Tomato Price: 70 ರೂ ಇದ್ದ ಟೊಮೆಟೊ ಬೆಲೆ ದಿಢೀರ್ 20 ಕ್ಕೆ ಕುಸಿತ: ವೈರಸ್ ಹಾವಳಿಯ ಜೊತೆಗೆ ರೈತರಿಗೆ ಮತ್ತೊಂದು ಸಂಕಷ್ಟ
ಟೊಮೆಟೊ ಬೆಲೆ ಕುಸಿತ: 15 ಕೆಜಿ ಬಾಕ್ಸ್ ಟೊಮೆಟೊ ಧಾರಣೆಯು ರೂ 250 ರಿಂದ ರೂ 400 ರೂ ವರೆಗೆ ಇದೆ. ಕೆಲವೇ ದಿನಗಳ ಹಿಂದೆ ಇಷ್ಟೇ ತೂಕದ ಒಂದು ಬಾಕ್ಸ್ ಟೊಮೆಟೊ ರೂ 800 ರಿಂದ ರೂ 1000 ವರೆಗೆ ಮಾರಾಟವಾಗುತ್ತಿತ್ತು. (ವರದಿ: ಮಾರುತಿ ಎಚ್.)
ಶ್ರಾವಣ ಮಾಸ ಆರಂಭವಾಗಿ ಸಾಲು ಸಾಲು ಹಬ್ಬಗಳು ನಡೆಯುತ್ತಿದ್ದರೂ ಟೊಮೆಟೊ ಬೆಳೆಗಾರರಿಗೆ ಮಾತ್ರ ಈ ಮಾಸ ಹುಳಿಯಾಗಿಯೇ ಉಳಿದಿದೆ. ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಟೊಮೆಟೊ ಬೆಳೆಗಾರರು, ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಉತ್ಪಾದನೆಯಲ್ಲಿ ಹೆಚ್ಚಳ, ವೈರಸ್ ಪಿಡುಗು ಮತ್ತು ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟಿನ ಕಾರಣ ಅಲ್ಲಿಗೆ ರಫ್ತು ಮಾಡಲು ಆಗದಿರುವ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಟೊಮೆಟೊ ಬೆಲೆ ತೀವ್ರವಾಗಿ ಕುಸಿದಿದೆ. ಬೆಂಗಳೂರಿಗೆ ಸಮೀಪದಲ್ಲಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮೆಟೊ ಬೆಲೆ ತೀವ್ರ ಕುಸಿತ ಕಂಡಿದೆ.
15 ಕೆಜಿ ಬಾಕ್ಸ್ ಟೊಮೆಟೊ ಧಾರಣೆಯು ರೂ 250 ರಿಂದ ರೂ 400 ರೂ ವರೆಗೆ ಇದೆ. ಕೆಲವೇ ದಿನಗಳ ಹಿಂದೆ ಇಷ್ಟೇ ತೂಕದ ಒಂದು ಬಾಕ್ಸ್ ಟೊಮೆಟೊ ರೂ 800 ರಿಂದ ರೂ 1000 ವರೆಗೆ ಮಾರಾಟವಾಗುತ್ತಿತ್ತು. ಕೆಲವು ವಾರಗಳ ಹಿಂದೆ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಸರಾಸರಿ 3 ಲಕ್ಷ ಬಾಕ್ಸ್‌ಗಳು ಬರುತ್ತಿದ್ದವು. ಉತ್ಪಾದನೆ ಹೆಚ್ಚಳವಾಗಿದ್ದರಿಂದ ಇದೀಗ ಅಂದಾಜು 10 ಲಕ್ಷ ಬಾಕ್ಸ್‌ಗಳು ಆವಕವಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ಜೊತೆಗೆ ನೆರೆಯ ಆಂಧ್ರ ಪ್ರದೇಶದಿಂದಲೂ ಟೊಮೆಟೊ ಬರುತ್ತಿದೆ.
ಎರಡು ಮೂರು ತಿಂಗಳ ಹಿಂದೆ ಟೊಮೆಟೊಗೆ ಬೇಡಿಕೆ ಹೆಚ್ಚಾಗಿತ್ತು. ಇಲ್ಲಿಂದಲೇ ಹಲವು ರಾಜ್ಯಗಳಿಗೆ ಸರಬರಾಜಾಗುತ್ತಿತ್ತು. ಈ ಕಾರಣಕ್ಕೆ ಎಲ್ಲ ರೈತರೂ ಟೊಮೆಟೊ ಬೆಳೆಯಲು ಆರಂಭಿಸಿದರು. ಇದೀಗ ಉತ್ಪಾದನೆ ಹೆಚ್ಚಾದ ಕಾರಣ ಏಕಾಏಕಿ ದರ ಕುಸಿಯುತ್ತಿದೆ. ಕರ್ನಾಟಕವಷ್ಟೇ ಅಲ್ಲ, ನೆರೆಯ ಹಲವು ರಾಜ್ಯಗಳಲ್ಲಿಯೂ ಟೊಮೆಟೊ ಉತ್ಪಾದನೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದೀಚೆಗೆ ರಾಜ್ಯದಲ್ಲಿ ಟೊಮೆಟೊಗೆ ವೈರಸ್ ಕಾಟ ಹೆಚ್ಚಾಗಿತ್ತು. ವೈರಸ್ ಸೋಂಕಿನ ಕಾರಣದಿಂದ ಟೊಮೆಟೊ ಜೀವಿತಾವಧಿ ಕಡಿಮೆಯಾಗುತ್ತಿತ್ತು. ಸೋಂಕು ಇರುವ ಟೊಮೆಟೊವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದೂ ಕಷ್ಟವಾಗುತ್ತಿತ್ತು. ಟೊಮೆಟೊ ವೇಗವಾಗಿ ಹಾಳಾಗುತ್ತಿತ್ತು.
