ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ, ಲೋಕಸಭಾ ಚುನಾವಣೆ ನೆರಳಿನಲ್ಲಿ ಬಿಜೆಪಿ ಭಿನ್ನಮತ ಬಹಿರಂಗ, ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆ
Rajya Sabha Election 2024: ರಾಜ್ಯಸಭಾ ಚುನಾವಣೆ ಮುಗಿದಿದೆ. ಬಿಜೆಪಿಯ ಇಬ್ಬರು ಶಾಸಕರ ಮುನಿಸು ಬಯಲಾಗಿದೆ. ಅಧಿಕೃತ ಅಭ್ಯರ್ಥಿಗಳ ಪರವಾಗಿ ಇವರು ಮತ ಹಾಕದಿದ್ದರೂ ಇವರಿಬ್ಬರ ಅನರ್ಹತೆ ಅಸಾಧ್ಯ. ಅಡ್ಡ ಮತದಾನ ಹೇಗೆ ಗೊತ್ತಾಗುವುದು ಹೇಗೆ? ಬಿಜೆಪಿಗೆ ಕೈಕೊಟ್ಟ ಇಬ್ಬರು ಶಾಸಕರು ಯಾರು? (ವಿಶ್ಲೇಷಣೆ: ಎಚ್.ಮಾರುತಿ)
ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಅಚ್ಚರಿಯ ಒಂದೇ ಒಂದು ಅಂಶ ಎಂದರೆ ಜೆಡಿಎಸ್‌ನ ಇಬ್ಬರು ಶಾಸಕರಾದ ಶರಣ ಕುಂದಕೂರ ಮತ್ತು ಕರೆಮ್ಮ ನಾಯಕ ಅಡ್ಡಮತದಾನ ಮಾಡದೆ ಪಕ್ಷ ನಿಷ್ಠೆಯನ್ನು ತೋರಿದ್ದಾರೆ. ಆದರೆ, ಶಿಸ್ತಿನ ಪಕ್ಷ ಎಂದೇ ಬಿಂಬಿಸಿಕೊಂಡಿರುವ ಬಿಜೆಪಿಯಲ್ಲಿ ಅಂದುಕೊಂಡಂತೆ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್‌ನ ಅಜಯ್ ಮಾಕನ್ ಅವರಿಗೆ ಮತ ಚಲಾಯಿಸಿದ್ದರೆ ಅರಬೈಲ್ ಶಿವರಾಂ ಹೆಬ್ಬಾರ್ ಮತ ಹಾಕಲು ವಿಧಾನಸೌಧಕ್ಕೆ ಬರಲೇ ಇಲ್ಲ.
ಇದರೊಂದಿಗೆ ಅಡ್ಡಮತದಾನ ಮಾಡಿದ ಶಾಸಕ ಎಸ್‌ಟಿ ಸೋಮಶೇಖರ್ ವಿರುದ್ಧ ಕ್ರಮ ಜರುಗಿಸುವ ವಿಚಾರ ಮುನ್ನೆಲೆಗೆ ಬಂದಿದ್ದು, ವ್ಯಾಪಕ ಚರ್ಚೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಸದ್ಯದ ರಾಜಕೀಯ ವಿದ್ಯಮಾನಗಳ ಒಂದು ಕಿರು ಅವಲೋಕನ ಹೀಗಿದೆ.
ಹೊಂದಾಣಿಕೆ ಮಾಡಿಕೊಂಡಿದ್ದು ಏಕೆ?
ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಇದು ಎರಡನೇ ಸೋಲು. ಇತ್ತೀಚೆಗಷ್ಟೇ ಮುಗಿದ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಗೆಲುವು ಸಾಧಿಸಿದ್ದರೆ ಮೈತ್ರಿಕೂಟದ ಎಪಿ ರಂಗನಾಥ್ ಸೋಲು ಕಂಡಿದ್ದರು. ಇದು ಎರಡನೆಯ ಸೋಲು. ಅಗತ್ಯ ಶಾಸಕರ ಸಂಖ್ಯೆ ಇಲ್ಲವಾದರೂ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಖಭಂಗ ಅನುಭವಿಸುವ ಅಗತ್ಯ ಮೈತ್ರಿಕೂಟಕ್ಕೆ ಬೇಕಿರಲಿಲ್ಲ. ಅದರಲ್ಲೂ ಬಿಜೆಪಿಯ ಅಶಿಸ್ತು ಮತ್ತು ಭಿನ್ನಮತ ಸ್ಪಷ್ಟವಾಗಿ ಜಗಜ್ಜಾಹೀರಾಗಿದೆ. ಆತಂಕದ ನಡುವೆಯೂ ಜೆಡಿಎಸ್ ನ 19 ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ 45 ಮತಗಳು ಬೇಕಿದ್ದವು. ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ 47 ಮತಗಳನ್ನು ನಿಗದಿ ಮಾಡಿದ ನಂತರ ಉಳಿದಿದ್ದು, 19 ಮತಗಳು. ಅದರಲ್ಲಿ ಇಬ್ಬರ ಮತ ಮೈತ್ರಿಕೂಟಕ್ಕೆ ಲಭಿಸಿಲ್ಲ. ಬಿಜೆಪಿಯ 17 ಮತ್ತು ಜೆಡಿಎಸ್‌ನ 19 ಮತಗಳು ಸೇರಿದರೆ 36 ಮತಗಳು ಕುಪೇಂದ್ರ ರೆಡ್ಡಿಗೆ ಬಿದ್ದಿವೆ. ಇನ್ನೂ 9 ಮತಗಳ ಕೊರತೆ ಉಂಟಾಗಿದೆ.
