ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ
Eid Milad 2024: ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 16ರಂದು ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಬೆಂಗಳೂರು: ಮುಸ್ಲಿಂ ಬಾಂಧವರು ಸೆಪ್ಟೆಂಬರ್ 16ರಂದು ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು (Eid Milad 2024) ಆಚರಿಸಲಿದ್ದು, ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಯಲಿದೆ. ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದ ನಾಗಮಂಗಲ ಗಲಭೆಯ (Nagamangala Riots) ಬಳಿಕ ಬೆಂಗಳೂರು ಪೊಲೀಸರು (Bengaluru Police) ಹೈಅಲರ್ಟ್ ಆಗಿದ್ದು, ಭಾರೀ ಭದ್ರತೆಗೆ ಮುಂದಾಗಿದ್ದಾರೆ. ಯಾವುದೇ ಕೋಮು ಗಲಭೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿನ ಎಲ್ಲೆಡೆ, ಅದರಲ್ಲೂ ಮುಖ್ಯವಾಗಿ ವೈಎಂಸಿಎ ಮೈದಾನ, ಮಿಲ್ಲರ್ಸ್ ರಸ್ತೆ, ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀ ನಗರದ ಸುಲ್ತಾನ್ಜಿ ಗುಂಟಾ ಮೈದಾನಗಳಲ್ಲಿ ಹಾಗೂ ಹಲವು ಭಾಗಗಳಲ್ಲಿ ಈ ಮೆರವಣಿಗೆ ನಡೆಯಲಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ಸುಗಮ ಸಂಚಾರ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
1. ಮೆರವಣಿಗೆ ಸಾಗಲಿರುವ ಹಾದಿಯಲ್ಲಿ ಸಾರ್ವಜನಿಕರಿಗೆ ಅಡಚಣೆ ಉಂಟಾಗದಂತೆ ಸ್ವಯಂ ಸೇವಕರು ಹಾಗೂ ಆಯೋಜಕರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಮೆರವಣಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಿ ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ಸಾಗುವಂತೆ ಸಹಕಾರ ಒದಗಿಸಬೇಕು. ಸಾರ್ವಜನಿಕ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕು.
2. ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಆಯುಧ, ಹರಿತ/ಚೂಪಾದ ವಸ್ತುಗಳನ್ನು ಹೊಂದಿರಬಾರದು.
3. ಈದ್ ಹಬ್ಬದ ದಿನದಂದು ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸುವಂತಿಲ್ಲ.
4. ಈದ್ ಹಬ್ಬದ ಪ್ರಯುಕ್ತ ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು.
5. ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚುಗಳ) ಮುಂಭಾಗ ಘೋಷಣೆ ಕೂಗುವಂತಿಲ್ಲ.
6. ಮೆರವಣಿಗೆಯ ಸಮಯದಲ್ಲಿ ಆಯೋಜಕರು ವಿದ್ಯುತ್ (ಕೆಇಬಿ) ಇಲಾಖೆಯಿಂದ ಸಿಬ್ಬಂದಿಯನ್ನು ನೇಮಿಸಿಕೊಂಡು ಎಲ್ಲಿಯೂ ವಿದ್ಯುತ್ ಸಂಪರ್ಕಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ.
7. ಈದ್ ಹಬ್ಬದ ಮೆರವಣಿಗೆಯ ವೇಳೆ ಆಯೋಜಕರು ಬೆಂಕಿ ನಂದಿಸುವ ಸಾಮಾಗ್ರಿ ಹೊಂದಿರುವುದು ಕಡ್ಡಾಯ.
8. ರಾತ್ರಿ ಮೆರವಣಿಗೆ ಮುಕ್ತಾಯಗೊಂಡ ಬಳಿಕ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚಿನ ಮಂದಿ ಹೋಗುವಂತಿಲ್ಲ.
9. ಹಿರಿಯ ನಾಗರಿಕರು ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆ ಆಗದಂತೆ ಧ್ವನಿವರ್ಧಕ ಬಳಸಬಾರದು. ಅಲ್ಲದೆ, ಬೆಳಿಗ್ಗೆ 6 ರಿಂದ ರಾತ್ರಿ 10ರ ತನಕ ಧ್ವನಿವರ್ಧಕ ಬಳಸಬೇಕು.
10. ಸ್ಥಳೀಯ ಪೊಲೀಸರ ಅನುಮತಿ ಪಡೆಯಬೇಕಿರುವುದು ಕಡ್ಡಾಯ. ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಿದೆ. ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
11. ಧ್ವನಿವರ್ಧಕಗಳಿಂದ ಕಡಿಮೆ ಶಬ್ದದ ಪ್ರಮಾಣ ಕಡಿಮೆ ಇರಬೇಕು. ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ವ್ಯವಸ್ಥೆ ಅಳವಡಿಸುವಂತಿಲ್ಲ.
ನಾಗಮಂಗಲ ಗಲಭೆ
ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ವೇಳೆ ನಡೆದಿದ್ದ ಗಲಭೆ ಪ್ರಕರಣವು ದೇಶಾದ್ಯಂತ ಸದ್ದು ಮಾಡಿದೆ. ಎರಡು ಧರ್ಮಗಳ ನಡೆದ ಈ ಘಟನೆಯಲ್ಲಿ 52 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯ ಭಾಗವಾಗಿ ರಾಜ್ಯ ಪೊಲೀಸ್ ಇಲಾಖೆ ಕ್ರಮ ವಹಿಸಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸ್ ಸಬ್ಇನ್ಸ್ಪೆಕ್ಟರ್ನನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ರಾಜಕೀಯಕ್ಕೆ ತಿರುಗಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ ಶುರುವಾಗಿದೆ.