ಟೊಮೆಟೊ ಬೆಳೆಯುವುದು ನಿಲ್ಲಿಸಿದ ರೈತರು
ಇದೀಗ ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯುವುದನ್ನು ಕೈ ಬಿಟ್ಟಿದ್ದಾರೆ. ಬೆಲೆ ಇಲ್ಲದ ಕಾರಣಕ್ಕೆ ಹಲವಾರು ಸ್ಥಳಗಳಲ್ಲಿ ಕಟಾವು ಮಾಡುತ್ತಿಲ್ಲ. ಕಟಾವು ಮಾಡಿದರೂ ಬೆಲೆ ಇಲ್ಲದ ಇರುವುದರಿಂದ ರಸ್ತೆ ಇಲ್ಲವೇ ತಿಪ್ಪೆಗೆ ಸುರಿಯುತ್ತಿದ್ದಾರೆ. ಕನಿಷ್ಟ ಹಾಕಿದ ಬಂಡವಾಳ ಮತ್ತು ಕೂಲಿಯೂ ಹುಟ್ಟದಿದ್ದರೆ ಮಾರುಕಟ್ಟೆಗೆ ತಂದು ಏನು ಪ್ರಯೋಜನ ಎಂದು ಹಲವರು ಪ್ರಶ್ನಿಸುತ್ತಾರೆ. ಸಾಮಾನ್ಯವಾಗಿ ಒಂದು ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲು ರೂ 3ರಿಂದ 5 ಲಕ್ಷ ರೂ ವರೆಗೆ ಖರ್ಚು ತಗುಲುತ್ತದೆ.
ಬಾಂಗ್ಲಾ ಬಿಕ್ಕಟ್ಟಿನ ಹೊಡೆತ
ಬಾಂಗ್ಲಾದೇಶದಲ್ಲಿ ಉಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಅಲ್ಲಿಗೆ ಟೊಮೆಟೊ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ.ರಫ್ತು ಪ್ರಮಾಣವು ಶೇ 30 ರಷ್ಟು ಕಡಿಮೆಯಾಗಿದೆ. ಪ್ರತಿದಿನ ಕೋಲಾರ ಎಪಿಎಂಸಿಯಿಂದ ಪಶ್ಚಿಮ ಬಂಗಾಳಕ್ಕೆ 5,000 ದಿಂದ 10 ಸಾವಿರ ಬಾಕ್ಸ್ ಟೊಮೆಟೊ ಕಳುಹಿಸಲಾಗುತ್ತಿತ್ತು. ಅಲ್ಲಿಂದ ಬಾಂಗ್ಲಾದೇಶಕ್ಕೆ ರವಾನೆಯಾಗುತ್ತಿತ್ತು. ಆದರೆ ಅಲ್ಲಿ ಬಿಕ್ಕಟ್ಟು ಉಂಟಾದ ದಿನದಿಂದ ಒಂದೂ ಬಾಕ್ಸ್ ಟೊಮೆಟೊ ಕಳುಹಿಸಲು ಸಾಧ್ಯವಾಗಿಲ್ಲ. ಟೊಮೆಟೊ ಬಾಕ್ಸ್‌ಗಳೆಲ್ಲಾ ಇಲ್ಲಿಯೇ ಉಳಿದುಕೊಂಡಿವೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಬೆಂಗಳೂರಿನಲ್ಲಿ ರೂ 20 ಕ್ಕೆ ಇಳಿದ ಟೊಮೆಟೊ ಧಾರಣೆ
ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಟೊಮೆಟೊ ಒಂದು ಕೆಜಿಗೆ ರೂ 100 ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಕೆಲವೊಮ್ಮೆ 100 ರ ಗಡಿ ದಾಟಿದ್ದೂ ಉಂಟು. ಈಗ ರೂ 20 ರಿಂದ 30ಕ್ಕೆ ಮಾರಾಟವಾವಾಗುತ್ತಿದೆ. ಮುಂದಿನ ಕೆಲವು ತಿಂಗಳ ಕಾಲ ಟೊಮೆಟೊ ಬೆಲೆ ಏರಿಕೆ ಕಾಣುವುದಿಲ್ಲ. ರೂ 20 ರಿಂದ 30 ರ ಆಸುಪಾಸಿನಲ್ಲೇ ಇರುತ್ತದೆ ಎಂದು ತರಕಾರಿ ಅಂಗಡಿ ಮಾಲೀಕರು ಹೇಳುತ್ತಾರೆ. ಬಹುಶಃ ದೀಪಾವಳಿ ಸಮಯಕ್ಕೆ ಟೊಮೆಟೊ ಬೆಲೆ ಏರಿಕೆ ಕಾಣುವ ಸಾಧ್ಯತೆಗಳಿವೆ.