Karnataka CM Race: ಸಿದ್ದರಾಮಯ್ಯ vs ಡಿಕೆ ಶಿವಕುಮಾರ್; ಪ್ರಮುಖ ಸಭೆಗಳಲ್ಲಿ ಏನೇನಾಯಿತು, ವಿವರ ಇಲ್ಲಿದೆ ಗಮನಿಸಿ
Karnataka CM Race: ಕರ್ನಾಟಕ ಮುಖ್ಯಮಂತ್ರಿ ಗಾದಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನೇರ ಪೈಪೋಟಿ ನಡೆದಿದೆ. ಆಯ್ಕೆ ಕಗ್ಗಂಟಾಗಿದ್ದು, ಸಭೆ ಮೇಲೆ ಸಭೆ ನಡೆಯುತ್ತಿದೆ. ಈ ನಡುವೆ ಮೇ 18ರಂದು ಮುಖ್ಯಮಂತ್ರಿ ಪ್ರಮಾಣ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ವಿದ್ಯಮಾನಗಳ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ಸಿಕ್ಕು ಮೂರು ದಿನ ಕಳೆದಿದೆ. ಇನ್ನೂ ಮುಖ್ಯಮಂತ್ರಿ ಯಾರು ಎಂಬುದನ್ನು ಅಂತಿಮಗೊಳಿಸುವುದು ಪಕ್ಷದ ವರಿಷ್ಟರಿಗೆ ಸಾಧ್ಯವಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ನೇರ ಪೈಪೋಟಿ ಇದೆ. ಇವರ ನಡುವೆ, ಡಾ.ಪರಮೇಶ್ವರ ಅವರೂ ನನಗೂ ಸಿಎಂ ಆಗಬೇಕು ಎಂದಿದ್ದಾರೆ. ಇನ್ನೂ ಒಬ್ಬ ಲಿಂಗಾಯತ ಶಾಸಕರ ಹೆಸರು ಕೂಡ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಮೇ 18ರಂದು ಪ್ರಮಾಣ ವಚನ ಸ್ವೀಕಾರ ನಡೆಯಬಹುದು ಎಂಬ ನಿರೀಕ್ಷೆ ಇದೆ.
ಮಂಗಳವಾರ (ಮೇ 16) ಸಂಜೆ 5 ಗಂಟೆಗೆ ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತಲುಪಿದ್ದು, ಸಂಜೆ 6 ಗಂಟೆಗೆ ಖರ್ಗೆ ಅವರ ಸಿದ್ದರಾಮಯ್ಯ ಭೇಟಿ ನಿಗದಿಯಾಗಿತ್ತು. ಈ ಸಭೆಗಳಿಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಉನ್ನತ ಹುದ್ದೆಯ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆಯಂತೆ. ಈ ನಡುವೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್ ಭೇಟಿ 30 ನಿಮಿಷಗಳ ಕಾಲ ನಡೆಯಿತು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸಿದ್ದರಾಮಯ್ಯ ವರ್ಸಸ್ ಡಿಕೆ ಶಿವಕುಮಾರ್: ಪ್ರಮುಖ ಸಭೆಯ ಮುಖ್ಯಾಂಶಗಳು ಹೀಗಿವೆ ನೋಡಿ
- ಮಾಧ್ಯಮ ವರದಿಗಳ ಪ್ರಕಾರ, ಸಿದ್ದರಾಮಯ್ಯ ಪರ ಬೆಂಬಲಕ್ಕೆ ರಾಹುಲ್ ಗಾಂಧಿ ನಿಂತಿದ್ದು, ಮುಖ್ಯಮಂತ್ರಿ ಆಗುವಂತಹ ಸಾಧ್ಯತೆ ಬಹಳಷ್ಟು ಹೆಚ್ಚಿದೆ.
- ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಸಂತೋಷವಾಗಿಡಲು ಉಪಮುಖ್ಯಮಂತ್ರಿ ಅಥವಾ ಸರದಿ ಸಿಎಂ ಹುದ್ದೆ, ಸಂಪುಟದಲ್ಲಿ ಪ್ರಮುಖ ಖಾತೆ ಹೀಗೆ ಹಲವು ಸೂತ್ರಗಳನ್ನು ಕಾಂಗ್ರೆಸ್ ವರಿಷ್ಠರು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
- ಸಂಧಾನ ಪ್ರಕ್ರಿಯೆಯಲ್ಲಿ, ಡಿಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿಯವರ ಅಭಿಪ್ರಾಯವನ್ನು ಕೇಳಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. ಫಲಿತಾಂಶದ ದಿನದಿಂದಲೂ, ಡಿಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿಯವರನ್ನು ನಂಬಿದ್ದೇನೆ. ಸಂಕಷ್ಟದಲ್ಲಿ ಅವರೇ ಎಲ್ಲ ಆಗಿದ್ದರು ಎಂದು ಹೇಳುತ್ತಲೇ ಬಂದಿದ್ದಾರೆ.
- ಡಿಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೌಹಾರ್ದಯುತ ಸಖ್ಯವನ್ನು ಹೊಂದಿದ್ದಾರೆ. ಹೀಗಾಗಿಯೇ ಚುನಾವಣೆಗೆ ಮುನ್ನ ಒಂದು ಹಂತದಲ್ಲಿ ಡಿಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನೆ ಸಿಎಂ ಸ್ಥಾನಕ್ಕೆ ಪ್ರಸ್ತಾಪಿಸಿದ್ದರು.
- ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹರಡಿದೆ. ಇದರಿಂದ ಗಲಿಬಿಲಿಗೊಂಡ ಡಿಕೆ ಶಿವಕುಮಾರ್, ಈ ರೀತಿ ಸುದ್ದಿ ಪ್ರಸಾರ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
- ಪಕ್ಷವೇ ನನ್ನ ತಾಯಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ದೆಹಲಿಗೆ ಒಬ್ಬನೇ ಹೋಗ್ತಾ ಇದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
- ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ಮುಂಚೂಣಿಯಲ್ಲಿದೆ. ಅವರು ಸೋಮವಾರವೇ ದೆಹಲಿ ತಲುಪಿದ್ದಾರೆ. ಡಿಕೆ ಶಿವಕುಮಾರ್ ದೆಹಲಿಗೆ ಸೋಮವಾರ ಹೋಗಬೇಕಾಗಿತ್ತು. ಆದರೆ ಅನಾರೋಗ್ಯ ಕಾರಣ ಅದನ್ನು ಮುಂದೂಡಿದ್ದರು.
- ಸೋಮವಾರ ಸಂಜೆ ಡಿಕೆ ಸುರೇಶ್ ದೆಹಲಿ ತಲುಪಿ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ನಾನಾ ಕಡೆಯಿಂದ ಆಗತ್ತಿದೆ.
- ಈ ನಡುವೆ, ಡಾ.ಜಿ. ಪರಮೇಶ್ವರ ಅವರು ತಾನೂ 50 ಶಾಸಕರನ್ನು ದೆಹಲಿ ಕರೆದೊಯ್ಯಬಲ್ಲೆ. ಪಕ್ಷದ ಶಿಸ್ತು ಉಲ್ಲಂಘಿಸುವುದು ನನ್ನ ಸಂಸ್ಕೃತಿ ಅಲ್ಲ. ನಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿದ್ದಾರೆ.
- ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಈ ವಿದ್ಯಮಾನಗಳ ಕುರಿತು ಮಾತನಾಡುತ್ತ, ಮುಖ್ಯಮಂತ್ರಿ ಆಯ್ಕೆ, ನೇಮಕ ಸರಳ ಪ್ರಕ್ರಿಯೆ ಅಲ್ಲ. ಅದನ್ನು ದೆಹಲಿಯಿಂದ ಹೇರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಇಂಗಿತವನ್ನು ಅರಿತು ತೀರ್ಮಾನ ತೆಗೆದುಕೊಳ್ಳಬೇಕು. ಆ ಕೆಲಸ ಪ್ರಗತಿಯಲ್ಲಿದೆ. ಶೀಘ್ರವೇ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.