಎಚ್ ಕೆ ಪಾಟೀಲ್ (ಎಡಚಿತ್ರ) ನ್ಯಾಯದಾನದ ಸಾಂಕೇತಿಕ ಚಿತ್ರ (ಬಲ ಚಿತ್ರ)

ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಬಡವರಿಗೆ ಇನ್ನು ಆರು ತಿಂಗಳ ಒಳಗೆ ನ್ಯಾಯ ಸಿಗಲಿದೆ. ಹೌದು, ಬಡವರು, ಸಣ್ಣರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದವರ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸುವ 'ಸಿವಿಲ್ ಪ್ರಕ್ರಿಯೆ ಸಂಹಿತೆ (ತಿದ್ದುಪಡಿ) ಮಸೂದೆ-2023'ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದು ಸೋಮವಾರ(ಮಾರ್ಚ್ 4) ವೇ ರಾಜ್ಯದಲ್ಲಿ ಜಾರಿಗೆ ಬಂದಿದೆ.

ಕಾನೂನು ಸಚಿವ ಎಚ್‌. ಕೆ. ಪಾಟೀಲ ಇದನ್ನು ಖಚಿತಪಡಿಸಿದ್ದು, ಕೆಳಹಂತದ ನ್ಯಾಯಾಲಯಗಳಿಂದ ಹಿಡಿದು ಹೈಕೋರ್ಟ್‌ವರೆಗೂ ಇದು ಅನ್ವಯವಾಗುತ್ತದೆ. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಡವರು, ಸಣ್ಣರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದವರ ವ್ಯಾಜ್ಯಗಳು 5 ರಿಂದ 10 ವರ್ಷಕ್ಕೂ ಹೆಚ್ಚು ಕಾಲದಿಂದ ಇತ್ಯರ್ಥವಾಗದೇ ಬಾಕಿ ಉಳಿದಿವೆ. ಸಕಾಲದಲ್ಲಿ ನ್ಯಾಯದಾನ ಮಾಡದೇ ತಡ ಮಾಡುವುದು ದ್ರೋಹ ಬಗೆಯುವುದಕ್ಕೆ ಸಮ ಎಂಬುದು ಗಮನಿಸಿದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.

6 ತಿಂಗಳ ಒಳಗೆ ನ್ಯಾಯದಾನ ಪಡೆಯಬಹುದಾದ ಫಲಾನುಭವಿಗಳು

ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಪ್ರಕಾರ 6 ತಿಂಗಳ ಒಳಗೆ ನ್ಯಾಯದಾನ ಪಡೆಯಬಹುದಾದ ಫಲಾನುಭವಿಗಳು ಯಾರು ಎಂಬುದನ್ನು ಸ್ಪಷ್ಟ ವಿವರಣೆಯನ್ನು ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ನೀಡಿದೆ. ಇದರಂತೆ,

1) ಆರ್ಥಿಕವಾಗಿ ದುರ್ಬಲರು ಅಂದರೆ ಎಲ್ಲ ಮೂಲಗಳು ಸೇರಿ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಿರದ ವ್ಯಕ್ತಿ

2) ಎರಡು ಹೆಕ್ಟೇರ್ ಒಣಬೇಸಾಯ ಭೂಮಿ ಇರುವವರು ಒಂದೂ ಕಾಲು ಹೆಕ್ಟೇರ್ ಮಳೆಯಾಶ್ರಿತ ಆರ್ದ್ರ ಜಮೀನು ಹೊಂದಿರುವವರು

3) ನೀರಾವರಿ ಬೆಳೆ ಬೆಳೆಯಲು ಅಥವಾ ಕಬ್ಬು/ ದ್ರಾಕ್ಷಿ/ ತೆಂಗು/ ಅಡಕೆ/ ರೇಷ್ಮೆ ಬೆಳೆಯುವುದಕ್ಕಾಗಿ ಅರ್ಧ ಎಕರೆ ಭೂಮಿ ಹೊಂದಿರುವವರು

4) ದೀರ್ಘಕಾಲಿಕ ನೀರಾವರಿ ಸೌಲಭ್ಯ ಹೊಂದಿರುವ ಅಥವಾ ವರ್ಷದಲ್ಲಿ ಒಂದಕ್ಕಿಂತ ಹೆಚ್ಚುವರಿ ನೀರಾವರಿ ಬೆಳೆ ಬೆಳೆಯುವ ಸೌಲಭ್ಯಗಳಿರುವ ಕಾಲು ಹೆಕ್ಟೇರ್ ಭೂಮಿ ಹೊಂದಿರುವವರು.

ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳು ಶೇ 30 ರಿಂದ ಶೇ 40

ಕಾನೂನು ತಜ್ಞರು, ವಕೀಲರು ಮತ್ತು ಸಂಬಂಧಿಸಿದ ಇತರ ತಜ್ಞರ ಜತೆ ಸಮಾಲೋಚನೆ ನಡೆಸಿ 2023 ರ ಜುಲೈನಲ್ಲಿ ಮಸೂದೆಗೆ ತಿದ್ದುಪಡಿ ತರಲಾಯಿತು. ಆಬಳಿಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೇ ಅದನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದರು. ಈ ಮಸೂದೆಗೆ ರಾಷ್ಟ್ರಪತಿಯವರು ಫೆಬ್ರವರಿಯಲ್ಲಿ ಅಂಕಿತ ಹಾಕಿದ್ದು, ಈಗ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.

ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾರ್ಗಸೂಚಿಯೊಂದನ್ನು ಹೊರಡಿಸಲಾಗಿದೆ. ನ್ಯಾಯಾಲಯಗಳು ಪ್ರತಿನಿತ್ಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಬಡವರು, ಸಣ್ಣರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಬೇಕಾಗುತ್ತದೆ. ಈಗ ಹೊಸ ಕಾನೂನು ಜಾರಿಯಾದ ಕಾರಣ ನ್ಯಾಯಾಲಯಗಳ ಮೇಲೆ ಸ್ವಲ್ಪಮಟ್ಟಿಗೆ ಒತ್ತಡ ಆಗಬಹುದು. ತ್ವರಿತ ನ್ಯಾಯದಾನದ ವಿಚಾರದಲ್ಲಿ ಈ ಹೊಸ ಕ್ರಮದ ಅಗತ್ಯವಿತ್ತು. ಸಿವಿಲ್‌ ಪ್ರಕರಣಗಳ ಪೈಕಿ ಸರ್ಕಾರಕ್ಕೆ ಸಂಬಂಧಿಸಿದ್ದು ಶೇ 30 ರಿಂದ ಶೇ 40 ಇದ್ದರೆ, ಕೈಗಾರಿಕೆಗಳು ಮತ್ತು ರಿಯಲ್‌ಎಸ್ಟೇಟ್‌ಗೆ ಸಂಬಂಧಿಸಿರುವುದು ಶೇ 25 ಪ್ರಕರಣಗಳಿವೆ ಎಂದು ಸಚಿವ ಹೆಚ್ ಕೆ ಪಾಟೀಲ್ ವಿವರಿಸಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point