ಸಂತ್ರಸ್ತೆಯ ಅಪಹರಣ ಪ್ರಕರಣ; ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರ, ತೀರ್ಪು ನೀಡಲಿದೆ ಹೈಕೋರ್ಟ್
ಹಾಸನ ಲೈಂಗಿಕ ಹಗರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ಅಪಹರಣ ಕೇಸ್‌ನ ಪ್ರಮುಖ ಆರೋಪಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕರ್ನಾಟಕ ಹೈಕೋರ್ಟ್ ಈ ದಿನ ತೀರ್ಪು ನೀಡಲಿದೆ.
ಬೆಂಗಳೂರು: ಹಾಸನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಅತ್ಯಾಚಾರ ಸಂತ್ರಸ್ತೆಯ ಅಪಹರಣದ ಸಂಚು ರೂಪಿಸಿದ ಪ್ರಮುಖ ಆರೋಪಿ ಭವಾನಿ ರೇವಣ್ಣ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಕರ್ನಾಟಕ ಹೈಕೋರ್ಟ್ (Karnataka High Court)ಗೆ ತಿಳಿಸಿದೆ. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇದರ ತೀರ್ಪನ್ನು ಇಂದು ಪ್ರಕಟಿಸುವ ಸಾಧ್ಯತೆ ಇದೆ.
ಅತ್ಯಾಚಾರದ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (33) ಅವರ ವಿರುದ್ಧ ಇನ್ನಷ್ಟು ಕ್ರಿಮಿನಲ್ ದೂರು ದಾಖಲಾಗುವುದನ್ನು ತಪ್ಪಿಸುವುದಕ್ಕಾಗಿ ಭವಾನಿ ರೇವಣ್ಣ ಅವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಏಳು ಆರೋಪಿಗಳನ್ನು ಸಂಪರ್ಕಿಸಿದ್ದರು ಎಂದು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ ಕರ್ನಾಟಕ ಹೈಕೋರ್ಟ್‌ಗೆ ವಿವರಿಸಿದೆ.
ಹೈಕೋರ್ಟ್‌ನಲ್ಲಿ ಜೂನ್ 14 ರಂದು ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ (55) ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಎಸ್‌ಐಟಿ ಪರ ವಕೀಲರು ತಮ್ಮ ವಾದ ಮಂಡನೆ ಮಾಡುತ್ತ, ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯ ಅಪಹರಣದ ಸಂಚು ರೂಪಿಸಿದ್ದಲ್ಲದೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ಭವಾನಿ ರೇವಣ್ಣ ನಿರ್ವಹಿಸಿದ್ದರು ಎಂಬುದಕ್ಕೆ ಎಸ್‌ಐಟಿ ಸಾಕ್ಷ್ಯ ಕಲೆ ಹಾಕಿದೆ. ಹೀಗಾಗಿ ಅವರಿಗೆ ಜಾಮೀನಿ ವಿಸ್ತರಿಸಬಾರದು ಎಂದು ಮನವಿ ಮಾಡಿದರು. ಭವಾನಿ ರೇವಣ್ಣ ಅವರ ಪರ ವಕೀಲರ ವಾದವನ್ನೂ ಆಲಿಸಿದ ಕೋರ್ಟ್ ಈ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.
ಮಧ್ಯಂತರ ಜಾಮೀನು ವಿಸ್ತರಣೆ; ತನಿಖೆಗೆ ಸಹಕರಿಸಲು ಸೂಚನೆ
ಭವಾನಿ ರೇವಣ್ಣ ಅವರಿಗೆ ಮಧ್ಯಂತರ ಜಾಮೀನು ನೀಡುವಾಗ, ಜೂನ್ 7 ರಂದು ಎಸ್‌ಐಟಿ ಎದುರು ಹಾಜರಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಅದಾಗಿ, ಅವರ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಯನ್ನು ಒಂದು ವಾರದವರೆಗೆ ವಿಸ್ತರಿಸಿತ್ತು.
ಮೇ 31 ರಂದು, ಚುನಾಯಿತ ಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯವು ತನ್ನ ಮಗನ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯ ಅಪಹರಣದಲ್ಲಿ ಭಾಗಿಯಾಗಿರುವ ಪ್ರಾಥಮಿಕ ಪ್ರಕರಣವನ್ನು ಕಂಡುಹಿಡಿದ ನಂತರ ಭವಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್ ಅವರು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠಕ್ಕೆ "ಈ ಮಹಿಳೆ ತನ್ನ ಮಗನ ವಿರುದ್ಧ ದೂರು ದಾಖಲಿಸುವುದನ್ನು ತಡೆಯಲು ಅಪಹರಣದ ಸೂತ್ರಧಾರಿಯಾಗಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್‌ನಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ವಿಚಾರವಾಗಿ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಮೈಸೂರು ಜಿಲ್ಲೆ ಕೆಆರ್‌ನಗರ ತಾಲ್ಲೂಕಿನ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
ವಿಶೇಷ ತನಿಖಾ ತಂಡ ಶಾಸಕ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ಅವರಿಗೂ ನೊಟೀಸ್ ಜಾರಿ ಮಾಡಿತ್ತು. ಆದರೆ ಭವಾನಿ ರೇವಣ್ಣ ಮಧ್ಯಂತರ ಜಾಮೀನು ಸಿಗುವ ತನಕವೂ ಅಂದರೆ ಜೂನ್ 7 ರ ತನಕವೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಬಹುದು ಎನ್ನುವ ಭೀತಿಯಿಂದ ಭವಾನಿ ರೇವಣ್ಣ ಅವರು ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನನ್ನ ಕಕ್ಷಿದಾರರು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೂ ಅವರಿಗೆ ನೊಟೀಸ್ ಅನ್ನು ನೀಡಲಾಗಿದೆ. ಇದೇ ಪ್ರಕರಣದಲ್ಲಿ ಬಂಧಿಸುವ ಆತಂಕವೂ ಇದೆ. ಈ ಕಾರಣದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಪರಿಗಣಿಸಬೇಕು ಎಂದು ಭವಾನಿ ರೇವಣ್ಣ ಪರ ವಕೀಲರು ವಾದಿಸಿದರು. ಅಲ್ಲದೇ ಪ್ರತಿವಾದವನ್ನೂ ಆಲಿಸಿದರು. ಬಳಿಕ ಜೂನ್ ಆರಂಭದಲ್ಲಿ ಮಧ್ಯಂತರ ಜಾಮೀನು ನೀಡಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಇಂದು ಪ್ರಕಟವಾಗುವ ನಿರೀಕ್ಷೆ ಇದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.