ಎಂಥಾ ಅವಸ್ಥೆ! ಬೆಂಗಳೂರು ಓಲಾ ಶೋರೂಂ ಎದುರಲ್ಲೇ ಹೊತ್ತಿ ಉರಿಯಿತು ಎಲೆಕ್ಟ್ರಿಕ್ ಸ್ಕೂಟರ್ - ವೈರಲ್ ವಿಡಿಯೋ
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಈ ಬಾರಿ ಎಲ್ಲೋ ಉರಿದಿರುವುದಲ್ಲ. ಬೆಂಗಳೂರು ಓಲಾ ಶೋರೂಂ ಎದುರಲ್ಲೇ ಹೊತ್ತಿ ಉರಿಯಿತು ಎಲೆಕ್ಟ್ರಿಕ್ ಸ್ಕೂಟರ್. ಎಂಥಾ ಅವಸ್ಥೆ ಎಂದರೆ ಶೋರೋಂನಲ್ಲಿದ್ದವರು ಅದನ್ನು ನಂದಿಸಲು ಹೋದರೋ ಇಲ್ಲವೋ ತಿಳಿಯದು. ಸೋಷಿಯಲ್ ಮೀಡಿಯಾದಲ್ಲಿ ಇವೆಲ್ಲವೂ ಚರ್ಚೆಯಾಗುತ್ತಿದ್ದು, ಈ ವಿದ್ಯಮಾನದ ಕಡೆಗೊಂದು ನೋಟ ಇಲ್ಲಿದೆ.
ಬೆಂಗಳೂರು: ಕಳಪೆ ಗ್ರಾಹಕ ಸೇವೆ ಕಾರಣಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ಟೀಕೆಗೆ ಗುರಿಯಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಗೆ ವೈಫಲ್ಯಗಳ ಸವಾಲು ಬೃಹದಾಕಾರಾವಾಗಿ ಕಾಡತೊಡಗಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ತನ್ನಿಂತಾನೇ ಹೊತ್ತಿ ಉರಿಯುವ ಪ್ರಕರಣ ಪದೇಪದೇ ವರದಿಯಾಗುತ್ತಿದೆ. ದೂರದೂರುಗಳಲ್ಲಿ ನಡೆದ ಘಟನೆಗಳು ಗಮನಸೆಳೆದಿದ್ದವು. ಈಗ ಬೆಂಗಳೂರಿನ ಶೋರೂಂ ಎದುರೇ ಸ್ಕೂಟರ್ ಹೊತ್ತಿ ಉರಿದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಓಲಾ ಎಲೆಕ್ಟ್ರಿಕ್ ಸಿಇಒ ಭವಿಷ್ ಅಗರವಾಲ್ ಅವರನ್ನು ಈ ಸಮಸ್ಯೆ ಇನ್ನಿಲ್ಲದಂತೆ ಕಾಡತೊಡಗಿದೆ. ವೈರಲ್ ವಿಡಿಯೋದಲ್ಲಿ, ಬೆಂಗಳೂರಿನ ಶೋರೂಮ್ ಹೊರಗೆ ನಿಲ್ಲಿಸಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಹೊತ್ತಿಕೊಂಡು ಹೊಗೆಯನ್ನು ಹೊರಸೂಸುತ್ತಿರುವ ದೃಶ್ಯವಿದೆ. ಷೇರುಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿರುವ ಓಲಾ ಕಂಪನಿಯು ಅದರ ಗ್ರಾಹಕ ಸೇವೆಯನ್ನು ಸರಿಪಡಿಸುತ್ತಿರುವುದಾಗಿ, ದೂರುಗಳನ್ನು ಪರಿಹರಿಸುತ್ತಿರುವುದಾಗಿ ಹೇಳುತ್ತಿರುವಾಗಲೇ ಈ ವಿದ್ಯಮಾನ ಗಮನಸೆಳೆದಿದೆ.
ಓಲಾ ಸ್ಕೂಟರ್ ಮಾಲೀಕನ ದುರದೃಷ್ಟ; ಗಮನ ಸೆಳೆದ ವೈರಲ್ ವಿಡಿಯೋ
ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಜೈನ್ ಅವರು ಓಲಾ ಸ್ಕೂಟರ್ ಹೊತ್ತಿ ಉರಿಯುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದು, ಓಲಾ ಸ್ಕೂಟರ್ ಮಾಲೀಕರ ಬದುಕಿನಲ್ಲಿ ಮತ್ತೊಂದು ಉರಿಯುವ ದಿನ ಎಂದು ಬರೆದಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಓಲಾ ಎಲೆಕ್ಟ್ರಿಕ್ ಶೋರೂಂನ ಹೊರಗೆ ಈ ಘಟನೆ ನಡೆದಿರುವುದಾಗಿ ವಿಡಿಯೋ ತೋರಿಸಿದೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿರುವ ವಿಡಿಯೋ, ಓಲಾ ಸೇವೆ ಬಗ್ಗೆ ನಾನಾ ರೀತಿಯ ಟೀಕೆ ಟಿಪ್ಪಣಿಗೆ ಗ್ರಾಸ ಒದಗಿಸಿತು. ಅನೇಕ ಬಳಕೆದಾರರು ಇದನ್ನು ಓಲಾ ಸಿಇಒ ಭವಿಷ್ ಅಗರ್‌ವಾಲ್ ಅವರಿಗೆ ದೀಪಾವಳಿಯ ಉಡುಗೊರೆ ಎಂದು ವ್ಯಂಗ್ಯವಾಡಿದರೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಎಂಬುದು ಈ ದೀಪಾವಳಿಗೆ ಮಾರುಕಟ್ಟೆಯಲ್ಲಿ ಲಭ್ಯ ಇರುವ ಇತ್ತೀಚಿನ ಪಟಾಕಿ ಎಂದೂ ತಮಾಷೆ ಮಾಡಿದ್ದಾರೆ.
