ಪಕ್ಷ-ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸ್ತಿರುವ ಸಚಿವ ಜಮೀರ್; ಸಂಪುಟದಿಂದ ಕೈಬಿಡಲು ಹೆಚ್ಚಿದ ಆಗ್ರಹ, ಮಾಜಿಯಾಗೋ ಕಾಲ ಸನ್ನಿಹಿತ?
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿರುವ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ಕೈಬಿಡಲು ಹೆಚ್ಚಿದ ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಮಾಜಿಯಾಗೋ ಕಾಲ ಸನ್ನಿಹಿತವಾಗಿದೆ? (ವರದಿ-ಎಚ್.ಮಾರುತಿ)
ಬೆಂಗಳೂರು: ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಒಂದಲ್ಲ ಒಂದು ಅವಾಂತರಗಳನ್ನು ಸೃಷ್ಟಿಸಿ ತಾವಷ್ಟೇ ಮುಜುಗರಕ್ಕೀಡಾಗದೆ ಸರ್ಕಾರ ಮತ್ತು ಪಕ್ಷವನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿ ಹೇಗೋ ರಾಜ್ಯದ ಜನತೆಯ ವಿಶ್ವಾಸವನ್ನು ಗಳಿಸಿಕೊಂಡಿತ್ತು. ಇದೀಗ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರ ರಾಜಕೀಯ ಜೀವನ ಆರಂಭವಾಗಿದ್ದೇ ಜೆಡಿಎಸ್ ನಿಂದ. ಎರಡು ದಶಕಗಳ ಹಿಂದೆ ಜಮೀರ್ ಅವರಿಗೆ ಚುನಾವಣಾ ರಾಜಕೀಯವನ್ನು ಪರಿಚಯಿಸಿದ್ದು ಕುಮಾರಸ್ವಾಮಿ ಅವರೇ.
ಇಷ್ಟು ದಿನ ಇವರನ್ನು ಸಹಿಸಿಕೊಂಡಿದ್ದು ಸಾಕು ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಿ ಎಂದು ಪಕ್ಷದ ಮುಖಂಡರು, ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪಕ್ಷದ ಉಪಾಧ್ಯಕ್ಷ ಎಆರ್ಎಂ ಹುಸೇನ್ ಅವರು ಈ ಪತ್ರ ಬರೆದಿದ್ದು, ಜಮೀರ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಚನ್ನಪಟ್ಟಣ ಉಪ ಚುನಾವಣೆ ಸಂದರ್ಭದಲ್ಲಿ ಜಮೀರ್ ಆಡಿದ ಮಾತುಗಳಿಂದ ಹಾನಿಯಾಗಿದೆ ಎಂದು ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಅಲವತ್ತುಕೊಂಡಿದ್ದರು. ಜಮೀರ್ ಅವರ ‘ಕರಿಯ ಕುಮಾರಸ್ವಾಮಿ’ ಹೇಳಿಕೆಯಿಂದ ಸಾಕಷ್ಟು ಹಾನಿಯಾಗಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು.
ಉಪಚುನಾವಣೆಯಲ್ಲಿ ಹಿನ್ನಡೆಯಾದರೆ ಜಮೀರ್ ಕಾರಣ
ಸಚಿವರಾಗಿ ಮುಂದುವರೆಯುವ ಯಾವ ಅರ್ಹತೆಯೂ ಜಮೀರ್ ಗೆ ಇಲ್ಲ. ಅವರಿಂದ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಸರ್ಕಾರ ಮತ್ತು ಪಕ್ಷವನ್ನು ಮುನ್ನೆಡೆಸಲು ಶ್ರಮಿಸುತ್ತಿದ್ದರೆ ಜಮೀರ್, ತಮ್ಮ ಅನಾಗರಿಕ ಹೇಳಿಕೆಗಳಿಂದ ಮತ್ತು ವಿವಾದಗಳಿಂದ ಇಡೀ ವಾತಾವರಣವನ್ನು ಹಾಳುಗೆಡವುತ್ತಿದ್ದಾರೆ ಎಂದು ಹುಸೇನ್ ಪತ್ರದಲ್ಲಿ ವಿವರಿಸಿದ್ದಾರೆ. ಒಂದು ವೇಳೆ ಉಪ ಚುನಾಣೆಯಲ್ಲಿ ಹಿನ್ನೆಡೆಯಾದರೆ ಅದಕ್ಕೆ ಜಮೀರ್ ಹುಟ್ಟು ಹಾಕಿದ ವಿವಾದಗಳೇ ಕಾರಣವಾಗುತ್ತವೆ. ಪಕ್ಷದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಜಮೀರ್ ಮಾತ್ರವಲ್ಲ, ಜಮೀರ್ ಅಂತಹವರನ್ನು ಪ್ರೋತ್ಸಾಹಿಸಬಾರದು ಎಂದು ಒತ್ತಾಯಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಜಮೀರ್, ಇಡೀ ಮುಸ್ಲಿಂ ಸಮುದಾಯ ಚಂದಾ ಎತ್ತಿ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬವನ್ನು ಖರೀದಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಣ್ಣ ಕುರಿತು ಕರಿಯಾ ಎಂದು ಜರಿದಿದ್ದರು. ನಂತರ ಆ ಹೇಳಿಕೆಗೆ ತೇಪೆ ಹಚ್ಚಲು ಪ್ರಯತ್ನಿಸಿದ್ದರಾದರೂ ಹಾನಿ ಉಂಟಾಗಿದ್ದಂತೂ ಸುಳ್ಳಲ್ಲ. ಈ ಹಿಂದೆಯೂ ಡಜನ್ ಗೂ ಹೆಚ್ಚು ಶಾಸಕರು ಮತ್ತು ಪಕ್ಷದ ಅನೇಕ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯೆ ಪ್ರವೇಶಿಸಿ ವಕ್ಫ್ ವಿವಾದವನ್ನು ಬಗೆಹರಿಸುವಂತೆ ಕೋರಿದ್ದರು.
ವಕ್ಫ್ ಆಸ್ತಿ ವಿಷಯದಲ್ಲಿ ರಾಜ್ಯದ ಉದ್ದಗಲಕ್ಕೂ ರೈತರು, ಮಠ ಮಂದಿರಗಳು ಶಾಲಾ ಕಟ್ಟಡಗಳಿಗೂ ನೋಟಿಸ್ ನೀಡುತ್ತಿರುವುದರಿಂದ ಸರ್ಕಾರಕ್ಕೆ ಸಾಕಷ್ಟು ಹಿನ್ನೆಡೆಯಾಗಿದೆ. ಬಿಜೆಪಿ ಕೈಗೆ ಪ್ರಬಲ ಅಸ್ತ್ರವನ್ನು ಸರ್ಕಾರವೇ ಕೊಟ್ಟಂತಾಗಿದೆ. ಇದಕ್ಕೂ ಮೊದಲೇ ಕಳೆದ ವರ್ಷ ನವಂಬರ್ ನಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ನಮಸ್ಕಾರ ಹೊಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿ ನಂತರ ಕ್ಷಮೆ ಯಾಚಿಸಿದ್ದರು. 2022ರಲ್ಲಿ ರಾಜ್ಯದ ಒಕ್ಕಲಿಗರಿಗಿಂತಲೂ ಮುಸಲ್ಮಾನರ ಸಂಖ್ಯೆಯೇ ಹೆಚ್ಚು ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.
ಶಿವಕುಮಾರ್ ಅವರಿಗೂ ಜಮೀರ್ ಅವರಿಗೂ ಅಷ್ಟಕ್ಕಷ್ಟೇ
ಮುಖ್ಯಮಂತ್ರಿ ಹುದ್ದೆ ವಿಷಯ ಬಂದಾಗ ಜಮೀರ್ ಸಿದ್ದರಾಮಯ್ಯ ಪರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಇದರಿಂದ ಇಬ್ಬರ ಸಂಬಂಧ ಹಳಿಸಿದೆ. ರಾಜ್ಯದ ಅನೇಕ ಮುಸ್ಲಿಂ ಮುಖಂಡರು ರಾಜ್ಯ ಮತ್ತು ಕೇಂದ್ರದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಬ್ದುಲ್ ನಸೀರ್ ಸಾಬ್, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್, ಮಾಜಿ ರಾಜ್ಯಸಭಾ ಮಾಜಿ ಉಪಾಧ್ಯಕ್ಷ ಕೆ.ರೆಹಮಾನ್ ಖಾನ್ ತಮ್ಮದೇ ಆದ ರೀತಿಯಲ್ಲಿ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ನಸೀರ್ ಸಾಬ್ ಅವರನ್ನು ನೀರ್‌ಸಾಬ್ ಎಂದೇ ಕರೆಯಲಾಗುತ್ತದೆ. ಜಾಫರ್ ಷರೀಫ್ ಅವರು ದೇಶದ ರೈಲ್ವೇ ಮತ್ತು ರಾಜ್ಯದ ರೈಲ್ವೇ ಅಭಿವೃದ್ಧಿಗೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ.