ಬೆಂಗಳೂರಲ್ಲಿ ಹಬ್ಬ ಮುಗಿದ ಬೆನ್ನಿಗೆ ಕಸದ ಸಮಸ್ಯೆ ಶುರು, ದೀಪಾವಳಿ ಹಬ್ಬದ ಮತ್ತು ಪಟಾಕಿ ಕಸದ ವಿಲೇವಾರಿಯೇ ದೊಡ್ಡ ಸವಾಲು
ಬೆಂಗಳೂರು ಕಸ ಸಮಸ್ಯೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ನವರಾತ್ರಿ, ದೀಪಾವಳಿಯೇ ಇರಲಿ ಹಬ್ಬ ಮುಗಿದ ಕೂಡಲೇ ದೊಡ್ಡ ಪ್ರಮಾಣದ ಕಸ ವಿಲೇವಾರಿ ಸವಾಲು ಪಾಲಿಕೆ ಮುಂದಿರುತ್ತದೆ. ಈ ಸಲವೂ ಹಾಗೆಯೇ ಆಗಿದೆ. ವಿವಿಧ ಪ್ರದೇಶಗಳಲ್ಲಿ ಪಟಾಕಿ ಕಸ ವಿಲೇವಾರಿ ಮಾಡುವುದು ಹೇಗೆ ಎಂಬ ಚಿಂತೆ ಆವರಿಸಿದೆ. ಈ ಕುರಿತ ವರದಿ ಇಲ್ಲಿದೆ.
ಬೆಂಗಳೂರು: ನವರಾತ್ರಿ, ದಸರಾ ಮುಗಿದು ಈಗ ದೀಪಾವಳಿ ಹಬ್ಬವೂ ಕೊನೆಗೊಂಡಿದೆ. ಸಾಲು ರಜೆಗಳ ಬಳಿಕ ಎಲ್ಲರೂ ಬೆಂಗಳೂರು ಕಡೆಗೆ ಮುಖ ಮಾಡಿದ್ದು, ನಗರದ ವಿವಿಧೆಡೆ ಈಗ ಹಬ್ಬದ ತ್ಯಾಜ್ಯ ಮತ್ತು ಪಟಾಕಿ ಕಸ ರಾಶಿ ರಾಶಿ ಬಿದ್ದಿದೆ. ಅವುಗಳ ವಿಲೇವಾರಿಯೇ ಈಗ ದೊಡ್ಡ ಸವಾಲಾಗಿ ಪಾಲಿಕೆ ಮುಂದೆ ಇದೆ. ನವರಾತ್ರಿ ಸಂದರ್ಭದಲ್ಲಿಲ ವಾರಗಟ್ಟಲೆ ಕಸ ವಿಲೇವಾರಿಯಾಗದೇ ಬೆಂಗಳೂರು ನಗರದ ವಿವಿಧೆಡೆ ಸಮಸ್ಯೆಯಾಗಿತ್ತು. ಅದಾಗಿ ಮಳೆ ಬಂತು. ಕೆಲವು ಕಡೆ ಆಗಲೂ ತ್ಯಾಜ್ಯ ಹಾಗೆಯೇ ಉಳಿದು ಈಗ ದುರ್ನಾತ ಬೀರುವಂಥ ಸ್ಥಿತಿ ತಲುಪಿದೆ. ಈಗ ದೀಪಾವಳಿ ಹಬ್ಬವೂ ಮುಗಿಯಿತು. ಹಬ್ಬದ ತ್ಯಾಜ್ಯ, ಪಟಾಕಿ ಕಸ ಎಲವೂ ರಾಶಿ ರಾಶಿಯಾಗಿ ಬಿದ್ದಿವೆ. ಹೀಗಾಗಿ ಇವುಗಳ ವಿಲೇವಾರಿಯೇ ಈಗ ತಲೆನೋವಾಗಿ ಪರಿಣಮಿಸಿದೆ.
ಹಸಿರು ಪಟಾಕಿ ಬಳಕೆಗೆ ಆದೇಶ, ಆದರೂ ತುಂಬಿದೆ ಪಟಾಕಿ ಕಸ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹಸಿರು ಪಟಾಕಿ ಹೊರತಾದ ಪಟಾಕಿಗಳ ಮೇಲೆ ನಿಷೇಧ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೂ, ಕಳೆದ ಮೂರ್ನಾಲ್ಕು ದಿನಗಳಿಂದ ಹಲವು ರಸ್ತೆಗಳಲ್ಲಿ ಪಟಾಕಿ ತ್ಯಾಜ್ಯದಿಂದ ತುಂಬಿದೆ. ಪಟಾಕಿಗಳ ನಿರಂತರ ಬಳಕೆಯು ಹಲವು ಆತಂಕಗಳನ್ನು ಹುಟ್ಟುಹಾಕಿದೆ. ಬಹುಮುಖ್ಯವಾಗಿ ಕಸ ವಿಲೇವಾರಿ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ.
