ಕನ್ನಡ ಸುದ್ದಿ  /  Karnataka  /  Bjp Lost In Karnataka Election Because We Did Not Work Like Prime Minister Narendra Modi Says Ct Ravi Rmy

CT Ravi: ಪ್ರಧಾನಿ ನರೇಂದ್ರ ಮೋದಿ ಅವರಷ್ಟು ನಾವು ಕೆಲಸ ಮಾಡದಿದ್ದಕ್ಕೆ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ; ಸಿಟಿ ರವಿ

ವಿರೋಧ ಪಕ್ಷಗಳು ಅದಾನಿ ಮತ್ತು ಅಂಬಾನಿಗಾಗಿ ಕೆಲಸ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಮತ್ತವರ ಸರ್ಕಾರ ಬಡವರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ಸಿಟಿ ರವಿ ಹೇಳಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವ ರೀತಿಯಲ್ಲಿ ಕರ್ನಾಟಕದಲ್ಲಿ (Karnataka) ಕೆಲಸ ಮಾಡಲು ಸಾಧ್ಯವಾಗದ ಕಾರಣ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಬಿಜೆಪಿ (BJP) ಸೋಲು ಕಾಣಬೇಕಾಯಿತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗೋವಾದಲ್ಲಿ ನಿನ್ನೆ (ಜೂನ್ 12, ಸೋಮವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಚುನಾವಣೆಗೂ ಮುನ್ನ ಸರಿಯಾದ ಪ್ಲಾನ್‌ಗಳನ್ನು ಮಾಡಲಿಲ್ಲ. ನಮ್ಮ ಸಾಧನೆಗಳನ್ನು ಜನರಿಗೆ ತಿಳಿಸುವಲ್ಲಿ ಪಕ್ಷ ವಿಫಲವಾಗಿದೆ ಎಂದಿದ್ದಾರೆ.

ವಿರೋಧ ಪಕ್ಷಗಳು ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಗಾಗಿ ಕೆಲಸ ಮಾಡುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ, ಮತ್ತವರ ಪಕ್ಷ ಬಡವರ ಏಳಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಟಿ ರವಿ, ಕಾಂಗ್ರೆಸ್ ಭ್ರಷ್ಟಾಚಾರ, ಕೋಮುವಾದ ಹಾಗೂ ಕುಟುಂಬ ರಾಜಕಾರಣದ ಸಂಬಂಧವನ್ನು ಹೊಂದಿದೆ ಎಂದು ದೂರಿದ್ದಾರೆ.

ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಅನೇಕ ಅಂಶಗಳನ್ನು ಒಳಗೊಂಡಿದ್ದು, ಕಾಂಗ್ರೆಸ್ ತನ್ನ ಪ್ರಭಾವವನ್ನ ಪ್ರದರ್ಶಿಸಿದೆ. ಗ್ಯಾರಂಟಿ ಕಾರ್ಡ್ ಸೇರಿದಂತೆ ಈ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳಿಂದ ನಾವು ಪ್ರತಿ ಮತಗಟ್ಟೆಯಲ್ಲಿ 100 ರಿಂದ 200 ಮತಗಳನ್ನು ಕಳೆದುಕೊಂಡಿದ್ದೇವೆ ಎಂದು ಸಿಟಿ ರವಿ ವಿವರಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪ್ಲಾನ್ ಮಾಡಲು ಸಾಧ್ಯವಾಗಲಿಲ್ಲ. ದಕ್ಷಿಣ ರಾಜ್ಯದಲ್ಲಿನ ಸೋಲಿಗೆ ಇದು ಒಂದು ಕಾರಣವಾಗಿದ್ದು, ಕರ್ನಾಟಕದಲ್ಲಿ ನಮ್ಮ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಏಕೆಂದರೆ ನಾವು ಪ್ರಧಾನಿ ಮೋದಿ ಅವರ ರೀತಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದವು. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ವಿರುದ್ಧ ಕೆಲಸ ಮಾಡಿಲ್ಲ. ಆದರೆ ವಿರೋಧ ಪಕ್ಷಗಳೇ ಈ ಉದ್ಯಮಿಗಳ ಪರ ಕೆಲಸ ಮಾಡುತ್ತಿದ್ದಾರೆ. ಮೋದಿ ಸರ್ಕಾರ ತನ್ನ ಕಲ್ಯಾಣ ಯೋಜನೆಗಳು ಮತ್ತು ನೀತಿಗಳ ಮೂಲಕ ಬಡ ಜನರಿಗಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಪ್ರಧಾನಿ ಮೋದಿ ಪರಿಚಯಿಸಿದರು. ಇದು ದೇಶವು ಸ್ವಾವಲಂಬಿಯಾಗಲು ಸಹಾಯ ಮಾಡುತ್ತಿದೆ. 2004 ರಿಂದ 2014ರ ನಡುವಿನ ಕಾಂಗ್ರೆಸ್ ಆಡಳಿತವು ಭಾರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿತ್ತು. ಆದರೆ ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಹೇಳಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿನ ಪರಿಸ್ಥಿತಿಯನ್ನು ನಾವು ಪ್ರಸ್ತುತ ಮೋದಿ ನೇತೃತ್ವದ ಆಡಳಿತಕ್ಕೆ ಹೋಲಿಸಬೇಕು. ಕಾಂಗ್ರೆಸ್ ಎಂದರೆ ಹಗರಣ ಅಂತ ಹೇಳಬಹುದು. ಇವತ್ತಿನ ಸರ್ಕಾರದಲ್ಲಿ ಯಾವುದೇ ರೀತಿಯ ಹಗರಣಗಳು ಇಲ್ಲ. ಬಿಜೆಪಿ ಎಂದರೆ ಯೋಜನೆಗಳು, ಕಾಂಗ್ರೆಸ್ ಎಂದರೆ ಹಗಣರಗಳು ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

ಕರ್ನಾಟಕ ವಿಧಾನಸಭೆಗೆ 2023ರ ಮೇ 10 ರಂದು ಮತದಾನ ನಡೆದರೆ, ಮೇ 13 ರಂದು ಫಲಿತಾಂಶ ಪ್ರಕಟವಾಗಿತ್ತು. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 135ರಲ್ಲಿ ಗೆಲಪುವು ಸಾಧಿಸಿದರೆ, ಬಿಜೆಪಿ 65 ಹಾಗೂ ಜೆಡಿಎಸ್ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.