ಓಲಾ ಶೋರೂಂ ಎದುರೇ ಸ್ಕೂಟರ್ ಹೊತ್ತಿ ಉರಿಯುತ್ತಿದೆ. ಶೋರೋಂ/ ಸರ್ವೀಸ್ ಸೆಂಟರ್ ಸಿಬ್ಬಂದಿ ಅದನ್ನು ನಂದಿಸುವ ಗೋಜಿಗೆ ಹೋಗದೇ ಇರುವುದು ಅಚ್ಚರಿಯ ವಿಷಯ. ಓಲಾ ಬೈಕ್ಸ್ ಎಂದರೆ ಭಯ ಸೃಷ್ಟಿಯಾಗತೊಡಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ, ಭವಿಷ್ ಅಗರವಾಲ್ ಅವರನ್ನು ಟ್ಯಾಗ್ ಮಾಡಿ, ಈ ಮಾಸ್ಟರ್‌ಪೀಸ್ ಅನ್ನು ಸೃಷ್ಟಿಸಲು ನೀವು ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಿದ್ದೀರಿ ಎಂದು ಕಾಲೆಳೆದಿದ್ದಾರೆ.
ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರದ ನೋಟಿಸ್‌ಗೆ ಓಲಾ ಪ್ರತಿಕ್ರಿಯೆ ಹೀಗಿತ್ತು
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಅದರ ಗ್ರಾಹಕ ಸೇವೆಯ ಕುರಿತು ಹಲವಾರು ದೂರುಗಳ ನಂತರ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು 2024 ಅಕ್ಟೋಬರ್ 7 ರಂದು ಓಲಾ ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿತು. ತಪ್ಪುದಾರಿಗೆಳೆಯುವ ಜಾಹೀರಾತುಗಳು, ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ. ಪ್ರತಿಕ್ರಿಯೆ ನೀಡಲು ಕಂಪನಿಗೆ 15 ದಿನಗಳ ಕಾಲಾವಕಾಶವನ್ನು ಪ್ರಾಧಿಕಾರ ನೀಡಿತ್ತು.
ಆದಾಗ್ಯೂ, ಕಂಪನಿಯು ಶೇಕಡ 99 ರಷ್ಟು ಗ್ರಾಹಕ ದೂರುಗಳನ್ನು ಪರಿಹರಿಸಿಕೊಡಲಾಗಿದೆ ಎಂದು ಉತ್ತರಿಸಿತ್ತು. ಪ್ರಾಧಿಕಾರದಿಂದ ನಾವು ಸ್ವೀಕರಿಸಿದ 10,644 ದೂರುಗಳಲ್ಲಿ 99.1 ಪ್ರತಿಶತ ದೂರುಗಳು ಗ್ರಾಹಕರ ಸಂಪೂರ್ಣ ತೃಪ್ತಿಕರವಾಗಿ ಪರಿಹರಿಸಲಾಗಿದೆ ಎಂದು ಓಲಾ ತಿಳಿಸಿದ್ದಾಗಿ ವರದಿಯಾಗಿದೆ.
ಎಕ್ಸ್‌ನಲ್ಲಿ ಸ್ಟಾಂಡ್ ಅಪ್ ಕೊಮೆಡಿಯನ್ ಕುನಾಲ್ ಕಮ್ರಾ ಅವರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಮಸ್ಯೆ ವಿಚಾರ ಪಸ್ತಾಪಿಸಿದ್ದರು. ಇದರಿಂದಾಗಿ ಕಮ್ರಾ ಮತ್ತು ಭವಿಷ್ ಅಗರವಾಲ್ ನಡುವೆ ಟ್ವೀಟ್ ಸಮರ ಜೋರಾಗಿ ನಡೆದಿತ್ತು. ಕಮ್ರಾ ಓಲಾ ಸ್ಕೂಟರ್‌ಗಳ ಸಮಸ್ಯೆಯನ್ನು ಹೈಲೈಟ್ ಮಾಡಿದಾಗ, ಭವಿಶ್ ಅಗರ್ವಾಲ್ ಅವರನ್ನು ವಿಫಲವಾದ ಸ್ಟ್ಯಾಂಡ್-ಅಪ್ ಕಾಮಿಕ್ ಎಂದು ಕರೆದರು ಮತ್ತು ಆನ್‌ಲೈನ್‌ನಲ್ಲಿ ಅಂತಹ ಪೋಸ್ಟ್‌ಗಳನ್ನು ಬರೆಯಲು ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಓಲಾ ಎಲೆಕ್ಟ್ರಿಕ್ ತನ್ನ ಸೇವಾ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಶೀಘ್ರದಲ್ಲೇ ಎಲ್ಲ ಗ್ರಾಹಕ ಸಮಸ್ಯೆಗಳನ್ನೂ ಪರಿಹರಿಸಲಾಗುವುದು ಎಂದು ಭವಿಷ್ ಅವರು ಹೇಳಿದ್ದರು.