ಬಿಬಿಎಂಪಿ ಬಜೆಟ್‌ 2024: 16000 ಪೌರ ಕಾರ್ಮಿಕರ ನೇಮಕ, 15 ಲಕ್ಷ ತೆರಿಗೆದಾರರಿಗೆ ಆಸ್ತಿ ತೆರಿಗೆಗೆ ಒಟಿಎಸ್‌; ಕಂದಾಯ, ಆಡಳಿತ ಹೈಲೈಟ್ಸ್-bbmp budget 2024 highlights revenue and administration initiatives 16k pourakarmika recruitment bengaluru news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಬಿಎಂಪಿ ಬಜೆಟ್‌ 2024: 16000 ಪೌರ ಕಾರ್ಮಿಕರ ನೇಮಕ, 15 ಲಕ್ಷ ತೆರಿಗೆದಾರರಿಗೆ ಆಸ್ತಿ ತೆರಿಗೆಗೆ ಒಟಿಎಸ್‌; ಕಂದಾಯ, ಆಡಳಿತ ಹೈಲೈಟ್ಸ್

ಬಿಬಿಎಂಪಿ ಬಜೆಟ್‌ 2024: 16000 ಪೌರ ಕಾರ್ಮಿಕರ ನೇಮಕ, 15 ಲಕ್ಷ ತೆರಿಗೆದಾರರಿಗೆ ಆಸ್ತಿ ತೆರಿಗೆಗೆ ಒಟಿಎಸ್‌; ಕಂದಾಯ, ಆಡಳಿತ ಹೈಲೈಟ್ಸ್

ಬಿಬಿಎಂಪಿ ಬಜೆಟ್‌ 2024 ಮಂಡನೆಯಾಗಿದ್ದು, 16 ಪೌರ ಕಾರ್ಮಿಕರ ನೇರ ನೇಮಕಾತಿ ಘೋಷಣೆಯಾಗಿದೆ. ಇದಲ್ಲದೆ, 15 ಲಕ್ಷ ತೆರಿಗೆದಾರರಿಗೆ ಒಟಿಎಸ್‌ ಮೂಲಕ ಒಂದಿಷ್ಟು ವಿನಾಯಿತಿ ನೀಡುವುದಾಗಿಯೂ ಬಿಬಿಎಂಪಿ ಘೋಷಿಸಿದೆ. ಆಡಳಿತ ಮತ್ತು ಕಂದಾಯ ವಿಭಾಗಕ್ಕೆ ಸಂಬಂಧಿಸಿದ ಬಜೆಟ್ ಹೈಲೈಟ್ಸ್ ಇಲ್ಲಿದೆ.

ಬಿಬಿಎಂಪಿ ಬಜೆಟ್ 2024 ಪ್ರತಿಯೊಂದಿಗೆ ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ (ಎಡದಿಂದ ಮೊದಲನೇಯವರು) ಆಡಳಿತಗಾರ ರಾಕೇಶ್ ಸಿಂಗ್ (ಮಧ್ಯದವರು) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (ಎಡದಿಂದ ಕೊನೆಯವರು) (ಎಡಚಿತ್ರ). ಬಲಚಿತ್ರದಲ್ಲಿ ಬಿಬಿಎಂಪಿ ಕಚೇರಿ.
ಬಿಬಿಎಂಪಿ ಬಜೆಟ್ 2024 ಪ್ರತಿಯೊಂದಿಗೆ ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ (ಎಡದಿಂದ ಮೊದಲನೇಯವರು) ಆಡಳಿತಗಾರ ರಾಕೇಶ್ ಸಿಂಗ್ (ಮಧ್ಯದವರು) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (ಎಡದಿಂದ ಕೊನೆಯವರು) (ಎಡಚಿತ್ರ). ಬಲಚಿತ್ರದಲ್ಲಿ ಬಿಬಿಎಂಪಿ ಕಚೇರಿ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಂಗಡ ಪತ್ರ (ಬಿಬಿಎಂಪಿ ಬಜೆಟ್ 2024) ಮಂಡನೆಯಾಗಿದ್ದು, 20 ಲಕ್ಷ ಆಸ್ತಿ ಗಣಕೀಕರಣ ಮತ್ತು ಇ ಖಾತಾ ವಿತರಣೆ, 16,000 ಪೌರ ಕಾರ್ಮಿಕರ ನೇಮಕ, ಆಸ್ತಿ ತೆರಿಗೆ ವಿನಾಯಿತಿ ಸೇರಿ ಹಲವು ಉಪಕ್ರಮಗಳನ್ನು ಘೋಷಿಸಲಾಗಿದೆ.

