ಎಂದೋ ಮುಚ್ಚಿ ಹೋಗಬೇಕಿದ್ದ ಈ ಸರ್ಕಾರಿ ಶಾಲೆಯಲ್ಲೀಗ 1035 ಮಕ್ಕಳು; ವಿದ್ಯಾರ್ಥಿಗಳು ಮೊದಲಿದಿದ್ದೇ 28, ಈಗ ಶಿಕ್ಷಕರೇ 30!
Daddalakadu Government School: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದದ್ದೇ 28 ಮಂದಿ. ಈ ಶಾಲೆಯನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗಿತ್ತು. ಆದರೀಗ ಓದುತ್ತಿರುವ ಮಕ್ಕಳ ಸಂಖ್ಯೆ 1035. ಮುಚ್ಚಿ ಹೋಗಬೇಕಿದ್ದ ಈ ಸರ್ಕಾರಿ ಶಾಲೆಯ ಪ್ರಗತಿಗೆ ಕಾರಣವೇನು? ಇಲ್ಲಿದೆ ವಿವರ. (ವರದಿ-ಹರೀಶ ಮಾಂಬಾಡಿ)
ಮಂಗಳೂರು: ಒಂದು ಕಾಲದಲ್ಲಿ ಈ ಶಾಲೆ ಮುಚ್ಚುತ್ತದೆ ಎನ್ನಲಾಗುತ್ತಿತ್ತು. 2016ರಲ್ಲಿ ಕೇವಲ 28 ವಿದ್ಯಾರ್ಥಿಗಳು ಇದ್ದ ಸಂದರ್ಭ ಅಲ್ಲೇ ಕಲಿತವರು ಊರವರು ಒಟ್ಟು ಸೇರಿ, ತಮ್ಮ ಮಕ್ಕಳನ್ನೂ ಆ ಶಾಲೆಗೆ ಸೇರಿಸಿದರು. ಮಕ್ಕಳ ಸಂಖ್ಯೆ ಜಾಸ್ತಿಯಾಯಿತು. ಬಳಿಕ ದತ್ತು ತೆಗೆದುಕೊಂಡು ರಾಜ್ಯವೇ ಗಮನ ಸೆಳೆಯುವಂತೆ ಅಭಿವೃದ್ಧಿಯಾಯಿತು. ಆಗಿನ ರಾಜ್ಯಪಾಲ ವಜೂಭಾಯಿ ವಾಲಾ ಈ ಶಾಲೆಗೆ ಭೇಟಿ ನೀಡಿ ಸರ್ಕಾರಿ ಶಾಲೆ ಎಂದರೆ ಹೀಗಿರಬೇಕು ಎಂದು ಹೊಗಳಿದ್ದರು.
ರಾಜ್ಯದ ಕೆಲವೆಡೆ ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿಯಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರ್ಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸೀಟು ಸಿಗಬಹುದೇ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಯಿತು. ಇಷ್ಟು ಪ್ರಗತಿಗೆ ಕಾರಣವಾದದ್ದು ದತ್ತು ಸ್ವೀಕಾರ ಸಂಸ್ಥೆಯಾದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ) ದಡ್ಡಲಕಾಡು. ಅಂದ ಹಾಗೆ ಇಂದು ಈ ಹೈಸ್ಕೂಲಿನಲ್ಲಿ ಎಲ್ಕೆಜಿಯಿಂದ 10ನೇ ತರಗತಿಯವರೆಗೆ 1,035 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.
ಹೇಗೆ ಪ್ರಗತಿಯತ್ತ ಸಾಗಿತು?
ಪ್ರಕಾಶ್ ಅಂಚನ್ ಹಾಗೂ ಅವರ ಸಹೋದರರು ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಪ್ರಸಿದ್ಧ ವಸ್ತ್ರೋದ್ಯಮಿಗಳು. ಆದರೆ ಅವರು ವಿದ್ಯಾಭ್ಯಾಸ ಮೊಟಕುಗೊಳಿಸಿ, ಸಣ್ಣ ಮಟ್ಟಿನ ಮಳಿಗೆಯನ್ನು ಸ್ಥಾಪಿಸಿ ಬೆಳೆದವರು. ಊರಿನಲ್ಲಿ ಬಟ್ಟೆ ಮಳಿಗೆ ಸ್ಥಾಪಿಸಿ, ಬಂಟ್ವಾಳ ಪೇಟೆಯಲ್ಲಿನ ಆಂಗ್ಲ ಮಾಧ್ಯಮ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಸಂದರ್ಭ, ತನ್ನೂರಿನ ದಡ್ಡಲಕಾಡು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಚ್ಚುವ ಹಂತ ತಲುಪಿದೆ. ಬರುವ ವರ್ಷ ಈ ಶಾಲೆಯನ್ನು ಇನ್ನೊಂದು ಶಾಲೆಗೆ ಮರ್ಜ್ ಮಾಡಲಾಗುತ್ತದೆ ಎಂಬ ಮಾತು ಕೇಳಿ ಸ್ನೇಹಿತರನ್ನು ಒಟ್ಟುಗೂಡಿಸಿದರು. ಮೊದಲ ಹಂತವಾಗಿ ತನ್ನ ಮಕ್ಕಳನ್ನು ಶಾಲೆಗೆ ಸೇರಿಸಿ, ಊರಲ್ಲೆಲ್ಲಾ ಶಾಲೆಗೆ ಬನ್ನಿ, ಶಾಲೆಗೆ ಸೇರಿ ನಮ್ಮ ಶಾಲೆ ಉಳಿಸೋಣ ಎಂದು ಘೋಷಿಸುತ್ತಾ ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಅಭಿಯಾನ ಆರಂಭಿಸಿದರು. ಅಲ್ಲಿಂದ ಹಂತಹಂತವಾಗಿ ಮಕ್ಕಳ ಸಂಖ್ಯೆ ಜಾಸ್ತಿಯಾಯಿತು. ನೋಡನೋಡುತ್ತಿದ್ದಂತೆ 7ನೇ ತರಗತಿವರೆಗಿದ್ದ ಶಾಲೆ ಹೈಸ್ಕೂಲ್ವರೆಗೆ ಬೆಳವಣಿಗೆ ಕಂಡಿತು.