ಪಟಾಕಿ ಸಿಡಿಸಿದ ಪ್ರಮಾಣ ಹೆಚ್ಚಳವಾಗಿದ್ದು, ಪರಿಸರದ ಗಾಳಿ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದೇ ಕಾರಣ. ವಾಯು ಮಾಲಿನ್ಯ ಹೆಚ್ಚಳವಾಗಿದೆ. ಇದರ ನಡುವೆ ನಗರದಲ್ಲಿ ಸಿಡಿಸಿದ ಪಟಾಕಿ ಪ್ರಮಾಣವೂ ಹೆಚ್ಚಳವಾಗಿದ್ದು ಸಿಡಿಸಿದ ನಂತರ ರಸ್ತೆಗಳಲ್ಲಿ ಬಿದ್ದ ಕಾಗದದ ಚೂರು, ಕಡ್ಡಿಗಳ ವಿಲೇವಾರಿಯೇ ದೊಡ್ಡ ತಲೆನೋವು. ಪಟಾಕಿ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲೇ ವಿಲೇವಾರಿ ಮಾಡಬೇಕು. ಆದರೆ, ತ್ಯಾಜ್ಯ ಸಂಗ್ರಹಕಾರರು ಸಾಮಾನ್ಯ ಕಸದಲ್ಲಿ ಬೆರೆಸಿಕೊಂಡು ಹೋಗುತ್ತಿದ್ದುದು ಕಂಡುಬಂತು. ಇದು ಅವರ ಆರೋಗ್ಯದ ಮಟ್ಟಿಗೂ ಅಪಾಯಕಾರಿ ಕ್ರಮ.
ಹಸಿ ತ್ಯಾಜ್ಯ ಪ್ರಮಾಣದಲ್ಲೂ ಹೆಚ್ಚಳ
ಪ್ರತಿ ಬಾರಿ ಹಬ್ಬ ಬಂದಾಗಲೂ ಕಸದ ಪ್ರಮಾಣ ಹೆಚ್ಚಳವಾಗುತ್ತದೆ. ಈ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಮಾರುಕಟ್ಟೆ ಸಮೀಪ ಉಂಟಾಗುವ ಕಸ, ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಅದರೂ, ಕೆಲವು ಮಾರುಕಟ್ಟೆಗಳ ಸಮೀಪ ಕಸ/ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಕೆ.ಆರ್. ಮಾರುಕಟ್ಟೆ ಬಳಿಯೇ ಸುಮಾರು ನಾಲೈದು ಲೋಡುಗಳಷ್ಟು ಕಸ ರಾಶಿ ಕಾಣಸಿಕ್ಕಿದೆ. ಹಬ್ಬದ ವ್ಯಾಪಾರಕ್ಕೆಂದು ತಂದ ಬಾಳೆ ಕಂದು, ಹೂವು, ಬೂದಗುಂಬಳ ಎಲ್ಲವೂ ಬಿಕರಿಯಾಗಿಲ್ಲ. ಹೀಗೆ ವ್ಯಾಪಾರವಾಗದೇ ಉಳಿದವುಗಳನ್ನು ಬಹುತೇಕ ಬಡಾವಣೆಗಳಲ್ಲಿ ರಸ್ತೆಬದಿ ಹಾಗೆಯೇ ಬಿಟ್ಟುಹೋಗಿದ್ದಾರೆ. ಪರಿಣಾಮ ಹಳೆ ಮದ್ರಾಸ್ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆಗಳಲ್ಲಿನ ಸರ್ವೀಸ್ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ. ಅದನ್ನು ತೆರವು ಮಾಡುವಂತೆ ಸ್ಥಳೀಯರು ಆಗಹಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನೂ ಹಾಕುತ್ತಿದ್ದಾರೆ.
ಹಬ್ಬದಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದರು. ಇದಕ್ಕಾಗಿ ಮಾರ್ಗಸೂಚಿಯನ್ನೂ ಹೊರಡಿಸಲಾಗಿತ್ತು. ಆದರೆ, ಪಾಲಿಕೆ ಸಿಬ್ಬಂದಿ, ಪೌರ ಕಾರ್ಮಿಕರು ಕೂಡ ಹಬ್ಬದ ರಜೆಯಲ್ಲಿರುವ ಕಾರಣ ಈ ಆದೇಶ, ಸೂಚನೆಗಳ ಪಾಲನೆ ಕೇವಲ ಕಾಗದದ ಮೇಲೆ ಮಾತ್ರ ಉಳಿದುಕೊಳ್ಳುವಂತಾಯಿತು. ದಸರಾ, ನವರಾತ್ರಿ ಹಬ್ಬದ ಸಂದರ್ಭದಲ್ಲೂ ಇದರ ಪಾಲನೆ ಆಗಲೇ ಇಲ್ಲ. ದೀಪಾವಳಿ ಸಂದರ್ಭದಲ್ಲಿ ಅಲ್ಪ ಪ್ರಮಾಣದಲ್ಲಿ ಆಗಿದೆಯಾದರೂ ಹಲವಾರು ಬಡಾವಣೆಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತಿರುವುದು ಗಮನಸೆಳೆದಿದೆ.