ಬಿಬಿಎಂಪಿ ಬಜೆಟ್ 2024-25ರ ಗಾತ್ರ 12,370 ಕೋಟಿ ರೂಪಾಯಿ. ಈ ಪೈಕಿ ಪಾಲಿಕೆಯ ಆದಾಯ 12,371.63 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಖರ್ಚು 12,369.46 ಕೋಟಿ ರೂಪಾಯಿ ಎಂದು ಲೆಕ್ಕ ತೋರಿಸಲಾಗಿದೆ. ಇದರಂತೆ, 2.17 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಮುಂಗಡ ಪತ್ರ ವಿವರಿಸಿದೆ.

ಕಂದಾಯ ಮತ್ತು ಆಡಳಿತ ವಿಭಾಗದಲ್ಲಿ ಕೆಲವು ಮಹತ್ವದ ಘೋಷಣೆಗಳೊಂದಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಆಸ್ತಿ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ. ಇನ್ನೊಂದೆಡೆ ಉದ್ಯೋಗಾವಕಾಶ ನೋಡುತ್ತಿರುವ ಸಾಮಾನ್ಯರಿಗೆ ಪೌರ ಕಾರ್ಮಿಕ ನೇಮಕಾತಿ ಮಾಡುವ ಘೋಷಣೆ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಬಿಬಿಎಂಪಿ ಬಜೆಟ್; ಕಂದಾಯ ವಿಭಾಗದ ಮುಖ್ಯ 6 ಘೋಷಣೆ

1) ಪಾಲಿಕೆ ವ್ಯಾಪ್ತಿಯ 20 ಲಕ್ಷ ಅಸ್ತಿಗಳ ಗಣಕೀಕರಣ ಮತ್ತು ಇ-ಖಾತಾ ವಿತರಣೆಗೆ ಕ್ರಮ

2) ಕಾವೇರಿ 2 ತಂತ್ರಾಂಶದೊಂದಿಗೆ ಪಾಲಿಕೆಯ 'ನಮ್ಮ ಸ್ವತ್ತು' ವ್ಯವಸ್ಥೆಯ ಸಂಯೋಜನೆ

3) ಆಸ್ತಿ ತೆರಿಗೆ ಮೇಲಿನ ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿ ಆಸ್ತಿ ತೆರಿಗೆದಾರರಿಗೆ ಒನ್ ಟೈಮ್ ಸೆಟಲ್‌ಮೆಂಟ್‌ (ಒಟಿಎಸ್‌) ಜಾರಿಗೆ ತರಲಾಗಿದ್ದು,15 ಲಕ್ಷ ತೆರಿಗೆದಾರರಿಗೆ ಸಹಕಾರಿ.

4) ಮಾರ್ಗದರ್ಶನ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ 2024ರ ಏಪ್ರಿಲ್ 1ರಿಂದ ಜಾರಿ

5) ಪಾಲಿಕೆಯಲ್ಲಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು. ಇದರಿಂದ 500 ಕೋಟಿ ರೂಪಾಯಿ ಜಾಹೀರಾತು ಆದಾಯ ಗಳಿಸುವ ನಿರೀಕ್ಷೆ. ಒಟ್ಟು 6000 ಕೋಟಿಯ ಆಸ್ತಿ ತೆರಿಗೆ ನಿರೀಕ್ಷೆ

6) ಪ್ರೀಮಿಯಂ ಎಫ್‌ಎಆರ್ ವ್ಯವಸ್ಥೆಯನ್ನು ಜಾರಿಗೆ ತಂದು 1000 ಕೋಟಿ ರೂ ಸಂಗ್ರಹ.