ಮಾದರಿ ಶಾಲೆಯಲ್ಲಿ ಏನೆಲ್ಲಾ ಇದೆ?
ಸರ್ಕಾರಿ ಹೈಸ್ಕೂಲುಗಳಲ್ಲಿ ಎನ್ಸಿಸಿ ಇರುವುದು ವಿರಳ. ದಡ್ಡಲಕಾಡು ಹೈಸ್ಕೂಲಿನಲ್ಲಿ ಎನ್ಸಿಸಿ ಇದೆ. ಗಣಿತ ಲ್ಯಾಬ್ ಇಲ್ಲಿನ ವಿಶೇಷಗಳಲ್ಲೊಂದು. ಡಿಜಿಟಲ್ ಲೈಬ್ರರಿ ಮಕ್ಕಳ ಆಸಕ್ತಿಯನ್ನು ಒರೆಗೆ ಹಚ್ಚುವಂತಿದೆ. ಪ್ರತಿಯೊಂದು ವಿದ್ಯಾರ್ಥಿಗಳೂ ಸ್ಮಾರ್ಟ್ ಕ್ಲಾಸ್ನಲ್ಲಿ ಕಲಿಯುತ್ತಾರೆ. ಇಷ್ಟಲ್ಲದೆ, ಯೋಗ, ನೈತಿಕ ಶಿಕ್ಷಣ, ಲಲಿತಕಲೆಗಳ ತರಬೇತಿ ಕೂಡ ನೀಡಲಾಗುತ್ತದೆ. ಶಾಲೆ ಮಕ್ಕಳು ಸಾಗಲು 8 ಬಸ್ಗಳಿವೆ. ಸರ್ಕಾರಿ ನೇಮಿಸಿದ ಮೂವರು ಶಿಕ್ಷಕರು, ಸರ್ಕಾರದ 14 ಅತಿಥಿ ಶಿಕ್ಷಕರು, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 13 ಶಿಕ್ಷಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ನೇಮಿಸಿದ 3 ಕ್ಲರ್ಕ್, 5 ಆಯಾಗಳಲ್ಲದೆ ಅಡುಗೆ ಸಿಬಂದಿಯೂ ಇದ್ದಾರೆ.
ಶಾಲೆ ಪ್ರಗತಿಗೆ ಕಾರಣವೇನು?
ಈ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಕಲಿಕೆಯನ್ನು ಆರಂಭಿಸಿದ್ದು ಹಾಗೂ ಮಕ್ಕಳು ಹೋಗಿ ಬರಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಏರ್ಪಡಿಸಿದ್ದು ಪ್ರಗತಿಗೆ ಸಹಕಾರಿಯಾಯಿತು. ಮಾಧ್ಯಮಗಳಲ್ಲಿ ಈ ಶಾಲೆ ಸಾಧನೆ ವ್ಯಾಪಕವಾಗಿ ಪ್ರಚಾರಗೊಂಡದ್ದು, ಹತ್ತೂರಿನವರೂ ಶಾಲೆಯನ್ನು ನೋಡುವಂತಾಯಿತು. ಇದೀಗ ಸಮೀಪದಲ್ಲೇ ಸರಕಾರಿ ಶಾಲೆ ಇದ್ದರೂ ಅಲ್ಲಿಗೆ ಹೋಗದೆ ದೂರದ ದಡ್ಡಲಕಾಡಿಗೆ ಹೋಗುವವರೂ ಇದ್ದಾರೆ.
ಶಾಲಾಭಿವೃದ್ಧಿ ಸಮಿತಿ, ಶಾಲಾ ದತ್ತು ಸಂಸ್ಥೆ, ಶಿಕ್ಷಕರ ಸಹಕಾರ, ಸ್ಥಳೀಯ ಜನಪ್ರತಿನಿಗಳ ನೆರವು, ಇಲಾಖೆಯ ಸಹಕಾರದಿಂದ ಶಾಲೆ ಪ್ರಗತಿಯಲ್ಲಿದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಶಾಲೆ ಅಭಿವೃದ್ದಿಯತ್ತ ಸಾಗುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ರಮಾನಂದ ನೂಜಿಪ್ಪಾಡಿ.
ಶಾಲೆ ಇವತ್ತು ಈ ಸ್ವರೂಪಕ್ಕೆ ಬರಬೇಕಿದ್ದರೆ, 9 ವರ್ಷಗಳ ಪರಿಶ್ರಮ ಇದೆ. ಊರವರು, ದಾನಿಗಳ ನೆರವು, ಜನಪ್ರತಿನಿಗಳ ಸಹಕಾರ ದೊರಕಿದೆ. ಶಾಲೆ ಪ್ರಗತಿಗೆ ದತ್ತು ಸಂಸ್ಥೆಗಳಿಗೆ ಇಲಾಖೆ ಸಹಕಾರ, ಪ್ರೋತ್ಸಾಹವೂ ಬೇಕಾಗುತ್ತದೆ ಎನ್ನುತ್ತಾರೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ), ದಡ್ಡಲಕಾಡು ಅಧ್ಯಕ್ಷ ಪ್ರಕಾಶ್ ಅಂಚನ್.