ಒಂದು ವೇಳೆ ಬಿಜೆಪಿಯ ಇಬ್ಬರು ಮತ್ತು ನಾಲ್ವರೂ ಪಕ್ಷೇತರರು ಬಿಜೆಪಿ ಜೆಡಿಎಸ್ ಪರವಾಗಿದ್ದರೂ ಗೆಲುವು ಮರೀಚಿಕೆಯಾಗುತ್ತಿತ್ತು. ಗಣಿತದ ಯಾವುದೇ ಸೂತ್ರವನ್ನು ಅಳವಡಿಸಿದರೂ ಗೆಲುವು ದಕ್ಕುತ್ತಿರಲಿಲ್ಲ ಎನ್ನವುದು ಯಾವುದೇ ರಾಜ್ಯಶಾಸ್ತ್ರ ಪದವೀಧರನಿಗೂ ಅರ್ಥವಾಗುವ ವಿಷಯ. ಆದರೂ ಬಿಜೆಪಿ ಜೆಡಿಎಸ್ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದು ಏಕೆ ಎನ್ನುವುದು ಚಿದಂಬರ ರಹಸ್ಯವಾಗಿದೆ.
ಅನರ್ಹಗೊಳಿಸುವುದು ಅಸಾಧ್ಯ
ಇದೀಗ ಬಿಜೆಪಿ ತನ್ನ ಇಬ್ಬರು ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡುವುದಾಗಿ ಹೇಳುತ್ತಿದೆ. ಆದರೆ ಇದು ಅಸಾಧ್ಯ. ಸದನದೊಳಗೆ ಘಟಿಸುವ ಬೆಳವಣಿಗೆಗಳ ಮೇಲೆ ಮಾತ್ರ ಸಭಾಧ್ಯಕ್ಷರಿಗೆ ಹಕ್ಕು ಇರುತ್ತದೆ. ರಾಜ್ಯಸಭಾ ಚುನಾವಣೆ, ವಿಧಾನಸಭೆಯಿಂದ ಹೊರಗೆ ನಡೆದಿರುವ ಪ್ರಕ್ರಿಯೆಯಾಗಿದ್ದು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
ಅಡ್ಡ ಮತದಾನ ದೇಶಕ್ಕೆ ಹೊಸದೇನೂ ಅಲ್ಲ. ಇಂದು ನಡೆದ ಚುನಾವಣೆಯಲ್ಲೂ ಗುಜರಾತ್ ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಅಡ್ಡ ಮತದಾನ ನಡೆದಿದೆ. 2022ರಲ್ಲಿ ಜೆಡಿಎಸ್ ನ ಶ್ರೀನಿವಾಸಗೌಡ ಮತ್ತು ಎಸ್. ಆರ್. ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದರು. ಆಗಲೂ ಹೆಚ್ ಡಿ ಕುಮಾರಸ್ವಾಮಿ ಅವರು ಈ ಶಾಸಕರನ್ನು ಶಾಶ್ವತವಾಗಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದರು.
ಅಡ್ಡ ಮತದಾನ ಹೇಗೆ ಗೊತ್ತಾಗುತ್ತದೆ?
ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಶಾಸಕರು ತಮ್ಮ ಪಕ್ಷದ ಏಜೆಂಟ್‌ಗೆ ಮತ ಚಲಾಯಿಸಿದ ಮತಪತ್ರವನ್ನು ತೋರಿಸಿ ಮತಪೆಟ್ಟಿಗೆಯಲ್ಲಿ ಹಾಕಬೇಕು. ಖಾಲಿ ಪತ್ರವನ್ನು ತೋರಿಸುವಂತಿಲ್ಲ. ಅನ್ಯಪಕ್ಷದ ಏಜೆಂಟ್‌ಗೂ ತೋರಿಸುವಂತಿಲ್ಲ. ಪಕ್ಷೇತರ ಶಾಸಕರು ಯಾವುದೇ ಪಕ್ಷದ ಏಜೆಂಟಗೂ ಮತ ಪತ್ರ ತೋರಿಸುವ ಹಾಗಿಲ್ಲ. ಒಂದು ವೇಳೆ ತೋರಿಸಿದರೆ ಅವರ ಮತ ಅನರ್ಹವಾಗುತದೆ. ಇದರಿಂದ ಯಾರು ಯಾರಿಗೆ ಮತ ಚಲಾಯಿಸಿದ್ದಾರೆ ಎಂದು ಮಾತ್ರ ತಿಳಿಯಲು ಸಾಧ್ಯ.
ಕುದುರೆ ವ್ಯಾಪಾರ ನಡೆಯಬಾರದು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲಾಗಿದೆ. ರಾಜಕೀಯ ಪಕ್ಷವು ಅಡ್ಡ ಮತದಾನ ಮಾಡಿದ ಶಾಸಕರನ್ನು ಉಚ್ಚಾಟಿಸಬಹುದು, ಅಮಾನತ್ತಿನಲ್ಲಿಡಬಹುದು ಅಥವಾ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಬಹುದು. ಅದಕ್ಕಿಂತ ಹೆಚ್ಚಿಗೆ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲ.
(ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)