ಕಾವೇರಿ 2 ತಂತ್ರಾಂಶದೊಂದಿಗೆ ಪಾಲಿಕೆಯ 'ನಮ್ಮ ಸ್ವತ್ತು' ವ್ಯವಸ್ಥೆಯ ಸಂಯೋಜನೆ ಕಾರ್ಯದಲ್ಲಿ, ಉಪ ನೊಂದಾಣಾಧಿಕಾರಿಗಳ ಕಛೇರಿಗಳಲ್ಲಿನ ವಹಿವಾಟುಗಳು ವಿದ್ಯುನ್ಮಾನವಾಗಿ ಪಾಲಿಕೆಯ ನಮ್ಮ ಸ್ವತ್ತು' ವ್ಯವಸ್ಥೆಗೆ ರವಾನೆಯಾಗಿ ಖಾತಾ ವರ್ಗಾವಣೆ ಪ್ರಕ್ರಿಯೆಯು ಸ್ವಯಂ ಚಾಲಿತವಾಗುತ್ತದೆ. ಮುಂದುವರೆದು ಉಪ ನೊಂದಾಣಾಧಿಕಾರಿಗಳ ಕಛೇರಿಗಳಲ್ಲಿ ವಹಿವಾಟಿನ ಸಮಯದಲ್ಲಿ ಸ್ವತ್ತಿನ ಮಾಲೀಕರು ತಮ್ಮ ಆಧಾ‌ ಮೂಲಕ ವಹಿವಾಟು ಮಾಡಿಕೊಂಡಲ್ಲಿ ಅಂತಹ ಪ್ರಕರಣಗಳಲ್ಲಿ ಮಾಲೀಕರು ಪಾಲಿಕೆಯ ದಾಖಲೆಗಳಲ್ಲಿ ಆಧಾರ್ ಅನ್ನು ಸೀಡ್ ಮಾಡಿದ್ದ ಪ್ರಕರಣಗಳಲ್ಲಿ ಕಡ್ಡಾಯ ಆಕ್ಷೇಪಣೆ ಅವಧಿಯ ನಂತರ ಖಾತಾ ವರ್ಗಾವಣೆ ಪ್ರಕ್ರಿಯೆಯು ಸ್ವಯಂಚಾಲಿತವಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಘೋಷಿಸಿದರು.

ಬಿಬಿಎಂಪಿ ಬಜೆಟ್; ಆಡಳಿತ ವಿಭಾಗದಲ್ಲಿ 3 ಪ್ರಮುಖ ಘೋಷಣೆ

1) ಬಿಬಿಎಂಪಿ ಮುಂದಿನ ಹಣಕಾಸು ವರ್ಷದಲ್ಲಿ 16,000 ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಿದೆ.

2) ಬಿಬಿಎಂಪಿಯ 8 ವಲಯಗಳಲ್ಲಿ ಅಧಿಕಾರ ವಿಕೇಂದ್ರಿಕರಣದ ಭಾಗವಾಗಿ ವಲಯಗಳಲ್ಲಿನ ಆಡಳಿತವನ್ನು ಬಲಪಡಿಸಲು ಒಂದೊಂದು ವಲಯಕ್ಕೆ ಒಬ್ಬ ಐಎಎಸ್‌ ಅಧಿಕಾರಿಯನ್ನು ನಿಯೋಜಿಸಿ ಅವರ ಮೂಲಕ ಆಡಳಿತ ವ್ಯವಹಾರ ಗಮನಿಸುವ ಕೆಲಸ ಮಾಡಲಿದೆ.

3) ಪಾಲಿಕೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಸಲುವಾಗಿ ಒಂದು ಗ್ರಂಥಾಲಯ ಮತ್ತು ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುವುದು.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point